ನ್ಯಾಯ ಮತ್ತು ಸತ್ಯ ಸಾರ್ವಕಾಲಿಕ….
ವಿಜಯ ದರ್ಪಣ ನ್ಯೂಸ್….
ನ್ಯಾಯ ಮತ್ತು ಸತ್ಯ ಸಾರ್ವಕಾಲಿಕ….
ಸೋಷಿಯಲ್ ಮೀಡಿಯಾದಲ್ಲಿ ರಾಜಕೀಯ, ಧಾರ್ಮಿಕ, ಸಾಮಾಜಿಕ ಮತ್ತು ಇತರ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಗೆಳೆಯ ಗೆಳತಿಯರಲ್ಲಿ ಒಂದು ವಿನಯ ಪೂರ್ವಕ ಮನವಿ……………
ನಾವು ವ್ಯಕ್ತಪಡಿಸುವ ಅಭಿಪ್ರಾಯದ ನ್ಯಾಯ ದಂಡ ಎಲ್ಲಾ ಕಾಲಕ್ಕೂ, ಎಲ್ಲಾ ಸಂದರ್ಭಗಳಿಗೂ,
ಎಲ್ಲಾ ವಿಷಯಗಳಿಗೂ ಒಂದೇ ರೀತಿಯಲ್ಲಿ ಮತ್ತು ನಿಷ್ಪಕ್ಷಪಾತವಾಗಿ ಇರಲಿ.
ಅತಿಮುಖ್ಯ ಎಂದರೆ ನಮ್ಮ ನ್ಯಾಯ ದಂಡವೇ 360 ಡಿಗ್ರಿ ಕೋನದ ಸಮಷ್ಟಿ ಪ್ರಜ್ಞೆಯ ಚಿಂತನೆಯಲ್ಲಿ ಮೂಡಿರಬೇಕು. ಆಗ ಮಾತ್ರ ನ್ಯಾಯ ತೀರ್ಮಾನ ಮಾಡಲು ಸಾಧ್ಯ. ಅರಿವೇ ಇಲ್ಲದ ವಿಷಯಗಳ ಬಗ್ಗೆ ಒಂದು ಅನುಮಾನದ ಅವಕಾಶಕ್ಕೆ ಜಾಗ ಕಲ್ಪಿಸಿರಬೇಕು.
ಕಾಂಗ್ರೆಸ್ ಅಥವಾ ಬಿಜೆಪಿ ಅಥವಾ ಕಮ್ಯುನಿಸ್ಟ್ ಅಥವಾ ಬಿಎಸ್ಪಿ ಅಥವಾ ಇನ್ಯಾವುದೇ ಪಕ್ಷವಾಗಿರಲಿ ಅದನ್ನು ಬೆಂಬಲಿಸುವ ಅಥವಾ ವಿರೋಧಿಸುವ ಅಥವಾ ಸಮರ್ಥಿಸುವ ಮಾನದಂಡಗಳು ಯಾವಾಗಲೂ ಈ ನ್ಯಾಯ ದಂಡದ ಅಡಿಯಲ್ಲಿಯೇ ಇರಬೇಕು.
ಮನುವಾದವೇ ಇರಲಿ, ಗಾಂಧಿ, ಅಂಬೇಡ್ಕರ್, ಮಾರ್ಕ್ಸ್ ನಕ್ಸಲಿಸಂ ಮುಂತಾದ ವಾದಗಳೇ ಇರಲಿ ನಮ್ಮ ನ್ಯಾಯ ದಂಡ ಒಂದೇ ರೀತಿಯಾಗಿರಬೇಕು.
ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ, ಲಿಂಗಾಯತ ಇತ್ಯಾದಿ ಯಾವುದೇ ಧರ್ಮವಾಗಿರಲಿ ಅದನ್ನು ಮೆಚ್ಚುವ ಆರಾಧಿಸುವ ಅಥವಾ ಅದನ್ನು ಟೀಕಿಸುವ ನ್ಯಾಯ ದಂಡವೂ ಸಹ ಎಲ್ಲಾ ಅಭಿಮಾನ, ಭಕ್ತಿಗಳನ್ನು ಮೀರಿ ಒಂದೇ ರೀತಿಯ ನ್ಯಾಯ ದಂಡ ಉಪಯೋಗಿಸಬೇಕು.
ಕೇವಲ ಇಷ್ಷೇ ಅಲ್ಲ. ಯಾವ ನ್ಯಾಯ ದಂಡದ ಅಡಿಯಲ್ಲಿ ನಾವು ನಮ್ಮ ತಾಯಿ ತಂದೆ ತಂಗಿ ಅಣ್ಣ ಹೆಂಡತಿ ಗಂಡ ಮಕ್ಕಳನ್ನು ತರುತ್ತೇವೆಯೋ ಅದೇ ಮಾನದಂಡ ಇತರ ಎಲ್ಲಾ ನಮ್ಮ ಜನರಿಗೂ ಅನ್ವಯಿಸಬೇಕು. ಮಗಳಿಗೆ ಒಂದು, ಸೊಸೆಗೆ ಒಂದು, ಅತ್ತೆ ಮಾವನಿಗೆ ಒಂದು, ತಂದೆ ತಾಯಿಗೆ ಒಂದು ಹೀಗೆ ಬೇರೆ ಬೇರೆ ನ್ಯಾಯ ದಂಡ ಉಪಯೋಗಿಸಬಾರದು.
ಸ್ವಜನ ಪಕ್ಷಪಾತ ಕೂಡ ಒಂದು ರೀತಿಯ ಭ್ರಷ್ಟಾಚಾರ…….
ನರೇಂದ್ರ ಮೋದಿಯೋ, ರಾಹುಲ್ ಗಾಂಧಿಯೋ, ಮಾಯಾವತಿಯೋ, ಮಮತಾ ಬ್ಯಾನರ್ಜಿಯೋ ಇನ್ಯಾರೋ ಮಾಡಿದ್ದೆಲ್ಲವೂ ಸರಿ ಎನ್ನಬೇಡಿ. ನಮ್ಮ ಮೊದಲ ಮತ್ತು ಕೊನೆಯ ಆಶಯ ಭಾರತೀಯತೆ ಮತ್ತು ಮಾನವೀಯತೆಯೇ ಆಗಿರಲಿ. ವ್ಯಕ್ತಿಗಳು ಶಾಶ್ವತವಲ್ಲ. ಸಿದ್ದಾಂತಗಳು ಶಾಶ್ವತವಲ್ಲ, ಧರ್ಮಗಳು ಶಾಶ್ವತವಲ್ಲ.
ಕಾಲದೊಂದಿಗೆ ನ್ಯಾಯದ ಮತ್ತು ಸತ್ಯದ ಮಾನದಂಡ ಬದಲಾಗಬಹುದು. ಆದರೆ ನ್ಯಾಯ ಮತ್ತು ಸತ್ಯ ಮಾತ್ರ ಈ ಜಗತ್ತು ಇರುವವರೆಗೂ ಇದ್ದೇ ಇರುತ್ತದೆ.
ನಾವು ಮಾನಸಿಕವಾಗಿ ಈ ರೀತಿಯ ನಿಷ್ಪಕ್ಷಪಾತ ನ್ಯಾಯ ದಂಡವನ್ನು ಉಪಯೋಗಿಸಿದ್ದೇ ಆದರೆ ನಮ್ಮ ಜ್ಞಾನದ ಮಟ್ಟ ಖಂಡಿತ ಉತ್ತಮ ಮಟ್ಟಕ್ಕೆ ಏರಿ ನಮ್ಮ ಜೀವನದ ಗುಣಮಟ್ಟ ಮೇಲ್ದರ್ಜೆಗೆ ಏರುತ್ತದೆ. ಇಲ್ಲದಿದ್ದರೆ ನಾವು ಜೀವನದ ಇನ್ನೊಂದು ಮುಖವನ್ನು ಕಾಣದೆ ಆ ಅನುಭವದಿಂದ ವಂಚಿತರಾಗುತ್ತೇವೆ.
ನಾವು ತಿಳಿದಿರುವ ವಿಷಯದ ಸಂಪೂರ್ಣ ಅರಿವು ನಮಗೆ ಆಗಬೇಕಿದ್ದರೆ ನಾವು ಮನುಸ್ಮೃತಿಯನ್ನು ತಿಳಿಯಬೇಕು, ಅಂಬೇಡ್ಕರ್ ಅವರನ್ನು ಓದಬೇಕು, ಗಾಂಧಿ ಮಾರ್ಕ್ಸ್ ಗಳನ್ನು, ಬುದ್ದ ಬಸವ ಮಹಾವೀರ ವಿವೇಕಾನಂದ ಪೈಗಂಬರ್ ಜೀಸಸ್ ಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.
ಒಮ್ಮೆ ಬ್ರಾಹ್ಮಣನಾಗಿ ಯೋಚಿಸು ಅದೇ ಸಮಯದಲ್ಲಿ ಅಸ್ಪೃಶ್ಯನಾಗಿಯೂ ಅನುಭವಿಸು. ಆಗ ನಿನಗೆ ಎರಡೂ ವಿಷಯಗಳ ಮೇಲು ಕೀಳಿನ ಒಳ ನೋಟ ಸಿಗುತ್ತದೆ. ಆಗ ನ್ಯಾಯದ ದಂಡ ಉಪಯೋಗಿಸಿ ಅಭಿಪ್ರಾಯ ವ್ಯಕ್ತಪಡಿಸು. ಕನಿಷ್ಠ ವಾಸ್ತವದ ಹತ್ತಿರ ನೀ ಬರಬಲ್ಲೆ. ಜ್ಞಾನದ ಸವಿಯನ್ನು ಸವಿಯಬಲ್ಲೆ.
ಸಾಧ್ಯವಾದಷ್ಟು ಇದನ್ನು ಪ್ರಯತ್ನಿಸಿ ನೋಡಿ.
ಇಸಂಗಳಿಲ್ಲದ ನಿಷ್ಪಕ್ಷಪಾತ ಅಭಿಪ್ರಾಯ ನಮಗೂ ಸಮಾಜಕ್ಕೂ ದೇಶಕ್ಕೂ ಈ ಸೋಷಿಯಲ್ ಮೀಡಿಯಾ ಅಬ್ಬರದಲ್ಲಿ ಅತ್ಯವಶ್ಯ ಎನಿಸುತ್ತದೆ.
ಅರಿವಿನ ಪಯಣದಲ್ಲಿ ಒಂದಷ್ಟು ದೂರದ ಹೆಜ್ಜೆಗಳು……..
ಸತ್ಯ – ಜ್ಞಾನ – ನದಿ……..
ಸತ್ಯಕ್ಕೆ ಸಾವಿಲ್ಲ, ನಿಜ.
ಆದರೆ ಸತ್ಯಕ್ಕೆ ಆಗಾಗ ಸಾಂಕ್ರಾಮಿಕ ಖಾಯಿಲೆ ಬರುತ್ತದೆ. ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹಲವೊಮ್ಮೆ ತಿರಸ್ಕರಿಸಲ್ಪಡುತ್ತದೆ. ಸುಳ್ಳಿಗೆ ಬೆದರುತ್ತದೆ. ದ್ವೇಷಕ್ಕೆ ಬಲಿಯಾಗುತ್ತದೆ. ಕೋಪಕ್ಕೆ ತುತ್ತಾಗುತ್ತದೆ. ಅಸೂಯೆಗೆ ಮಣಿಯುತ್ತದೆ. ಸ್ವಾರ್ಥಕ್ಕೆ ಸೆರೆಯಾಗುತ್ತದೆ…….
ವಿಷಯ ಏನೇ ಇರಲಿ, ಕಾಲದ ಪಯಣದಲ್ಲಿ ಇರಬಹುದಾದ ಸಾರ್ವಕಾಲಿಕ ಸತ್ಯ, ತತ್ತಕ್ಷಣದ ಸತ್ಯ, ಸಾಂಧರ್ಬಿಕ ಸತ್ಯ, ಘಟನೆಯ ಸತ್ಯ, ಊಹಾತ್ಮಕ ಸತ್ಯ, ಯಾರಿಗೂ ಎಂದಿಗೂ ಸ್ಪಷ್ಟವಾಗದ ಸತ್ಯ ಹೀಗೆ ಸತ್ಯದ ನಾನಾ ಮುಖಗಳು ಅಗ್ನಿ ಪರೀಕ್ಷೆಗೆ ಒಳಗಾಗುತ್ತಾ ತನ್ನ ಅಸ್ತಿತ್ವಕ್ಕಾಗಿ ಸದಾ ಹೋರಾಡುತ್ತಲೇ ಇರುತ್ತದೆ…….
ಬಹುಶಃ ಸತ್ಯದೊಂದಿಗೆ ಹೋಲಿಸಬಹುದಾದ ಮತ್ತೊಂದು ವಿಷಯ ಜ್ಞಾನ. ಇದೂ ಸಹ ಬಹುತೇಕ ಸತ್ಯದ ಆಯಾಮಗಳನ್ನೇ ಹೊಂದಿದೆ.
ವಿವಿಧ ರೂಪಗಳಲ್ಲಿ, ವಿವಿಧ ಸಂದರ್ಭಗಳಲ್ಲಿ ಭಿನ್ನ ಭಿನ್ನ ಅರ್ಥಗಳಿಗೆ ಅವಕಾಶ ಮಾಡಿಕೊಡುತ್ತದೆ…..
ಸತ್ಯ ಮತ್ತು ಜ್ಞಾನವನ್ನು ಹರಿಯುವ ಬೃಹತ್ ನದಿಗೆ ಸಮೀಕರಿಸಬಹುದು……
ಸಾಮಾನ್ಯವಾಗಿ ಬೆಟ್ಟದ ತಪ್ಪಲಿನಲ್ಲಿ ಹುಟ್ಟುವ ನದಿಗಳು ಹರಿಯುತ್ತಾ, ಹರಿಯುತ್ತಾ ಸಾಗರ ಸೇರುವವರೆಗೆ ಸಾವಿರಾರು ಮೈಲಿಗಳನ್ನು ಕ್ರಮಿಸುತ್ತವೆ. ಆ ಪಯಣದಲ್ಲಿ ಕೆಲವೊಮ್ಮೆ ಪ್ರಶಾಂತವಾಗಿ, ಇನ್ನೊಮ್ಮೆ ಭೋರ್ಗರೆಯುತ್ತಾ, ಮತ್ತೊಮ್ಮೆ ಧುಮುಕುತ್ತಾ, ಮಗದೊಮ್ಮೆ ಕೊರಕಲಿನಂತ ಇಕ್ಕಟ್ಟಾದ ಪ್ರದೇಶದಲ್ಲಿ ಚಲಿಸುತ್ತಾ, ಹಲವೊಮ್ಮೆ ವಿಶಾಲ ಪ್ರದೇಶಗಳಲ್ಲಿ ಮುನ್ನಡೆಯುತ್ತಾ ಸಾಗುತ್ತಿರುತ್ತದೆ……..
ಸತ್ಯ ಮತ್ತು ಜ್ಞಾನಗಳ ಅರ್ಥ, ಅರ್ಥೈಸುವಿಕೆ, ಅರ್ಥಮಾಡಿಕೊಳ್ಳುವುದು ಎಲ್ಲವೂ ಬಹಳಷ್ಟು ನದಿಯ ಗುಣಲಕ್ಷಣಗಳನ್ನೇ ಹೊಂದಿದೆ……..
ನದಿ ಹರಿಯುತ್ತಾ ಹರಿಯುತ್ತಾ ಸಾಗಿದಂತೆ, ಮನಸ್ಸುಗಳಲ್ಲಿ ಸತ್ಯ ಮತ್ತು ಜ್ಞಾನ ಅರಿಯುತ್ತಾ ಅರಿಯುತ್ತಾ ಬೆಳೆಯುತ್ತಿರುತ್ತದೆ. ವಯಸ್ಸು, ಪರಿಸರ, ಅನುಭವ ಬದಲಾದಂತೆ ಗ್ರಹಿಕೆಗಳು ವಿವಿಧ ಮುಖಗಳನ್ನು ತೆರೆದುಕೊಳ್ಳುತ್ತಾ ಸಾಗುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ರೂಪಕಗಳು ಕಾಣತೊಡಗುತ್ತದೆ……
ಏನೇ ಆದರೂ ಮೇಲ್ನೋಟಕ್ಕೆ ಗಮನಿಸಿದರೆ ಒಟ್ಟು ಸೃಷ್ಟಿಯ ನಿಯಂತ್ರಣದ ದೃಷ್ಟಿಯಿಂದ ಜೀವಿಗಳಲ್ಲಿ ಮನುಷ್ಯನೇ ಅತ್ಯಂತ ಬುದ್ದಿವಂತ ಪ್ರಾಣಿ ಎಂದೆನಿಸುತ್ತದೆ. ಅದರಿಂದಾಗಿ ಆತ ಸತ್ಯ ಮತ್ತು ಜ್ಞಾನವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸುವ ಚಾಕಚಕ್ಯತೆ ಬೆಳೆಸಿಕೊಂಡಿದ್ದಾನೆ. ಅದಕ್ಕೆ ಸರಿಯಾಗಿ ಜನಸಂಖ್ಯೆಯೂ ಅಭಿವೃದ್ಧಿ ಹೊಂದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವೂ ಕೆಲವು ಕಡೆ ಅಸ್ತಿತ್ವದಲ್ಲಿದೆ…….
ಆದ್ದರಿಂದ ಸತ್ಯ ಮತ್ತು ಜ್ಞಾನ ತನ್ನ ಮೂಲ ಸ್ವರೂಪವನ್ನು ಜನರ ಭಾವನೆಗಳ ದೃಷ್ಟಿಕೋನದಿಂದ ಕಳೆದುಕೊಳ್ಳುತ್ತಿದೆ. ಹೇಗೆ ನದಿಗಳು ಜನರ ಒತ್ತಡದಿಂದ ಮಲಿನವಾಗತೊಡಗಿವೆಯೋ ಹಾಗೆ…..
ಸತ್ಯ – ಜ್ಞಾನ – ನದಿಗೆ ಯಾವುದೇ ಜಾತಿ ಭಾಷೆ ಧರ್ಮ ದೇವರು ಪ್ರದೇಶ ಲಿಂಗ ವಯಸ್ಸು ಆಕಾರ ಇಲ್ಲವೇ ಇಲ್ಲ. ಅದೊಂದು ಎಲ್ಲವನ್ನೂ ಮೀರಿದ ಸ್ಥಿತಿ. ಈಗ ಅದಕ್ಕೂ ಮುಖವಾಡ ತೊಡಿಸಲಾಗಿದೆ…….
ಭಾರತದ ಮಟ್ಟಿಗೆ ಇದರ ಅತ್ಯುತ್ತಮ ಉದಾಹರಣೆ…..
ಸರ್ಕಾರ ಮತ್ತು ಅದರ ನೇತೃತ್ವ ವಹಿಸುವ ಪಕ್ಷಗಳು ಬದಲಾದಂತೆ ಇತಿಹಾಸವೂ ಹೊಸ ಅರ್ಥದೊಂದಿಗೆ ಬದಲಾಗುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಎಡ ಬಲ ಪಂಥಗಳು, ವಿವಿಧ ರಾಜಕೀಯ ನಾಯಕರು ತಮಗೆ ಇಷ್ಟಬಂದಂತೆ ಸತ್ಯ ಮತ್ತು ಜ್ಞಾನದ ಆಧಾರದಲ್ಲಿ ತಿರುಚುವಿಕೆಯನ್ನು ಗಮನಿಸಿದಾಗ ನೆನಪಾದದ್ದು
” ಸತ್ಯ – ಜ್ಞಾನ – ನದಿಗಳ ” ಸಮೀಕರಣ……
ನೀವು ಸಹ ಬದುಕಿನ – ಸಮಾಜದ ಅನೇಕ ಘಟನೆಗಳನ್ನು ಅನುಭವದೊಂದಿಗೆ ಬೆರೆಸಿ
ಸತ್ಯ ಮತ್ತು ಜ್ಞಾನದ ಬೆಳಕಿನಲ್ಲಿ ಸೂಕ್ಷ್ಮವಾಗಿ ಅವಲೋಕಿಸಿ. ಆಗ ಇವುಗಳ ಚಲಿಸುವಿಕೆ, ಬದಲಾದ ಅರ್ಥಗಳು, ಪರಿಣಾಮಗಳು, ಭಾವನೆಗಳು ಎಲ್ಲವೂ ಪದರಗಳಂತೆ ತೆರೆದುಕೊಳ್ಳುತ್ತದೆ……..
ಜ್ಞಾನದ ಬೆಳಕಿನಲ್ಲಿ,
ನದಿಯ ಹರಿವಿನಲ್ಲಿ,
ಸತ್ಯದ ದಾರಿಯಲ್ಲಿ,
ಬದುಕಿನ ಮಾರ್ಗದ ಹುಡುಕಾಟದ ಒಂದು ಸಣ್ಣ ಪ್ರಯತ್ನ……….
ಆತ್ಮವಿಮರ್ಶೆಗಾಗಿ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……