ಬಜೆಟ್ – ಹಿನ್ನೋಟ, ಮುನ್ನೋಟ, ಕಣ್ಣೋಟ, ಕರುಳಿನೋಟ, ಬದುಕಿನಾಟ..

ವಿಜಯ ದರ್ಪಣ ನ್ಯೂಸ್…

ಬಜೆಟ್ –
ಹಿನ್ನೋಟ, ಮುನ್ನೋಟ, ಕಣ್ಣೋಟ, ಕರುಳಿನೋಟ, ಬದುಕಿನಾಟ..

ಕನಸು ಕಣ್ಗಳಿಂದ ನೋಡುತ್ತಾಲೇ ಇದ್ದಾನೆ ಭಾರತದ ಬಡ – ಮಧ್ಯಮ ವರ್ಗದ ಪ್ರಜೆ 1950 ರಿಂದ ಇಲ್ಲಿಯವರೆಗೂ, ಪ್ರತಿ ವರ್ಷದ ಕೇಂದ್ರ ಮತ್ತು ರಾಜ್ಯದ ಬಜೆಟ್ ಅನ್ನು, ನಿರೀಕ್ಷಿಸುತ್ತಲೇ ಇದ್ದಾನೆ ಈ ಬಾರಿಯಾದರೂ ನಾನು ಶ್ರೀಮಂತನಾಗಬಹುದು, ಈ ಬಾರಿಯಾದರೂ ನಾನು ನೆಮ್ಮದಿಯಿಂದ ಇರಬಹುದು, ಈ ಬಾರಿಯಾದರೂ ನನ್ನ ಬದುಕು ಹಸನಾಗಬಹುದೆಂದು……

ಮತ್ತದೇ ನಿರಾಸೆ,
ಮತ್ತದೇ ನೋವು,
ಮತ್ತದೇ ಆಸಹಾಯಕತೆ,
ಮತ್ತದೇ ಆಕ್ರೋಶ,
ಮತ್ತದೇ ಮಡುಗಟ್ಟಿದ ದು:ಖ,
ಮತ್ತದೇ ಭರವಸೆ,
ಮತ್ತದೇ ಸಿನಿಕತನ…….

ನನಗೆ ಗೊತ್ತು ನೀವು ಕೇಳಬಹುದು 1950 ರಲ್ಲಿ ಎಷ್ಟೋ ಜನರಿಗೆ ಊಟಕ್ಕೇ ಗತಿ ಇರಲಿಲ್ಲ,
ಎಷ್ಟೋ ಜನರಿಗೆ ವಸತಿಯೇ ಇರಲಿಲ್ಲ, ಎಷ್ಟೋ ಜನರಿಗೆ ಉಡಲು ತೊಡಲು ಒಳ್ಳೆಯ ಬಟ್ಟೆಯೇ ಇರಲಿಲ್ಲ, ಎಷ್ಟೋ ಜನರಿಗೆ ಉದ್ಯೋಗವೇ ಇರಲಿಲ್ಲ, ಎಷ್ಟೋ ಜನರಿಗೆ ವಾಹನವೇ ಇರಲಿಲ್ಲ, ಎಷ್ಟೋ ಜನರಿಗೆ ಆರೋಗ್ಯವೂ ಇರಲಿಲ್ಲ, ಎಷ್ಟೋ ಜನರಿಗೆ ಶಿಕ್ಷಣವೂ ಇರಲಿಲ್ಲ…..

ಆದರೆ ಈಗ ಹೆಚ್ಚು ಕಡಿಮೆ ಎಲ್ಲವೂ ಇದೆ. ಈ 77 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ನಮ್ಮ ದೇಶ ಪ್ರಗತಿಯತ್ತ ಸಾಗುತ್ತಲಿದೆ. ಜನರ ಬದುಕು ಹಸನಾಗಿದೆ ಎಂದು ಅಂಕಿ ಅಂಶ ಮತ್ತು ಸಾಕ್ಷಿ ಉದಾಹರಣೆ ಸಮೇತ ಹೇಳಬಹುದು……

ಇದೆಲ್ಲವನ್ನು ಮೀರಿ ಈ ಕ್ಷಣದ ಭಾರತದ ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗ ಮತ್ತು ಬಡವರ ಪರಿಸ್ಥಿತಿ, ಜೀವನದ ಗುಣಮಟ್ಟ ಮತ್ತು ನೆಮ್ಮದಿಯ ಗುಣಮಟ್ಟದಲ್ಲಿ ಸ್ವಾತಂತ್ರ್ಯ ಪೂರ್ವಕ್ಕೆ ಹೋಲಿಕೆ ಮಾಡಿದಾಗ ತೃಪ್ತಿಕರವಾಗಿದೆಯೇ, ಸಮಾಧಾನಕರವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ……

ಒಂದು ಕಡೆ ಅಕ್ಷರಸ್ಥರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ, ವಾರ್ಷಿಕ ಬಜೆಟ್ ಗಾತ್ರ, ತಲಾ ಆದಾಯವೂ ಹೆಚ್ಚಳವಾಗಿದೆ, ಹಸಿವು ಬಡತನದ ಸಂಖ್ಯೆ ಗಣನೀಯ ಇಳಿಕೆಯಾಗಿದೆ. ತಂತ್ರಜ್ಞಾನದ ಬೆಳವಣಿಗೆಯಿಂದ ಸಾಕಷ್ಟು ಸೌಕರ್ಯಗಳು ನಮಗೆ ದೊರೆತಿದೆ. ಮನೆ ಬಾಗಿಲಿಗೆ ಅನೇಕ ಸೇವೆಗಳು ದೊರೆಯುತ್ತವೆ. ಆರೋಗ್ಯ, ಕಾನೂನು, ಮಾಹಿತಿಗಳು ಎಲ್ಲವೂ ಕೈಗೆಟಕುವ ಹತ್ತಿರದಲ್ಲೇ ಇವೆ. ಪ್ರಜಾಪ್ರಭುತ್ವ ಒಂದಷ್ಟು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ……

ಹಾಗಾದರೆ ದೇಶ ವೇಗವಾಗಿ ಮುಂದುವರಿಯುತ್ತಿದೆಯೇ, ದೇಶದ ಭವಿಷ್ಯ ಅತ್ಯುತ್ತಮವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟಾಗ, ಒಂದು ವೇಳೆ ಕೇಂದ್ರ ಮತ್ತ ರಾಜ್ಯದ ಈ ಅದ್ಭುತ, ಅಪೂರ್ವ ಬಜೆಟ್ ಗಳು ಯಶಸ್ವಿಯಾಗಿದ್ದದ್ದೇ ಆದರೆ ಈ ದೇಶ ಇನ್ನೆಲ್ಲೋ ಮುಂದುವರಿಯಬೇಕಿತ್ತು, ಎಷ್ಟು ಅಭಿವೃದ್ಧಿಯಾಗಬೇಕಿತ್ತು, ಜನರ ಜೀವನಮಟ್ಟ, ನೆಮ್ಮದಿಯ ಮಟ್ಟ ತುಂಬಾ ಮೇಲಕ್ಕೆ ಹೋಗಬೇಕಿತ್ತು,….

ಆದರೆ ಭಾರತ ಭ್ರಷ್ಟಾಚಾರ, ಹಸಿವು, ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಬಡತನ, ಸರಾಸರಿ ಆಯಸ್ಸು, ಆರೋಗ್ಯದ ಗುಣಮಟ್ಟ ಇವುಗಳಲ್ಲಿ ಹೆಚ್ಚು ಕಡಿಮೆ ನೂರರ ಮೇಲಿನ ಸ್ಥಾನದಲ್ಲಿದೆ. ಇದು ಇಡೀ ದೇಶವೇ ನಾಚಿಕೆ ಪಟ್ಟುಕೊಳ್ಳಬೇಕಾದ ಸ್ಥಾನ. ಕ್ರೀಡೆ, ಸಂಗೀತ, ಸಾಹಿತ್ಯದಲ್ಲಿ ಮುಂತಾದ ಕ್ಷೇತ್ರಗಳಲ್ಲಿ ಇನ್ನೂ ಅಂತರರಾಷ್ಟ್ರೀಯ ಗುಣಮಟ್ಟ ತಲುಪಲು ಸಾಧ್ಯವಾಗುತ್ತಿಲ್ಲ. ಜನರ ಆರೋಗ್ಯ, ಶಿಕ್ಷಣದ ಗುಣಮಟ್ಟ, ಭದ್ರತೆ, ರಕ್ಷಣೆ, ಸಂತೋಷದ ದಿನಗಳು ಖಂಡಿತವಾಗಲೂ ತೃಪ್ತಿದಾಯಕವಾಗಿಲ್ಲ…..

ನಮ್ಮ ದೇಶದ ಬಹುತೇಕ ಎಲ್ಲಾ ರಾಜಕೀಯ ಅಧಿಕಾರಸ್ಥ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ದೊಡ್ಡ ದೊಡ್ಡ ಉದ್ದಿಮೆ ವ್ಯಾಪಾರಿಗಳು, ಸಾಫ್ಟ್ವೇರ್ ಇಂಜಿನಿಯರ್ ಗಳು, ಆಡಿಟರ್, ಲಾಯರ್, ಡಾಕ್ಟರ್, ಕಾಂಟ್ರ್ಯಾಕ್ಟರುಗಳು, ಪ್ರೊಫೆಸರ್, ಪೈಲೆಟ್ಸ್, ಗೋಲ್ಡ್ ಮರ್ಚೆಂಟ್ಸ್, ರಿಯಲ್ ಎಸ್ಟೇಟ್ ಮುಂತಾದ ಕೆಲವು ಉದ್ಯಮದ, ವೃತ್ತಿಯ ಒಂದಷ್ಟು ಜನ ಖಂಡಿತವಾಗಲೂ ಶ್ರೀಮಂತರೇ…..

ಅದನ್ನು ಹೊರತುಪಡಿಸಿ ಕೆಳಹಂತದ ಕಾರ್ಮಿಕರು, ಬಹುತೇಕ ರೈತರು, ವಾಹನ ಚಾಲಕರು, ದರ್ಜಿಗಳು, ಕಟ್ಟಡ ಕಾರ್ಮಿಕರು, ಕ್ಷೌರಿಕರು, ಅರ್ಚಕರು, ಫ್ಯಾಕ್ಟರಿ ನೌಕರರು, ಹಣ್ಣು ತರಕಾರಿ ಮತ್ತು ಸಣ್ಣಪುಟ್ಟ ಚಿಲ್ಲರೆ ಅಂಗಡಿ ವ್ಯಾಪಾರಿಗಳು, ಗಾರ್ಮೆಂಟ್ಸ್ ನೌಕರರು, ಮನೆಗೆಲಸದವರು, ಬೀದಿ ಬದಿಯ ಹೋಟೆಲ್ ನವರು ಮುಂತಾದ ಬಹುತೇಕ ವರ್ಗಗಳು ಬದುಕಲ್ಲಿ ನೆಮ್ಮದಿಯನ್ನು ಕಾಣದೆ ತುಂಬಾ ತುಂಬಾ ಒದ್ದಾಡುತ್ತಿದ್ದಾರೆ. ಇವರಿಗೆ ಆಸ್ಪತ್ರೆ, ಶಾಲೆ, ವಿದ್ಯುತ್ ಬಿಲ್, ನೀರಿನ ಬಿಲ್, ಮನೆ ಬಾಡಿಗೆ, ಬಟ್ಟೆ ಮುಂತಾದ ವಿಷಯಗಳಿಗೆ ಹಣ ಹೊಂದಿಸಲೇ ಪರದಾಡುತ್ತಿದ್ದಾರೆ…..

ಅದಕ್ಕೆಂದೇ ಹೇಳುವುದು
ಶ್ರೀ ಸಾಮಾನ್ಯನ ಸ್ಥಿತಿ ಗತಿ……..

ಪಾಕಿಸ್ತಾನವೂ ನರಕವೇ, ಭಾರತವೂ ನರಕವೇ,
ಸತ್ತ ಅಮ್ಮನ ಹೆಣವನ್ನು ಆಸ್ಪತ್ರೆಯಿಂದ ಬಿಡಿಸಿಕೊಳ್ಳಲು ಹಣವಿಲ್ಲದೆ ದೈನೇಸಿಯಾಗಿ ಪರದಾಡುತ್ತಿರುವ ಸಾಮಾನ್ಯನಿಗೆ,

ಬಾಂಗ್ಲಾದೇಶವೂ ಸ್ವರ್ಗವೇ, ಭಾರತವೂ ಸ್ವರ್ಗವೇ,
ತಿಂದು ಕೊಬ್ಬಿದ ಗೂಳಿಯಂತ ಸಮಾಜ ಘಾತುಕರಿಗೆ,

ಇಸ್ರೇಲೂ ನರಕವೇ, ಪ್ಯಾಲಿಸ್ಟೇನೂ ನರಕವೇ, ಚೀನಾನೂ ನರಕವೇ ದಿನವೂ ಜೀವ ಕೈಲಿಡಿದು ಓಡಾಡುವ ಸಾಮಾನ್ಯರಿಗೆ,

ಇರಾಕೂ ಸ್ವರ್ಗವೇ, ಸಿರಿಯಾನೂ ಸ್ವರ್ಗವೇ, ಆಫ್ಘನಿಸ್ಥಾನವೂ ಸ್ವರ್ಗವೇ ಮೂಲಭೂತವಾದಿಗಳೆಂಬ ನರರಾಕ್ಷಸರಿಗೆ,

ಹಾಗೇ, ಶ್ರೀಮಂತರಿಗೆ, ಯಶಸ್ವಿ ಸಿನಿಮಾ ನಟರಿಗೆ, ರಾಜಕಾರಣಿಗಳಿಗೆ ಎಲ್ಲ ದೇಶಗಳು ಸ್ವರ್ಗವೇ,

ಮಕ್ಕಳ ಊಟಕ್ಕಾಗಿ ರಾತ್ರಿ 5 ಜನ ಕುಡುಕ ವಿಟಪುರುಷರಿಗೆ ದೇಹ ಮಾರಿದ ಯಾವ ದೇಶದ ಹೆಣ್ಣು ಅದು ಹೇಗೆ ಆ ದೇಶಕ್ಕೆ ಜೈ ಅನ್ನುತ್ತಾಳೆ,

ಭಯೋತ್ಪಾದಕರ ಗುಂಡಿಗೆ ತನ್ನ ಇಬ್ಬರು ಮಕ್ಕಳು ಕಣ್ಣಮುಂದೆ ಬಲಿಯಾದದ್ದನ್ನು ಕಂಡು ಯಾವ ದೇಶದ ಪ್ರಜೆ “ತನ್ನ ದೇಶಕ್ಕೆ ಜಿಂದ್ ಬಾದ್ ” ಎನ್ನುತ್ತಾನೆ….

ಶಾಲೆಯಲ್ಲಿ ತಲೆತಿರುಕನ ಗುಂಡಿಗೆ ಒಬ್ಬಳೇ ಮಗಳನ್ನು ಕಳೆದುಕೊಂಡ ಅಮೆರಿಕ ದೇಶದ ಯಾವ ತಾಯಿ ತಾನೇ ಆ ದೇಶವನ್ನು ಶಪಿಸದಿರುತ್ತಾಳೆ….

ಕೋಟಿ ಕೋಟಿ ಹಣ ಲೂಟಿ ಹೊಡೆದು ಐಷಾರಾಮಿ ಜೀವನ ನಡೆಸುವ ಕಿರಾತಕರಿಗೆ ಆಯಾ ದೇಶಗಳು ಸ್ವರ್ಗಗಳೇ….

ತುತ್ತು ಅನ್ನಕ್ಕೂ ಗತಿಯಿಲ್ಲದ, ಸತ್ತರೆ ಹೂಳಲು ಲಂಚ ಕೇಳುವ ದೇಶದಲ್ಲಿ ಜನ ಅದು ಹೇಗೆ ತಮ್ಮ ನೆಲವನ್ನು ಪ್ರೀತಿಸುತ್ತಾರೆ….

ಎಸಿ ರೂಮಿನಲ್ಲಿ ಕುಳಿತು ಮಾತನಾಡುವ ಟಿವಿ ನಿರೂಪಕರಿಗೆ, ಆಧ್ಯಾತ್ಮಿಕ ಚಿಂತಕರಿಗೆ ಅವರವರ ದೇಶ ಸ್ವರ್ಗವೇ,…

ಬಿಸಿಲಿನಲ್ಲಿ ಬೆಂದು, ಚಳಿಯಲ್ಲಿ ನಡುಗುವ ಅಸಹಾಯಕರಿಗೆ ಎಲ್ಲಾ ದೇಶಗಳು ನರಕವೇ….

ಅಸಮಾನತೆ, ಅಮಾನವೀಯತೆ ಇರುವ ಸಮಾಜದಲ್ಲಿ ದೇಶದ್ರೋಹ ಮತ್ತು ದೇಶಪ್ರೇಮ ದುರುಳರಿಗೆ ವ್ಯಾಪಾರ,

ರಾಜಕಾರಣಿಗಳಿಗೆ ತಮ್ಮ ಸ್ವಾರ್ಥ ಸಾಧನೆಯ ಪ್ರಬಲ ಅಸ್ತ್ರ, ಕೆಲವರಿಗೆ ಹೊಟ್ಟೆ ಪಾಡಿನ ಸರಕು.

ಆದರೆ ಸಾಮಾನ್ಯರಿಗೆ ಅವರ ದೇಹದ ಪ್ರತಿ ಕಣಕಣವೂ, ಅವರ ಕ್ಷಣಕ್ಷಣದ ಉಸಿರೂ ದೇಶಭಕ್ತಿಯೇ‌‌ ಅದು ಸಹಜ ಮತ್ತು ಸ್ವಾಭಾವಿಕ ತನಗರಿವಿಲ್ಲದೇ….

ಅವರಿಗೆ ದೇಶದ್ರೋಹವೆಂದರೆ ಗೊತ್ತೇ ಇಲ್ಲ.
ಇನ್ನು ಅದರ ಬಗ್ಗೆ ಯೋಚಿಸುವುದೆಲ್ಲಿ. ಅಷ್ಟು ಶಕ್ತಿಯೂ ಅವರಿಗಿಲ್ಲ.

ಪ್ರೀತಿಸಿದ್ದಕ್ಕಾಗಿ ಕಲ್ಲಿನಿಂದ ಹೊಡೆಸಿಕೊಳ್ಳುವ ಪಾಕಿಸ್ತಾನಿಗೆ ಅದು ನರಕವೇ…..

ಆದರೆ ಸತ್ಯ ಮಾತ್ರ ಎಲ್ಲ ಕಡೆಯ ಜನಸಾಮಾನ್ಯರ ಅಂತರಾಳದಲ್ಲಿ ಬಚ್ಚಿಟ್ಟುಕೊಂಡು ಮೌನವಾಗಿ ರೋದಿಸುತ್ತಿದೆ….

ವಿಶಾಲ ಮನೋಭಾವದ ಮನುಷ್ಯರಿಗೆ ಮಾತ್ರ ಇದು ಅರ್ಥವಾಗುತ್ತದೆ.

ದ್ವೇಷ, ಅಸೂಯೆ, ಕಪಟ ಮುಖವಾಡದವರಿಗೆ, ಇದು ಅರಿವಾಗುವುದೇ ಇಲ್ಲ.

ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಯಾವುದೇ ದೇಶದ ಅಭಿವೃದ್ಧಿ ಕೇವಲ ಶ್ರೀಮಂತರ ಶ್ರೀಮಂತಿಕೆಯ ಅಳತೆಗೋಲಲ್ಲ. ಅದು ಬಡವರ ಶೋಷಿತರ ಜೀವನಮಟ್ಟದ ಆಧಾರದ ಮೇಲೆ ನಿರ್ಧಾರವಾಗಬೇಕು…..

ಸರ್ಕಾರ ಎಂಬುದು ಒಂದು ಮಧ್ಯವರ್ತಿ ಕಾರ್ಯನಿರ್ವಾಹಕ ಸಂಸ್ಥೆ., …….

ಪ್ರಾಕೃತಿಕ ಸಂಪನ್ಮೂಲಗಳು ಮತ್ತು ಮಾನವ ಸಂಪನ್ಮೂಲಗಳ ನಡುವಿನ ಹೊಂದಾಣಿಕೆಯ ಜವಾಬ್ದಾರಿಯನ್ನು ನಿರ್ವಹಿಸುವ ಒಂದು ಪ್ರಜಾಪ್ರತಿನಿಧಿ ಸಂಸ್ಥೆ. ಅದನ್ನೇ ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಎನ್ನಲಾಗುತ್ತದೆ. ಅದನ್ನು ನಿರ್ವಹಿಸಲು ಚುನಾವಣೆ ಎಂಬ ಮಾರ್ಗದ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸದ್ಯ ಸಂವಿಧಾನವೆಂಬ ಕಾನೂನಿನ ಮೂಲಕ ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ಇದನ್ನು ನಿರ್ವಹಿಸುತ್ತಿದೆ………….

ಇದರ ಬಹುಮುಖ್ಯ ಭಾಗ ಆಯುವ್ಯಯದ ಲೆಕ್ಕ ಅಥವಾ ಬಜೆಟ್. ಇಡೀ ವ್ಯವಸ್ಥೆ ಬಹುತೇಕ ಮುನ್ನಡೆಯುವುದು ಅಧಿಕೃತವಾಗಿ ಇದರ ಆಧಾರದಲ್ಲಿಯೇ…..

ಹೆಚ್ಚು ಕಡಿಮೆ ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ, ವಾಹನಗಳಿಗೆ ಇಂಧನ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸರ್ಕಾರ ನಡೆಸಲು ಈ ಬಜೆಟ್. ಒಂದು ಬೃಹತ್ ಸಾರ್ವಜನಿಕ ಸಂಸ್ಥೆ ಕ್ರಮಬದ್ಧವಾಗಿ ನಡೆಯಬೇಕಾದರೆ ಬಜೆಟ್ ಇಲ್ಲದಿದ್ದರೆ ಅದು ಅನಾಗರಿಕ ವ್ಯವಸ್ಥೆಯಾಗುತ್ತದೆ……

ಇಷ್ಟೊಂದು ಮುಖ್ಯವಾದ ಬಜೆಟ್ ವಾಸ್ತವದಲ್ಲಿ ಹಾಗಿದೆಯೇ ? ……..

ಖಂಡಿತ ಇಲ್ಲ. ಅದು ಕೇವಲ ಅಂಕಿ ಸಂಖ್ಯೆಗಳ ಒಂದು ಕಸರತ್ತು ಮಾತ್ರವಾಗಿದೆ. ಒಂದು ವೇಳೆ ಬಜೆಟ್ ನಿಜವಾಗಲೂ ಅಷ್ಟೊಂದು ಮುಖ್ಯವಾಗಿದ್ದಿದ್ದರೆ ನಮ್ಮ ವ್ಯವಸ್ಥೆ ಇಷ್ಟೊಂದು ಕೆಟ್ಟದಾಗಿ ಮತ್ತು ಹಾಸ್ಯಾಸ್ಪದವಾಗಿ ಇರುತ್ತಿರಲಿಲ್ಲ…….

ಒಮ್ಮೆ ಗಮನಿಸಿ ನೋಡಿ………..

ಬಜೆಟ್ ನಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸಲಾಗುತ್ತದೆ. ಕೇಳಲು ತುಂಬಾ ಆಕರ್ಷಕವಾಗಿರುತ್ತದೆ. ಆ ಯೋಜನೆಗಳು ಜಾರಿಯಾದದ್ದೇ ಆದರೆ ಇಷ್ಟೊತ್ತಿಗಾಗಲೇ ಭಾರತ ವಿಶ್ವದ ಪ್ರಬಲ ರಾಷ್ಟ್ರವಾಗಬೇಕಿತ್ತು. ಸಾಮಾನ್ಯ ಜನರ ಜೀವನಮಟ್ಟ ಉತ್ತಮ ಸ್ಥಿತಿಯಲ್ಲಿರಬೇಕಿತ್ತು.

ಆದರೆ ಹಾಗಾಗುತ್ತಿಲ್ಲ. ಕಾರಣ ಅದನ್ನು ಅನುಷ್ಠಾನ ( implement ) ಮಾಡಬೇಕಾದ ಕಾರ್ಯಾಂಗ ಮತ್ತು ಶಾಸಕಾಂಗ ಕೇವಲ ಭ್ರಷ್ಟಾಚಾರ ಮಾತ್ರವಲ್ಲ ತನ್ನ ‌ಆಲೋಚನಾ ಸೂಕ್ಷ್ಮತೆಯನ್ನೇ ಕಳೆದುಕೊಂಡಿದೆ.

ನಿರ್ಧಿಷ್ಟ ಮತ್ತು ಖಚಿತ ಅಧಿಕಾರ, ಸಂಬಳ ಮತ್ತು ಭದ್ರತೆ ಅವರನ್ನು ನಿಷ್ಕ್ರಿಯಗೊಳಿಸಿದೆ. ಆದರೂ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಹಾಗು ಇಲ್ಲಿನ ತಳಮಟ್ಟದ ಜನಸಮುದಾಯದ ಒಂದಷ್ಟು ಮಾನವೀಯ ಸಂಬಂಧಗಳು ಹೇಗೋ ವ್ಯವಸ್ಥೆಯನ್ನು ಮುಂದಕ್ಕೆ ಸಾಗಿಸುತ್ತಿದೆ.

ಸರ್ಕಾರದ ಮಧ್ಯವರ್ತಿ ಕೆಲಸ ಅನುಷ್ಠಾನದಲ್ಲಿ ಇರದೆ ಅದಕ್ಕೆ ವಿರುದ್ಧವಾದ ಹಣಗಳಿಸುವುದು, ಮತಗಳಿಸುವುದು, ಅಧಿಕಾರ ಹಿಡಿಯುವುದು ಮತ್ತು ಜನರನ್ನು ಮರುಳು ಮಾಡುವುದೇ ಆಗಿರುತ್ತದೆ.
ವ್ಯವಸ್ಥೆ ಸಂಪೂರ್ಣ ಬದಲಾಗಿ ಹೆಚ್ಚು ಜವಾಬ್ದಾರಿಯುತವಾಗಿ ತನ್ನ ಕರ್ತವ್ಯ ನಿರ್ವಹಿಸಿದರೆ ಮಾತ್ರ ಬಜೆಟ್ ಗೆ ಬೆಲೆ.

ಆದ್ದರಿಂದ ಈ ವ್ಯವಸ್ಥೆಯಲ್ಲಿ ಬಜೆಟ್ ಗಳ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ. ಅದೊಂದು ಅನಿವಾರ್ಯದ ಕಣ್ಣೊರೆಸುವ ಬಹಿರಂಗ ನಾಟಕ. ಪ್ರೇಕ್ಷಕರನ್ನು ಮರುಳು ಮಾಡುವ ಭಾವನಾತ್ಮಕ ಸರ್ಕಸ್ ಅಷ್ಟೆ.

ವಾಸ್ತವದಲ್ಲಿ ಬಜೆಟ್ ನ ಪ್ರಾಯೋಗಿಕತೆ ನಂಬಲನರ್ಹ. ಕೇವಲ ಸರ್ಕಾರಿ ಅಧಿಕಾರಿಗಳ‌ ಸಂಬಳ, ಅಧಿಕಾರಸ್ಥ ರಾಜಕಾರಣಿಗಳ ಹಗಲು ದರೋಡೆ, ಕಂಟ್ರಾಕ್ಟರ್ ಗಳು ಮತ್ತು ದಲ್ಲಾಳಿಗಳ ಅಕ್ಷಯ ಪಾತ್ರೆಯಂತೆ ಮಾತ್ರ ಅದು ಕಾರ್ಯ ನಿರ್ವಹಿಸುತ್ತದೆ.

ಆ ರೀತಿಯ ಜನಗಳಿಗೆ ಮಾತ್ರ ಬಜೆಟ್ ಶೇಕಡಾ 100% ಉಪಯೋಗವಾಗುತ್ತದೆ. ನಮಗೆ ನಿಮಗೆ ಕೇವಲ ಅಧಿಕ ತೆರಿಗೆಯ ಹೊರೆ ಮತ್ತು ಎಂದಿನಂತೆ ಭರವಸೆಯೊಂದಿಗೆ ಹೇಗೋ ದಿನನಿತ್ಯದ ಜೀವನ ‌ಸಾಗಿಸಲು ಮಾತ್ರ ಇದು ಒಂದು ನೆಪವಾಗುತ್ತದೆ……

ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಸ್ವಾತಂತ್ರ್ಯ ನಂತರ ಇಲ್ಲಿಯವರೆಗೂ ಪ್ರತಿ ವರ್ಷ ಸತತವಾಗಿ ವಾರ್ಷಿಕ ಬಜೆಟ್ ಗಳನ್ನು ಮಂಡಿಸಿವೆ. ಪಂಚವಾರ್ಷಿಕ ಯೋಜನೆಗಳು ಮತ್ತು ಅದನ್ನು ಮೇಲ್ವಿಚಾರಣೆ ಮಾಡುವ ನೀತಿ ಆಯೋಗ ಸಹ ಇದೆ. ಅಪಾರ ಪ್ರಮಾಣದ ಎಲ್ಲಾ ದರ್ಜೆಯ ಆಡಳಿತ ಯಂತ್ರ ಸಹ ಕೆಲಸ ಮಾಡುತ್ತಲೇ ಇದೆ…………

ಭಾರತದ ಮಟ್ಟಿಗೆ‌ ಅಭಿವೃದ್ಧಿ ಸಮಾನಾಂತರವಾಗಿಲ್ಲ ಮತ್ತು ಸಮಾಧಾನಕರವಾಗಿಲ್ಲ. ದೇಶದ ಜನ ತಾವು ಇಷ್ಟಪಟ್ಟ ದೈನಂದಿನ ಊಟ ಬಟ್ಟೆ ವಾಸ ಮಕ್ಕಳ ಯೋಗಕ್ಷೇಮ ಮತ್ತು ಸಾಧಾರಣ ಶಿಕ್ಷಣ ಆರೋಗ್ಯ ವ್ಯವಸ್ಥೆ ಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ.

ಇದನ್ನು ನಾವು ಪಕ್ಷಾತೀತವಾಗಿ ಮತ್ತು ನಿಷ್ಪಕ್ಷಪಾತವಾಗಿ ಭಾರತದ ನಿಜವಾದ ಹಿತಾಸಕ್ತಿಯಿಂದ ನೋಡಬೇಕು. ಯಾವುದೋ ಪಕ್ಷದ ವಕ್ತಾರರಂತೆ ಒಬ್ಬರಿಗೊಬ್ಬರು ಆಪಾದನೆ ಮಾಡುತ್ತಾ ಕೆಸರೆರಚಾಟ ಮಾಡಿದರೆ ಸತ್ಯ ಮತ್ತು ವಾಸ್ತವ ಮರೆಯಾಗಿ ಕೇವಲ ಒಣ ಚರ್ಚೆ ಮತ್ತು ಅಂಕಿಅಂಶಗಳು ಮಹತ್ವ ಪಡೆಯುತ್ತವೆ.

ಸರ್ಕಾರ ಘೋಷಿಸುವ ಯಾವುದೇ ಯೋಜನೆಗಳು ಜಾರಿಯಾಗುವುದು ನಮ್ಮ ಸರ್ಕಾರಿ ಆಡಳಿತ ಯಂತ್ರದ ಮುಖಾಂತರ. ಅದು ಈಗಾಗಲೇ ಕಿಲುಬು ಹಿಡಿದಿದೆ. ಅದನ್ನು ಸರಿ ಮಾಡದೆ ಯಾವ ಯೋಜನೆ ಘೋಷಿಸಿದರು ಸಂಪೂರ್ಣ ಉಪಯೋಗ ಆಗುವುದಿಲ್ಲ. ಅದನ್ನು ಸರಿ ದಾರಿಗೆ ತರಲು ರಾಜಕಾರಣಿಗಳು ಹೆಚ್ಚಿನ ಮಹತ್ವ ನೀಡುತ್ತಿಲ್ಲ.

ಪಾರ್ಲಿಮೆಂಟ್ ಅಥವಾ ವಿಧಾನಸೌಧದಲ್ಲಿ ಅಂಕಿಅಂಶಗಳ ಸರ್ಕಸ್ ಮಾಡುತ್ತಾ ಬಜೆಟ್ ಮಂಡಿಸುವುದು ಮತ್ತು ಅದರ ಪರ ವಿರೋಧದ ಚರ್ಚೆಗಳಿಗಿಂತ ಅದರ ಅನುಷ್ಠಾನ ಮತ್ತು ವಾಸ್ತವ ಫಲಿತಾಂಶಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ ನಿಜವಾದ ಮತ್ತು ಸಮಾನವಾದ ಅಭಿವೃದ್ಧಿ ಸಾಧ್ಯ. ಇಲ್ಲದಿದ್ದರೆ ಪ್ರತಿ ಸರ್ಕಾರಗಳ ಪ್ರತಿ ಬಜೆಟ್ ಕೇವಲ ಸಾಂಕೇತಿಕ ಶಾಸ್ತ್ರವಾಗುತ್ತದೆ. ಚುನಾವಣಾ ರಾಜಕೀಯದ ನಾಟಕಗಳಾಗುತ್ತವೆ.

ಇದು ಎಲ್ಲಾ ಪಕ್ಷಗಳ ಎಲ್ಲಾ ಸರ್ಕಾರಗಳಿಗೂ ಸಮನಾಗಿ ಅನ್ವಯ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ. ಎಚ್.ಕೆ.
9844013068………