ಸನಾತನ ಮತ್ತು ವಚನ ಸಂಸ್ಕೃತಿ…….

ವಿಜಯ ದರ್ಪಣ ನ್ಯೂಸ್…..

ಸನಾತನ ಮತ್ತು ವಚನ ಸಂಸ್ಕೃತಿ…….

ವೀರಶೈವ, ಲಿಂಗಾಯತ ಮತ್ತು ಸನಾತನ ಧರ್ಮದ ಚಿಂತಕರುಗಳ ನಡುವೆ ಇತ್ತೀಚಿನ ವರ್ಷಗಳಲ್ಲಿ ಒಂದು ರೀತಿಯ ದ್ವೇಷ ದಿನೇ ದಿನೇ ಹೆಚ್ಚಾಗುತ್ತಿದೆ. ತರ್ಕ, ಕುತರ್ಕಗಳು, ವಾದ, ವಿವಾದಗಳು ನಡೆಯುತ್ತಲೇ ಇವೆ.

ಸನಾತನ ಧರ್ಮಿಗಳು ವಚನ ಸಾಹಿತ್ಯವನ್ನು ಹೆಚ್ಚು ಹೆಚ್ಚು ವಿಮರ್ಶೆಗೆ ಒಳಪಡಿಸುತ್ತಾ ಅದು ವೇದ ಉಪನಿಷತ್ಗಳ ತದ್ರೂಪ ಎನ್ನುವಂತೆ ಮಾತನಾಡುತ್ತಿದ್ದಾರೆ. ಲಿಂಗಾಯತ ಧರ್ಮದ ಪ್ರತಿಪಾದಕರು ವಚನ ಮತ್ತು ಸನಾತನ ಧರ್ಮದ ಮೌಲ್ಯಗಳಲ್ಲಿ ಇರುವ ವ್ಯತ್ಯಾಸವನ್ನು ಹೇಳುತ್ತಿದ್ದಾರೆ.

ಇದು ತುಂಬಾ ಮುಂದುವರೆದು ನಿನ್ನೆ ಮೊನ್ನೆ ಸ್ವಾಮೀಜಿಯೊಬ್ಬರು ಲಿಂಗಾಯತ ಧರ್ಮ ಪ್ರತಿಪಾದಕರನ್ನು ತಾಲಿಬಾನಿಗಳು ಎಂದು ಕರೆದಿದ್ದಾರೆ. ತಾಲಿಬಾನಿಗಳು ಎನ್ನುವ ಪದದ ಅರ್ಥ ವಿದ್ಯಾರ್ಥಿ ಎಂದಿದೆಯಂತೆ. ಆದರೆ ಆ ಸ್ವಾಮಿಗಳು ಹೇಳಿರುವುದು ತಾಲಿಬಾನಿಗಳೆಂದರೆ ಭಯೋತ್ಪಾದಕರು ಎಂಬ ಅರ್ಥದಲ್ಲಿ. ಅಷ್ಟೊಂದು ದ್ವೇಷಾಸೂಯೆಯ ಅವಶ್ಯಕತೆ ಇದೆಯೇ.

ವೇದ ಉಪನಿಷತ್ ಮತ್ತು ವಚನಗಳ ನಡುವಿನ ಸಾಮ್ಯತೆ ಮತ್ತು ಭಿನ್ನತೆ ಏನಿರಬಹುದು….

ವಚನ ಸಾಹಿತ್ಯ, ವಚನ ಸಂಸ್ಕೃತಿ ಬಹುತೇಕ ವೇದ ಉಪನಿಷತ್ತು, ಮನುಸ್ಮೃತಿ, ರಾಮಾಯಣ, ಮಹಾಭಾರತ ಭಗವದ್ಗೀತೆಯ ಸಾರಾಂಶಗಳ ರೂಪಾಂತರ, ಭಾಷಾಂತರ, ಸರಳೀಕರಣ ಅಥವಾ ಕನ್ನಡೀಕರಣ ಎಂಬ ಚರ್ಚೆಗಳು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ನಡೆಯುತ್ತಿದೆ.

ಇದು ಸಂಪೂರ್ಣ ನಿಜವೇ ಅಥವಾ ಭಾಗಶಃ ನಿಜವೇ ಅಥವಾ ಸುಳ್ಳೇ ಅಥವಾ ಸಂಪೂರ್ಣ ಸುಳ್ಳೇ ಅಥವಾ ತಿರುಚುವಿಕೆಯೇ ಅಥವಾ ಇನ್ಯಾವುದೋ ಕಾಣದ ದುರುದ್ದೇಶದಿಂದ ಇದನ್ನು ಚರ್ಚೆಗೆ ಬಿಡಲಾಗುತ್ತಿದೆಯೇ….

ಈಗ ಈ ಬಗ್ಗೆ ತುಂಬಾ ಗಂಭೀರವಾಗಿ ಚಿಂತಿಸಬೇಕಾದರೆ ಮೇಲೆ ಹೇಳಿದ ಎಲ್ಲವನ್ನು ಪ್ರತಿ ಅಧ್ಯಾಯಗಳೊಂದಿಗೆ, ಆಗಿನ ಎಲ್ಲಾ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಹಿತ್ಯಕ ವಿಷಯಗಳಲ್ಲಿ ಆಳಕ್ಕೆ ಇಳಿದು ವಿಶಾಲ ಮನಸ್ಸಿನೊಂದಿಗೆ ವ್ಯಾಖ್ಯಾನಿಸಬೇಕಾಗುತ್ತದೆ. ಅದು ಸಾಮಾನ್ಯ ಜನರಿಗೆ ಅಷ್ಟು ಸುಲಭವಾಗಿ ನಿಲುಕುವುದಿಲ್ಲ, ಧೀರ್ಘ ಸಮಯವೂ ಬೇಕಾಗುತ್ತದೆ,

ಇಂದಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾಲಘಟ್ಟದಲ್ಲಿ ಸಂಪ್ರದಾಯವಾದಿಗಳು ಇದನ್ನು ಕೆಲವು ಉದಾಹರಣೆಗಳೊಂದಿಗೆ ನಿಜ ಎಂದು ವಾದಿಸಿದರೆ, ಇನ್ನೊಂದಷ್ಟು ಪ್ರಗತಿಪರ ಮತ್ತು ಲಿಂಗಾಯತ ಧರ್ಮದ ಅನುಯಾಯಿಗಳು ಸಂಪೂರ್ಣ ಸುಳ್ಳು ಎಂದು ಸಾಕ್ಷಿ ಸಮೇತ ವಾದಿಸುತ್ತಾರೆ. ನಿಜಕ್ಕೂ ಈ ವಿಷಯ ಮುಕ್ತವಾಗಿ ಚರ್ಚೆಗೆ ಒಳಪಡಬೇಕಾಗುತ್ತದೆ.

ವೇದ ಉಪನಿಷತ್ತುಗಳು ಒಂದು ಧಾರ್ಮಿಕ ಚೌಕಟ್ಟನ್ನು ಹೊಂದಿವೆ, ದೇವರು, ಧರ್ಮ, ನಂಬಿಕೆ, ಆಚಾರ ವಿಚಾರ, ಸಂಪ್ರದಾಯ, ಭಯ, ಭಕ್ತಿ, ಮೋಕ್ಷ, ಪುನರ್ಜನ್ಮ, ವರ್ಣಾಶ್ರಮ ವ್ಯವಸ್ಥೆ, ಶ್ರೇಷ್ಠ ಕನಿಷ್ಠ, ಅತಿಮಾನುಷ ಶಕ್ತಿ, ಸ್ವರ್ಗ ನರಕ ಮುಂತಾದ ಪರಿಕಲ್ಪನೆಗಳ ಮೇಲೆ ಸಾಮಾಜಿಕ ಆರ್ಥಿಕ ಜೀವನ ಶೈಲಿಯನ್ನು ಪ್ರತಿಪಾದಿಸುತ್ತದೆ. ಇವುಗಳ ಆಧಾರದ ಮೇಲೆ ಸಮಾಜವನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿಟ್ಟುಕೊಂಡು ಇಲ್ಲಿನ ಸಂಪನ್ಮೂಲಗಳ ಉಪಯೋಗವನ್ನು ಕೆಲವು ಸಮುದಾಯಗಳು ಪಡೆದುಕೊಳ್ಳುತ್ತಾ, ಇನ್ನೊಂದಿಷ್ಟು ಸಮುದಾಯಗಳು ಅದಕ್ಕೆ ಪೂರಕವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಧಾರ್ಮಿಕ ನೀತಿ ನಿಯಮಗಳನ್ನು ಹೆಣೆಯಲಾಗಿದೆ.

ಇದನ್ನು ಅರ್ಥಮಾಡಿಕೊಳ್ಳಲು ಬಹುದೊಡ್ಡ ಅಧ್ಯಯನದ ಅವಶ್ಯಕತೆ ಇಲ್ಲ. ಸರಳ, ಸಾಮಾನ್ಯ, ಸಹಜ ಜ್ಞಾನದಲ್ಲಿಯೇ ಇದನ್ನು ತಿಳಿದುಕೊಳ್ಳಬಹುದು.

ಇದಕ್ಕೆ 12 ನೆಯ ಶತಮಾನದ ವಚನ ಸಾಹಿತ್ಯ, ಸಂಸ್ಕೃತಿ, ವಿಚಾರಗಳು ಬಹುತೇಕ ಪರ್ಯಾಯ ಅಥವಾ ವಿರುದ್ಧ ಅಥವಾ ಸಮಾನಾಂತರ ಮತ್ತು ಪ್ರಗತಿಪರ ನಿಲುವುಗಳನ್ನು ಪ್ರತಿಪಾದಿಸುತ್ತವೆ. ಅಂದರೆ ಆಗಿನ ಧಾರ್ಮಿಕ ಮತ್ತು ಸಾಮಾಜಿಕ ನಿಯಮಗಳಿಗೆ ಬಹುತೇಕ ಈ ನೆಲದ, ಈ ಮಣ್ಣಿನ, ಸಮ ಸಮಾಜದ ಸೃಷ್ಠಿಯ ಅನುಭವದ ಅನುಭಾವವನ್ನು ಒತ್ತಿ ಹೇಳುತ್ತಾ, ಅದಕ್ಕೊಂದು ತೀವ್ರ ರೀತಿಯ ಬಂಡಾಯದ ಸ್ವರೂಪವನ್ನು ನೀಡುತ್ತಾರೆ.

ಹಾಗೆಂದು ಎಲ್ಲಾ ವಚನಕಾರರುಗಳ ವಚನಗಳು ಇದೇ ನಿಟ್ಟಿನಲ್ಲಿ ಇವೆಯೆಂದು ಹೇಳಲಾಗದು. ಕೆಲವು ಅಪರೂಪದ ವಚನಗಳು ಅದೇ ಶಾಸ್ತ್ರ ಸಂಪ್ರದಾಯಗಳ ಅಡಿಯಲ್ಲಿಯೇ ದೇವರು ಮತ್ತು ಧರ್ಮವನ್ನು ಪ್ರತಿಪಾದಿಸುವಂತಹುದು ಇದೆ. ಆದರೆ ಅನುಭವ ಮಂಟಪದ ಬಸವ, ಅಲ್ಲಮ, ಅಕ್ಕಮಹಾದೇವಿ, ಮಡಿವಾಳ ಮಾಚಯ್ಯ, ದೋಹರ ಕಕ್ಕಯ್ಯ , ಆಯ್ದಕ್ಕಿ ಲಕ್ಕಮ್ಮ, ಸೂಳೆ ಸಂಕವ್ವ ಮುಂತಾದ ಮಹತ್ವದ ವಚನಕಾರರು ಬಹುತೇಕ ವೇದ ಉಪನಿಷತ್ತುಗಳ ಸಾರವನ್ನು ಖಂಡಿಸುತ್ತಾ, ಶ್ರಮ ಸಂಸ್ಕೃತಿಯನ್ನು ಎಲ್ಲ ವರ್ಗಗಳಿಗೂ ಸಮನಾಗಿ ಪ್ರತಿಪಾದಿಸುತ್ತಾರೆ. ವರ್ಣಾಶ್ರಮ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ. ಜಾತಿ ತಾರತಮ್ಯ ಹೋಗಲಾಡಿಸಲು ಅಂತರ್ಜಾತಿಯ ವಿವಾಹವನ್ನೇ ಮಾಡಿಸುತ್ತಾರೆ. ಹೆಣ್ಣು ಗಂಡಿನ ನಡುವೆ ಲಿಂಗ ಭೇದವನ್ನು ಸಹ ತಿರಸ್ಕರಿಸುತ್ತಾರೆ.

ಆ ಕಾರಣದಿಂದಾಗಿಯೇ ಸನಾತನ ಧರ್ಮಿಗಳ ಆಕ್ರೋಶಕ್ಕೆ ಕಾರಣವಾಗಿ ಕಲ್ಯಾಣ ಕ್ರಾಂತಿಯಾಗಿ, ರಕ್ತಪಾತಗಳಾಗಿ ಅನೇಕ ಶರಣರು ಚೆಲ್ಲಾಪಿಲ್ಲಿಯಾಗಿ ಬೇರೆ ಬೇರೆ ಜಾಗಗಳಲ್ಲಿ ಆಶ್ರಯ ಪಡೆಯುತ್ತಾರೆ. ಸನಾತನ ಧರ್ಮಕ್ಕೆ ಪರ್ಯಾಯವಾಗಿ ಇಷ್ಟಲಿಂಗ ಪೂಜೆ, ಲಿಂಗಧಾರಣೆ, ಸರಳ, ಸಹಜ, ಜೀವನ ಕ್ರಮ, ನಡೆ – ನುಡಿ ಸಿದ್ದಾಂತ, ಅನಾಥರಿಗೆ, ಅಸಹಾಯಕರಿಗೆ ಶಿಕ್ಷಣ, ಅಕ್ಷರ ದಾಸೋಹಗಳು, ಸರ್ವಸಂಗ ಪರಿತ್ಯಾಗದ ಸನ್ಯಾಸಾಶ್ರಮ ಅಥವಾ ವಿರಕ್ತ ಮಠಗಳು, ಆಗಿನ ಸಂಪ್ರದಾಯಗಳಿಗೆ ತಿಲಾಂಜಲಿಯಿಟ್ಟು ಮನುಷ್ಯರನ್ನು ಮನುಷ್ಯರನ್ನಾಗಿಯೇ ನೋಡುವ, ಪುನರ್ಜನ್ಮಗಳನ್ನು ನಿರಾಕರಿಸುವ, ಪಾಪ ಪುಣ್ಯಗಳು ಮಾಡುವ ಕೆಲಸದಲ್ಲಿದೆ ಎನ್ನುವ ಅನೇಕ ವಿಚಾರಗಳನ್ನು ಪ್ರತಿಪಾದಿಸುತ್ತಾರೆ.

ಸನಾತನ ಧರ್ಮದ ನೀತಿ ನಿಯಮಗಳು ಬಹುತೇಕ ಶ್ರೇಷ್ಠತೆಯ ವ್ಯಸನದಿಂದ ಕೂಡಿದ್ದು, ಮೇಲುಕೀಳಿನ ತಾರತಮ್ಯವನ್ನು ಅಧಿಕೃತವಾಗಿಯೇ ಒಪ್ಪಿಕೊಳ್ಳುತ್ತದೆ ಮತ್ತು ಕೆಲವರು ಸ್ವಾತಂತ್ರ್ಯಕ್ಕೆ ಅನರ್ಹರು ಎಂಬುದಾಗಿಯೂ ಹೇಳುತ್ತದೆ. ಆದರೆ ವಚನ ಸಂಸ್ಕೃತಿ ಎಲ್ಲರನ್ನು ಕೊನೆಗೆ ಗಂಡು ಹೆಣ್ಣು ಎಂಬ ತಾರತಮ್ಯವಿಲ್ಲದೆ ಎಲ್ಲವನ್ನು ಸಮನಾಗಿ ಮನುಷ್ಯರಾಗಿ ಕಾಣುವುದನ್ನು ಪ್ರತಿಪಾದಿಸುತ್ತದೆ.

ಈ ವಿಚಾರಗಳು ಎರಡು ವರ್ಗದ ನಡುವೆ ಘರ್ಷಣೆಗೆ ಕಾರಣವಾಗುತ್ತಿದೆ. ಯಾವುದಾದರೂ ವಿಚಾರ ಮಂಡಿಸುವಾಗ ನಮಗೆ ಅನುಕೂಲಕರ ಅಂಶಗಳನ್ನು ತೆಗೆದುಕೊಂಡು ಹೋಲಿಕೆ ಮಾಡುವುದು ಸಹಜ ಮತ್ತು ಅದರಲ್ಲಿ ಕೆಲವೊಮ್ಮೆ ನಿಜವೂ ಇರುತ್ತದೆ. ಕೆಲವು ವೇದ ಉಪನಿಷತ್ತುಗಳ ಅಂಶಗಳು ವಚನಗಳಲ್ಲಿಯೂ ಇರಬಹುದು. ಹಾಗೆಯೇ ವಚನಗಳು ಮತ್ತು ವೇದ ಉಪನಿಷತ್ತುಗಳಲ್ಲಿ ಸಾಕಷ್ಟು ವಿರೋಧಾಭಾಸಗಳು ಇರುತ್ತದೆ.

ನಾವೀಗ ಈ ಕ್ಷಣದಲ್ಲಿ ನಮ್ಮ ವಿಶಾಲ ಜಾಗತಿಕ ಅನುಭವದ ಆಧಾರದಲ್ಲಿ, ಒಳ್ಳೆಯದನ್ನು, ಪ್ರಗತಿಪರವಾದದ್ದನ್ನು ವೈಚಾರಿಕವಾದದ್ದನ್ನು ತೆಗೆದುಕೊಳ್ಳಬೇಕೆ ಹೊರತು ಅನಾವಶ್ಯಕ ಘರ್ಷಣೆಗೆ ಇಳಿಯಬಾರದು. ಯಾವುದು ಶ್ರೇಷ್ಠ ಯಾವುದು ಕನಿಷ್ಠ ಎಂಬುದು ಮುಖ್ಯವಲ್ಲ. ಈಗಿನ ನಾಗರಿಕ ಸಮಾಜಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ, ಮಾನವೀಯ ಮೌಲ್ಯಗಳಿಗೆ ಯಾವುದು ಸೂಕ್ತವೋ ಅದನ್ನೇ ನಾವು ಪ್ರತಿಪಾದಿಸಬೇಕೇ ಹೊರತು ಘರ್ಷಣೆ ಅಷ್ಟೊಂದು ಉಪಯುಕ್ತವಲ್ಲ. ವೇದ ಉಪನಿಷತ್ತುಗಳಲ್ಲಿರುವ ಸರಿಯನ್ನು ಒಪ್ಪಿಕೊಂಡು ತಪ್ಪನ್ನು ಖಂಡಿಸಬೇಕು, ಹಾಗೆಯೇ ವಚನಗಳಲ್ಲಿರಬಹುದಾದ ತಪ್ಪನ್ನು ಖಂಡಿಸಿ ಸರಿಯನ್ನು ಒಪ್ಪಿಕೊಳ್ಳಬೇಕು.

ಅಂತಿಮವಾಗಿ ಎಲ್ಲದರ ಸರಿಯನ್ನು ಒಪ್ಪಿಕೊಂಡು, ತಪ್ಪುಗಳನ್ನ ನಿರಾಕರಿಸುತ್ತಾ, ಸಮ ಸಮಾಜದ, ನವ ಸಮಾಜದ ಹಾದಿಯಲ್ಲಿ ಮುನ್ನಡೆಯಬೇಕು. ಅದು ನಿಜಕ್ಕೂ ಅರ್ಥಪೂರ್ಣ ಸಮಾಜ ಕಟ್ಟಲು, ಅಭಿವೃದ್ಧಿಯ ದೇಶವಾಗಿ ಮುನ್ನಡೆಯಲು, ಸೌಹಾರ್ದಯುತ ಸಮಾಜವನ್ನು ನಿರ್ಮಿಸಲು ಉಪಯುಕ್ತವಾಗಿರುತ್ತದೆ.

ಅದನ್ನು ಹೊರತುಪಡಿಸಿ ತಮ್ಮ ಅಕ್ಷರ ಜ್ಞಾನವನ್ನು ದುರುಪಯೋಗಪಡಿಸಿಕೊಂಡು, ವಕೀಲಿಕೆಯ ರೀತಿಯಲ್ಲಿ ಏನೇನೋ ಅರ್ಥದಲ್ಲಿ ಎಲ್ಲವನ್ನು ವಿಮರ್ಶೆಗೊಳಪಡಿಸುತ್ತಾ, ತಮಗೆ ಅನುಕೂಲಕರ ವಾದಗಳನ್ನೇ ಬಿಂಬಿಸಿ ಇನ್ನೊಬ್ಬರನ್ನು ಟೀಕಿಸುವುದು ಸಮಾಜದ್ರೋಹ, ಧರ್ಮದ್ರೋಹದ ಕೆಲಸವಾಗುತ್ತದೆ.

ಆದ್ದರಿಂದ ಉಪನಿಷತ್ತುಗಳು ಏನೇ ಹೇಳಿರಲಿ, ವೇದಗಳು ಏನೇ ಹೇಳಿರಲಿ, ರಾಮಾಯಣ, ಮಹಾಭಾರತ, ಭಗವದ್ಗೀತೆಗಳು ಏನೇ ಸಂದೇಶ ನೀಡಿರಲಿ ಅಥವಾ ವಚನಗಳು ಏನನ್ನಾದರೂ ಹೇಳಿರಲಿ, ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದು, ಜೊತೆಗೆ ಈಗಿನ ಕಾಲಕ್ಕೆ ಯಾವುದು ಸೂಕ್ತವಾದದ್ದು ಎನ್ನುವುದು ಬಹುತೇಕ ಎಲ್ಲರಿಗೂ ತಿಳಿದಿದೆ. ಅದನ್ನು ಒಪ್ಪಿಕೊಳ್ಳಬೇಕೆ ಹೊರತು ಕೆಟ್ಟದ್ದನ್ನೇ ಮೂಢನಂಬಿಕೆಯ ಆಧಾರದಲ್ಲಿ ಸಮರ್ಥಿಸುವುದು ಒಳ್ಳೆಯ ಲಕ್ಷಣವಲ್ಲ. ಮುಖ್ಯವಾಗಿ ನಮ್ಮದೇ ಜನರನ್ನು ನಿಂದಿಸುವುದು ಮೂರ್ಖತನ.

ಮಾಧ್ಯಮಗಳು, ಕೆಲವು ಸ್ವಾರ್ಥಿಗಳು, ರಾಜಕೀಯ ಪಟ್ಟಭದ್ರರು, ಧಾರ್ಮಿಕ ಮೂಲಭೂತವಾದಿಗಳು ಅನಾವಶ್ಯಕವಾಗಿ ಇದನ್ನು ಹುಟ್ಟುಹಾಕುತ್ತಿದ್ದಾರೆ. ಇದು ಸಂವಿಧಾನದ ಅನುಷ್ಠಾನದೊಂದಿಗೆ ಬಗೆಹರಿದಿರುವ ಸರಳ ಸಮಸ್ಯೆ. ಅದನ್ನು ಮತ್ತೆ ಮತ್ತೆ ಕೆಣಕುವುದು ಒಳ್ಳೆಯದಲ್ಲ. ನಮ್ಮ ನಿಮ್ಮ ಶ್ರಮವನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಉಪಯೋಗಿಸೋಣ.
ಕಾಯಕವೇ ಕೈಲಾಸ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್. ಕೆ.
9844013068……..