ಅದ್ದೂರಿಯಾಗಿ ನಡೆದ ಶ್ರೀಗಂಗಾದೇವಿ ಅಮ್ಮನವರ ಜಾತ್ರಾ ಮಹೋತ್ಸವ
ವಿಜಯ ದರ್ಪಣ ನ್ಯೂಸ್….
ಅದ್ದೂರಿಯಾಗಿ ನಡೆದ ಶ್ರೀಗಂಗಾದೇವಿ ಅಮ್ಮನವರ ಜಾತ್ರಾ ಮಹೋತ್ಸವ
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಸುಪ್ರಸಿದ್ಧ ಶ್ರೀಗಂಗಾದೇವಿ ಅಮ್ಮನವರ ಜಾತ್ರೆಯು ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಹಾಗೂ ಪೂಜೆಯೊಂದಿಗೆ ಪ್ರಾರಂಭವಾದ ಜಾತ್ರಾ ಮಹೋತ್ಸವದಲ್ಲಿ ಹೆಣ್ಣುಮಕ್ಕಳು ದೀಪಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.
ಗ್ರಾಮದ ವಾಲ್ಮೀಕಿ ಮತಸ್ಥರಿಂದ ಮಧ್ಯರಾತ್ರಿ “ಬೇವಿನ ಸೊಪ್ಪಿನ ತೇರು” ನ್ನು ಬೇವಿನ ಸೊಪ್ಪು ಹಾಗು ಹೂವುಗಳಿಂದ ಅಲಂಕರಿಸಿ ಅಮ್ಮನವರ ದೇವಾಲಯದ ಬಳಿ ಪೂಜೆ ಕೈಂಕರ್ಯಗಳನ್ನು ನೆರವೇರಿಸಿ ತೇರನ್ನು ಅಮ್ಮನವರ ಗುಡಿಯ ಸುತ್ತಾ ಮೂರು ಸುತ್ತು ಎಳೆಯತ್ತಾರೆ ಇದು ಹಿಂದಿನ ಕಾಲದಿಂದಲೂ ಹಿರಿಯರು ವಿಶೇಷ ಆಚರಣೆಯನ್ನು ರೂಢಿಸಿಕೊಂಡು ಬಂದಿದ್ದಾರೆ.
ಅಮ್ಮನವರ ದೀಪೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳಾದ ಕೇಶವಾರ, ಹಂಡಿಗನಾಳ, ಮಳ್ಳೂರು, ಕಂಬದಹಳ್ಳಿ, ಚೌಡಸಂದ್ರ,ಮುತ್ತೂರು, ಗಂಗನಹಳ್ಳಿ,ಅಪ್ಪೇಗೌಡನಹಳ್ಳಿ ಹಾಗು ಭಕ್ತರಹಳ್ಳಿ ಮುಂತಾದೆಡೆಯಿಂದ ನೂರಾರು ಮಂದಿ ಗ್ರಾಮಸ್ಥರು ಆಗಮಿಸಿದ್ದರು.
ಜಾತ್ರೆಯ ಪ್ರಯುಕ್ತ ಆರ್ಕೇಸ್ಟ್ರಾ ಏರ್ಪಡಿಸಲಾಗಿತ್ತು.
ಮಳ್ಳೂರು ಗ್ರಾಮದಿಂದ ಹೆಣ್ಣುಮಕ್ಕಳು ತಲೆಯಮೇಲೆ ಹೂಗಳಿಂದ ಅಲಂಕರಿಸಿರುವ ದೀಪಗಳನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ವಾದ್ಯವೃಂದದೊಡನೆ ಆಗಮಿಸಿದ್ದು ವಿಶೇಷವಾಗಿತ್ತು. ಮಳ್ಳೂರಿನಿಂದ ಆಗಮಿಸಿದ ಭಕ್ತರಿಗೆ ಮೇಲೂರಿನ ಗ್ರಾಮ ಪಂಚಾಯಿತಿ ಹಾಗು ಗ್ರಾಮಸ್ಥರ ವತಿಯಿಂದ ಸ್ವಾಗತವನ್ನು ಕೋರಿ, ಮಜ್ಜಿಗೆ, ಪಾನಕ ಮತ್ತು ಹೆಸರುಬೇಳೆ ನೀಡಿ ಸತ್ಕರಿಸಿದುದು ಗ್ರಾಮಗಳ ನಡುವಿನ ಭಾವೈಕ್ಯತೆಯನ್ನು ಸಾರಿತು.
ಮೇಲೂರು ಗ್ರಾಮದ ಅಧಿದೇವತೆ ಗಂಗಮ್ಮ ತಾಯಿಯು ಮಳೆ, ಬೆಳೆಯನ್ನು ನೀಡಿ ಆರೋಗ್ಯ, ಶಾಂತಿ , ನೆಮ್ಮದಿಯನ್ನು ಕರುಣಿಸಲೆಂದು ಪ್ರತಿವರ್ಷ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ ಸುತ್ತ ಮುತ್ತಲಿನ ಹಲವಾರು ಗ್ರಾಮಗಳಿಂದ ಆಗಮಿಸುವ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಅಮ್ಮನವರ ದರ್ಶನ ಪಡೆಯುತ್ತಾರೆ ಎಂದು ದೇವಾಲಯದ ಅರ್ಚಕರಾದ ಅಮೃತ್ ರಾಜ್ ಹೇಳಿದರು.
ತವರೂರಿನ ದೇವತೆಯಾದ ಶ್ರೀಗಂಗಮ್ಮದೇವಿ ಅಮ್ಮನವರ ಜಾತ್ರೆಗೆ ಗ್ರಾಮದಿಂದ ಬೇರೆ ಊರುಗಳಿಗೆ ಮದುವೆಯಾಗಿ ಹೋಗಿರುವ ಹೆಣ್ಣುಮಕ್ಕಳು ಹಾಗು ಅವರ ಸಂಬಧಿಗಳು ತಮ್ಮ ತವರುಮನೆಗೆ ಬಂದು ಅಮ್ಮನವರ ಜಾತ್ರೆಯಲ್ಲಿ ಪಾಲ್ಗೊಂಡು ದರ್ಶನ ಪಡೆದು ಆಶಿರ್ವಾದ ಪಡೆಯುತ್ತಾರೆ ಎಂದು ತುಮಕೂರಿನ ಶೋಭಾಶ್ರೀನಿವಾಸರೆಡ್ಡಿ ತಿಳಿಸಿದರು.