ಖರ್ಗೆ ಹೇಳಿಕೆ ಹಿಂದೂ ಧರ್ಮೀಯರ ಮೇಲಿನ ದಾಳಿ, ಹಿಂಸೆ: ಚಿ. ನಾ. ರಾಮು
ವಿಜಯ ದರ್ಪಣ ನ್ಯೂಸ್…
ಖರ್ಗೆ ಹೇಳಿಕೆ ಹಿಂದೂ ಧರ್ಮೀಯರ ಮೇಲಿನ ದಾಳಿ, ಹಿಂಸೆ: ಚಿ. ನಾ. ರಾಮು
ಪ್ರಯಾಗ್ ರಾಜ್ : ಮಹಾಕುಂಭ ಮೇಳ 144 ವರ್ಷಗಳಿಗೊಮ್ಮೆ ಬರುವ ಹಿಂದೂಧರ್ಮೀಯರ ಶ್ರದ್ಧಾಭಕ್ತಿಗಳ ಸಂಕೇತ. ಗಂಗೆಯ ಪುಣ್ಯಸ್ನಾನ ನಮ್ಮನ್ನು ಪಾವನಗೊಳಿಸುತ್ತದೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಹೀಗಾಗಿಯೇ ಮಹಾಕುಂಭಮೇಳದಲ್ಲಿ 50 ಕೋಟಿ ಜನ ಪುಣ್ಯಸ್ನಾನ ಮಾಡಿದ್ದಾರೆ. ಗಂಗೆ ಎಂದರೆ ಆಕೆ ಬರೀ ಒಂದು ನದಿಯಲ್ಲ. ಮಾನವ ಬದುಕಿನ ಜೀವದಾಯಿನಿ. ಭರತ ಭೂಮಿಯ ಪುಣ್ಯದಾಯಿನಿ. ನಮ್ಮ ಸಂಸ್ಕೃತಿ, ಪರಂಪರೆ, ಧಾರ್ಮಿಕ ನಂಬಿಕೆಗಳು ಗಂಗೆಯೊಂದಿಗೆ ತಳಕು ಹಾಕಿಕೊಂಡಿವೆ.
ಇಂತಹ ಗಂಗೆಯ ಬಗ್ಗೆ , ಗಂಗಾಸ್ನಾನದ ಬಗ್ಗೆ ಕೇವಲವಾಗಿ ಮಾತನಾಡಿ 140 ಕೋಟಿ ಹಿಂದೂ ಧರ್ಮೀಯರ ಮನಸ್ಸು ಘಾಸಿಗೊಳಿಸಿದ “ಮುಳುಗುತ್ತಿರುವ ಹಡಗು” ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನಸ್ಥಿತಿ ಬಗ್ಗೆ ನನಗೆ ತೀವ್ರ ಕನಿಕರವಿದೆ.
“ಗಂಗೆಯಲ್ಲಿ ಮುಳುಗೆದ್ದರೆ ಬಡತನ ಹೋಗುತ್ತದೆಯೇ” ಎಂದು ಪ್ರಶ್ನಿಸುವ ಅವರ ಅವರ ಕೊಳೆತು ನಾರುವ ಮಾನಸಿಕತೆ ಕಳವಳಕಾರಿಯೂ ಆಗಿದೆ. ಇವರು ಯಾವ ಕಡೆ ಹೋಗುತ್ತಿದ್ದಾರೆ. ಕೇವಲ ರಾಜಕಾರಣಕ್ಕಾಗಿ ಇಂತಹ ಮಾತು ಆಡುವ ಇವರನ್ನು ಇತಿಹಾಸ ಕಸದ ಬುಟ್ಟಿಗೆ ಎಸೆಯುತ್ತದೆ ಎಂಬ ಅರಿವು ಕೂಡಾ ಇಲ್ಲವೇ?
ಭಾರತದಲ್ಲಿ ಸಾವಿರಾರು ವರ್ಷಗಳಿಂದ ರಾಜ್ಯಗಳು ಅಳಿದಿವೆ. ಸಿಂಹಾಸನಗಳು ಉರುಳಿವೆ. ಗದ್ದುಗೆ ಮುಕುಟಗಳು ಬದಲಾಗಿವೆ. ಆದರೆ ಹಿಂದೂ ಧರ್ಮವನ್ನು ಯಾರಿಂದಲೂ ನಾಶ ಮಾಡಲಾಗಿಲ್ಲ. ಕುಂಭಮೇಳಗಳನ್ನು ನಿಲ್ಲಿಸಲಾಗಿಲ್ಲ. ಮುಸ್ಲಿಂ ದಾಳಿಕೋರ ತೈಮೂರ್ ಎಂಬ ರಕ್ಕಸ ಕುಂಭ ಮೇಳದ ಮೇಲೆ ದಾಳಿ ಮಾಡಿ ನಾಗಾಸಾಧುಗಳ ಹತ್ಯೆ ಮಾಡಿದ್ದ. ಅವನು ಸೇರಿದಂತೆ ಯಾರ ಕೈಲೂ ಹಿಂದೂ ಪರಂಪರೆ ನಾಶ ಮಾಡಲಾಗಲಿಲ್ಲ. ಬ್ರಿಟಿಷರು ತಾವೇ ಮುಂದಾಗಿ ಕುಂಭಮೇಳಕ್ಕೆ ವ್ಯವಸ್ಥೆ ಮಾಡುತ್ತಿದ್ದರು. ಹಿಂದೂಗಳ ಧರ್ಮದ ವಿಚಾರಕ್ಕೆ ಹೋದರೆ ಅಪಾಯ ಎಂದು ಗೊತ್ತಿತ್ತು ಅವರಿಗೆ. ಹೀಗಾಗಿಯೇ ಅವರು ಧಾರ್ಮಿಕ ನಂಬಿಕೆ ವಿಚಾರಗಳಲ್ಲಿ ತಲೆ ಹಾಕುತ್ತಿರಲಿಲ್ಲ.
ಆದರೆ.. ಈ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನವರು ಈ ವಿಚಾರದಲ್ಲಿ ತಲೆ ಹಾಕುವ ಮೂಲಕ ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡುತ್ತಾ ಮಾನಸಿಕ ಹಿಂಸೆ ನೀಡುತ್ತಿದ್ದಾರೆ . ಇದು ಕೂಡಾ ತೈಮೂರ್ ನಂತೆಯೇ ಹಿಂದೂಗಳ ಮೇಲಿನ ದಾಳಿ. ಅವನು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹಿಂಸೆ ನೀಡಿದರೆ ಇವರು ಧಾರ್ಮಿಕ ಭಾವನೆಗಳಿಗೆ ನೋವು ಕೊಟ್ಟು ಹಿಂಸೆ ನೀಡುತ್ತಿದ್ದಾರೆ.
ಹಿಂದೂ ಧರ್ಮೀಯರು ಅನ್ಯ ಧರ್ಮಗಳ ಆಚರಣೆಗಳ ಬಗ್ಗೆ ಗೌರವ ಹೊಂದಿದ್ದಾರೆ. ಆದರೆ ಖರ್ಗೆಯಂತವರು ಹಿಂದೂ ನಂಬಿಕೆಗಳನ್ನು ಘಾಸಿಗೊಳಿಸಿ ಅನ್ಯಧರ್ಮೀಯರ ಓಲೈಕೆಗೆ ಪ್ರಯತ್ನಿಸುತ್ತಾರೆ ಅಂದರೆ ನಮ್ಮ ಹಿಂದೂಗಳು ಧರ್ಮದ ವಿಚಾರದಲ್ಲಿ ಯಾರು ಏನು ಮಾತನಾಡಿದರೂ ಸುಮ್ಮನಿರುತ್ತೇವೆ ಅಂತಲಾ?
ಸುಮ್ಮನಿದ್ದದ್ದು ಇನ್ನು ಸಾಕು. ಇವರನ್ನು ಇವರ ರಾಜಕೀಯ ಪಕ್ಷವನ್ನು ಬುಡಸಹಿತ ಕಿತ್ತುಹಾಕುವ ಪಣ ತೊಡೋಣ ಬನ್ನಿ.
–ಡಾ.ಚಿ.ನಾ.ರಾಮು
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ನಿಕಟಪೂರ್ವ)
ಬಿಜೆಪಿ ಎಸ್ಸಿ ಮೋರ್ಚಾ.