ನನ್ನಿಂದ ಸಾಧ್ಯ ಎಂದರೆ ಖಂಡಿತ ಸಾಧ್ಯ!
ವಿಜಯ ದರ್ಪಣ ನ್ಯೂಸ್….
ನನ್ನಿಂದ ಸಾಧ್ಯ ಎಂದರೆ ಖಂಡಿತ ಸಾಧ್ಯ!
ಜಯಶ್ರೀ .ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು. ಬೆಳಗಾವಿ
ಅಮೇರಿಕಾದ ಪರ್ವತಾರೋಹಿ ಆರನ್ ರಾಕ್ಷನ್ 2003 ರಲ್ಲಿ, ಕಣಿವೆಯಲ್ಲಿ ಬಿದ್ದು ತನ್ನ ತೋಳು ಬಂಡೆಯಿಂದ ಬಿಗಿದುಕೊಂಡಾಗ ಪದೆ ಪದೇ ತೋಳನ್ನು ಹೊರ ತೆಗೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಐದು ದಿನಗಳ ನಂತರ ತನ್ನ ಬಳಿಯಿರುವ ಪಾಕೆಟ್ ಚಾಕುವಿನಿಂದ ತನ್ನ ಬಲಗೈ ಭಾಗವನ್ನು ಕತ್ತರಿಸುತ್ತಾನೆ. ಕಂದಕಕ್ಕೆ ಬಿದ್ದು ತನ್ನನ್ನು ರಕ್ಷಿಸಿಕೊಳ್ಳುವುದು ನಿಜಕ್ಕೂ ಊಹಿಸದ ಸಂಗತಿ. ಅಪಘಾತದಿಂದ ಬದುಕುಳಿದಿದ್ದಕ್ಕಾಗಿ ಹೆಸರುವಾಸಿಯಾಗಿದ್ದಾನೆ. ಈ ಘಟನೆಯನ್ನು ಅವರ ಆತ್ಮಚರಿತ್ರೆಯಲ್ಲಿ ದಾಖಲಿಸಲಾಗಿದೆ. ಅಪಘಾತದ ನಂತರವೂ ಅವರು ಪರ್ವತಾರೋಹಣವನ್ನು ಮುಂದುವರೆಸಿದರು ಎಂಬ ಸಂಗತಿ ನಂಬಲಸಾಧ್ಯ. ಚಳಿಗಾಲದಲ್ಲಿ ಆರೋಹಣಗಳನ್ನು ಏಕಾಂಗಿಯಾಗಿ ಕೈಗೊಂಡ ಮೊದಲ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ. 126 ಘಂಟೆಗಳ ನಂತರ ಅವನಿಗೆ ಜ್ಞಾನೋದಯವಾಯಿತು. ‘ಸಮಸ್ಯೆ ಬಂಡೆಯದ್ದಲ್ಲ ತನ್ನದೇ ಕೈ ತನ್ನನ್ನು ಮುಂದೆ ಹೋಗಲು ಬಿಡುತ್ತಿಲ್ಲ ಆದ್ದರಿಂದ ಸಿಲುಕಿಹಾಕಿಕೊಂಡಿದ್ದೇನೆ.’ ಎಂದು. ಕೊಲೋರಾಡೋದ ಎಲ್ಲ ಪರ್ವತ ನಮ್ಮ ಬದುಕಿನಲ್ಲೂ ನಮ್ಮನ್ನು ಹಿಂದಕ್ಕೆ ಹಿಡಿದಿಟ್ಟಿರುವ ಮುಂದಕ್ಕೆ ಹೋಗಲು ಬಿಡದಿರುವ ಸಂಗತಿಗಳೆಂದರೆ ನಮ್ಮವೇ ಕೆಟ್ಟ ಆಲೋಚನೆಗಳು. ತಪ್ಪು ತಿಳುವಳಿಕೆಗಳನ್ನು ಕತ್ತರಿಸಬೇಕಿದೆ. ಮನಸ್ಸಿನ ದುಗುಡವನ್ನು ದೂರ ಮಾಡಿ ಚೈತನ್ಯವನ್ನು ತುಂಬುವ ಕೆಲಸ ಆಗಬೇಕಿದೆ.
ಯಾರೋ ಬರುತ್ತಾರೆ!
ಯಾರೋ ಬರುತ್ತಾರೆ ನನ್ನ ಬದುಕನ್ನು ಬಂಗಾರವಾಗಿಸುತ್ತಾರೆಂದು ಕಾಯುತ್ತ ಕುಳಿತುಕೊಳ್ಳುವುದು ನಮ್ಮ ಕಾಲಿಗೆ ಬ್ರೇಕ್ ಹಾಕಿದೆ. ಯಾರೋ ನಮಗೆ ಹೆಗಲು ಕೊಡುತ್ತಾರೆಂದು ಯೋಚಿಸುತ್ತ ಕುಳಿತುಕೊಳ್ಳುವುದು ನಿಷ್ಟಯೋಜಕ. ಏಕೆಂದರೆ ‘ಹೆಗಲಿನ ಅವಶ್ಯಕತೆ ಸತ್ತವನಿಗೆ ಹೊರತು ಜೀವಂತ ಇರುವವನಿಗೆ ಅಲ್ಲ.’ ಅವರಿವರು : ಸಹಾಯ ಮಾಡುತ್ತಾರೆಂದು ಕುಳಿತವರ ಅರ್ಧ ಜೀವನ ಮುಗಿದರೂ ಜೀವನ ಮತ್ತಷ್ಟು ಕಗ್ಗಂಟಾಗುತ್ತದೆ ಹೊರತು ಹೂವಿನಂತೆ ಅರಳುವುದಿಲ್ಲ. ಯಾರೂ ಬರುವುದಿಲ್ಲ. ‘ನಿನ್ನ ಬಾಳಿನ ಶಿಲ್ಪಿ ನೀನೇ.’
ನಿರಾಸೆ
ಜೀವನವೆನ್ನುವುದು ಬರೀ ಪಯಣವಲ್ಲ. ಅದು ಸುಂದರ: ಕನಸುಗಳನ್ನು ಹೊತ್ತ ಅದ್ಭುತವಾದ ಪಯಣ. ಆದ್ದರಿಂದ : ಪಯಣವನ್ನು ಹಾಳು ಮಾಡಿಕೊಳ್ಳಬಾರದು. ನಿರಾಸೆ ಬಿಟ್ಟು ಭರವಸೆಯಿಂದ ಮುನ್ನಡೆಯಬೇಕು. ಏನು ಮಾಡುವುದಿದ್ದರೂ ನಾವೇ ಮಾಡಬೇಕು. ನಮ್ಮ ಕಾಲಿನ ಮುಳ್ಳು ನಾವೇ ತೆಗೆದುಕೊಳ್ಳಬೇಕು.’ತನಗೆ: ತಾನು ಸಹಾಯ ಮಾಡಿಕೊಳ್ಳದವನಿಗೆ ದೇವರು ಸಹ ಸಹಾಯ ಮಾಡಲಾರ.’ ಎಂಬ ಮಾತಿನಲ್ಲಿ ವಿಶ್ವಾಸವಿಟ್ಟ ಸುರಿರೋ ಹೊಂಡಾ ಇಂದಿಗೂ ತನ್ನ ಅತ್ಯದ್ಭುತ ಕಾರ್ಯವನ್ನು ಹೊಂಡಾ ಮೂಲಕ ನೆನಪುಳಿಯುವಂತೆ ಮಾಡಿದ್ದಾನೆ.
ಸೋತರೆ?
ನಾನು ಸೋತರೆ ಎಂಬ ಭಯ ನಮ್ಮನ್ನು ಪ್ರಯತ್ನಿಸುವುದರಿಂದ ಹಿಂದಕ್ಕೆ ಹಿಡಿದು ನಿಲ್ಲಿಸುತ್ತದೆ. ಪ್ರಯತ್ನಿಸಿದರೆ ತಾನೆ ಸೋಲು ಗೆಲುವು ಗೊತ್ತಾಗುವುದು. ಒಂದನೇ ಪ್ರಯತ್ನದಲ್ಲಿ ಗೆಲುವಿನ ಪತಾಕೆ ಹಾರಿಸುವುದು ಕಷ್ಟ ಸಾಧ್ಯ. ಫುಟ್ ಬಾಲ್‌ನ ಹೆಸರಾಂತ ಆಟಗಾರ ಮೈಕಲ್ ಜೋರ್ಡನ್ 9000 ಶಾಟ್‌ಗಳನ್ನು ಮಿಸ್ ಮಾಡಿದ್ದೇನೆ. 300 ಕ್ಕೂ ಹೆಚ್ಚು ಆಟಗಳನ್ನು ಸೋತಿದ್ದೇನೆ. ಆದರೆ ಇಂದಿನ ನನ್ನ ಗೆಲುವಿಗೆ ಕಾರಣ ನನ್ನ ಸೋಲುಗಳೇ ಆಗಿವೆ ಎಂದು ಹೇಳಿದ್ದಾನೆ. ಸೋಲಿಗೆ ಅಂಜಿದವರು ಮಾತ್ರ ಗೆಲ್ಲುವುದಿಲ್ಲ. ಸೋಲು ಅತ್ಯಂತ ದುಬಾರಿ ಮತ್ತು ಜರೂರಿ ಪಾಠವಾಗಿದೆ. ಮನುಷ್ಯ ಎಂದೂ ಸೋಲುವುದಿಲ್ಲ. ಗೆಲ್ಲುತ್ತಾನೆ ಇಲ್ಲವೇ ಕಲಿಯುತ್ತಾನೆ. ಆದ್ದರಿಂದ ಸೋಲಿಗೆ ಹೆದರದೇ ನಿರಂತರ ಪ್ರಯತ್ನಿಸಬೇಕು.
ನನ್ನಿಂದಾಗದು
ಜಗತ್ತು ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯನ್ನು ವ್ಯಕ್ತಪಡಿಸುವುದಿಲ್ಲ. ನಿಮ್ಮ ಭಯ ಮತ್ತು ಚಿಂತೆಗಳ ವಿರುದ್ಧ ನೀವು ಗೆಲ್ಲಬಲ್ಲಿರಿ ನಿಮ್ಮ ಸಾಮರ್ಥ್ಯದ ಮೇಲೆ ‘ನಿಮಗೆ ವಿಶ್ವಾಸವಿದ್ದರೆ ಮಾತ್ರ. ನಿಮ್ಮಿಂದ ಸಾಧ್ಯ. ನನ್ನಿಂದಾಗದು ಎಂದರೆ ಖಂಡಿತ ಆಗದು. ನನ್ನಿಂದ ಸಾಧ್ಯ ಎಂದರೆ ಖಂಡಿತ ಸಾಧ್ಯ. ಸ್ಟೀವ್ ಜಾಬ್ ತನ್ನನ್ನು ಹೊರಗೆ ಹಾಕಿದ ಕಂಪನಿಯನ್ನು ಮರಳಿ ಕಟ್ಟಿದ ಜಗತ್ತಿನ ನಂ 1 ಕಂಪನಿಯನ್ನಾಗಿಸಿದ. ನನ್ನಿಂದಾಗದು ಎಂದು ಹೇಳುವುದಕ್ಕಿಂತ ನನ್ನಿಂದ ಏಕೆ ಆಗದು ಎಂದು ಕೇಳಿಕೊಂಡರೆ. ಗೆಲುವಿಗೆ ಮುನ್ನುಡಿ ಬರೆದಂತೆ.
ಹೇಗೆ ಸಾಧ್ಯ?
ಇಷ್ಟು ದಿನ ಆಗಲಾರದ್ದು ಇನ್ನು ಮುಂದೆ ಆಗಲು ಹೇಗೆ ಸಾಧ್ಯ? ಎಂಬ ಚಿಂತೆ ಕಾಡುತ್ತದೆ. ಮುಚ್ಚಿದ ಕಿಟಕಿಯಿಂದಲೂ ಸೂರ್ಯನ ಕಿರಣ ಒಳ ನುಗ್ಗುತ್ತದೆ. ಸಮಯ ಜಾರಿ ಹೋಗಿದೆ ಇನ್ನು ಪ್ರಯತ್ನಿಸಿದರೂ ಉಪಯೋಗವಿಲ್ಲವೆಂದು ಪ್ರಯತ್ನಕ್ಕೆ ಪೂರ್ಣವಿರಾಮ ಇಡುವುದು ತಪ್ಪು. ‘ಸಮಯನಿಷ್ಠೆ ಮತ್ತು ಏಕಾಗ್ರತೆಯು ಯಶಸ್ವಿ ವಾಹನದ ಎರಡು ಚಕ್ರಗಳಿದ್ದಂತೆ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ಆದ್ದರಿಂದ ವ್ಯರ್ಥ ಸಮಯ ಕಳೆಯದೇ ಕಷ್ಟಗಳಿಗೆ ಬೆನ್ನು ತೋರಿಸದೇ ಪ್ರಯತ್ನ ಪಟ್ಟವನಿಗೆ ಸೋಲು ಎಂದೂ ಇಲ್ಲ. ನೆನಪಿರಲಿ ನನ್ನಿಂದ ಸಾಧ್ಯ ಎಂದರೆ ಖಂಡಿತ ಸಾಧ್ಯ!