ವಿಶೇಷ ಪೂಜೆಗಳೊಂದಿಗೆ ದ್ಯಾವಪ್ಪ ತಾತನ ಜಾತ್ರಾ ಉತ್ಸವ

ವಿಜಯ ದರ್ಪಣ ನ್ಯೂಸ್….

ವಿಶೇಷ ಪೂಜೆಗಳೊಂದಿಗೆ ದ್ಯಾವಪ್ಪ ತಾತನ ಜಾತ್ರಾ ಮಹೋತ್ಸವ

ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ : ಪ್ರತಿವರ್ಷ ಯುಗಾದಿಯ ನಂತರ ಆರಂಭವಾಗುವ ಈ ಮಹೋತ್ಸವಕ್ಕೆ ಈ ಬಾರಿ ಕೂಡ ಚಿಕ್ಕಬಳ್ಳಾಪುರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ ಜಿಲ್ಲೆಯ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ದ್ಯಾವಪ್ಪತಾತನ ಸಮಾಧಿಗೆ ಹಾಲು, ತುಪ್ಪದ ನೈವೇದ್ಯ ಅರ್ಪಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಮಾರ್ಗದ ದ್ಯಾವಪ್ಪನ ಗುಡಿ(ಜಯಂತಿ ಗ್ರಾಮ)ಯಲ್ಲಿನ ದ್ಯಾವಪ್ಪ ತಾತನ ಸಮಾಧಿ ಸನ್ನಿಧಿಯಲ್ಲಿ ಏ.7ರ ಸೋಮವಾರದಿಂದ 12ರ ವರೆಗೂ ದ್ಯಾವಪ್ಪ ತಾತನ ಜಾತ್ರಾ ಉತ್ಸವ ನಡೆಯಲಿದೆ.

ಗೋ ಸಂಕಷ್ಟ ನಿವಾರಕ ಎಂದೇ ಪ್ರಸಿದ್ಧಿಯಾಗಿರುವ ದ್ಯಾವಪ್ಪ ತಾತನ ಸಮಾಧಿ ಸನ್ನಿಧಿಯಲ್ಲಿ ದ್ಯಾವಪ್ಪ ತಾತನ ಆರಾಧನೆಯ ಜಾತ್ರಾ ಉತ್ಸವ ಆರಂಭವಾಗಿದ್ದು, 6 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು, ಉತ್ಸವಗಳು, ತಾತನ ಸ್ಮರಣೆ, ರಾಗಿ ಮುದ್ದೆ, ಅವರೆಕಾಳು ಸಾರಿರುವ ಸಾಮೂಹಿಕ ಅನ್ನ ಸಂತರ್ಪಣೆ ಉತ್ಸವ ನಡೆಯುವ ವಾರದ ಕಾಲವೂ ನಡೆಯಲಿದೆ.

ದ್ಯಾವಪ್ಪನಗುಡಿ (ಜಯಂತಿ ಗ್ರಾಮ)ದಲ್ಲಿ “ಯೋಗಿ
ದ್ಯಾವಪ್ಪ ತಾತ ” ಅವವರ ಆರಾಧನಾ ಮಹೋತ್ಸವ ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು, ಈ ಮಹೋತ್ಸವ, ಜಿಲ್ಲಾ ಮಟ್ಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದು, ದ್ಯಾವಪ್ಪ ತಾತನ ಸಮಾಧಿಯು ಕೈವಾರ ಹೊರತುಪಡಿಸಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವರ್ಷವಿಡೀ ನಿತ್ಯ ಪೂಜೆ ನಡೆಯುವ ಹಾಗು “ತುಪ್ಪದ ದೀಪ” ಉರಿಯುವ  ಏಕೈಕ ಪುಣ್ಯ ಸ್ಥಳವಾಗಿದ್ದು ಪ್ರಸಿದ್ದಿಯಾಗಿದೆ.

ಸೋಮವಾರದಿಂದ ಆರಂಭಗೊಂಡು ಶನಿವಾರದವರೆಗೆ ನಡೆದ ಆರಾಧನಾ ಕಾರ್ಯಕ್ರಮದಲ್ಲಿ ಭಕ್ತಿಯ ಝೇಂಕಾರ ಆವರಣವನ್ನೆ ತುಂಬಿರುತ್ತದೆ ಸೋಮವಾರ ಮಧ್ಯಾಹ್ನ ಹಾಲು ಉಟ್ಟು ಮತ್ತು ಕಾಯಿ ಉಟ್ಟು ಪರಿಷೆ ಮೂಲಕ ಮಹೋತ್ಸವಕ್ಕೆ ಭಕ್ತರು ದೀಪಾವಳಿ ನೀಡಿದರು.

ಕೋಟಹಳ್ಳಿಯ ಚಿಕ್ಕದ್ಯಾವಪ್ಪ ಎಂಬ ಸಾಮಾನ್ಯ ರೈತನ ಜೀವನ ದ್ಯಾವಪ್ಪ ತಾತನಾಗಿ ಭಕ್ತರ ನಂಬಿಕೆಯ ಕೇಂದ್ರಬಿಂದು ಆಗಿ ಬೆಳೆದದ್ದು ಅಪರೂಪದ ಘಟನೆಯಾಗಿದ್ದು, ಅವರು ದನಕರುಗಳನ್ನು ಮೇಯಿಸುತ್ತಲೇ ಪಶುಪಾಲಕರಾಗಿ ಜನಮಾನಸದಲ್ಲಿ ಮನೆ ಮಾಡಿಕೊಂಡಿದ್ದರು,ಯಾವುದೇ ರಾಸುವಿನ ಬೆನ್ನಿಗೆ ಕೈಹಾಕಿ ಮೈ ಸವರಿದರೆ ಅದು ಗುಣಮುಖವಾಗುತ್ತಿತ್ತು ಎಂಬ ನಂಬಿಕೆ ಇಂದು ಸಹ ಜೀವಂತವಾಗಿದೆ .ಅವರು ಪಡೆದಿದ್ದ ಕೇವಲ ನಾಲ್ಕಾಣೆಯ ದಕ್ಷಿಣೆಯಿಂದ ಗೋವುಗಳಿಗೆ “ಗೋಕುಂಟೆ” ಎಂಬ ವಿಶಿಷ್ಟ ಸೇವಾ ಕೇಂದ್ರವನ್ನೂ ನಿರ್ಮಾಣ ಮಾಡಿದ್ದರು.

ಅವರ ನಿಧನದ ನಂತರ ನಿರ್ಮಿಸಲಾದ ಸಮಾಧಿಗೆ ನಿತ್ಯ ಪೂಜೆ ನಡೆಯುತ್ತದೆ ಸಮಾಧಿಯಲ್ಲಿ ಮಂತ್ರಿಸಿದ ಉಪ್ಪನ್ನು ನೀರಿನಲ್ಲಿ ಬೆರೆಸಿ ಕಾಯಿಲೆ ಬಂದಿರುವ ಗೋವುಗಳಿಗೆ ನೀಡಲಾಗುತ್ತದೆ. ಅಲ್ಲದೆ, ಕಪ್ಪು ಕಮ್ಮಳಿದಾರವನ್ನು ಗೋವುಗಳಿಗೆ ಕಟ್ಟಿದರೆ ಯಾವುದೇ ರೋಗವಿಲ್ಲದಂತೆ ಚಿಕಿತ್ಸೆ ದೊರಕುತ್ತದೆ ಎಂಬ ಜನ ನಂಬಿಕೆ ಅಲ್ಲಿಯ ಭಕ್ತಿಗೆ ಮತ್ತಷ್ಟು ಸ್ಪಷ್ಟತೆ ನೀಡುತ್ತದೆ.

ಆರಾಧನಾ ಮಹೋತ್ಸವದ ವಾರದಲ್ಲಿ ನಾನಾ ವಿಧದ ಪೂಜೆಗಳು, ತಂಬಿಟ್ಟು ದೀಪೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ, ಕ್ಷೀರಾಭಿಷೇಕ ಹಾಗೂ ಮನರಂಜನಾತ್ಮಕ ಉಟ್ಟು ಕಾರ್ಯಕ್ರಮಗಳು ನಡೆಯುತ್ತವೆ. ನಿತ್ಯವೂ ದಾನವಾಗಿ ಬಂದ ಧಾನ್ಯ, ತರಕಾರಿ, ಬೇಳೆಗಳಿಂದ ತಯಾರಿಸಿದ ಸಾರು ,ಮುದ್ದೆ ಊಟದಿಂದ ಸಾವಿರಾರು ಭಕ್ತರಿಗೆ ಊಟೋಪಚಾರ ಮಾಡಲಾಗುತ್ತದೆ.

ಮಹೋತ್ಸವದ ಅಂಗವಾಗಿ ದೇವಾಲಯದ ಸುತ್ತಮುತ್ತ ಜಾತ್ರೆ ಮಾದರಿ ವಾತಾವರಣ ನಿರ್ಮಾಣವಾಗಿತ್ತು ವೇಷಧಾರಿಗಳು, ನೃತ್ಯಘೋಷಗಳು, ಡೋಲು, ತಮ್ಮಟೆ ಮುಂತಾದ ಜನಪರ ಕಲಾ ತಂಡಗಳು ಭಕ್ತರ ಗಮನ ಸೆಳೆಯುತ್ತಿದ್ದವು,ಹಳ್ಳಿಗಳಿಂದ ಬಂದ ಗ್ರಾಮಸ್ಥರು ಹೆಸರುಬೇಳೆ ಹಾಗು ಪಾನಕ ಹಂಚುವ ಮೂಲಕ ತಮ್ಮ ಭಕ್ತಿ ಬಾವದಿಂದ ತಮ್ಮ ಕೋರಿಕೆಯನ್ನು ಈಡೇರಿಸಿಕೊಳ್ಳುತ್ತಾರೆ.