ಪೋಸ್ಟ್ ಮಾಸ್ಟರ್ ಗೆ ಜೈಲು ಶಿಕ್ಷೆ

ವಿಜಯ ದರ್ಪಣ ನ್ಯೂಸ್…

ಪೋಸ್ಟ್ ಮಾಸ್ಟರ್ ಗೆ ಜೈಲು ಶಿಕ್ಷೆ

ಕೊಡಗು: ನಕಲಿ ಅಂಕಪಟ್ಟಿ ಸೃಷ್ಟಿಸಿ ಅಂಚೆ ಇಲಾಖೆಯಲ್ಲಿ ನೌಕರಿ ಪಡೆದು ಸರಕಾರಕ್ಕೆ ವಂಚಿಸಿದ್ದ ಅಪರಾಧಕ್ಕಾಗಿ ವ್ಯಕ್ತಿಯೊಬ್ಬನಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1.25 ಲಕ್ಷ ರೂ. ದಂಡ ವಿಧಿಸಿ ಮಡಿಕೇರಿಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯ ತೀರ್ಪು ನೀಡಿದೆ.

ಕಾರೆಕಾಡು ಗ್ರಾಮದ ಎಂ.ಬಿ. ಸಂದೇಶ (32) ಎಂಬಾತ ಅಂಚೆ ಇಲಾಖೆಯಲ್ಲಿ 2019ನೇ ಸಾಲಿನಲ್ಲಿ ನಡೆದ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಯ ನೇಮಕಾತಿಯಲ್ಲಿ ಅಲೈನ್ ಮುಖಾಂತರ ಅರ್ಜಿಯೊಂದಿಗೆ ಸಲ್ಲಿಸಿರುವ ದಾಖಲೆಗಳಲ್ಲಿ ನಕಲಿ ಅಂಕಪಟ್ಟಿಯನ್ನು ಸಲ್ಲಿಸಿರುವುದು ಪರಿಶೀಲನೆ ವೇಳೆ ಕಂಡುಬಂದಿತ್ತು.

ಹೀಗಾಗಿ ಈತನ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಈತನನ್ನು 2022ರ ಫೆ. 25 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ತನಿಖಾಧಿಕಾರಿ ಪಿಎಸ್ ಐ ಶ್ರೀನಿವಾಸ್ ಮತ್ತು ಸಹಾಯಕ ತನಿಖಾಧಿಕಾರಿ ಹೆಚ್.ಸಿ. ದಿವ್ಯಾ ಅವರು ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಮಡಿಕೇರಿಯ ಸಿವಿಲ್ ಜಡ್ಜ್  ಮತ್ತು ಜೆಎಂ ನ್ಯಾಯಾಲಯದ ನ್ಯಾಯಧೀಶರಾದ ಜಯಲಕ್ಷ್ಮಿ ಅವರು ಆರೋಪ ಸಾಬೀತಾದ ಹಿನ್ನೆಲೆ ಆರೋಪಿ ಸಂದೇಶನಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1.25 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕರಾದ ಬಿ.ಎಸ್. ಸಂತೋಷ್ ಅವರು ಸರಕಾರದ ಪರ ವಾದ ಮಂಡಿಸಿದ್ದರು.

&&&&&&&&&&&&&&&&&&&&&&&&&

              ಕಾಫಿ

ಮುತ್ತು ಪೋಣಿಸಿ ಹಸಿರು ಮುಡಿಗೆ                          ಮಲ್ಲೆ ಮೊಗ್ಗಿನ ತುರುಬು ಜಡೆಗೆ

ಹಸಿರು ಸೀರೆಗೆ ಬಿಳಿಯ ನೆರಿಗೆ                            ಫಸಲು ತುಂಬಲು ಕೆಂಪು ಗುಳಿಗೆ

ಲಕ್ಷ್ಮಿ ರೇಖೆಯು ಮನೆಗೆ ಸಿರಿಯು                          ಬೆವರು ಮಿಶ್ರಿತ ಶ್ರಮದ ಬೆಳೆಯು

ರೈತ ಹೃದಯವ ಹಸನುಗೊಳಿಸಿ                           ದಣಿದ ಮನಸಿಗೆ ಹರುಷ ಉಣಿಸಿ

ನೀರು ಹಾಯಿಸಿ ಶುದ್ಧ ಗೊಳಿಸಿ.                             ಪರದೆ ಸರಿಸಿ ಬಿಸಿಲಲಿರಿಸಿ

ಹಲವು ಬಗೆಯಲಿ ನುಣುಪು ತರಿಸಿ                       ಯಂತ್ರ ತಂತ್ರದಿ ನಯವ ಗೊಳಿಸಿ

ಹಾಲು ಬೆರೆಸಿ ನೊರೆಯ ಬರಿಸಿ                               ಕಾಫಿ ಸ್ವಾದವ ಮೆಚ್ಚಿ ಹರಸಿ

ರಾಧಿಕಾ ವಿಶ್ವನಾಥ್‌, ಮಡಿಕೇರಿ