ನೆನಪುಗಳ ಮಳಿಗೆಯಲಿ ಇನ್ನಾರಿಲ್ಲ ನಿನ್ನ ಹೊರತು
ವಿಜಯ ದರ್ಪಣ ನ್ಯೂಸ್….
ನೆನಪುಗಳ ಮಳಿಗೆಯಲಿ ಇನ್ನಾರಿಲ್ಲ ನಿನ್ನ ಹೊರತು
ನೆನಪುಗಳ ಓಣಿಯಲ್ಲಿ ಓಡಾಡುತಿರುವೆ. ನೆನಪುಗಳ ಮಳಿಗೆಯಲಿ ಇನ್ನಾರಿಲ್ಲ ನಿನ್ನ ಹೊರತು. ನೀನಿಲ್ಲದೇ ನೆನಪಿನ ಆ ಓಣಿ ಕಳೆಗಟ್ಟುವುದಾದರೂ ಹೇಗೆ? ನಿನ್ನೊಂದಿಗಿದ್ದ ದಿನಗಳೇ ಅಪ್ಪಟ ಸ್ವರ್ಗದ ದಿನಗಳು. ಸ್ವರ್ಗವೊಂದು ಏನಾದರೂ ಭೂಮಿಯ ಮೇಲಿದ್ದರೆ ಅದು ನಿನ್ನೊಂದಿಗಿದ್ದಾಗ ಮಾತ್ರ ಗೋಚರಿಸುತ್ತದೆ. ಸ್ವರ್ಗ ಬೇರಲ್ಲ ನೀನು ಬೇರಲ್ಲ ಅಂತ ಎಷ್ಟೊಂದು ಸಲ ನನಗೆ ಅನಿಸಿದ್ದು ಸುಳ್ಳಲ್ಲ ಸುಮತಿ. ಪ್ರಾಣ ಸ್ನೇಹಿತೆಯಾದ ನಿನ್ನ ಬಗೆಗಿನ ವಿಚಾರಗಳೆಲ್ಲ ಗಾಣದಂತೆ ಸದಾ ಸುತ್ತುತ್ತಲೇ ಇರುತ್ತವೆ. ಬಾಲ್ಯದಲ್ಲಿ ಗಂಡ ಹೆಂಡತಿಯಾಗಿ ಆಡಿದ ಆಟವಂತೂ ಇಂಚಿಂಚಾಗಿ ಯಥಾವತ್ತಾಗಿ ನೆನಪಿನಲ್ಲಿಟ್ಟಿದೆ ಮೆದುಳು. ಗಂಡ ಹೆಂಡತಿಯಾಟ ನೆನಪಿನ ಶಾಲೆಯಲ್ಲಿ ಹೆಚ್ಚೆಚ್ಚು ತೆರೆದುಕೊಳ್ಳುತ್ತದೆ. ಅದೇ ಈಗ ನಿಜವಾದರೆ ನನ್ನನ್ನು ಹಿಡಿಯುವವರೇ ಇಲ್ಲ. ಹೀಗೆ ನೆನಪಿನ ಲೋಕದಲ್ಲಿ ವಿಹರಿಸುವ ಹುಚ್ಚು ಇತ್ತೀಚಿಗೆ ಮತ್ತಷ್ಟು ಹೆಚ್ಚುತ್ತಿದೆ. ನೀನಿಲ್ಲದೇ ಪ್ರೇಮ ಲೋಕದ ಪ್ರಪಂಚ ನಿಂತಂತಾಗಿದೆ. ಮನಸ್ಸು ಕೂಡ ಭಾರವಾಗುತ್ತಿದೆ. ನನ್ನ ಅಪ್ರತಿಮ ಅನುಪಮ ಪ್ರೇಯಸಿ ಜೊತೆ ಭಾವನೆಗಳ ಬೆಸೆಯಲು ಮನಸ್ಸು ಹಾತೊರೆಯುತ್ತಿದೆ. ನಿನ್ನ ಚೆಂದದ ಆಕೃತಿ ಮನದ ಗೋಡೆಯ ಮೇಲೆ ಪುನಃ ಪುನಃ ಚಿತ್ತಾರವಾಗುತ್ತಿದೆ. ನೂರಾರು ಪ್ರಶ್ನೆಗಳನ್ನು ನನ್ನನ್ನೇ ನಾನು ಕೇಳುವಂತೆ ಮಾಡುತ್ತಿದೆ. ನಿನ್ನ ಕಾಲ್ಗೆಜ್ಜೆ ಸವಿ ಸಜ್ಜೆಗೆ ಸಿಹಿ ಲಜ್ಜೆಗೆ ಕಾಯುತ್ತಿದೆ.
ನನ್ನ ಆಪ್ತ ಗಳೆಯನ ನಿಶ್ಚಿತಾರ್ತಕ್ಕೆ ನಿನಗೂ ಆಮಂತ್ರಣವಿತ್ತು. ನಿನಗಾಗಿಯೇ ಬಂದಿದ್ದ ಕಣ್ಣುಗಳು ಕೂಡಿದ ಜನರಲ್ಲಿ ನಿನ್ನನ್ನೆ ಹುಡುಕುತ್ತಿದ್ದವು. ಗೆಳತಿಯರ ಗುಂಪಿನಲ್ಲಿ ಎದ್ದು ಕಾಣುವ ರಂಭೆಯಂತಹ ನೀನು ಕಣ್ಣಿಗೆ ಬಿದ್ದೆ. ನಿನ್ನನ್ನೇ ದಿಟ್ಟಿಸುತ್ತ ಸೌಂದರ್ಯ ರಾಶಿ ಆಸ್ವಾದಿಸುತ್ತ ನಿಂತು ಬಿಟ್ಟವು. ತಿಳಿ ನೀಲಿ ಸೀರೆಗೆ ಬಂಗಾರ ಬಣ್ಣದ ತೆಳುವಾದ ಅಂಚಿದ್ದ ಸೊಗಸಾದ ಕಪ್ಪು ರವಿಕೆ, ಕಿವಿಗೆ ಉದ್ದನೆಯ ನೇತಾಡುವ ಸಣ್ಣ ಜುಮುಕಗಳು ನಿನ್ನ ಚೆಂದದ ನಗುವಿಗೆ ಮಾತಿಗೆ ತಕ್ಕಂತೆ ಓಲಾಡುತ್ತ ಖುಷಿ ಪಡುತ್ತಿದ್ದವು. ಇತರರನ್ನು ನಿನ್ನತ್ತ ಆಕರ್ಷಿಸುತ್ತಿದ್ದವು. ಮೂಗಿಗೆ ಹೊಳೆವ ಪುಟ್ಟ ವಜ್ರದ ಮೂಗುತಿ ಕೈಗೆ ಅಲ್ಲಲ್ಲಿ ಕುಸುರಿ ಕೆಲಸವಿರುವ ಬೆಳ್ಳಿಯ ಕಡಗ ಹಣೆಗೆ ಶೃಂಗಾರದ ಚಿಕ್ಕ ಬಿಂದಿಯನ್ನಿಟ್ಟು ಪ್ರತಿ ಹೆಜ್ಜೆಗೂ ಸದ್ದು ಮಾಡುವ ಕಾಲುಗಳಲ್ಲಿ ಬೆಳ್ಳಿಯ ಗೆಜ್ಜೆಗಳು ತುಟಿಗೆ ಲೈಟ್ ಗುಲಾಬಿ ಲಿಪ್ ಸ್ಟಿಕ್ ಬಳಸಿ ಬಳಕುತ್ತ ಬಂದ ನಿನ್ನ ನೋಡಿ ಬೆರಗಾದೆ.
ಉದ್ದನೆಯ ಕಪ್ಪು ಕೂದಲಿನ ನಾಗರ ಜಡೆ ಅದಕ್ಕಂಟಿಸಿದ ಸುವಾಸಿತ ಸಂಪಿಗೆ ಮಿಣುಕು ಹುಳುದಂತೆ ಹೊಳೆವ ಕಂಗಳು ಕಾಮನಬಿಲ್ಲಿನಂತಿರುವ ಹುಬ್ಬು ಅಂದದ ದುಂಡನೆಯ ಮುಖಕ್ಕೊಪ್ಪುವ ಮೂಗು, ಅದೆಷ್ಟು ಸುಂದರಿಯರನ್ನು ನೋಡಿಲ್ಲ ನಾನು. ಅದರಲ್ಲಿ ನಿನಗೆ ಸಾಟಿಯೆನಿಸುವಂತವಳು ಯಾರೂ ಇಲ್ಲ. ನಿನ್ನಷ್ಟು ಸುಂದರವಾದ ಆಯಸ್ಕಾಂತದಂತೆ ಆಕರ್ಷಿಸುವ ಪಾದರಸದಂತೆ ಚುರುಕಾಗಿರುವ ಹುಡುಗಿಯನ್ನು ಆ ದೇವರು ಇನ್ನುವರೆಗೂ ಸೃಷ್ಟಿಸಿಯೇ ಇಲ್ಲ ಅನಿಸುತ್ತೆ. ಗಟ್ಟಿ ನಿಲುವು ಬುದ್ಧಿವಂತಿಕೆ ಇರುವವಳು. ಅಂದುಕೊಂಡಿದ್ದನ್ನುಸಾಧಿಸುವ ಹಟವಿರುವ ಕೋಗಿಲೆ ಕಂಠದ ಹುಡುಗಿ ಎಂತಹ ಸುಂದರಾಂಗನಿಗೂ ಇವಳೇ ನನ್ನ ಒಲವಿನ ಮುದ್ದಿನ ರಾಜಕುಮಾರಿ ಅರಗಿಣಿ ಆಗಬೇಕು ಅಂತ ಆಸೆಪಡುವಷ್ಟು ಚೆಲುವಿ ಚೆಲುವೆ ನೀನೇ ನನ್ನ ಜೀವದ ಒಲವೆ ಎಂದು ಹೇಳಿಬಿಡಬೇಕೆನಿಸುವಷ್ಟು ಮಾಯಗಾತಿ. ಅಪಾದಮಸ್ತಕ ನೋಡುತ್ತಲೇ ಇರಬೇಕು.ಇಂಥ ಅಪ್ಸರೆಯನ್ನು ಮಿಸ್ ಮಾಡಿಕೊಂಡರೆ ನನ್ನಂತಹ ಹುಚ್ಚು ಯಾರೂ ಇಲ್ಲ.
ಅದೇ ಮುಸ್ಸಂಜೆ ಕಾಫಿ ಕುಡಿಯುತ್ತ ಹರಟಿದ್ದು ಇನ್ನೂ ಹಸಿ ಹಸಿ ನೆನಪು. ನಡೆ ನುಡಿ ಸಂಸ್ಕೃತಿ ಪ್ರತಿ ಮಿಡಿಯುವ ಸ್ಪಂದಿಸುವ ರೀತಿ ನನ್ನನ್ನು ಬಹಳವಾಗಿ ಆಕರ್ಷಿಸಿತು. ಎಲ್ಲಿದ್ದರೂ ನಿನ್ನ ಬಗ್ಗೆ ಯೋಚಿಸುತ್ತಿದ್ದೆ. ಕ್ಷಣಕ್ಷಣಕ್ಕೂ ಎದೆ ಬಡಿತ ಹೆಚ್ಚಾಗುತ್ತಲೇ ಇತ್ತು. ಧೈರ್ಯವನ್ನು ಒಗ್ಗೂಡಿಸಿಕೊಂಡು ಇನ್ನೂ ಹತ್ತಿರ ಬಂದೆ ಅದಕ್ಕೆ ನಿನಗೆ ಮುಜುಗರವಾಯಿತು. ಹತ್ತಿರವಿರುವ ನನ್ನ ರೂಮಿಗೆ ಹೋಗಿ ಬೈಕ್ ತೆಗೆದುಕೊಂಡು ಪಾರ್ಕಿಗೆ ಹೋಗಿ ಬರೋಣ ಎಂದೆ. ಹೂಂ ಎನ್ನುವಂತೆ ತಲೆ ಅಲ್ಲಾಡಿಸಿದೆ. ಬೈಕೇರಿ ಮೆಲ್ಲಗೆ ಭುಜದ ಮೇಲೆ ಕೈಯಿಟ್ಟೆ. ಆಗ ಸವರ್ಗ ಮೂರೇ ಗೇಣು ಉಳಿದಂತೆನಿಸಿತು. ಕ್ಷಣಕಾಲ ಕಣ್ಮುಚ್ಚಿಕೊಂಡೆ ಸುಂದರಾಂಗಿಯ ಮೈ ಸುಗಂಧ ಆಸ್ವಾದಿಸುತ್ತ ಅದರಲ್ಲೇ ಕಳೆದು ಹೋದೆ. ಅವಳು ಹಿಂದೆ ಕೂತಿದ್ದಕ್ಕೆ ಬೈಕ್ ಸ್ಪೀಡಾಗಿ ಹೋಗಿ ಪಾರ್ಕ ಬಳಿ ನಿಂತಿತು. ಬೈಕಿನಿಂದ ಕೆಳಗಿಳಿಯುವಾಗ ಬೂಜಕ್ಕೆ ಭುಜ ತಾಕಿತು. ಅದೇ ನೆಪದಲ್ಲಿ ಮೆಲ್ಲನೆ ತಣ್ಣನೆಯ ಒರಟಾದ ಕೈಗಳು ಬೆಚ್ಚನೆಯ ಮೃದುವಾದ ಕೈಗಳೊಂದಿಗೆ ಬೆಸೆದುಕೊಂಡವು.ಕೈ ಕೈ ಹಿಡಿದುಕೊಂಡೇ ಪಾರ್ಕನ್ನು ಪ್ರವೇಶಿಸಿದೆವು.
ಒಂದೆರಡು ನಿಮಿಷದಲ್ಲಿ ಕೈಗಳ ಬೆಸತ ಸಡಿಲಗೊಂಡಿತು. ಮಂದ ಬೆಳಕಿನಲ್ಲಿ ನಿನ್ನ ಕೆನ್ನೆ ಕುತ್ತಿಗೆ ಮತ್ತೆ ಮೂಗಿನ ಮೇಲೆ ಬೆರಳುಗಳು ರೇಸಿಗೆ ಬಿದ್ದಿರುವ ತರಹ ಓಡಾಡಹತ್ತಿದವು. ಕುತ್ತಿಗೆ ಸುತ್ತ ಅರೆ ತೆರೆದ ಬೆನ್ನ ಮೇಲೆ ಮುತ್ತಿನ ಮಳೆಗೆರೆದೆ. ಅದೇ ಉನ್ಮಾದದಲ್ಲಿ ನನ್ನ ಬೆರಳುಗಳು ಕುತೂಹಲ ತಡೆಯದೇ ಮತ್ತಷ್ಟು ಕೆಳಭಾಗಕ್ಕೆ ನುಗ್ಗಲು ತಯಾರಾಗಿದ್ದವು. ನೀನು ನನ್ನ ಕೈಗಳನ್ನು ಬಿಗಿಯಾಗಿ ಹಿಡಿದು ಮುಂದಕ್ಕೆ ಹೋಗಲು ನಿನಗೆ ಅನುಮತಿಯಿಲ್ಲ ಎನ್ನುವಂತೆ ಮೌನದಲ್ಲೇ ತಡೆಹಿಡಿದಿದ್ದೆ. ಅಷ್ಟೊತ್ತು ಇದ್ದ ನನ್ನಲ್ಲಿದ್ದ ಧೈರ್ಯ ಮಂಜಿನಂತೆ ಕರಗುವುದಕ್ಕೆ ಶುರುವಾಯಿತು.
ನೀ ಕಣ್ಣಿಟ್ಟು ನೋಡಿದಾಗ ಪಕ್ಕ ನಿಂತು ನಾನು ನಗುತ್ತಿದ್ದೆ. ದಿಟ್ಟಿಸಿ ನಿನ್ನನ್ನೆ ನೋಡುತ್ತಿರುವಾಗಲೇ ನೀನು ಕಣ್ಣಿಟುಕಿಸಿದೆ. ಸೌಂದರ್ಯದ ಗಣಿಯೇ ಎದುರು ನಿಂತಿರುವುದನ್ನು ಕಂಡು ಕೈಗಳು ಹತೋಟಿಗೆ ಸಿಗದೇ ಮತ್ತೆ ತಮ್ಮ ಕೆಲಸ ಶುರು ಹಚ್ಚಿಕೊಳ್ಳಲು ಸಿದ್ಧವಾಗಿದ್ದವು. ಅದನ್ನರಿತ ನೀನು ನಿಧಾನವಾಗಿ ಗಂಭೀರವಾದ ದನಿಯಲ್ಲಿ ಪ್ರೀತಿಯ ಪಾಠ ಇಂದಿಗಿಷ್ಟು ಸಾಕು. ಇದು ಬರಿ ಅ ಆ ಇ ಈ ಇನ್ನೂ ಕಲಿಯುವುದಕ್ಕೆ ಬಹಳ ಇದೆ. ಅದಕ್ಕೆ ತಕ್ಕ ಸಮಯ ಇದಲ್ಲ ಎಂದೆ. ನಿನ್ನೊಂದಿಗನ ಆ ಸಲುಗೆ ನಡೆ ಮೌಂಟ್ ಎವರೆಸ್ಟ್ ಏರದಷ್ಟು ಖುಷಿ ತಂದಿತ್ತು. ಊಹೆ ಮಾಡಲು ಸಾಧ್ಯವಾಗದಷ್ಟು ಸಂತಸ ತಂದಿತ್ತು. ಕತ್ತಲೆಯಲ್ಲಿ ನಿನ್ನ ಮುಖ ಮನೋಹರವಾಗಿ ಕಾಣುತ್ತಿತ್ತು. ಕನಸೊ ನನಸೊ ಒಂದೂ ಅರ್ಥ ಆಗಲಿಲ್ಲ. ಇನ್ನೊಂದು ಕ್ಷಣದಲ್ಲಿ ಆಶ್ಚರ್ಯ ಖುಷಿ ಭಯ ಎಲ್ಲವೂ ಒಟ್ಟಿಗೆ ಆವರಿಸಿದಂತೆ ಆಯಿತು. ಈರ್ವರ ನಡುವೆ ಏನೋ ಆಗಿಲ್ಲ ಅನ್ನುವಂತೆ ಸರ್‌ಪ್ರೆಸ್ ಆಗಿ ನಿಂತಿದ್ದೆವು, ಮುಂದೆ ಏನು ಮಾಡಬೇಕು ಅಂತ ಗೊತ್ತಾಗದೇ ಟೋಟಲಿ ಕನ್‌ಪ್ಯೂಸ್ ಆದ ಸ್ಥಿತಿಯಲ್ಲಿದ್ದೆ. ಏನೂ ಮಾಡದ ಮುಗ್ಧನಂತೆ ನಿಂತಿದ್ದೆ. ಹಾಗೆ ನಿಂತಿದ್ದರೂ ಎದೆಯೊಳಗೆ ಚಿಟ್ಟೆ ಬಿಟ್ಟಂತಾಗಿತ್ತು.
ಪ್ರೀತಿ ಪಯಣಕೆ ಮುದ್ರೆ ಒತ್ತಿದ ಗಳಿಗೆ ನನಗೆ ಹೇಳಿಕೊಳ್ಳಲಾದಂತಹ ಸಂತಸ. ಇಷ್ಟದ ಸಿಹಿ ಚಾಕಲೇಟೊಂದು ಸಿಕ್ಕಾಗ ಚಿಕ್ಕ ಮಗು ಕುಣಿವ ತರಹ ಕುಣಿದು ಕುಪ್ಪಳಿಸಬೇಕೆನಿಸಿತ್ತು. ಶಾಲಾ ದಿನಗಳಲ್ಲಿಯೇ ತಾಯಿಯನ್ನು ಕಳೆದುಕೊಂಡ ನನಗೆ ತಾಯಿ ಪ್ರೀತಿ ಗೊತ್ತಿಲ್ಲ. ಅಕ್ಕ ತಂಗಿ ಇಲ್ಲದ್ದರಿಂದ ಹೆಣ್ಣುಮಕ್ಕಳ ನಯ ನಾಜೂಕಿನ ನಡೆಯು ಅಷ್ಟು ಸರಿಯಾಗಿ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಸಿಡಿಲು ಮಿಂಚುಗಳ ಆರ್ಭಟದೊಂದಿಗೆ ಧೋ ಅಂತ ಮಳೆ ಸುರಿಯ ಹತ್ತಿತು. ಆ ಮಳೆಯಲ್ಲಿ ತೊಯ್ದ ಬಟ್ಟೆಯಲ್ಲಿ ನಿನ್ನ ಮೈ ಮಾಟ ಕಣ್ಣಿಗೆ ಹಬ್ಬದಂತೆ ಕಂಡಿತು. ಕಿವಿಯ ಬಳಿ ಮುದ್ದಿಸುತ ಚಿಕ್ಕದಾಗಿ ಕಿವಿಯ ಅಂಚನ್ನು ಕಚ್ಚಿದೆ. ಐ ಲವ್ಯೂ ಹೇಳಿದೆ. ಐ ಟೂ ಲವ್ಯೂ ಅಂತ ಪಿಸುಗುಟ್ಟಿದೆ. ಸಾವಕಾಶವಾಗಿ ಕೈ ಬಿಡಿಸಿಕೊಂಡು ಓಡಿದೆ. ಇದೆಲ್ಲ ಸವಿನೆನಪು ಇಂದು ನಮ್ಮ ಮೊದಲಿರಳಿನ ಶುಭ ಸಮಯದಲ್ಲಿ ಇನ್ನಿಲ್ಲದಂತೆ ಕಾಡುತಿದೆ. ಬಳಿಬಂದು ಈಡೇರದೇ ಉಳಿದ ಆಸೆ ಪೂರೈಸು, ಉಸಿರಿರುವವರೆಗೂ ಉಸಿರಲಿ ಉಸಿರು ಬೆರೆಸುವಾ. ಯೌವನ ಪೋಲು ಮಾಡದೇ ಪೋಲಿ ಆಟ ಆಡುವಾ. ಪ್ರೀತಿಯ ರಸದೌತಣದಲ್ಲಿ ಮಿಂದೇಳುವಾ. ಮನದಾಸೆಗೆ ಒಪ್ಪಿಗೆ ಹಾಕು ನನ್ನ ಮನದ ಮಹಾರಾಣಿ.