ಬದುಕನ್ನು ಬದಲಿಸಬಲ್ಲ ಮೂಡ್ ಬದಲಿಸಿಕೊಳ್ಳಿ
ವಿಜಯ ದರ್ಪಣ ನ್ಯೂಸ್
ಬದುಕನ್ನು ಬದಲಿಸಬಲ್ಲ ಮೂಡ್ ಬದಲಿಸಿಕೊಳ್ಳಿ
ಲೇಖನ – ಜಯಶ್ರೀ.ಜೆ.ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ನನ್ನ ಮನಸ್ಥಿತಿ (ಮೂಡ್)ಯಾವಾಗ ಹೇಗೆ ಇರುತ್ತೆ ಅಂತ ನನಗೇ ಗೊತ್ತಿರುವುದಿಲ್ಲ. ಒಮ್ಮೊಮ್ಮೆ ನವೋಲ್ಲಾಸದಿಂದ ಇರುವ ನಾನು ಒಮ್ಮಿಂದೊಮ್ಮೆಲೇ ಎಷ್ಟು ಮಾಡಿದರೂ ಅಷ್ಟೇ ನನ್ನಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿ ಕುಳಿತು ಬಿಡುತ್ತೇನೆ. ನನಗೆ ಇದೇಕೆ ಹೀಗಾಗುತ್ತಿದೆ? ಏನನ್ನೇ ಆಗಲಿ ನಿರಂತರವಾಗಿ ಮಾಡುವ ಅಭ್ಯಾಸ ನನ್ನಲ್ಲಿ ಏಕೆ ಬರುತ್ತಿಲ್ಲ? ಇಂದೇಕೋ ನನ್ನ ಮೂಡ್ ಸರಿಯಿಲ್ಲ. ನನಗೆ ಯಾವ ಕೆಲಸವನ್ನೂ ಮಾಡಲಾಗುತ್ತಿಲ್ಲ. ಎನ್ನುವ ಮಾತುಗಳನ್ನು ಮೇಲಿಂದ ಮೇಲೆ ಹೇಳುತ್ತಿರುತ್ತೇವೆ. ಮನಸ್ಥಿತಿಯನ್ನು ಚೆನ್ನಾಗಿ ಇಟ್ಟುಕೊಳ್ಳಲು ಮಾಡಬೇಕಾದದ್ದಾರೂ ಏನು? ಎಂಬ ಪ್ರಶ್ನೆ ತಲೆಯನ್ನು ಹೊಕ್ಕು ಜೀವ ತಿನ್ನುತ್ತವೆ. ಸರಿಯಾದ ಉತ್ತರ ಮಾತ್ರ ದೊರೆಯುವುದಿಲ್ಲ. ಸದಾ ಮನಸ್ಸು ಗೊಂದಲದ ಗೂಡಾಗಿ ಬಿಡುತ್ತದೆ. ನಾನಂದುಕೊಂಡಂತೆ ಕೆಲಸ ನಿರ್ವಹಿಸಲು, ಇತರರೊಂದಿಗೆ ಚೆನ್ನಾಗಿ ನಡೆದುಕೊಳ್ಳಬೇಕೆಂದರೆ ಎನು ಮಾಡಬೇಕೆಂದು ಹೊಳೆಯುತ್ತಿಲ್ಲ. ಎನ್ನುವ ಗೊಂದಲ ನಮ್ಮಲ್ಲಿ ಬಹುತೇಕ ಜನರಿಗೆ ಇರುತ್ತದೆ. ಮನಸ್ಸಿನ ಶಾಂತಿಗೆ ಯಾವುದೂ ಭಂಗ ತರುವುದಿಲ್ಲ ಎನ್ನುವ ಗಟ್ಟಿ ನಿಲುವು ಹೊಂದಬೇಕಾದರೆ ಏನು ಮಾಡುವುದು? ಭೇಟಿಯಾದ ಪ್ರತಿಯೊಬ್ಬರೊಂದಿಗೆ ನಡೆದುಕೊಳ್ಳುವ ಬಗೆ ಹೇಗೆ? ಎನ್ನುವ ಪ್ರಶ್ನೆಗಳು ಕಾಡುತ್ತಿವೆಯೇ? ಹಾಗಾದರೆ ಮುಂದಕ್ಕೆ ಓದಿ.
ಒಳಿತನ್ನು ಯೋಚಿಸಿ

ಪ್ರತಿಯೊಂದು ವಸ್ತುವಿನಲ್ಲಿ ಮತ್ತು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಓರೆ ಕೋರೆಗಳನ್ನು ಹುಡುಕುವುದನ್ನು ಬಿಟ್ಟು ಒಳಿತನ್ನೇ ಹುಡುಕುವ ಅಭ್ಯಾಸ ಮಾಡಿಕೊಳ್ಳಬೇಕು. ಉತ್ತಮ ವಿಚಾರಗಳಿಂದ ಒಳ್ಳೆಯ ಕೆಲಸದಲ್ಲಿ ತೊಡಗಿಕೊಂಡರೆ ನೀವು ಬಯಸಿದಂತೆ ಒಳ್ಳೆಯ ಮನಸ್ಥಿತಿಯಲ್ಲಿ ಇರಲು ಖಂಡಿತ ಸಾಧ್ಯ. ಹಿಂದಿನ ತಪ್ಪುಗಳನ್ನು ತೆಗೆದು ನೊಂದುಕೊಂಡು ಮನಸ್ಥಿತಿ ಹಾಳು ಮಾಡಿಕೊಳ್ಳಬೇಡಿ. ಎಲ್ಲರೊಂದಿಗೆ ಮುಗುಳ್ನಗುತ್ತ ವ್ಯವಹರಿಸಿ. ಬೇರೆಯವರನ್ನು ಟೀಕಿಸುವ ಗೋಜಿಗೆ ಹೋಗಬೇಡಿ. ಇದರಿಂದ ಗುಲಾಬಿ ಹೂವಿನ ಅಂದ ಸವಿಯುವದನ್ನು ಬಿಟ್ಟು ಕೆಳಗಿರುವ ಮುಳ್ಳಿನ ಬಗೆಗೆ ಹೆಚ್ಚು ಯೋಚಿಸಿದಂತಾಗುತ್ತದೆ. ಪ್ರತಿಯೊಂದರಲ್ಲಿಯ ಒಳಿತನ್ನು ಹೆಚ್ಚಿಗೆ ಗಮನಿಸಿ. ನಡೆಯುವ ಘಟನೆಗಳಲ್ಲಿಯೂ ಒಳಿತನ್ನು ಮಾತ್ರ ಹೆಕ್ಕಿ ನೋಡಿ, ಆಗ ಮನಸ್ಥಿತಿ ತೊಂದರೆ ಕಷ್ಟ ಅಸಂತೋಷಗಳ ಕುರಿತಾಗಿ ಆಲೋಚಿಸುವುದೇ ಇಲ್ಲ. ಅಮೇರಿಕದ ದೊಡ್ಡ ಸ್ಟೀಲ್ ತಯಾರಿಕಾ ಕಾರ್ಖಾನೆಯ ಮಾಲೀಕನಾದ ಆಂಡ್ರ್ಯೂ ಕಾರ್ನೇಗಿ ಹೇಳಿದಂತೆ, ‘ಜನರೊಂದಿಗೆ ವ್ಯವಹರಿಸುವುದೆಂದರೆ ಚಿನ್ನಕ್ಕಾಗಿ ಭೂಮಿಯನ್ನು ಅಗೆದಂತೆ. ಒಂದು ಹಿಡಿ ಚಿನ್ನಕ್ಕಾಗಿ ನೀವು ಟನ್ ಗಟ್ಟಲೇ ಮಣ್ಣು ಹೊಲಸುಗಳನ್ನು ಬೇರ್ಪಡಿಸಬೇಕಾಗುತ್ತದೆ.’ ಹಾಗೆಯೇ ನಮ್ಮ ಮನಸ್ಸಿನ ಆಲೋಚನೆಗಳನ್ನು ಪರಿಷ್ಕರಿಸಿ ಉತ್ತಮತೆಯೆಡೆ ನೋಡುವ ರೂಢಿ ಮಾಡಿಕೊಳ್ಳಬೇಕು. ತನ್ಮೂಲಕ ಉತ್ತಮ ಮನಸ್ಥಿತಿ ಪಡೆಯಲು ಸಾಧ್ಯ,
ಸಂತಸದ ಘಟನೆ ನೆನೆಯಿರಿ
ಅತೀ ದುಃಖಭರಿತ ಘಟನೆಗಳನ್ನು ಮೆಲಕು ಹಾಕಿದಾಗ, ಯಾರೋ ನಿಮ್ಮನ್ನು ಹೀಯಾಳಿಸಿದಾಗ, ಕಣ್ಮುಂದೆಯೇ ಅವಮಾನಿಸಿದಾಗ ಅಯ್ಯೋ! ಎಷ್ಟೊಂದು ದುಃಖ ನನಗಾಗಿ ಕಾದಿತ್ತು. ನನಗೇನೂ ಮಾಡಲಾಗಲಿಲ್ಲ ಎಂಬ ಅಸಹಾಯಕತೆ ಮೂಡುತ್ತದೆ. ನೋವು ಕಾಡುತ್ತದೆ. ಮತ್ತು ಮಾನಸಿಕವಾಗಿ ಬಲ ಹೀನರಾಗುತ್ತೀರಿ. ಆಗ ನೀವು ಅತ್ಯಂತ ಸಂತಸದಿಂದ ಇದ್ದ ಘಟನೆಯನ್ನು ನೆನಪಿಸಿಕೊಳ್ಳಿ ನಿಮ್ಮ ಸ್ನೇಹಿತರು ಆಪ್ತರು ನಿನ್ನ ಪ್ರತಿಭೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ ರೀತಿ, ಕುಟುಂಬದೊಂದಿಗೆ ಪ್ರವಾಸಕ್ಕೆ ಹೋದ ದಿನಗಳು, ಬಾಲ್ಯದ ಸವಿ ನೆನಪುಗಳನ್ನು ಮೆಲಕು ಹಾಕಿ. ಆಗ ನೋಡಿ ಮನಸ್ಸು ನವಿಲಿನಂತೆ ನರ್ತಿಸುತ್ತದೆ. ಸಂತಸದ ಅಲೆಗಳು ಮನದ ತುಂಬ ಆವರಿಸುತ್ತವೆ. ಅರೆ ಇದೇಕೆ! ಹೀಗೆ ಎಂದೆನಿಸುತ್ತಿದೆಯೇ? ಹೌದು ನಾವು ಸಕಾರಾತ್ಮಕವಾಗಿ ಯೊಚಿಸಿದಂತೆ ನಮ್ಮ ಮನಸ್ಸು ಕಾರ್ಯ ನಿರ್ವಹಿಸುತ್ತದೆ. ದೇಹಕ್ಕೆ ಸಂತೋಷದ ಸಂದೇಶ ಕಳಿಸುತ್ತದೆ. ಹಾಗಾದರೆ ಇನ್ನು ಮುಂದೆ ಸಂತೋಷದಿಂದಿರುವಾಗಲೂ ಬೇಸರಿಸಿಕೊಳ್ಳುವುದನ್ನು ಬಿಡಿ. ನಾಳೆಯ ಕುರಿತು ಭಯ ಬಿಟ್ಟು ನಿನ್ನೆಯ ಸಂತಸದ ಕ್ಷಣ ನೆನೆದು, ಇಂದಿನ ದಿನವನ್ನು ಆನಂದಿಸಿ. ಕೆಲಸ ಕಾರ್ಯಗಳಿಗೆ ಚಾಲನೆ ನೀಡಿ. ವರ್ತಮಾನವನ್ನು ಚೆನ್ನಾಗಿ ಬಳಸಿ ಸಂಪೂರ್ಣ ಪ್ರಯೋಜನ ಪಡೆದುಕೊಂಡರೆ ಸುಂದರ ಮನಸ್ಥಿತಿಗೆ ಮುನ್ನುಡಿ ಬರೆದಂತೆ ಅಲ್ಲವೇ?
ಉತ್ಸಾಹದ ಬುಗ್ಗೆಗಳಾಗಿ
ಯಾವುದೋ ಕೆಲಸ ಮಾಡುವಾಗ ಸುತ್ತ ಮುತ್ತಲಿನವರು ತೊಂದರೆ ಕೊಡುತ್ತಾರೆ. ಮನಸ್ಸನ್ನು ಮರಳಿ ಕೆಲಸದಲ್ಲಿ ತೊಡಗಿಸಲು ಸಾಧ್ಯವಾಗುವುದಿಲ್ಲ. ಸಂಬಂಧವಿಲ್ಲದ ಸಮಸ್ಯೆಗಳಿಂದ ಗಂಭೀರ ಓದಿನಲ್ಲಿ ಮನಸ್ಸು ತೊಡಗಿಸಲು ಆಗುತ್ತಿಲ್ಲ. ಎನ್ನುವುದಕ್ಕೆ ಮುಖ್ಯ ಕಾರಣ ನಮ್ಮ ಮನೋಭಾವ. ನಮಗೆ ತಿಳಿದೋ ತಿಳಿಯದೆಯೋ ಬರೀ ನಕಾರಾತ್ಮಕತೆಯಲ್ಲಿ ಬಿದ್ದು ಮನಸ್ಸಿನ ಸ್ಥಿತಿಯನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ನಡುವಳಿಕೆಯನ್ನು ಆಯ್ಕೆ ಮಾಡಿಕೊಳ್ಳುವುದು ನಮಗೆ ಬಿಟ್ಟ ವಿಚಾರ. ನಮ್ಮನ್ನು ನಾವೇ ಪ್ರೇರೇಪಿಸಿಕೊಳ್ಳುವುದನ್ನು ಕಲಿತರೆ ಅತ್ಯುತ್ತಮ ಅವಕಾಶಗಳನ್ನು ಪಡೆದುಕೊಳ್ಳಬಹುದು. ಒಂದು ಸಮಯಕ್ಕೆ ಒಂದೇ ಕೆಲಸವನ್ನು ನಿರ್ವಹಿಸಿದರೆ ಮನಸ್ಸು ಯಾವುದೇ ಗೊಂದಲಕ್ಕೆ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಮಳೆ ಚಳಿ ಬಿಸಿಲು ಎಂಬ ಕುಂಟು ನೆಪ ಹೇಳಿ ಕೆಲಸವನ್ನು ಮುಂದೂಡುವದರಿಂದ ಒತ್ತಡ ಹೆಚ್ಚಾಗಿ ಮನಸ್ಥಿತಿಗೆ ದಕ್ಕೆಯಾಗುತ್ತದೆ. ನೆಪಗಳನ್ನು ಹೇಳುವ ರೋಗದಿಂದ ಮುಕ್ತರಾಗಬೆಕಿದೆ. ರಾಲ್ಫ್ ವಾಲ್ಡೋ ಎಮರ್ಸನ್ ಹೇಳಿದ ಪ್ರಕಾರ,’ ಪ್ರಪಂಚದ ಇತಿಹಾಸದಲ್ಲಿ ಯಾವುದೇ ಮಹೋನ್ನತ ಆಂದೋಲನವು ಉತ್ಸಾಹದ ಯಶಸ್ಸಿನಿಂದಲೇ ಸಾಧ್ಯವಾಗಿದೆ.’ ದೃಷ್ಟಿಕೋನದ ಮಹತ್ವವನ್ನು ಅರಿತು ಉತ್ಸಾಹದ ಬುಗ್ಗೆಗಳಾಗಬೇಕು. ಹಾಗಾದಾಗ ಮನಸ್ಥಿತಿ ಅದ್ಭುತ ಚೈತನ್ಯಭರಿತವಾಗುತ್ತದೆ.
ತೃಪ್ತಿಯ ಜೊತೆಗೆ ಬಯಕೆ ಇರಲಿ
‘ಎತ್ತರದ ಶಿಖರವನ್ನೇರಿದ ಮೇಲೆ ಇನ್ನೂ ಇಂಥ ಅನೇಕ ಶಿಖರಗಳಿರುವುದು ಗೋಚರಿಸುತ್ತದೆ. ಒಂದು ಕ್ಷಣ ಇಲ್ಲಿ ನಿಂತು ಸುತ್ತಣ ಸುಂದರ ದೃಶ್ಯ ನೋಡಿ ಕಣ್ತುಂಬಿಸಿಕೊಂಡು, ನಡೆದು ಬಂದ ದಾರಿಯ ಕಡೆ ಕಣ್ಣು ಹೊರಳಿಸುತ್ತೇನೆ. ಆದರೆ ಸ್ವಲ್ಪ ಕಾಲ ಮಾತ್ರ ವಿಶ್ರಾಂತಿ ಪಡೆದುಕೊಳ್ಳಬಹುದಷ್ಟೆ, ಏಕೆಂದರೆ ಸ್ವಾತಂತ್ರ್ಯದ ಜೊತೆಗೆ ಜವಾಬ್ದಾರಿಗಳು ಇರುತ್ತವೆ. ಇಲ್ಲಿ ಹೆಚ್ಚು ಕಾಲ ಇರಲು ಸಾಧ್ಯವಿಲ್ಲ. ಏಕೆಂದರೆ ನನ್ನ ದೀರ್ಘ ಯಾತ್ರೆ ಕೊನೆಗೊಂಡಿಲ್ಲ.’ಇವು ನೆಲ್ಸನ್ ಮಂಡೆಲಾ ಮಾತುಗಳು. ಇದ್ದುದರಲ್ಲಿಯೇ ಸಂತೃಪ್ತಿ ಹೊಂದಬೇಕು. ಇಲ್ಲದ್ದನ್ನು ಬಯಸುವುದು ದುಃಖಕ್ಕೆ ಮೂಲ ಎನ್ನುವುದು ಕೆಲವರ ಅಂಬೋಣವಾದರೆ ಇದ್ದುದರಲ್ಲಿಯೇ ತೃಪ್ತಿ ಪಟ್ಟುಕೊಂಡರೆ ಹೊಸತನ್ನು ಸಾಧಿಸಲು ಆಗುವುದಿಲ್ಲ ಎನ್ನುವ ಹಲವರು ಸಿಗುತ್ತಾರೆ.ಇದ್ದದ್ದಕ್ಕೆ ತೃಪ್ತಿ ಇಲ್ಲದ್ದಕ್ಕೆ ಬಯಕೆ ಎನ್ನುವ ಸಮತೋಲನವೇ ಮಂಡೇಲಾ ಮಾತಿನ ಮರ್ಮ. ಪಡೆದದ್ದನ್ನು ಆನಂದಿಸುತ್ತ ತೃಪ್ತಿ ವಲಯವನ್ನು ಮೀರಿ ಮಹತ್ತರವಾದುದನ್ನು ಸಾಧಿಸುವ ತುಡಿತ ಹೊಂದಿದರೆ ಮನಸ್ಥಿತಿ ಹದಗೊಳ್ಳುವಲ್ಲಿ ಸಂಶಯವಿಲ್ಲ.
ಮಹತ್ವದ ಅಂಶ ತಿಳಿದಿರಲಿ
ತಮ್ಮ ಕನಸನ್ನು ನನಸಾಗಿಸಿಕೊಂಡು ಇತರರಿಗೆ ನೆರವಾದ ಆದರ್ಶ ವ್ಯಕ್ತಿಗಳ ಆತ್ಮಕಥೆ ಜೀವನ ಚರಿತ್ರೆ ಓದಿ. ಇದರಿಂದ ಜೀವನದಲ್ಲಿ ಮಹತ್ವದ ಅಂಶಗಳು ಯಾವವು ಎನ್ನುವ ಕೆಲವು ಸುಳಿವುಗಳು ಸಿಗುತ್ತವೆ. ನಕಾರಾತ್ಮಕತೆಯಿಂದ ಹೇಗೆ ದೂರವಿರಬೆಕು? ಎನ್ನುವುದು ಅರಿವಿಗೆ ಬರುತ್ತದೆ. ಜೀವನದ ಧ್ಯೇಯೋದ್ದೇಶಗಳ ಕುರಿತು ಹೆಚ್ಚು ಸ್ಪಷ್ಟ ಚಿತ್ರಣ ದೊರೆಯುತ್ತದೆ. ದಯೆ ಪ್ರೀತಿ ಅನುಕಂಪ ಪ್ರಾಮಾಣಿಕತೆಯಂಥ ಮೌಲ್ಯಗಳನ್ನು ಅಳವಡಿಸಿಕೊಂಡರೆ ಮನಸ್ಸು ಸದಾ ಪ್ರಫುಲ್ಲವಾಗಿರುತ್ತದೆ. ಅಸಾಮಾನ್ಯ ವ್ಯಕ್ತಿಗಳ ಒಡನಾಟವೂ ಅಗಾಧ ಪರಿಣಾಮ ಬೀರುವುದು. ನಮ್ಮಲ್ಲಿ ಅನೇಕರಿಗೆ ಸಾಯುವ ಕಾಲ ಸಮೀಪಿಸಿದರೂ ಮನಸ್ಥಿತಿ ಸುಧಾರಿಸಿಕೊಂಡು ಸಾಧಿಸುವುದು ಹೇಗೆ? ಎಂಬುದೇ ತಿಳಿಯುವುದಿಲ್ಲ. ‘ಒಂದು ಗಿಡವನ್ನು ನೆಡಲು ಅತ್ಯುತ್ತಮ ಸಮಯ ೨೦ ವರ್ಷಗಳ ಹಿಂದೆ. ಅದನ್ನು ಬಿಟ್ಟರೆ ಈ ಕ್ಷಣವೇ ಆ ಸಮಯ.’ ಎನ್ನುವ ಚೀನಾ ಗಾದೆಯಂತೆ ಬದುಕು ಅತಿ ಸಣ್ಣದು. ಕಾಲ ಮಿಂಚುವ ಮುನ್ನ ಬದುಕನ್ನು ಬದಲಿಸಬಲ್ಲ ಮೂಡ್ ಬದಲಿಸಿಕೊಳ್ಳಿ ನೆಮ್ಮದಿಯ ನಾಳೆಗಳನ್ನು ನಿಮ್ಮದಾಗಿಸಿಕೊಳ್ಳಿ.
