ಪ್ರಬುದ್ಧತೆ…….

ವಿಜಯ ದರ್ಪಣ ನ್ಯೂಸ್….

ಪ್ರಬುದ್ಧತೆ…….

ಇತ್ತೀಚಿನ ವರ್ಷಗಳ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ವ್ಯಕ್ತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಕಟಣೆಯಲ್ಲಿ ಕ್ರಾಂತಿಯಾಗಿದೆ. ಅನೇಕ ಸಮೂಹ ಸಂಪರ್ಕ ಮಾಧ್ಯಮಗಳ ಮೂಲಕ ಪ್ರತಿಯೊಬ್ಬರು ತಮ್ಮ ತಮ್ಮ ಅಭಿಪ್ರಾಯಗಳನ್ನು, ಭಾವನೆಗಳನ್ನು ವ್ಯಕ್ತಪಡಿಸಲು ವೇದಿಕೆ ಇದೆ. ಇದು ಒಂದು ರೀತಿ ಅತ್ಯದ್ಭುತ ಪ್ರಜಾಪ್ರಭುತ್ವೀಯ ಕ್ರಾಂತಿ ಎಂದು ಹೇಳಬಹುದು.

ಆದರೆ ಆ ಅಭಿವ್ಯಕ್ತಿಯ ಗುಣಮಟ್ಟದಲ್ಲಿ ಕುಸಿತವನ್ನು ಕಾಣುತ್ತಿರುವುದು ಸ್ವಲ್ಪಮಟ್ಟಿಗೆ ಆತಂಕಕಾರಿ ಬೆಳವಣಿಗೆಯಾಗಿದೆ. ಜೀವನಾನುಭವ ಪದಗಳಲ್ಲಿ ವ್ಯಕ್ತವಾದರೆ ಅದು ಆಳವಾಗಿರುತ್ತದೆ. ಆದರೆ ಪದಗಳಲ್ಲಿ ಜೀವನಾನುಭವವನ್ನು ಕಾಲ್ಪನಿಕವಾಗಿ ಮರು ಸೃಷ್ಠಿಸಲು ಅಥವಾ ಪರಿಕಲ್ಪಿಸಲು ಪ್ರಯೋಗಿಸಿದರೆ ಅದು ಬಹಳ ಢಾಳಾಗಿ ಕಾಣುತ್ತದೆ. ಅದೇ ರೀತಿ ಜೀವನಾನುಭವವಿಲ್ಲದೆ, ಅಧ್ಯಯನ, ಚಿಂತನೆಗಳಿಲ್ಲದೆ, ಸಮಯ, ಆಸಕ್ತಿ ಇಲ್ಲದೆ ಕೇವಲ ಆ ಕ್ಷಣದ ಪ್ರತಿಕ್ರಿಯೆಗಳು ಅನೇಕ ರೀತಿಯ ತಪ್ಪು ಕಲ್ಪನೆ ಅಥವಾ ದುಷ್ಪರಿಣಾಮಗಳಿಗೆ ಕಾರಣವಾಗುತ್ತಿದೆ.

ಇಲ್ಲಿ ನಿಜಕ್ಕೂ ಯಾವುದೇ ವಿಷಯದಲ್ಲಿ ಪ್ರತಿಕ್ರಿಯಿಸಬೇಕಾದರೆ ನಮಗೆ ಪ್ರಬುದ್ಧತೆ ಎನ್ನುವ ಮಾನದಂಡ ಬಹಳ ಮುಖ್ಯವಾಗುತ್ತದೆ.

ಎಷ್ಟೋ ಜನ ಪ್ರಕಾಂಡ ಪಂಡಿತರು ವೇದ ಉಪನಿಷತ್ತುಗಳ ವಿಷಯದಲ್ಲಿ, ಭಗವದ್ಗೀತೆಯ ವಿಷಯದಲ್ಲಿ, ಬೌದ್ಧ ಜೈನ ಧರ್ಮದ ವಿಷಯದಲ್ಲಿ, ನಾಗರಿಕತೆಯ ಉಗಮದ ವಿಷಯದಲ್ಲಿ, ಬಸವ ತತ್ವದ ವಿಚಾರದಲ್ಲಿ, ಮೊಘಲರ ದಾಳಿ ಮತ್ತು ಆಡಳಿತದ ವಿಷಯದಲ್ಲಿ, ಬ್ರಿಟಿಷರ ವಿಷಯದಲ್ಲಿ, ಅನಂತರ ಸ್ವಾತಂತ್ರ್ಯ ಭಾರತದ ಆಡಳಿತಾತ್ಮಕ ವಿಷಯದಲ್ಲಿ, ಒಟ್ಟಾರೆ ಇತಿಹಾಸದ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಮಾಧ್ಯಮಗಳಲ್ಲಿ ಹೇಳುವ ಮುಖಾಂತರ ವಿವಾದ ಎಬ್ಬಿಸುವುದಲ್ಲದೆ ತಮ್ಮ ಮುಖವಾಡವನ್ನು ತಾವೇ ಕಳಚಿ ನಗ್ನ ದರ್ಶನ ಮಾಡಿಸುತ್ತಿದ್ದಾರೆ. ಅದು ಸೂಕ್ಷ್ಮ ಮನಸ್ಥಿತಿಯ ಜನರಿಗೆ ಮಾತ್ರ ಅರ್ಥವಾಗುವಂಥದ್ದು.

ಪ್ರಬುದ್ಧತೆ ಇಲ್ಲದಿದ್ದರೆ ಯಾವ ಅನುಭವ, ಯಾವ ಅನುಭಾವ, ಯಾವ ಅಧ್ಯಯನ, ಯಾವ ಚಿಂತನೆ ಯಾವುದೂ ಹೆಚ್ಚು ಉಪಯೋಗಕ್ಕೆ ಬರುವುದಿಲ್ಲ. ಈ ಎಲ್ಲವೂ ನಿಜಕ್ಕೂ ಒಂದು ಅತ್ಯುತ್ತಮ ಗುಣಮಟ್ಟದಲ್ಲಿ ಐಕ್ಯವಾಗಲು ಪ್ರಬುದ್ಧತೆ ಬಹಳ ಮುಖ್ಯ. ಹಾಗಾದರೆ…..

ಪ್ರಬುದ್ಧತೆ ಎಂದರೇನು ?
ಯಾರನ್ನು ಪ್ರಬುದ್ಧರೆನ್ನಬೇಕು ? ಅದಕ್ಕಿರುವ ಮಾನದಂಡಗಳೇನು ? …….

ಇದು ನನಗೂ ಕಾಡುತ್ತಲೇ ಇದೆ. ಅದರ ಪದಶಃ ಅರ್ಥ Dictionary ಯಲ್ಲಿ ಸಿಗಬಹುದು. ಆದರೆ ಅದರ ನಿಜವಾದ ಪ್ರಾಯೋಗಿಕ ಅರ್ಥ ಬಹಳಷ್ಟು ವಿಶಾಲವಾಗಿದೆ ಎಂಬುದು ಮಾತ್ರ ಸತ್ಯ. ವೈಯಕ್ತಿಕವಾಗಿ ನನ್ನ ಅರಿವಿನ ಮಿತಿಯಲ್ಲಿ ನನ್ನ ಗ್ರಹಿಕೆ ಹೀಗಿದೆ.

ಅದು ಕೇವಲ ಭಾವನೆಯಲ್ಲ ಅಥವಾ ನಡವಳಿಕೆಯೂ ಅಲ್ಲ. ಎಲ್ಲವನ್ನೂ ಒಳಗೊಂಡ ಸಮಷ್ಠಿ ಪ್ರಜ್ಞೆ. ಸೋಲು ಗೆಲುವು, ಪ್ರೀತಿ ದ್ವೇಷ ತಾಳ್ಮೆ ಹೀಗೆ ಮನುಷ್ಯನ ಎಲ್ಲಾ ಭಾವನೆಗಳನ್ನು ಒಳಗೊಂಡ ಮನಸ್ಥಿತಿ. ಇದಿಷ್ಟೇ ಆದರೆ ಅವನನ್ನು ಜ್ಞಾನಿ ಎನ್ನಬಹುದು. ಪ್ರಬುದ್ಧತೆ ಅದನ್ನೂ ಮೀರಿದ್ದು. ಅಂದರೆ ನೀವು ಜ್ಞಾನದ ತುತ್ತತುದಿಯಲ್ಲಿದ್ದರೂ ಅದೂ ಕೂಡ ಕಲಿಕೆಯ ಮೊದಲ ಮೆಟ್ಟಿಲು ಎಂದು ಭಾವಿಸುವ ಮತ್ತು ತಿಳಿದಿರುವ, ಜ್ಞಾನ ಕೂಡ ಸಂಪೂರ್ಣ ಸತ್ಯವಲ್ಲ ಅದು ಹರಿಯುತ್ತಿರುವ – ಬದಲಾಗುತ್ತಿರುವ ನೀರಿನ ಪ್ರವಾಹ ಎಂಬ ಅರಿವಿರುವ ಮಾನಸಿಕ ಸ್ಥಿತಿ.

ಹಾಗಾದರೆ ಪ್ರಬುದ್ಧತೆ ಮಾನಸಿಕ ಸ್ಥಿತಿಯೇ. ಇಲ್ಲ ಅಷ್ಟು ಮಾತ್ರವಲ್ಲ, ಅದು ನಮ್ಮ ವೈಯುಕ್ತಿಕ ಮತ್ತು ಸಾಮಾಜಿಕ ಬದುಕಿನ ವರ್ತನೆ ಅಥವಾ ನಡವಳಿಕೆಯೂ ಸಹ. ಏಕೆಂದರೆ ನಾನು ಪ್ರಬುಧ್ಧನಾಗಿದ್ದೇನೆ ಎಂದು ಭಾವಿಸಿ ಸಮಾಜದಲ್ಲಿ ವಾಸ್ತವಿಕ ಪ್ರಜ್ಞೆ ಇಲ್ಲದೆ ವರ್ತಿಸಿದರೆ ಆತನನ್ನು ಅರೆ ಹುಚ್ಚನೆಂದೇ ಪರಿಗಣಿಸಲಾಗುತ್ತದೆ. ನಿಮ್ಮ ವರ್ತನೆ ಪ್ರಾಯೋಗಿಕ ನೆಲೆಯಲ್ಲಿ ಸಂಪೂರ್ಣ ನಿಯಂತ್ರಣ ಹೊಂದಿದ್ದರೆ ಮಾತ್ರ ಅದನ್ನು ಸಹಜವೆಂದು ಪರಿಗಣಿಸಬಹುದು.

ನಾವು ಎಷ್ಟೇ ಪ್ರಬುದ್ಧರಾಗಿದ್ದೇವೆಂದು ಭಾವಿಸಿದ್ದರೂ ದಿನನಿತ್ಯದ ವ್ಯವಹಾರಗಳಲ್ಲಿ, ಅದು ಪ್ರೀತಿ ಪ್ರೇಮವಿರಬಹುದು, ಹೆಂಡತಿ ಮಕ್ಕಳೊಂದಿಗಿನ ಕೌಟುಂಬಿಕ ಸಂಬಂಧಗಳಿರಬಹುದು, ನಾವು ಮಾಡುವ ವೃತ್ತಿಯಲ್ಲಿರಬಹುದು, ಹಣಕಾಸಿನ ಏರಿಳಿತ ಇರಬಹುದು, ಸಾವು ನೋವು ಅಪಘಾತ ಅವಮಾನಗಳಿರಬಹುದು ಅದಕ್ಕೆ ನಾವು ಪ್ರತಿಕ್ರಿಯಿಸುವ ರೀತಿಯೇ ನಮ್ಮ ಪ್ರಬುದ್ಧತೆಯ ಮಟ್ಟ ನಿರ್ಧರಿಸುತ್ತದೆ.

ಬಹುಶಃ ನಮ್ಮೆಲ್ಲರ ಕಲ್ಪನೆಯ ಆ ಸರ್ವಶಕ್ತ ದೇವರಿಗೆ ಮಾತ್ರ ಅದು ಸಾಧ್ಯವಾಗಬಹುದು. ಏಕೆಂದರೆ ಅವನು ಸರ್ವಶಕ್ತ. ಎಲ್ಲವನ್ನೂ ತನ್ನ ಅನುಕೂಲಕ್ಕೆ ತಕ್ಕಂತೆ ಸೃಷ್ಟಿಸಬಲ್ಲವನು. ಅದು ಏನೂ ಇಲ್ಲದ ನರಮನುಷ್ಯರಿಗೆ ಇದು ಅತ್ಯಂತ ಕಷ್ಟದ ಕೆಲಸ. ಇತ್ತೀಚೆಗೆ ಆ ಕಾಲ್ಪನಿಕ ದೇವರನ್ನು ಸಹ ನಮ್ಮ ನಮ್ಮ ಭಾಷೆ ಧರ್ಮ ಪ್ರದೇಶ ಮನಸ್ಥಿತಿ ಭಾವನೆ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳಲಾಗುತ್ತಿದೆ……

ಅಂದರೆ ಈ ಪ್ರಬುದ್ಧತೆಯ ಮಟ್ಟವೇ ನಾವೆಲ್ಲಾ ಬದುಕಿನ ಕೊನೆಯ ಹಂತವೆಂದು ಪರಿಗಣಿಸಿರುವ ಮೋಕ್ಷದ ಹೆಬ್ಬಾಗಿಲು. ಸ್ಥಿತಪ್ರಜ್ಞತೆ.
ಅದನ್ನು ತಲುಪಲು ನಾವು ಇಡೀ ಬದುಕನ್ನೇ ಸವೆಸಬೇಕಿದೆ. ಪ್ರಬುದ್ಧತೆ ಪದವಾಗದೆ, ಭಾವವಾಗದೆ ಜೀವನ ವಿಧಾನವಾದರೆ ನಾವು ಸಹಜ ಬದುಕಿನಲ್ಲಿ ಒಂದಷ್ಟು ನೆಮ್ಮದಿ ಕಾಣಲು ಸಾಧ್ಯ. ಪ್ರಬುದ್ಧತೆ ಕೇವಲ ಒಳ್ಳೆಯ ವರ್ತನೆ ಮಾತ್ರವಲ್ಲ. ಸಂದರ್ಭವನ್ನು ಗ್ರಹಿಸಿ ಅದಕ್ಕೆ ಸೂಕ್ತ ಪ್ರತಿಕ್ರಿಯೆ ತೋರುವುದು ಮುಖ್ಯವಾಗುತ್ತದೆ. ಸಾವು ನೋವು ನಷ್ಟದ ಸ್ಥಿತಿಯಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ.

ನಮ್ಮದಲ್ಲದ ತಪ್ಪಿಗೆ ಅಥವಾ ನಮ್ಮ ವಿಚಾರಗಳನ್ನು ತಪ್ಪಾಗಿ ಗ್ರಹಿಸಿ ಅಥವಾ ಉದ್ದೇಶಪೂರ್ವಕವಾಗಿ ನಮ್ಮ ಮೇಲಿನ ಅಸೂಯೆಯಿಂದ ನಮ್ಮನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ನಿಂದಿಸಿದರೂ ನಮ್ಮ ಪ್ರತಿಕ್ರಿಯೆ ಸಭ್ಯತೆಯಿಂದ ಕೂಡಿದ್ದರೆ ನಿರ್ಲಿಪ್ತತೆ ನಮ್ಮ ಉತ್ತರವಾಗಿದ್ದರೆ ಅದೂ ಕೂಡ ಪ್ರಬುದ್ದತೆಯ ಒಂದು ಲಕ್ಷಣ ಎಂದು ಪರಿಗಣಿಸಬಹುದು.

ಆದ್ದರಿಂದ ಪ್ರಬುದ್ಧರಾಗಲು ನಾವು ನಮ್ಮ ನಮ್ಮ ಮಿತಿಯಲ್ಲಿ ಪ್ರಯತ್ನಿಸೋಣ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್.ಕೆ.
9844013068……