ವೆಚ್ಚ ಕಡಿಮೆ ಇರಲಿ ಗಳಿಕೆಗಿಂತ
ವಿಜಯ ದರ್ಪಣ ನ್ಯೂಸ್…
ವೆಚ್ಚ ಕಡಿಮೆ ಇರಲಿ ಗಳಿಕೆಗಿಂತ
ದಿನಸಿ ಅಂಗಡಿಯಲ್ಲಿ ನಿಂತು ವಿವಿಧ ಪದಾರ್ಥಗಳನ್ನು ಆಸೆಯಿಂದ ನೋಡುತ್ತೇವೆ. ಅವುಗಳನ್ನು ಕೊಳ್ಳಲು ಮನಸ್ಸು ಹಾತೊರೆಯುತ್ತದೆ. ಆದರೆ ಅವುಗಳ ಬೆಲೆ ನಮ್ಮ ಜೇಬನ್ನು ನಡಗಿಸುವಂತಿರುತ್ತದೆ. ತುಟ್ಟಿಯಾಗಿರುವ ಕಾಫಿ ಪುಡಿಯನ್ನು ಖರೀದಿಸಲು ನಿರ್ಧರಿಸಿದರೆ, ಬೆಳಗಿನ ಕಪ್ ಕಾಫಿ ಆಡಂಬರದಂತೆ ತೋರುತ್ತದೆ. ಆದರೆ ನಂತರ ನೆಚ್ಚಿನ ಕೆಫೆಯಲ್ಲಿ ವಿಶೇಷ ಕಾಫಿ ಚೌಕಾಶಿಯಂತೆ ಕಾಣಲು ಪ್ರಾರಂಭಿಸುತ್ತದೆ. ಇದೆಲ್ಲ ದೃಷ್ಟಿಕೋನದ ಬಗ್ಗೆ, ಸರಿಯೇ? ಇದು ನಮ್ಮ ದಿನಸಿ ನಿರ್ಧಾರಗಳಲ್ಲಿ ಮಾತ್ರವಲ್ಲದೆ ನಮ್ಮ ಸಂಬಂಧಗಳು ಮತ್ತು ಜೀವನದಲ್ಲಿಯ ಬಯಕೆಗಳು ಅಗತ್ಯತೆಗಳ ನಡುವಿನ ಅಸ್ಪಷ್ಟ ರೇಖೆಯನ್ನು ಮಾಡುತ್ತದೆ. ದೇವರು ಮನುಷ್ಯನಿಗೆ ಅತ್ಯದ್ಭುತ ಕಲ್ಪನಾ ಶಕ್ತಿಯನ್ನು ಕೊಟ್ಟಿದ್ದಾನೆ. ನಮ್ಮ ಆಸೆ ಆಕಾಂಕ್ಷೆಗಳು ಅಂತರಂಗದಲ್ಲಿ ಹುದುಗಿದ್ದು. ಅವುಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತೇವೆ. ಅದನ್ನು ಕನಸು ಎಂದು ಕರೆಯಬಹುದು.
ಬಯಕೆಗಳು
ಚಿಕ್ಕವರಿದ್ದಾಗ ಬೇಸಿಗೆಯಲ್ಲಿ ನಿತ್ಯ ಪೀಪೀ ಸದ್ದು ಮಾಡುತ್ತಿದ್ದ ಐಸ್ ಕ್ಯಾಂಡಿ ಮಾರಲು ಬರುತ್ತಿದ್ದವನಿಂದ ಐಸ್ಕ್ರಿಂ ಬೇಕೇಬೇಕೆಂದು ಅಳುವಾಗ, ಜಾತ್ರೆಯಲ್ಲಿ ಗೊಂಬೆ ಇಲ್ಲವೇ ಆಟಿಕೆ ಬೇಕೆಂದು ಹಟ ಹಿಡಿದಾಗ ಹಿರಿಯರು ಆಸೆಗಳು ಮತ್ತು ಅಗತ್ಯಗಳ ನಡುವಿನ ಮಹಾಕಾವ್ಯದ ಘರ್ಷಣೆಯ ಬಗ್ಗೆ ಒಂದು ಅನಿರೀಕ್ಷಿತ ಜೀವನ ಪಾಠವನ್ನು ಕಲಿಸಿದರು. ಹೈಸ್ಕೂಲ್ನಲ್ಲಿ ಓದುವಾಗ ನಾಲ್ಕಾರು ಗೆಳೆಯರು ಸೈಕಲ್ ತಗೆದುಕೊಂಡ ಕಾರಣ ನಮಗೂ ಹೊಸ ಸೈಕಲ್ ಬೇಕೆಂದು ಭಾವಿಸಿರುತ್ತೇವೆ. ಗೆಳೆತಿಯರು ಹೊಸ ಡ್ರೆಸ್ ತೆಗೆದುಕೊಂಡಾಗ ನಮಗೂ ಅದೇ ತೆರನಾದದ್ದು ಬೇಕೆನಿಸುತ್ತದೆ. ಆದರೆ ನಮಗೆ ಅದು ನಿಜವಾಗಿಯೂ ಬೇಕಾಗಿರಲಿಲ್ಲ. ಅದೇನು ಜೀವನ ಸಾವಿನ ವಿಷಯವಾಗಿರಲಿಲ್ಲ. ಆದರೆ ಅದನ್ನೇ ಎಷ್ಟೋ ದಿನ ರಂಪ ಮಾಡಿ ಊಟ ಬಿಟ್ಟಿದ್ದೂ ಇದೆ. ಇದನ್ನೆಲ್ಲ ನೆನೆದಾಗ ನಮ್ಮ ಬಯಕೆಗಳು ತೀರ ಬಾಲಿಶವೆನಿಸಿದ್ದೂ ಇದೆ. ಬೀದಿಯಲ್ಲಿರುವಾಗ ಮನೆಯ ಬಯಕೆ, ಹಸಿವಾದಾಗ ಅನ್ನದ ಬಯಕೆ, ಮಲಗುವಾಗ ಹೊದಿಕೆಯ ಬಯಕೆ ಹೀಗೆ ಬಯಕೆಯ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಹೊಸ ದೃಷ್ಟಿಯಲ್ಲಿ ಹೊಸ ಬಯಕೆಗಳ ಸೃಷ್ಟಿ ಆಗುತ್ತಲೇ ಇರುತ್ತದೆ. ಆದರೆ ಅವುಗಳನ್ನು ಈಡೇರಿಸುವಷ್ಟು ಹಣ ನಮ್ಮಲ್ಲಿ ಇದೆಯೇ ಎನ್ನುವುದು ಅತಿ ಮುಖ್ಯವಾಗುತ್ತದೆ.
ಬಯಕೆಗಳು ಎಂದರೇನು?
ನಮಗೆಲ್ಲ ಮೋಜು ಮಸ್ತಿ ಬೇಕೆನಿಸುತ್ತದೆ. ಮೋಜು ಅಥವಾ ವಿರಾಮಕ್ಕಾಗಿ ಖರ್ಚುಗಳು. ಈ ಖರ್ಚಿಗಳು ನಮ್ಮ ಉಳಿವಿಗೆ ಅಗತ್ಯವಿಲ್ಲ. ಆದರೆ ನಾವು ಬಯಕೆಗಳನ್ನು ಹೊಂದಿರುವಾಗ ನಮ್ಮ ಜೀವನ ಹೆಚ್ಚು ಆರಾಮದಾಯಕ ಮತ್ತು ಆನಂದದಾಯಕ ಆಗಿರುತ್ತದೆ. ಊಟ ಮಾಡಬೇಕೆಂದಾಗ ಮನೆಯಲ್ಲಿ ಮಾಡದೇ ಆರ್ಡರ್ ಮಾಡುವುದು ಬಹುಶಃ ಬಯಕೆಯಾಗಿರುತ್ತದೆ. ಸಾಮಾನ್ಯವಾಗಿ ಬಯಕೆಗಳ ಅಡಿಯಲ್ಲಿ ಬರುವ ವಿಷಯಗಳೆಂದರೆ ಮನರಂಜನೆ, ಪ್ರಯಾಣ, ಬ್ರಾಂಡೆಡ್ ಉಡುಗೆಗಳು ಮತ್ತು ಚಂದಾದಾರಿಕೆಗಳು(ಉದಾ: ನೆಟ್ ಫ್ಲಿಕ್ಸ್ ಪ್ಲೇಸ್ಟೇಶನ್ ಇತ್ಯಾದಿ. ನಮ್ಮ ಬಯಕೆಗಳಿಗೆ ಕೊನೆಯೇ ಇಲ್ಲ. ಅದು ಹನುಮನ ಬಾಲದಂತೆ ಉದ್ದ. ನಿತ್ಯ ಉದ್ದವಾಗುತ್ತಲೇ ಇರುತ್ತದೆ. ಬಯಕೆಗಳೇನೋ ಮಿತಿ ಮೀರಿವೆ. ಆದರೆ ಗಳಿಕೆ ಮಿತಿಯಲ್ಲೇ ಇದೆ. ಹೀಗಿರುವಾಗ ಬದುಕಿನ ಬಂಡಿ ಯದ್ವಾ ತದ್ವಾ ನಡೆಯಲು ಶುರು ಮಾಡುತ್ತದೆ.
ಅಗತ್ಯಗಳೆಂದರೆ.. ?
ಅಗತ್ಯಗಳು ಮೂಲಭೂತ ಬದುಕುಳಿಯುವಿಕೆ. ಬದುಕಿನಲ್ಲಿ ನಮಗೆ ಅಗತ್ಯವಿರುವ ಅಗತ್ಯತೆಗಳು: ಉಸಿರಾಡುವ ಗಾಳಿ, ನಾವು ಸೇವಿಸುವ ಆಹಾರ, ನಮ್ಮ ತಲೆ ಮೇಲೊಂದು ಛಾವಣಿ. ಅಗತ್ಯಗಳ ಅಡಿಯಲ್ಲಿ ಬರುವ ಕೆಲವು ಖರ್ಚುಗಳು: ವಸತಿ, ಬಾಡಿಗೆ, ಸಾರಿಗೆ, ಬೈಕ್, ಕಾರು, ಇಂಧನ, ಕಾರು ಸಾಲಗಳು ನೀರು, ವಿದ್ಯುತ್ ಮತ್ತು ಫೋನ್ಬಿಲ್ಗಳು ವಿಮೆ ಇತ್ಯಾದಿ. ಅಗತ್ಯವೆಂದರೆ ಒಂದು ಜೀವಿಗೆ ಆರೋಗ್ಯವಂತ ಜೀವನ ಸಾಗಿಸಲು ಬೇಕಾದುದು. ಇನ್ನಷ್ಟು ವಿಸ್ತರಿಸಿ ಹೇಳಬೇಕೆಂದರೆ ಸುಕ್ಷಿತ ಸ್ಥಿರ ಮತ್ತು ಆರೋಗ್ಯವಂತ ಜೀವನಕ್ಕೆ ಬೇಕಾದುದು. ಬಹುತೇಕ
ಮನೋವೈಜ್ಞಾನಿಕ ಲಕ್ಷಣ ಮನಶಾಸ್ತ್ರಜ್ಞರಿಗೆ ಅಗತ್ಯವು ಒಂದು ಜೀವಿಯನ್ನು ಗುರಿ ಸಾಧಿಸಲು ಕಾರ್ಯ ಮಾಡಲು ಎಚ್ಚರಿಸುವ ಮನೋವೈಜ್ಞಾನಿಕ ಗುಣಲಕ್ಷಣವಾಗಿದೆ. ಅಬ್ರಹಾಂ ಮ್ಯಾಸ್ಲೋ ಪ್ರಕಾರ ಶ್ರೇಣಿ ವ್ಯವಸ್ಥೆ: ಶಾರೀರಿಕ ಅಗತ್ಯಗಳು, ಸುರಕ್ಷಿತ ಅಗತ್ಯಗಳು, ಪ್ರೀತಿ ಮತ್ತು ಸಂಬಂಧಗಳು, ಗೌರವ, ಸ್ವಯಂ-ವಾಸ್ತವೀಕರಣ, ಸ್ವಯಂ-ಉತ್ಕೃಷ್ಟತೆ. ಅನ್ನದಾತುರಕ್ಕಿಂತ ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಹೀಗೆ ಹೇಳಿದ್ದಾರೆ.
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ
ಚಿನ್ನದಾತುರಕಿಂತ ಹೆಣ್ಣುಗಂಡೊಲವು
ಮನ್ನಣೆ ದಾಹವೀಯಲ್ಲಕುಂ ತೀಕ್ಷ್ಣ
ತಿನ್ನುವುದಾತ್ಮವನೆ-ಮಂಕುತಿಮ್ಮ
ಅನ್ನವನು ಪಡೆಯಬೇಕೆಂಬ ತೀವ್ರ ಬಯಕೆಗಿಂತ ಚಿನ್ನದ ಮೇಲಿನ ಬಯಕೆ ತೀವ್ರ ಹೆಚ್ಚು. ಅದಕ್ಕಿಂತ ತೀವ್ರ ಹೆಣ್ಣು ಗಂಡಿನ ಪರಸ್ಪರ ಆಕರ್ಷಣೆಯ ತೀವ್ರತೆ ತೀವ್ರತರವಾದದ್ದು. ಇವೆಲ್ಲವುಗಳಿಗಿಂತ ಮೀರಿದುದು ಮನ್ನಣೆಯ ಬಯಕೆ, ಪ್ರಚಾರದ ಆಸೆ, ಈ ಎಲ್ಲ ಆಸೆಗಳು ಆತ್ಮವನ್ನು ಕೊರಗಿಸುತ್ತವೆ ಸೊರಗಿಸುತ್ತವೆ ಎನ್ನುತ್ತಾರೆ ಗುಂಡಪ್ಪನವರು.