ಶ್ರೀಆಂಜನೇಯಸ್ವಾಮಿ ದೇವಾಲಯ ಜೀರ್ಣೋದ್ಧಾರ ಹಾಗೂ ದೀಪೋತ್ಸವ, ಊರ ಜಾತ್ರೆ ಮಹೋತ್ಸವ 

ವಿಜಯ ದರ್ಪಣ ನ್ಯೂಸ್….

ಶ್ರೀಆಂಜನೇಯಸ್ವಾಮಿ ದೇವಾಲಯ ಜೀರ್ಣೋದ್ಧಾರ ಹಾಗೂ ದೀಪೋತ್ಸವ ,ಊರ ಜಾತ್ರೆ ಮಹೋತ್ಸವ 

ಶಿಡ್ಲಘಟ್ಟ : ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ತಿಪ್ಪೇನಹಳ್ಳಿಯಲ್ಲಿ ನೆಲೆಸಿರುವ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ ಜೀರ್ಣೋದ್ಧಾರ ಹಾಗೂ ಪುನಃ ಪ್ರತಿಷ್ಠಾಪನಾ ಮಹೋತ್ಸವದ 48ನೇ ದಿನದಂದು ದೀಪೋತ್ಸವ ಹಾಗೂ ಊರ ಜಾತ್ರೆ ಅದ್ಧೂರಿಯಾಗಿ ನಡೆಯಿತು.

ಸ್ವಾಮಿಗೆ ಹೂವಿನ ಅಲಂಕಾರ, ಮಹಾ ಮಂಗಳಾರತಿ ನೆರವೇರಿಸಲಾಯಿತು,ಭಕ್ತರಿಗೆ ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಗ್ರಾಮದ ಬೀದಿಗಳಲ್ಲಿ ಹಬ್ಬದ ಅಂಗವಾಗಿ ತಳಿರು ತೋರಣ ಕಟ್ಟಲಾಗಿದ್ದು, ರಂಗೋಲಿ, ದೀಪಗಳು ಜಾತ್ರೆಗೆ ಮತ್ತಷ್ಟು ಕಳೆ ತಂದಿತ್ತು.

ದೀಪೋತ್ಸವದ ಅಂಗವಾಗಿ ತಂಬಿಟ್ಟು ದೀಪವನ್ನಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು,ಬಳಿಕ ದೇವಾಲಯದ ಬಳಿ ದೀಪದ ಆರತಿ ಸಲ್ಲಿಸಿ,ಭಕ್ತರು ದೇವರಲ್ಲಿ ತಮ್ಮ ಇಷ್ಟಾರ್ಥಗಳ ಸಿದ್ದಿಗಾಗಿ ಪ್ರಾರ್ಥಿಸಿದರು.

ತಮಟೆ, ನಾದಸ್ವರ ವಾದ್ಯಗಳೊಂದಿಗೆ ದೀಪ ಮೆರವಣಿಗೆ ತಿಪ್ಪೇನಹಳ್ಳಿ ಗ್ರಾಮದಿಂದ ತುಮ್ಮನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದವರೆಗೆ ವಿಜೃಂಭಣೆಯಿಂದ ಸಾಗಿತು.

ಕಳೆದ ತಿಂಗಳು ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀಮಂಗಳಾನಂದಸ್ವಾಮಿಯವರ ದಿವ್ಯ ಸಾನ್ನಿಧ್ಯದಲ್ಲಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆದಿತ್ತು ಮಂಗಳವಾರ ಮಂಡಲಪೂಜೆ ನಡೆಯಿತು.

ಈ ಸಂದರ್ಭದಲ್ಲಿ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಮ್ಮನಾಗರಾಜ್, ಭರತ್ ಭೂಷಣ್, ರಾಘವೇಂದ್ರ, ನರ್ಸರಿ ಲಕ್ಷ್ಮೀನಾರಾಯಣ್, ಟಿ.ಪಿ.ವೆಂಕಟೇಶ್, ಟಿ.ಆ‌ರ್.ಆನಂದ್, ಟಿ.ವಿ.ದೇವರಾಜ್ ಹಾಗು ಗ್ರಾಮಸ್ಥರು ಭಾಗವಹಿಸಿದ್ದರು.