ಅನ್ನದ ಮಹಿಮೆ ಅರಿಯೋಣ
ವಿಜಯ ದರ್ಪಣ ನ್ಯೂಸ್….
ಮನೋಲ್ಲಾಸ
ಅನ್ನದ ಮಹಿಮೆ ಅರಿಯೋಣ
ಲೇಖನ :ಜಯಶ್ರೀ ಜೆ. ಅಬ್ಬಿಗೇರಿ
ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದ. ಅವನು ದರ್ಪದ ಮನುಷ್ಯ. ಆದರೆ, ಅವನ ಮನೆಯಲ್ಲಿ ಒಂದು ನೇಮವಿದ್ದಿತು. ಅದೆಂದರೆ, ಮನೆಯ ಆಳು ದಿನನಿತ್ಯ ಅಡುಗೆಯನ್ನು ಮೀಸಲಾಗಿ ತೆಗೆದುಕೊಂಡು, ಊರ ಹೊರಗಿನ ನದಿಯನ್ನು ದಾಟಿ, ಆ ದಂಡೆಗಿದ್ದ ಮನೆದೇವರು ಬಸವಣ್ಣನ ದೇವಸ್ಥಾನಕ್ಕೆ ಹೋಗಿ ಎಡೆ ಕೊಟ್ಟು ಬರುವುದು. ದೇವಸ್ಥಾನಕ್ಕೆ ಎಡೆ ಕೊಟ್ಟು ಬಂದ ನಂತರ ಎಲ್ಲರೂ ಪ್ರಸಾದವನ್ನು ಸ್ವೀಕರಿಸುತ್ತಿದ್ದರು.
ಅದೊಂದು ದಿನ ಸೇವಕನಿಗೆ ಮೈಯಲ್ಲಿ ಹುಷಾರಿರಲಿಲ್ಲ. ತುಂಬ ಜ್ವರ ಬಂದಿತ್ತು. ಜೊತೆಗೆ ಮಳೆ ಧಾರಾಕಾರವಾಗಿ ಸುರಿಯಲು ಆರಂಭಿಸಿತ್ತು. ಮಾಲೀಕನ ಆಜ್ಞೆ ಪಾಲಿಸದೆ ಗತ್ಯಂತರವಿಲ್ಲ. ಜ್ವರದಿಂದ ನಡುಗುತ್ತಲೇ ಎಡೆಯನ್ನು ತೆಗೆದುಕೊಂಡು ನದಿಯ ದಂಡೆತನಕ ಸಾಗಿದ. ಇನ್ನು ಮುಂದೆ ಸಾಗಲಾರೆ ಎಂದೆನಿಸಿತು. ಅಲ್ಲಿಯೇ ಇದ್ದ ನೆರಳಿನ ಆಸರೆಯಲ್ಲಿ ಸುಧಾರಿಸಿಕೊಂಡ. ಹಸಿವೆಯೂ ಬಹಳವಾಗಿದ್ದರಿಂದ ದೇವರನ್ನು ಸ್ಮರಿಸಿ ತಾನೇ ಆ ಎಡೆಯನ್ನು ಅರ್ಧ ತಿಂದು, ಉಳಿದಿದ್ದನ್ನು ತೆಗೆದಿಟ್ಟು ವಿಶ್ರಾಂತಿ ಪಡೆದು ಮನೆಯತ್ತ ಸಾಗಿದ. ಮುಂದೆ ಏನೋ ಎಂದು ಅವನ ಎದೆಯೊಳಗೆ ಅಳುಕುತ್ತಿತ್ತು.
ಮಾಲೀಕನಿಗೆ ಅದೇ ರಾತ್ರಿ ಒಂದು ಕನಸು ಬಿತ್ತು. ಅದರಲ್ಲಿ ಬಸವಣ್ಣ ಕಾಣಿಸಿಕೊಂಡು, ‘ಇವತ್ತು ನೀನು ಅರ್ಪಿಸಿದ ಎಡೆ ನಿಜಕ್ಕೂ ಸಂದಿತು. ಸ್ವೀಕರಿಸಿ ತೃಪ್ತನಾದೆ’ ಎಂದು ನುಡಿದ. ಸಿರಿವಂತ ಧಿಗ್ಗನೇ ಎದ್ದು ಕುಳಿತ. ಅದೇಕೆ ದಿನನಿತ್ಯ ಎಡೆ ಸಲ್ಲುತ್ತಿರಲಿಲ್ಲವೇ? ಇಂದೇನು ವಿಶೇಷ? ಎಂದು ಯೋಚಿಸಿದ. ಬೆಳಗ್ಗೆ ಸೇವಕನನ್ನು ಕರೆದು ಕೇಳಿದ, ‘ಹೇಳು, ನಿನ್ನೆ ಎಡೆಯನ್ನು ಹೇಗೆ ಸಲ್ಲಿಸಿದೆ?’ ಅವನು ಭಯದಿಂದ ನಡುಗುತ್ತ, ‘ನನ್ನದು ತಪ್ಪಾಯಿತು’ ಎಂದ. ‘ನಿಜ ಹೇಳು’ ಎಂದು ಆತ ಒತ್ತಾಯಿಸಿದಾಗ ನಡೆದ ಸಂಗತಿಯನ್ನು ಸವಿಸ್ತಾರವಾಗಿ ಹೇಳಿದ. ಆಗ ಶ್ರೀಮಂತನಿಗೆ ಆಶ್ಚರ್ಯವಾಯಿತು. ಸಂಭ್ರಮ-ಅಚ್ಚರಿಯಿಂದ ಸೇವಕನ ಕೈ ಹಿಡಿದು, ‘ಇವತ್ತು ನೀನು ನನಗೆ ಬುದ್ದಿ ಕಲಿಸಿದೆ. ಹಸಿದವರು ಉಂಡಾಗಲೇ ದೇವನಿಗೆ ನಿಜವಾದ ತೃಪ್ತಿ ದೊರೆಯುವುದು; ಮಾನವನ ಮುಖಾಂತರವೇ ದೇವರು ಉಣ್ಣುವುದು ಎಂಬ ಸಿದ್ಧಾಂತವನ್ನು ದೇವರು ನಿನ್ನ ಮುಖಾಂತರ ಮನಗಾಣಿಸಿದ’ ಎಂದು ನುಡಿದ.
ನಿಜ, ಹಸಿದವನಿಗೆ ಗೊತ್ತು ಅನ್ನದ ಬೆಲೆ. ಅದಕ್ಕೆ ಸರ್ವಜ್ಞನು, ‘ಅನ್ನ ದೇವರ ಮುಂದೆ ಅನ್ಯ ದೇವರಿಲ್ಲ’ ಎಂದಿರುವುದು. ಒಂದು ತುತ್ತು ಅನ್ನದ ಹಿಂದೆ ಸಾವಿರಾರು ಜನರ ಶ್ರಮವಿದೆ ಎನ್ನುವ ಹಿರಿಯರ ಹಿತವಚನ ಕೇಳಿದ್ದೇವೆ. ದೇಶದಲ್ಲಿ ದಿನಂಪ್ರತಿ ಎಷ್ಟೋ ಮಕ್ಕಳು ಹಸಿವಿನಿಂದ ಕಣ್ಣು ಮುಚ್ಚುತ್ತಿವೆ. ಎಷ್ಟೋ ಜನ ಒಂದು ಹೊತ್ತಿನ ಊಟವಿಲ್ಲದೆ ಪರದಾಡುತ್ತಿದ್ದಾರೆ. ಸಂಪಾದನೆಯ ಕೆಲ ಭಾಗವನ್ನಾದರೂ ಹಸಿದವರಿಗೆ, ಅನಾಥಾಶ್ರಮಕ್ಕೆ, ಸಾಮಾಜಿಕ ಕಾರ್ಯಗಳಿಗೆ ನೀಡಬೇಕು. ಮದುವೆ, ಇನ್ನಿತರ ಕಾರ್ಯಕ್ರಮಗಳಲ್ಲಿ ಆಹಾರ ಪೋಲು ಆಗದಂತೆ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಮಾನವ ಧರ್ಮ ಪಾಲಿಸೋಣವಲ್ಲವೇ?
(ಲೇಖಕರು ಉಪನ್ಯಾಸಕರು, ಹವ್ಯಾಸಿ ಬರಹಗಾರರು)