ಅಂತರಂಗದ ಪಯಣ….
ವಿಜಯ ದರ್ಪಣ ನ್ಯೂಸ್
ಅಂತರಂಗದ ಪಯಣ….
ಎಲ್ಲೋ ಒಳಗಡೆ ಒಂದು ಸಣ್ಣ ನೋವು, ನಿರಾಸೆ, ಅಸಹಾಯಕತೆ ಕಾಡುತ್ತಲೇ ಇರುತ್ತದೆ,
ಬದುಕಿನ ಗುರಿ ದೂರ ದೂರ ಸರಿಯುತ್ತಲೇ ಹೋಗುತ್ತಿದೆ, ಅದನ್ನು ಹಿಡಿಯುವ ಆಸೆ, ಉತ್ಸಾಹ ಬತ್ತದಂತೆ ಸದಾ ಮತ್ತೆ ಮತ್ತೆ ರಿಚಾರ್ಜ್ ಮಾಡಿಕೊಂಡು ಮುನ್ನಡೆಯುತ್ತಲೇ ಇರಬೇಕು,
ಸೋಲಲೆಂದೇ ಬಂದಿದ್ದೇನೆ ಆದ್ದರಿಂದ ಗೆಲುವಿನ ನಿರೀಕ್ಷೆಯೇನು ಇಲ್ಲ,
ಕೊಡಲೆಂದೇ ಬಂದಿದ್ದೇನೆ, ಪಡೆದುಕೊಳ್ಳುವ ಯಾವ ಆಸೆಯೂ ಇಲ್ಲ,
ಅವಮಾನಿತನಾಗುತ್ತಲೇ ಬದುಕುತ್ತಿರುವುದರಿಂದ ಬಹುಮಾನದ ನಿರೀಕ್ಷೆ ಏನು ಇಲ್ಲ,
ಅರ್ಧ ಆಯಸ್ಸು ಮುಗಿದು ಸಾಯುವುದು ನಿಶ್ಚಿತವಾದ ಕಾರಣ ಸಾವಿನ ಭಯವೇನು ಇಲ್ಲ,
ಸದಾ ನೋವಿನಲ್ಲೇ ಇರುವುದರಿಂದ ನಲಿವಿನ ಅನುಭವ ಆಗುತ್ತಲೇ ಇಲ್ಲ,
ಕಷ್ಟಗಳಲ್ಲೇ ಹುಟ್ಟಿ ಬೆಳೆದಿದ್ದರಿಂದ ಸುಖದ ಭರವಸೆ ಏನೂ ಇಲ್ಲ,
ಆಯಾಸವಾಗುತ್ತಲೇ ಇರುವುದರಿಂದ ಆರಾಮ ಎಂಬುದೇನು ಅರಿವಿಗೆ ಬರುವುದೇ ಇಲ್ಲ,
ಅನುಮಾನದಲ್ಲೇ ಎಲ್ಲರೂ ನೋಡುವುದರಿಂದ ಈ ಗಾಳಿ ಮಾತುಗಳ ಯುಗದಲ್ಲಿ ಸ್ಪಷ್ಟತೆಯ ಅವಶ್ಯಕತೆ ಬೀಳುತ್ತಲೇ ಇಲ್ಲ,
ವಿಶಾಲತೆಯ ಉತ್ತುಂಗದಲ್ಲಿ ನೆಲೆಸಿರುವುದರಿಂದ ಸಣ್ಣತನ ಹತ್ತಿರ ಸುಳಿಯುವುದೂ ಇಲ್ಲ,
ಕನಸುಗಳೇ ಹೆಚ್ಚು ಅಪ್ಯಾಯಮಾನವಾದ್ದರಿಂದ ವಾಸ್ತವಕ್ಕೆ ಬರಲು ಮನಸ್ಸು ಹಿಂಜರಿಯುತ್ತದೆ,
ಭರವಸೆಗಳೇ ಬದುಕಾಗಿರುವುದರಿಂದ ಫಲಿತಾಂಶ ಗಗನ ಕುಸುಮವಾಗುತ್ತಲೇ ಇದೆ,
ಒಮ್ಮೊಮ್ಮೆ ಹೀಗೂ ಅನಿಸುತ್ತದೆ…….
ಎಷ್ಟೊಂದು ಸಣ್ಣವನು ನಾನು,
ಎಷ್ಟೊಂದು ಅಲ್ಪನು ನಾನು,
ಕ್ಷುಲ್ಲಕ ದೇಹ, ದುರ್ಬಲ ಮನಸ್ಸು,
ಸಣ್ಣ ಸೂಜಿ ಚುಚ್ಚಿದರೂ ರಕ್ತ ಚಿಮ್ಮುತ್ತದೆ,
ಸಣ್ಣ ಕೋಲಿನಿಂದ ಹೊಡೆದರೆ ಬಾಸುಂಡೆ ಬರುತ್ತದೆ,
ಸ್ವಲ್ಪ ಮೇಲಿನಿಂದ ಬಿದ್ದರೆ ಪ್ರಾಣವೇ ಹೋಗುತ್ತದೆ,
ಮಳೆಯಲ್ಲಿ ನೆನೆದರೆ ನೆಗಡಿಯಾಗುತ್ತದೆ,
ಬಿಸಿಲಲ್ಲಿ ನಡೆದರೆ ತಲೆ ನೋಯುತ್ತದೆ,
ಚಳಿಯಲ್ಲಿದ್ದರೆ ಉಬ್ಬಸವಾಗುತ್ತದೆ,
ಗಾಳಿಗೆ ಸಿಕ್ಕಿದರೆ ಜ್ವರ ಬರುತ್ತದೆ,
ಯಾರಾದರೂ ಟೀಕಿಸಿದರೆ ಕೋಪ ಬರುತ್ತದೆ,
ಇನ್ಯಾರಾದರೂ ಹಿಯಾಳಿಸಿದರೆ ಬೇಸರವಾಗುತ್ತದೆ,
ಸ್ಪರ್ಧೆಯಲ್ಲಿ ಸೋತರೆ ಅವಮಾನವಾಗುತ್ತದೆ,
ಪ್ರೀತಿ ಪಾತ್ರರು ಸತ್ತರೆ ದು:ಖವಾಗುತ್ತದೆ,
ಮತ್ಯಾರೋ ಮೋಸ ಮಾಡಿದರೆ ನೋವಾಗುತ್ತದೆ,
ಹಣ ಸಿಕ್ಕಿದರೆ ಖುಷಿಯಾಗುತ್ತದೆ,
ಅಧಿಕಾರ ಸಿಕ್ಕಿದರೆ ಗರ್ವವಾಗುತ್ತದೆ,
ಬೇರೆಯವರ ಯಶಸ್ಸಿಗೆ ಅಸೂಯೆಯಾಗುತ್ತದೆ,
ನನ್ನ ಪರಿಸ್ಥಿತಿಗೆ, ಮನಸ್ಥಿತಿಗೆ ನಾಚಿಕೆಯಾಗುತ್ತದೆ,
ಬೇರೆಯವರ ವಸ್ತುಗಳ ಮೇಲೆ ಆಸೆಯಾಗುತ್ತದೆ,
ಪರ ಸತಿ/ಪತಿ ಮೇಲೆ ಮೋಹವಾಗುತ್ತದೆ,
ನನಗಿಷ್ಟವಿಲ್ಲದವರು ಸೋತರೆ ಸಂತೋಷವಾಗುತ್ತದೆ,
ಎಲ್ಲರೂ ಹೇಳುತ್ತಾರೆ,
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವರ್ಗಗಳನ್ನು
ಗೆದ್ದವನೇ ಮನುಷ್ಯನೆನ್ನುವರು,
ಅದನ್ನು ಗೆಲ್ಲುವುದು ಹೇಗೆ….
ಗೆಲ್ಲುವುದು ಎಂದು……..
ಹಾಗಾದರೆ ನಾನಿನ್ನೂ ಮನುಷ್ಯನಲ್ಲವೇ ?
ಮನುಷ್ಯನೇ ಆದರೂ ನಾಗರಿಕ ನಲ್ಲವೇ ?
ಆತ್ಮಸಾಕ್ಷಿಯಾಗಿ ಪ್ರಶ್ನೆಗಳು ಕಾಡಿದಾಗ ಉತ್ತರಗಳ ಮೊದಲ ಹೆಜ್ಜೆ ತಲುಪಿದಂತೆ,
ಮುಂದೆ….
ಮನ ಗೆದ್ದು ಮಾರು ಗೆಲ್ಲುವ ಪಯಣಕ್ಕೆ ಸಿದ್ಧತೆ ಮಾಡಿಕೊಂಡಂತೆ,
ಅನಂತದೆಡಗಿನ ಪಯಣದ ಹಾದಿಯಲ್ಲಿ ಮುನ್ನಡೆಯುತ್ತಲೇ ಇರಲಿ, ಬದುಕಿನ ದೋಣಿ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068……