ಭೂ ಅಕ್ರಮದಲ್ಲಿ ಜಿಲ್ಲಾಧಿಕಾರಿ ಭಾಗಿ: ಕುಮಾರಸ್ವಾಮಿ ಆರೋಪ

ವಿಜಯ ದರ್ಪಣ ನ್ಯೂಸ್….

ಭೂ ಅಕ್ರಮದಲ್ಲಿ ಜಿಲ್ಲಾಧಿಕಾರಿ ಭಾಗಿ: ಕುಮಾರಸ್ವಾಮಿ ಆರೋಪ

ರಾಮನಗರ: ಶಾಸಕ ಇಕ್ಸಾಲ್ ಹುಸೇನ್ ತಮ್ಮ ಹೆಸರಿಗೆ ಬರೆಸಿಕೊಂಡಿದ್ದ ಹೊಂಗಾಣಿ ದೊಡ್ಡಿ ಗ್ರಾಮವನ್ನು ಜಿಲ್ಲಾಧಿಕಾರಿಗಳು ಏಕಾಏಕಿ ಕಂದಾಯ ಗ್ರಾಮ ಎಂದು ಘೋಷಣೆ ಮಾಡಿರುವುದು ಅನುಮಾನ ಮೂಡಿಸಿದೆ. ಭೂ ಅಕ್ರಮದಲ್ಲಿ ಜಿಲ್ಲಾಧಿಕಾರಿ ಭಾಗಿಯಾಗಿಯಾಗಿರುವ ಶಂಕೆಯಿದೆ ಎಂದು ಜಯಕರ್ನಾಟಕ ಸಂಘಟನೆ ರಾಜ್ಯಸಲಹೆಗಾರ ಕುಮಾರಸ್ವಾಮಿ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಹೊರೆಡಿಸಿರುವ ಆದೇಶದಲ್ಲಿ ಖಾಸಗಿ ಒಡೆತನದಲ್ಲಿದ್ದ ಭೂಮಿ ಎಂದು ಘೋಷಿಸುತ್ತಾರೆ. ಭೂಸುಧಾರಣಾ ಕಾಯಿದೆಯಡಿ ಗೇಣಿದಾರರು ಅರ್ಜಿ ಹಾಕುತ್ತಿದ್ದಂತೆ ಅದು ಸರ್ಕಾರದ ಭೂಮಿಯಾಗುತ್ತದೆ. ಇದನ್ನು ಖಾಸಗಿ ಭೂಮಿ ಎಂದು ಜಿಲ್ಲಾಧಿಕಾರಿಗಳು ಸುಳ್ಳು ಹೇಳಿದ್ದಾರೆ ಎಂದು ದೂರಿದರು.

ಕನಕಪುರ ತಾಲೂಕಿನ ಉಯ್ಯಂಬಹಳ್ಳಿ ಹೋಬಳಿ ಯಡಮಾರನಹಳ್ಳಿ ಸರ್ವೇ ನಂಬರ್ 265,268,269/1 270 2 ಒಟ್ಟು 24 ಎಕರೆ ಭೂಮಿ ಇದ್ದು ಇದರಲ್ಲಿ ಹೊಂಗಾಣಿದೊಡ್ಡಿ ಗ್ರಾಮವಿದೆ. ಗೇಣಿದಾರ ರೈತರು ಗ್ರಾಮದಲ್ಲಿದ್ದಾರೆ. ಆದರೆ, 12ಎಕರೆ 31 ಗುಂಟೆ ಭೂಮಿಯನ್ನು ಮಾತ್ರ ಕಂದಾಯಗ್ರಾಮ ಎಂದು ಘೋಷಣೆ ಮಾಡಿ ಉಳಿದ ಭೂಮಿಯನ್ನು ರಿಯಲ್‌ ಎಸ್ಟೇಟ್ ಮಾಡಲು ಬಿಟ್ಟಿದ್ದಾರಾ? ಎಂದು ಪ್ರಶ್ನಿಸಿದರು.

ಲೋಕಾಯುಕ್ತ ಮೇಲೆ ನಂಬಿಕೆ ಇಲ್ಲ: ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಆದರೆ ಮೂಡಾ ಪ್ರಕರಣವನ್ನು ನೋಡಿದರೆ ಲೋಕಾಯುಕ್ತರಿಂದ ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆ ನಮಗಿಲ್ಲ. ಜಿಲ್ಲೆಯಲ್ಲಿ 2021-22ರಲ್ಲಿ ದಾಖಲಾಗಿರುವ ಪ್ರಕರಣವನ್ನು ಇದೀಗ ವಿಚಾರಣೆ ಮಾಡುತ್ತಿದ್ದಾರೆ. ನಮ್ಮ ಪ್ರಕರಣ ಇನ್ನು ಯಾವಾಗ ತನಿಖೆಗೆ ಬರುತ್ತದೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಡಿಗೆ ದೂರು:

ಹೊಂಗಾಣಿ ದೊಡ್ಡಿ ಗ್ರಾಮದ ಜಮೀನು ಖರೀದಿಯಲ್ಲಿ 13 ಕೋಟಿ ಹಣ ಬಳಕೆಯಾಗಿದೆ. ಹವಾಲ ಮೂಲಕ ಹಣವನ್ನು ಶಾಸಕ ಇಕ್ಯಾಲ್ ಹುಸೇನ್ ಜಮೀನು ಖರೀದಿಗೆ ಬಳಕೆ ಮಾಡಿದ್ದಾರೆ ಇದನ್ನು ಇಡಿ ತನಿಖೆಗೆ ಆಗ್ರಹಿಸುತ್ತೇವೆ. ಸದ್ಯದಲ್ಲೇ ರಾಜ್ಯಪಾಲರನ್ನು ಭೇಟಿಮಾಡಿ ದೂರು ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಡಿಸಿಎಂ ಕ್ಷೇತ್ರದಲ್ಲಿ ಅವ್ಯವಸ್ಥೆ:

ಉಳುವವನೇ ಭೂಮಿ ಒಡೆಯ ಎಂಬ ಕಾಯಿದೆ ಜಾರಿಗೆ ತಂದಿದ್ದು ಇಂದಿರಾಗಾಂಧಿ, ತಮ್ಮ ಪಕ್ಷದ ಮಹತ್ವದ ಯೋಜನೆಯನ್ನು ಅದೇ ಪಕ್ಷದ ಶಾಸಕರು, ಕೆಪಿಸಿಸಿ ಅಧ್ಯಕ್ಷರ ತವರು ನೆಲದಲ್ಲಿ ಮುರಿಯುತ್ತಿದ್ದಾರೆ. ಭೂ ಸುಧಾರಣಾ ಕಾಯಿದೆಯ ಪ್ರಕಾರ 54 ಎಕರೆಗಿಂತ ಹೆಚ್ಚು ಭೂಮಿಯನ್ನು ಇಟ್ಟುಕೊಳ್ಳುವಂತಿಲ್ಲ. ಆದರೆ, 300 ಎಕರೆ ಭೂಮಿ ಇಟ್ಟುಕೊಳ್ಳಲು ಹೇಗೆ ಸಾಧ್ಯ? ಕನಕಪುರ ತಾಲೂಕು ಕಚೇರಿ ಗೊಂದಲದ ಗೂಡಾಗಿದೆ. ರೈತರ ಭೂಮಿಗೆ ಗಂಟೆಗೊಂದು ಸರ್ವೇ ನಂಬರ್ ಕೂರಿಸುತ್ತಿದ್ದಾರೆ. ಸಾಮಾನ್ಯ ರೈತರ ದಾಖಲೆ ತಿದ್ದುಪಡಿಗೆ ವರ್ಷಗಳ ವರೆಗೆ ಅಲೆದಾಡಿಸುವ ಅಧಿಕಾರಿಗಳು, ರಿಯಲ್ ಎಸ್ಟೇಟ್ ದಂಧೆಯರಿಗೆ ಕ್ಷಣದಲ್ಲಿ ಕೆಲಸ ಮಾಡಿಕೊಡುತ್ತಾರೆ ಎಂದು ಆರೋಪಿಸಿದರು.