ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಆರ್ ಲತಾ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ 12 ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ 2023ರ ಮೇ 10 ರಂದು ಮತದಾನ ಪ್ರಕ್ರಿಯೆ ನಡೆದಿದ್ದು, ಮೇ 13 ರಂದು ದೇವನಹಳ್ಳಿಯ ಪ್ರಸನ್ನಹಳ್ಳಿಯಲ್ಲಿರುವ ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ, ನಡೆಯಲಿರುವ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದರು.
2023ರ ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ದಿನಾಂಕ: 10.05.2023 ರಂದು ನಡೆದ ಮತದಾನದಲ್ಲಿ ಶೇಕಡ 85.06 ರಷ್ಟು ಮತ ಚಲಾವಣೆಯಾಗಿರುತ್ತದೆ.
ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಒಟ್ಟಾರೆ 877890 ಮತದಾರರಿದ್ದು, ಅದರಲ್ಲಿ 435835 ಪುರುಷ ಮತದಾರರು, 441907 ಮಹಿಳಾ ಮತದಾರರು ಹಾಗೂ 148 ಇತರೆ ಮತದಾರರಿದ್ದಾರೆ.
ಒಟ್ಟು 746873(ಶೇ. 85.08) ಮತದಾರರು ಮತ ಚಲಾಯಿಸಿದ್ದಾರೆ. ಅದರಲ್ಲಿ 374588 ಪುರುಷ ಮತದಾರರು, 372230 ಮಹಿಳಾ ಮತದಾರರು, 55 ಇತರೆ ಮತದಾರರು ಮತದಾನ ಮಾಡಿದ್ದಾರೆ.
ಮತದಾನ ನಡೆದ 1137 ಮತಗಟ್ಟೆಗಳ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ನಲ್ಲಿ ಇರಿಸಲಾಗಿದೆ.
ಮತ ಎಣಿಕೆ ಕಾರ್ಯವನ್ನು ದಿನಾಂಕ: 13.05.2023 ರಂದು ಬೆಳಿಗ್ಗೆ 8.00 ಗಂಟೆಗೆ ಪ್ರಾರಂಭಿಸಲಾಗುವುದು ಹಾಗೂ ನಾಲ್ಕು ಕೊಠಡಿಯಲ್ಲಿ ನಡೆಸಲಾಗುವುದು. ಮತ ಎಣಿಕೆ ಕಾರ್ಯಗಳು 21 ಹಾಗೂ 20 ಸುತ್ತುಗಳು ನಡೆಯಲಿವೆ.
ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕಾಗಿ 14 ಟೇಬಲ್ ಗಳನ್ನು ನಿಗದಿಪಡಿಸಲಾಗಿದ್ದು, ಪ್ರತಿ ಟೇಬಲ್ ಗೆ ಒಬ್ಬ ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು ಮತ್ತು ಮೈಕ್ರೋ ಅಬ್ಸರ್ವರ್‌ಅನ್ನು ನೇಮಕ ಮಾಡಲಾಗಿದೆ.
ಅಂಚೆ ಮತ ಎಣಿಕೆ ಕಾರ್ಯಕ್ಕಾಗಿ 1 ಪ್ರತ್ಯೇಕ ಟೇಬಲ್ ನ್ನು ನಿಗದಿಪಡಿಸಲಾಗಿದ್ದು, ಸದರಿ ಟೇಬಲ್ ಗೆ ಒಬ್ಬ ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು ಮತ್ತು ಮೈಕ್ರೋ ಅಬ್ಸರ್ವರ್‌ಅನ್ನು ನೇಮಕ ಮಾಡಲಾಗಿದೆ.
130 ಸೇವಾ ಮತದಾರರಿಗೆ ಅಂಚೆ ಮತ ಪಾತ್ರವನ್ನು ಇಟಿಪಿಬಿಎಸ್ ತಂತ್ರಾಂಶ ಮುಖಾಂತರ ರವಾನಿಸಲಾಗಿದ್ದು, ಸದರಿ ಮತಪತ್ರಗಳ ಎಣಿಕೆ ಕಾರ್ಯವನ್ನು ಮೊದಲು ಕೈಗೊಳ್ಳಲಾಗುವುದು. 74 ಸಾಮಾನ್ಯ ಮತದಾರರಿಗೆ (ಕರ್ತವ್ಯ ನಿರತ ಚುನಾವಣಾ ಸಿಬ್ಬಂದಿಗೆ) ಅಂಚೆ ಮತ ಪತ್ರವನ್ನು ವಿತರಿಸಲಾಗಿದ್ದು, ಈವರೆಗೆ 74 ಅಂಚೆ ಮತ ಪತ್ರಗಳು ಸ್ವೀಕೃತವಾಗಿವೆ. ಇವಿಯಂ ಯಂತ್ರಗಳ ಮತ ಎಣಿಕೆ ಮುಗಿದ ನಂತರ 5 ಮತಗಟ್ಟೆಗಳ ವಿವಿಪ್ಯಾಟ್ ಯಂತ್ರದಲ್ಲಿರುವ ಸ್ಲಿಪ್‌ಗಳ ಎಣಿಕೆ ಕಾರ್ಯವನ್ನು ನಡೆಸಲಾಗುವುದು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 56 ಅಭ್ಯರ್ಥಿಗಳಿದ್ದು ಮತ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಕೇಂದ್ರದಲ್ಲಿ ಚುನಾವಣಾ ವೀಕ್ಷಕರು, ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಮತ ಎಣಿಕೆ ಕಾರ್ಯವು ಎಂಕೋರ್ ತಂತ್ರಾಂಶ ಮುಖಾಂತರ ನಡೆಯಲಿದ್ದು, ಮತ ಎಣಿಕೆ ಕೇಂದ್ರದಲ್ಲಿ ಸೂಕ್ತ ಮೂಲಭೂತ ಸೌಕರ್ಯಗಳ ಏರ್ಪಾಟು ಮಾಡಲಾಗಿದೆ.