ಕಾವೇರಿ ಆರತಿ……. ಮಾರ್ಚ್ 21, ಬೆಂಗಳೂರಿನ ಸ್ಯಾಂಕಿಕೆರೆಯಲ್ಲಿ….
ವಿಜಯ ದರ್ಪಣ ನ್ಯೂಸ್…..
ಕಾವೇರಿ ಆರತಿ…….
ಮಾರ್ಚ್ 21,
ಬೆಂಗಳೂರಿನ ಸ್ಯಾಂಕಿಕೆರೆಯಲ್ಲಿ….
ಉತ್ತರ ಪ್ರದೇಶದಗಂಗಾ ಆರತಿಯಂತೆ ಕರ್ನಾಟಕ ಸರ್ಕಾರದ ಅಂಗ ಸಂಸ್ಥೆ ಬೆಂಗಳೂರು ಜಲ ಮಂಡಳಿ ಇದೇ 21ನೇ ತಾರೀಕು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಸದಾಶಿವನಗರದ ಬಳಿ ಇರುವ ಸ್ಯಾಂಕಿ ಕೆರೆಗೆ ಕಾವೇರಿ ಆರತಿ ಕಾರ್ಯಕ್ರಮ ಮಾಡುತ್ತಿದೆ. ನನ್ನ ವೈಯಕ್ತಿಕ ಅಂದಾಜಿನಂತೆ ಎಲ್ಲಾ ಪ್ರೋಟೋಕಾಲ್ ಮತ್ತು ಇತರ ಖರ್ಚುಗಳ ಸೇರಿ ಸುಮಾರು ಒಂದು ಕೋಟಿಗೂ ಹೆಚ್ಚು ಹಣ ಖರ್ಚಾಗಬಹುದು.
ಇಲ್ಲಿಯವರೆಗೂ ಸುಮಾರು 60 ವರ್ಷಗಳಿಂದ ಬೆಂಗಳೂರು ಜಲ ಮಂಡಳಿ, ಬೆಂಗಳೂರಿನ ಜನರಿಗೆ ಹೆಚ್ಚು ಕಡಿಮೆ ಉತ್ತಮ ಗುಣಮಟ್ಟದ ನೀರನ್ನು ಒದಗಿಸುತ್ತಿದೆ. ಅದಕ್ಕಾಗಿ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತಾ, ಆದರೆ ಸರ್ಕಾರ ಅಥವಾ ಅರೆ ಸರ್ಕಾರಿ ಸಂಸ್ಥೆಯ ಮೌಢ್ಯವನ್ನು ಪ್ರಶ್ನಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಿ,
ನೀರಿಗೆ ಗೌರವ ಸೂಚಿಸಲು, ನೀರಿಗೆ ಭಕ್ತಿಯ ಪ್ರಣಾಮ ಮಾಡಲು, ನೀರಿನ ದುರುಪಯೋಗ ತಡೆಯಲು,
ನೀರಿನ ಸದುಪಯೋಗದ ಜಾಗೃತಿ ಮೂಡಿಸಲು, ಜಲ ಪ್ರತಿಜ್ಞೆ ಬೋಧಿಸಲು ಒಂದೇ ಒಂದು ಸಾಮಾನ್ಯ ಸಹಜ ಆರತಿಗಿಂತ ಸಾವಿರಾರು ಆರತಿಗಳು ಹೆಚ್ಚು ಶಕ್ತಿಶಾಲಿಯೇ, ಸಾವಿರಾರು ಆರತಿಗಳಿಂದ ಗಂಗಾಮಾತೆಯನ್ನು ತೃಪ್ತಿಪಡಿಸಬಹುದೇ ಅಥವಾ ಬೆಂಗಳೂರಿನಲ್ಲಿ ಎಂದಿಗೂ ಜಲಕ್ಷಾಮ ಬರದಂತೆ ತಡೆಯಬಹುದೇ ಅಥವಾ ಮೇಕೆದಾಟು ಯೋಜನೆಗಿಂತ ಇದು ಶಕ್ತಿಶಾಲಿಯೇ ಅಥವಾ ಸಾವಿರಾರು ಆರತಿಗಳಿಂದ ಜನರನ್ನು ಆಕರ್ಷಿಸಿ ಈ ರೀತಿಯ ಕಾರ್ಯಕ್ರಮದ ಮೂಲಕ ನೀರಿನ ಸದುಪಯೋಗದ ಬಗ್ಗೆ ಅರಿವು ಮೂಡಿಸುವುದರಲ್ಲಿ ಯಶಸ್ವಿಯಾಗಬಹುದೇ ಅಥವಾ ಓಟಿನ ರಾಜಕಾರಣದ, ಜನರ ಮೌಢ್ಯ ಭಾವನೆಗಳ ದುರುಪಯೋಗವೇ, ಇದಕ್ಕಿಂತ ವೈಚಾರಿಕವಾದ ಪರ್ಯಾಯ ಮಾರ್ಗಗಳಿರಲಿಲ್ಲವೇ……
ನಮ್ಮ ತರ್ಕ ಕುತರ್ಕಗಳು ಪ್ರಕೃತಿಯಲ್ಲಿ ಏನೇ ಇರಲಿ, ನೀರು ಮತ್ತು ಅಗ್ನಿ ಎರಡು ವಿರುದ್ಧ ಶಕ್ತಿಗಳು. ಬೆಂಕಿಯನ್ನು ನಂದಿಸಲು ನೀರನ್ನೇ ಉಪಯೋಗಿಸುತ್ತೇವೆ. ನೀರನ್ನು ಕಾಯಿಸಲು ಬೆಂಕಿಯನ್ನೇ ಉಪಯೋಗಿಸುತ್ತೇವೆ. ಹೀಗಿರುವಾಗ ಆ ಸ್ವಚ್ಛಂದ ನೀರಿಗೆ ದೀಪಗಳೆಂಬ ಬೆಂಕಿ ಉಂಡೆಗಳನ್ನು ಹಚ್ಚಿ ಸಂಭ್ರಮಿಸುವುದರಲ್ಲಿ ಅರ್ಥವಿದೆಯೇ…..
ಸಾವಿರಾರು ದೀಪಗಳು ರಾತ್ರಿ ಸಮಯದಲ್ಲಿ ಕೆರೆಯ ಸುತ್ತ ಹಚ್ಚಿದರೆ ಅದೊಂದು ಸುಂದರ ದೃಶ್ಯ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಅದರ ಅವಶ್ಯಕತೆ ಇದೆಯೇ…
ಈ ಬಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಸುಷ್ಮಾ ಅಯ್ಯಂಗಾರ್ ಎನ್ನುವವರ ಚುಟುಕನ್ನು ಒಂದು ಕಿಡಿನುಡಿ ಎಂಬ ಅಂಕಣದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಬರೆದಿರುವುದನ್ನು ಪ್ರಕಟಿಸಲಾಗಿದೆ.
” ಯಾರು ಏನೂ ಅನ್ನಬಾರದು ಎನ್ನುವ ಕಾರಣದಿಂದ
” ಕಾವೇರಿ ” ಅಂತ ಹೆಸರು ಸೇರಿಸಿಬಿಡುವುದು. ಈ ಬೇಸಿಗೆಯ ಬೇಗೆಯಲ್ಲಿ, ಕೆರೆಗಳ ನೀರು ಆವಿಯಾಗುವ ಸಮಯದಲ್ಲಿ, ನಿಂತ ನೀರಲ್ಲಿ ಆರತಿ……
ಆ ಉತ್ತರ ಭಾರತದ ಆಚರಣೆಯನ್ನು ಅನುಕರಿಸುವ ರೋಗ ಬರಿ ರೋಗವಲ್ಲ, ಅವೈಜ್ಞಾನಿಕವಾದ ಮನೋರೋಗ ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ….
ಇದಕ್ಕಿಂತ ಮೊದಲು ನೈಜ ಹೋರಾಟಗಾರರ ವೇದಿಕೆಯ ವತಿಯಿಂದ ಇದರ ವಿರುದ್ಧ ಒಂದಷ್ಟು ಪ್ರತಿಭಟನಾ ರೂಪದ ದೂರುಗಳು ದಾಖಲಾಗಿವೆ..
ಆ ಮಾಹಿತಿ ಇಲ್ಲಿದೆ….
ನೈಜ ಹೋರಾಟಗಾರರ ವೇದಿಕೆ ಬೆಂಗಳೂರು.
1) ಅಧ್ಯಕ್ಷರು
ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ (BWSSB) ಕಾವೇರಿ ಭವನ, ಬೆಂಗಳೂರು
2) ಮುಖ್ಯ ಕಾರ್ಯಪಾಲಕ ಅಭಿಯಂತರರು
ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ,
ಬೀಜ ಭವನ, ಬಳ್ಳಾರಿ ರಸ್ತೆ ಹೆಬ್ಬಾಳ
ಬೆಂಗಳೂರು …
ವಿಷಯ : ಬೆಂಗಳೂರು ನಗರದ ಸ್ಯಾಂಕಿ ಕೆರೆಯಲ್ಲಿ “ಕಾವೇರಿ ಆರತಿ” ಮತ್ತು ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ.
ಉಲ್ಲೇಖ:
1) ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ W.P ಸಂಖ್ಯೆ: 38401/14 ಮತ್ತುW.P ಸಂಖ್ಯೆ: 29107/19 ಮತ್ತುWP ಸಂಖ್ಯೆ: ಸಂಖ್ಯೆ 6961 of 2020 on Vrishabavathy Valley matter
2) ಕರ್ನಾಟಕ ರಾಜ್ಯ ವಿಶೇಷ ರಾಜ್ಯ ಪತ್ರಿಕೆ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ19 ಶಾಸನ 2014 ದಿನಾಂಕ 06/09/ 2014
3) ಸರ್ಕಾರದ ಸುತ್ತೋಲೆ ಸಂಖ್ಯೆ: ಆರ್ ಡಿ 32 ಎಲ್ ಜಿ ಬಿ 2015 ದಿನಾಂಕ: 14/07/20
4) ಸರ್ಕಾರದ ಸುತ್ತೋಲೆ ಸಂಖ್ಯೆ ಆರ್ ಡಿ 46 ಎಲ್ ಜಿ ಪಿ 2017 ದಿನಾಂಕ: 14/06/2018
5) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಂಖ್ಯೆ: ಆಯುಕ್ತರು/ಪಿಎಸ್ಆರ್ (ಜಿ) 23/2019-20 ದಿನಾಂಕ: 08/06/20
ಬೆಂಗಳೂರು ನಗರ ನೀರು ಸರಬರಾಜು ಒಳಚರಂಡಿ ಮಂಡಳಿಯು ಆಯೋಜಿಸಿದ *ಕಾವೇರಿ ಆರತಿ* ಯು ನಗರದ ಸ್ಯಾಂಕಿ ಕೆರೆಯಲ್ಲಿ ನಡೆಯಲಿದ್ದು ಧಾರ್ಮಿಕ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದಿಂದ ಪುರೋಹಿತರನ್ನು ಕರೆಸಲಾಗುವುದು ಮತ್ತು ಕೆರೆಯ ಸುತ್ತ ಮೆರವಣಿಗೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಲೈವ್ ಆರ್ಕೆಸ್ಟ್ರ ಇತ್ಯಾದಿಗಳ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿರುವ ಅಧ್ಯಕ್ಷ ರಾಮಪ್ರಸಾದ್ ಮನೋಹರ್ ರವರು ತಿಳಿಸಿ, ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದು ಕಾರ್ಯಕ್ರಮ ವಿವರಿಸಿರುವ ವರದಿ ಪ್ರಕಟವಾಗಿದೆ.
ನೈಜ ಹೋರಾಟಗಾರರ ವೇದಿಕೆಯು ಈ ಕಾರ್ಯಕ್ರಮ ಸ್ಯಾಂಕಿ ಕೆರೆಯಲ್ಲಿ ನಡೆಯುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮೇಲ್ಕಂಡ ಉಲ್ಲೇಖದಲ್ಲಿ ನಮೂದಿಸಿರುವ ಸರ್ಕಾರದ ಕಾಯಿದೆ, ಆದೇಶ, ಸುತ್ತೋಲೆಗಳನ್ನು ಮತ್ತು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ
ಆದೇಶಗಳನ್ನು ತಮ್ಮ ಗಮನಕ್ಕೆ ತಂದು ಈ ಕಾರ್ಯಕ್ರಮವನ್ನು ಸ್ಯಾಂಕಿ ಕೆರೆಯಲ್ಲಿ ನಡೆಸುವುದನ್ನು ಸಂಪೂರ್ಣವಾಗಿ ರದ್ದುಪಡಿಸಬೇಕೆಂದು ಈ ಮನವಿಯನ್ನು ತಮಗೆ ಕೊಡುತ್ತಿದ್ದೇವೆ.
ಕರ್ನಾಟಕ ಸರ್ಕಾರ , ಹಸಿರು ನ್ಯಾಯಪೀಠಗಳು, ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯಗಳು ಈಗಾಗಲೇ ಹಲವಾರು ಆದೇಶಗಳನ್ನು, ಸುತ್ತೋಲೆಗಳನ್ನು ಪ್ರಕಟಿಸಿ ರಾಜ್ಯದಲ್ಲಿರುವ ಎಲ್ಲಾ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದರ ಜೊತೆ ಕೆರೆಯೊಳಗೆ ಮತ್ತು ಕೆರೆಯ ಆವರಣದೊಳಗೆ ಹಾಗೂ ಬಫರ್ ಜೋನ್ ಗಳಲ್ಲಿ ಯಾವುದೇ ರೀತಿಯ ಧಾರ್ಮಿಕ, ಸಾಂಸ್ಕೃತಿಕ ಮತ್ತು ವ್ಯವಹಾರಿಕ ಉದ್ದೇಶಗಳಿಗೆ ಬಳಸಬಾರದೆಂದು ಕರ್ನಾಟಕ ಉಚ್ಚ ನ್ಯಾಯಾಲಯವು WP 29107 of 2019 ರಲ್ಲಿ ಈ ಕೆಳಕಂಡಂತೆ ಆದೇಶಿಸಿರುತ್ತದೆ:-
“Karnataka high Court by its order dated 14.03.2023 has passed the following order on I.A.No.1 of 2023 of WP 29107 of 2019
“i) The Authorities shall ensure that there shall not be any temporary or permanent construction or commercial or recreational or industrial activity
and there shall not be any pollution or conducting of any act which is detrimental directly or
indirectly to the tank or tank-bed area.
ii) The Authorities also shall not permit any individual or any group or any political party to use the tank area for recreational or celebrations, so also, ensure protection of the tank.”
ಎಂದು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿರುತ್ತದೆ.
KTCDA Act sec 12 sub clause 3 ರ ಅನುಸಾರ ಈ ಮೇಲ್ಕಂಡ ಕಾರ್ಯಕ್ರಮಗಳಿಗೆ ಸಂಪೂರ್ಣ ನಿಷೇಧವಿರುತ್ತದೆ:-
12. Acts prohibited in tanks.- Notwithstanding anything to the contrary contained in
any law for the time being in force, no person or institution or organization
(registered or unregistered) or company or firm or association, Government
departments, corporation or any local or other authority and their agents or
employees or any body on their behalf shall,-
1. use the tank for any purpose other than storage or impounding of water or for the purpose mentioned in clause (9) of section 5;
2. construct any structure on tank land, occupy any tank land or part there of or cause any obstruction at the natural or normal course of inflow or outflow of water into, or from, the tanks on the upstream and or downstream;
3. make any construction or carry on any commercial, or recreational or industrial activity within thirty meters from the outer boundary of the tank;
ಕಟ್ಟುನಿಟ್ಟಾಗಿ ಈ ಮೇಲ್ಕಂಡ ಕಾರ್ಯಕ್ರಮಗಳನ್ನು ಕೆರೆಯ ಆವರಣದಲ್ಲಿ ಮತ್ತು 30 meters Buffer Zone ನಲ್ಲಿ ಆಯೋಜಿಸುವುದಕ್ಕೆ ನಿಷೇಧವಿರುತ್ತದೆ.
ನಗರದ ಈ ಸ್ಯಾಂಕಿ ಕೆರೆಯನ್ನು ಸ್ಥಳೀಯರು ಮತ್ತು ಸುತ್ತಮುತ್ತ ಪ್ರದೇಶದಲ್ಲಿ ವಾಸ ಮಾಡುತ್ತಿರುವ ನಾಗರೀಕರು ಈ ಕೆರೆಯ ಉಳಿವಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಕೆರೆಯ ಸುತ್ತ ಇರುವ ಪರಿಸರದಲ್ಲಿ ವಿವಿಧ ಜಾತಿಯ ಪ್ರಾಣಿ ಪಕ್ಷಿಗಳ ಸಂಕುಲನಗಳಿದ್ದು ಮತ್ತು ಕೆರೆಯೊಳಗಿನ ಜಲಚರ ಪ್ರಾಣಿಗಳು ಈ ಕಾರ್ಯಕ್ರಮದಿಂದ ಹಾನಿಗೊಳಗಾಗುವುದರಲ್ಲಿ ಸಂಶಯವಿಲ್ಲ.
ಅನಾವಶ್ಯಕವಾಗಿ ನಿಸರ್ಗದಲ್ಲಿರುವ ಪಕ್ಷಿ ಸಂಕುಲನ ಮತ್ತು ಜಲಚರಗಳ ಜೀವಕ್ಕೆ ಹಾನಿ ಮಾಡುವ ಮತ್ತು ತೊಂದರೆ ಕೊಡುವ ಹಕ್ಕು ಯಾರಿಗೂ ಇರುವುದಿಲ್ಲ.
ಇತ್ತೀಚಿನ ವರ್ಷಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಸರ್ಕಾರದ ಆಡಳಿತ ಚುಕ್ಕಾಣಿ ಹಿಡಿಯಲು ಮತ್ತು ಹಿಡಿದ ತಕ್ಷಣ ನಾಗರೀಕರ (ಮತದಾರರ)ಧಾರ್ಮಿಕ ಭಾವನೆಗಳನ್ನು ಉಪಯೋಗಿಸಿಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಿ ಜನರ ಭಾವನೆಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಚುನಾವಣೆಗೆ ಬಳಸಿಕೊಳ್ಳುವ ವ್ಯಾಪಕವಾದ ಒಂದು ರೀತಿಯ ದಂಧೆ ಸಮಾಜದಲ್ಲಿ ನಡೆಯುತ್ತಿರುವುದನ್ನು ಎಲ್ಲರೂ ಗಮನಿಸುತ್ತಿದ್ದಾರೆ ಎಂಬ ಸಾಮಾನ್ಯ ಪ್ರಜ್ಞೆ ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಇರಬೇಕು ಎಂಬುದು ನಮ್ಮ ಅನಿಸಿಕೆಯಾಗಿದೆ.
ಆದುದರಿಂದ ಈ ಮೇಲ್ಕಂಡ ವಿಷಯ ಮತ್ತು ಉಲ್ಲೇಖದನ್ವಯ ತಾವು ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ನಗರದ ಸ್ಯಾಂಕಿ ಕೆರೆಯಲ್ಲಿ ಆಯೋಜಿಸಲು ನಿರ್ಧರಿಸಿರುವ “ಕಾವೇರಿ ಆರತಿ” ಲೇಸರ್ ಪ್ರದರ್ಶನ ಮತ್ತು ಆರ್ಕೆಸ್ಟ್ರ, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಕಾರ್ಯಕ್ರಮಗಳನ್ನು ತಕ್ಷಣ ರದ್ದುಪಡಿಸಿ ನ್ಯಾಯಾಲಯದ ಆದೇಶ ಮತ್ತು ಸರ್ಕಾರದ ಕಾಯ್ದೆ ಆದೇಶ ಸುತ್ತೋಲೆಗಳಿಗೆ ಮಾನ್ಯತೆ ನೀಡಬೇಕೆಂದು ಈ ಮೂಲಕ *ನೈಜ ಹೋರಾಟಗಾರರ ವೇದಿಕೆ* ಯು ತಮ್ಮಲ್ಲಿ ಕೋರಿಕೊಳ್ಳುತ್ತಿದೆ.
ಈ ಬಗ್ಗೆ ತಾವು ಈ ಪತ್ರ ತಲುಪಿದ ತಕ್ಷಣ ಕಾರ್ಯಕ್ರಮವನ್ನು ರದ್ದುಪಡಿಸಿದ ಪ್ರಕಟಣೆ ಹೊರಡಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇವೆ.
ಗೌರವ ಪೂರ್ವಕ ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
ಹೆಚ್ ಎಂ ವೆಂಕಟೇಶ್
ಹಿರಿಯಸಾಮಾಜಿಕ ಹೋರಾಟಗಾರರು
( 94819 06861 )
ಬಿ.ಎಸ್ ಲೋಕೇಶ್
ಸಾಮಾಜಿಕ ಕಾರ್ಯಕರ್ತರು
ನೈಜ ಹೋರಾಟಗಾರರ ವೇದಿಕೆಯ ಪರವಾಗಿ
ಧರ್ಮವೆಂಬದು ಮತ ಸೆಳೆಯುವ ವ್ಯಾಪಾರದ ಸೂತ್ರವಲ್ಲ, ರಾಜಕೀಯದ ತಂತ್ರಗಾರಿಕೆಯಲ್ಲ, ಆಡಳಿತದ ಕಾರ್ಯಕ್ರಮವಲ್ಲ. ಅದು ಸಕಲ ಜೀವಾತ್ಮಗಳಿಗೆ ಲೇಸನ್ನೇ ಬಯಸುವ ವೈಯಕ್ತಿಕ ಮತ್ತು ಸಾಮಾಜಿಕ ನೀತಿ ನಿಯಮಗಳು. ಧರ್ಮ ಕೇವಲ ತಿಳಿವಳಿಕೆ ಮಾತ್ರವಲ್ಲ ನಡವಳಿಕೆ ಸಹ……
ಉಳಿದದ್ದು ನಿಮ್ಮ ವಿವೇಚನೆಗೆ ಬಿಡುತ್ತಾ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……..