ಕೊಡಗಿನ 90 ಗ್ರಾಮಗಳಿಗೆ ಈ ವರ್ಷ ಕಾದಿದೆಯಾ ಕಂಟಕ ?
ಮಡಿಕೇರಿ .ಮೇ.23 ರವಿ ಎಸ್ ಹಳ್ಳಿ .
ಕೊಡಗಿನ 90 ಗ್ರಾಮಗಳಿಗೆ ಈ ವರ್ಷ ಕಾದಿದೆ ಕಂಟಕ, ವಿಪತ್ತು ನಿರ್ವಹಣಾ ಇಲಾಖೆಯಿಂದ ಸರಕಾರಕ್ಕೆ ವರದಿ. 45 ಕ್ಕೂ ಹೆಚ್ಚು ಗ್ರಾಮಗಳಿಗೆ ಭೂಕುಸಿತ, 40 ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹದ ಆತಂಕ.
ಕೊಡಗಿನಲ್ಲಿ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಪ್ರವಾಹ ಭೂಕುಸಿತವಾಗುತ್ತಿರುವ ಕೊಡಗು ಜಿಲ್ಲೆಯಲ್ಲಿ ಈ ಬಾರಿಯೂ ಪ್ರವಾಹ ಮತ್ತು ಭೂಕುಸಿತವಾಗುವ ಸಾಧ್ಯತೆ ಇದೆ ಎಂದು ಸ್ವತಃ ಜಿಲ್ಲಾಡಳಿತವೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಜೂನ್ 4 ರಿಂದ ಮುಂಗಾರು ಕೊಡಗು ಜಿಲ್ಲೆಗೆ ಪ್ರವೇಶಿಸುತ್ತಿದೆ. ಮಳೆ ಆರಂಭವಾಯಿತ್ತೆಂದರೆ ಮೂರು ತಿಂಗಳು ಎಡಬಿಡದೆ ಮಳೆ ಸುರಿಯುವುದರಿಂದ ಬೆಟ್ಟಗುಡ್ಡಗಳಿಂದ ಕೂಡಿರುವ ಜಿಲ್ಲೆ ಅಲ್ಲಲ್ಲಿ ಭೂಕುಸಿತ, ಪ್ರವಾಹವಾಗುತ್ತದೆ ಎಂದು ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಇಲಾಖೆ ಅಂದಾಜಿಸಿದೆ. ಸದ್ಯ ಕಳೆದ ನಾಲ್ಕೈದು ವರ್ಷಗಳಲ್ಲಿ ಎದುರಾಗಿರುವ ಭೂಕುಸಿತ, ಪ್ರವಾಹದ ಸ್ಥಿತಿಗಳನ್ನು ಗಮನಿಸಿ ಅಧ್ಯಯನ ಮಾಡಿರುವ ವಿಪ್ಪತ್ತು ನಿರ್ವಹಣಾ ತಂಡ ಜಿಲ್ಲೆಯ ಐದು ತಾಲ್ಲೂಕುಗಳ 45 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಭೂಕುಸಿವಾಗುವ ಸಾಧ್ಯತೆ ಇದ್ದು, 40 ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಕ್ಕೆ ತುತ್ತಾಗುವ ಅಪಾಯವಿದೆ ಇದೆ ಎಂದು ಅಂದಾಜಿಸಿದ್ದು,
ಮಂಗಳವಾರ ಸಿಎಂ ಜೊತೆ ನಡೆದ ಆನ್‌ಲೈನ್ ಸಭೆಯಲ್ಲಿ ಮಂಡಿಸಿದೆ. ಮಡಿಕೇರಿ ತಾಲ್ಲೂಕಿನ ತಾವೂರು, ತಣ್ಣಿಮಾನಿ, ಪದಕಲ್ಲು, ಕಡಿಯತ್ತೂರು, ಚರಿಯಪರಂಬು ಪೈಸಾರಿ, ಚೆರಿಯಪರಂಬು, ಬಲಮುರಿ, ದೊಡ್ಡಪುಲಿಕೋಟು, ಎಮ್ಮೆಮಾಡು, ಕಾಂತೂರು, ಮಕ್ಕಂದೂರು. ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ, ಗುಮ್ಮನಕೊಲ್ಲಿ ಬಸವನಹಳ್ಳಿ, ಮಾದಪಟ್ಟಣ, ನೆಲ್ಯಹುದಿಕೇರಿ, ಕಣಿವೆ, ಕೂಡಿಗೆ, ಹೆಗ್ಗಡಹಳ್ಳಿ, ಕುಶಾಲನಗರ ಪಟ್ಟಣದ ಹಲವು ಬಡಾವಣೆಗಳು ಸೇರಿದಂತೆ 45 ಕ್ಕೂ ಹೆಚ್ಚು ಪ್ರದೇಶಗಳು ಕಾವೇರಿ ನದಿಯಿಂದ ಎದುರಾಗುವ ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ವರದಿ ಸಿದ್ದಪಡಿಸಲಾಗಿದೆ.
ಪ್ರವಾಹ ಮತ್ತು ಭೂಕುಸಿತ ಆಗುವುದರಿಂದ ಮಡಿಕೇರಿ ತಾಲ್ಲೂಕಿನಲ್ಲಿ 765 ಕುಟುಂಬಗಳ 2681 ಜನರನ್ನು ಸ್ಥಳಾಂತರಿಸಬೇಕಾಗಿದೆ. ಅದಕ್ಕಾಗಿ 26 ಕಾಳಜಿ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ.
ಸೋಮವಾರಪೇಟೆ ತಾಲ್ಲೂಕಿನಲ್ಲಿ 1143 ಕುಟುಂಬಗಳ 4162 ಜನರನ್ನು ಸ್ಥಳಾಂತರಿಸಬೇಕಾಗಿದ್ದು, 30 ಕಾಳಜಿ ಕೇಂದ್ರಗಳನ್ನು ತೆರೆಯಬೇಕಾಗಬಹುದು. ಜೊತೆಗೆ ವಿರಾಜಪೇಟೆ ತಾಲ್ಲೂಕಿನಲ್ಲಿ 582 ಕುಟುಂಬಗಳ 2049 ಜನರನ್ನು ಸುರಕ್ಷಿತ
ಸ್ಥಳಗಳಿಗೆ ಕಳುಹಿಸಬೇಕಾಗಿದ್ದು 26 ಕಾಳಜಿ ಕೇಂದ್ರಗಳನ್ನು ತೆರೆಯಬೇಕಾಗಬಹುದು ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಈ ವರದಿ ಕೊಡಗು ಜಿಲ್ಲೆಯ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. 2018 ರಲ್ಲಿ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಭೂಕುಸಿತವಾದಾಗ 36 ಗ್ರಾಮ ಪಂಚಾಯಿತಿ ವ್ಯಾಪ್ತಿ ಸಾಕಷ್ಟು ಗ್ರಾಮಗಳು ಭೂಕುಸಿತಕ್ಕೆ ಸುತ್ತಾಗಿ ಹತ್ತಾರು ಜನರು ಪ್ರಾಣವನ್ನೇ ಕಳೆದುಕೊಂಡಿದ್ದರು. ಸಾವಿರಾರು ಜನರು ಮನೆ, ಮಠಗಳನ್ನು ಕಳೆದುಕೊಂಡಿದ್ದರು. 2019 ರಲ್ಲಿ ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ ಭೂಕುಸಿತವಾಗಿ ಒಂದೇ ಬಾರಿಗೆ 5 ಜನರ ಪ್ರಾಣಪಕ್ಷಿ ಹಾರಿಹೋಗಿತ್ತು. ಇದನ್ನು ಕಣ್ಣಾರೆ ಕಂಡಿದ್ದ ರವಿಕಾಳನ ಅವರು ಈ ಬಾರಿಯೂ ಭೂಕುಸಿತ ಅಥವಾ ಪ್ರವಾಹ ಎದುರಾಗಬಹುದು ಎನ್ನುವ ಜಿಲ್ಲಾಡಳಿತದ ವರದಿಯನ್ನು ಕೇಳಿ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು 2018 ರಿಂದಲೂ ಜಿಲ್ಲೆಯಲ್ಲಿ ಪ್ರವಾಹ ಭೂಕುಸಿತದಿಂದ ಜನ ಸಮಸ್ಯೆ ಅನುಭವಿಸುತ್ತಿದ್ದರೂ ಮಳೆಗಾಲದಲ್ಲಿ ಜನರ ಬಗ್ಗೆ ಕಾಳಜಿ ತೋರಿಸುವ ನಾಟಕ ಆಡುವ ಜಿಲ್ಲಾಡಳಿತ ಅಥವಾ ಸರ್ಕಾರ ಜನರಿಗೆ ಶಾಶ್ವತವಾದ ಪರಿಹಾರ ಹುಡುಕಲು ಸೋತಿವೆ ಎಂದು ಸಂತ್ರಸ್ಥರಪರ ಹೋರಾಟಗಾರ ಪಿ.ಆರ್. ಭರತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಈ ಬಾರಿಯೂ ಜಿಲ್ಲೆಯಲ್ಲಿ ಪ್ರವಾಹ, ಭೂಕುಸಿತವಾಗುತ್ತದೆ ಎನ್ನುವ ವಿಷಯ ಬೇಸಿಗೆಯಲ್ಲೂ ಕೊಡಗಿನ ಜನರು ನಡುಗುವಂತೆ ಮಾಡಿದೆ.