ಸುವರ್ಣ ವಿಧಾನಸೌಧ ದಾಳಿ ಪ್ರಕರಣ; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ ಎಂದ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಕಿಡಿ; ಸರ್ಕಾರ ವಜಾಕ್ಕೆ ಆಗ್ರಹ
ವಿಜಯ ದರ್ಪಣ ನ್ಯೂಸ್….
▪️ ಸುವರ್ಣ ವಿಧಾನಸೌಧ ದಾಳಿ ಕೇಸ್; ರಾಜ್ಯ ಸರ್ಕಾರದ ವಿರುದ್ಧ ಕೇಂದ್ರಕ್ಕೆ ವರದಿ ನೀಡ್ತಾರಾ ಗೌರ್ನರ್?
▪️ ಸುವರ್ಣ ವಿಧಾನಸೌಧ ದಾಳಿ; ರಾಜ್ಯಪಾಲರ ಅಂಗಳ ಸೇರಿದ ಪ್ರಕರಣ; ರಾಜ್ಯ ಸರ್ಕಾರ ವಜಾಕ್ಕೆ ಆಗ್ರಹ
▪️ ರಾಜ್ಯ ಸರ್ಕಾರ ವಜಾಕ್ಕೆ ‘CRF’ ಆಗ್ರಹ; ರಾಜ್ಯಪಾಲರಿಗೆ ಮನವಿ
▪️ ಸುವರ್ಣ ವಿಧಾನಸೌಧ ದಾಳಿ ಪ್ರಕರಣ; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ ಎಂದ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಕಿಡಿ; ಸರ್ಕಾರ ವಜಾಕ್ಕೆ ಆಗ್ರಹ
▪️ ಸಿಟಿ ರವಿ ಬಂಧನ ಓಕೆ, ಸುವರ್ಣಸೌಧ ದಾಳಿಕೋರರ ಬಂಧನವಾಗಿಲ್ಲ ಏಕೆ?; ರಾಜ್ಯ ಸರ್ಕಾರ ವಜಾಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ‘CRF’ ದೂರು
ಬೆಂಗಳೂರು: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದಿದೆ ಎನ್ನಲಾಗಿರುವ ಪ್ರಕರಣಗಳಿಗೆ ಕ್ಷಣಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಒಂದೆಡೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಆಕ್ಷೇಪಾರ್ಹ ಪದಗಳಿಂದ ನಿಂದಿಸಿರುವ ಆರೋಪದಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ಬಂಧನವಾಗಿದೆ. ಮತ್ತೊಂದೆಡೆ ಸಂಸತ್ ಸದನದೊಳಗೆ ನುಗ್ಗಿ ಬೆದರಿಕೆ ಒಡ್ಡಿದ್ದ ಪ್ರಕರಣವನ್ನೂ ಮೀರಿದಂತೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗಳು ಸುವರ್ಣ ವಿಧಾನಸೌಧಕ್ಕೆ ನುಗ್ಗಿ ಸಿ.ಟಿ.ರವಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆಯು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿರುವುದಕ್ಕೆ ಉದಾಹರಣೆ ಎಂದು ಆರೋಪಿಸಿರುವ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದೆ.
ಈ ಸಂಬಂಧ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ನೀಡಿರುವ ದೂರು ಒಟ್ಟಾರೆ ಬೆಳವಣಿಗೆಗಳಿಗೆ ರೋಚಕ ತಿರುವನ್ನು ನೀಡಿದೆ. ರಾಜಭವನಕ್ಕೆ ಭೇಟಿ ನೀಡಿದ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಕಾರ್ಯದರ್ಶಿ ಜಯಪ್ರಕಾಶ್ ಅವರನ್ನೊಳಗೊಂಡ ನಿಯೋಗ, ವಿಧಾನಸಭಾ ಅಧಿವೇಶನ ನಡೆದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 19.12.2024ರಂದು ನಡೆದ ಘಟನೆಗಳು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದ್ದು, ದುಷ್ಕರ್ಮಿಗಳು ಆಡಳಿತ ಶಕ್ತಿಸೌಧಕ್ಕೆ ಲಗ್ಗೆ ಹಾಕಿ ದಾಂಧಲೆ ನಡೆಸಿರುವ ಘಟನೆಯನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ವಿವರ ನೀಡಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದ್ದು ಆಡಳಿತ ಶಕ್ತಿ ಕೇಂದ್ರವು ದಾಳಿಕೋರರ ಹಿಡಿತಕ್ಕೆ ಸೇರಿದ ಸನ್ನಿವೇಶವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವೂ ಆಗಿದೆ. ಬಾಂಗ್ಲಾ ದೇಶದಲ್ಲಿ ಇತ್ತೀಚಿಗೆ ನಡೆದ ದಂಗೆಯ ವೇಳೆ, ಉದ್ರಿಕ್ತರು ಅಲ್ಲಿನ ಸಂಸತ್ ಭವನಕ್ಕೆ ಲಗ್ಗೆ ಹಾಕಿದ ಭಯಾನಕ ಘಟನೆಯ ನಂತರದಲ್ಲಿ ಅಂಥದ್ದೇ ಘೋರ ಘಟನೆಯೊಂದು ದಕ್ಷಿಣ ಏಷಿಯಾದಲ್ಲಿ ನಡೆದಿದೆ ಎಂಬುದಕ್ಕೆ ಕರ್ನಾಟಕದ ಸುವರ್ಣ ವಿಧಾನಸೌಧ ಸಾಕ್ಷಿಯಾಗಿದೆ. ಶಾಸನಸಭೆಯ ಸದಸ್ಯರ ಕಗ್ಗೊಲೆಗೆ ಯತ್ನ ನಡೆದಿರುವ ಈ ಘಟನೆಯಿಂದಾಗಿ ನಮ್ಮ ದೇಶ ಎಷ್ಟು ಸುರಕ್ಷಕ್ಷಿತ ಎಂಬ ಪ್ರಶ್ನೆ ಉದ್ಭವಿಸುವಂತಾಗಿದೆ ಎಂದು ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಮನವರಿಕೆ ಮಾಡಲಾಗಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆಕ್ಷೇಪಾರ್ಹ ಪದಗಳಿಂದ ನಿಂದಿಸಿದ್ದಾರೆ ಎಂಬ ಬಗ್ಗೆ ದೂರು ದಾಖಲಾಗಿರುವುದು ಸರಿಯಷ್ಟೇ. ಮಹಿಳೆಯ ವಿಚಾರದಲ್ಲಿ ಇಂಥದ್ದೊಂದು ಅನ್ಯಾಯ ನಡೆದಿದ್ದೇ ಆದರೆ ಅಂತಹಾ ಕೃತ್ಯವನ್ನು ಸಹಿಸಲಾಗದು. ಈ ವಿಚಾರದಲ್ಲಿ ಕಾನೂನು ರೀತಿಯ ಕ್ರಮ ನಡೆಯಲೇಬೇಕೆಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಆ ಆರೋಪದ ಬಗ್ಗೆ ಯಾವುದೇ ಸಮರ್ಥನೀಯ ಸಾಕ್ಷ್ಯಗಳು ಇಲ್ಲದೆ ಇರುವಾಗ ಪೊಲೀಸರು ಅವಸರದ ಕ್ರಮ ಕೈಗೊಂಡಿರುವುದು ಆಕ್ಷೇಪಾರ್ಹ ಎಂಬ ಸಂಸದೀಯ ಪಟುಗಳ ವಿಶ್ಲೇಷಣೆಯೂ ಗಮನಾರ್ಹ ಎಂದಿರುವ CRF ಕಾರ್ಯದರ್ಶಿ ಜಯಪ್ರಕಾಶ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರೆನ್ನಲಾದ ಹಲವು ಪುಂಡರ ಗುಂಪು ಸುವರ್ಣ ವಿಧಾನಸೌಧಕ್ಕೆ ನುಗ್ಗಿ ಶಾಸಕ ಸಿ.ಟಿ.ರವಿ ರವರ ಮೇಲೆ ದಾಳಿ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ಸಂವಿಧಾನ ವ್ಯವಸ್ಥೆಗೆ ಮಾರಕ ಎಂಬಂತಿದೆ ಎಂದು ದೂರಿನಲ್ಲಿ ಬಣ್ಣಿಸಿದ್ದಾರೆ.
ಸದನದಲ್ಲಿ ಬೈದಾಡಿರುವ ಬಗ್ಗೆ ಪೊಲೀಸರಿಗೆ ಇನ್ನೂ ಸ್ಪಷ್ಟತೇ ಇಲ್ಲ. ಆದಾಗಿಯೂ ಸದನದ ಮುಖ್ಯಸ್ಥರಾದ ಸಭಾಪತಿಗಳ ಅಭಿಪ್ರಾಯವನ್ನೂ ಪಡೆಯದೇ ಪೊಲೀಸರು ಶಾಸಕ ಸಿ.ಟಿ.ರವಿ ಅವರನ್ನು ಬಂಧಿಸಿದ್ದಾರೆ. ಅವರ ಬಂಧನವು ಕಾನೂನು ಕ್ರಮವೇ ಆಗಿದ್ದಲ್ಲಿ ತಮ್ಮ ಆಕ್ಷೇಪ ಇಲ್ಲ, ಆದರೆ ಬಂಧಿಸಿ ಕೋರ್ಟಿಗೆ ಹಾಜರುಪಡಿಸುವ ನೆಪದಲ್ಲಿ ಜನಪ್ರತಿನಿಧಿಗೆ ಚಿತ್ರಹಿಂಸೆ ನೀಡಿರುವುದನ್ನು ಸಮಾಜ ಒಪ್ಪುವುದಿಲ್ಲಎಂದು ಜಯಪ್ರಕಾಶ್ ಅವರು ರಾಜ್ಯಪಾಲರ ಗಮನಸೆಳೆದಿದ್ದಾರೆ.
ಪರಮೇಶ್ವರ್ ಹೇಳಿಕೆಯ ಪ್ರತಿಧ್ವನಿ:
ಮಹಿಳೆಯರ ಮೇಲಿನ ದೌರ್ಜನ್ಯದ ಇತರ ಅನೇಕ ಪ್ರಕರಣಗಳಲ್ಲಿ ತಿಂಗಳುಗಟ್ಟಲೆ ಕಾಲ ಪೊಲೀಸರು ಕ್ರಮ ಕೈಗೊಳ್ಳದ ಉದಾಹರಣೆಗಳಿವೆ. ಈ ಹಿಂದೆ ಪೋಕ್ಸೋ ಪ್ರಕರಣವೊಂದರಲ್ಲಿ ದೂರುದಾರರಾಗಿರುವ ಸಂತ್ರಸ್ತ ಬಾಲಕಿಯ ತಾಯಿಯನ್ನೇ ಮಾನಸಿಕ ಅಸ್ವಸ್ಥೆ ಎಂಬಂತೆ ಮಾನ್ಯ ಗೃಹ ಸಚಿವರೇ ಹೇಳಿಕೆ ನೀಡಿದ್ದರು. ಅದೇ ಪ್ರಕರಣದಲ್ಲಿ ಅನೇಕ ತಿಂಗಳ ನಂತರ ದೋಷಾರೋಪ ಪಟ್ಟಿ ಸಲ್ಲಿಸಿರುವ ಪ್ರಕರಣವೂ ಪ್ರಸಕ್ತ ರಾಜ್ಯ ಸರ್ಕಾರದ ಆಡಳಿತದಲ್ಲಿ ನಡೆದಿದೆ. ಲೈಂಗಿಕ ಕಿರುಕುಳದ ಅಂತಹಾ ಪ್ರಕರಣಗಳಲ್ಲಿ ನಿರ್ಲಕ್ಷ್ಯ ವಹಿಸಿದ್ದ ಪೊಲೀಸರು, ವಿಧಾನ ಪರಿಷತ್ ಸದನದಲ್ಲಿನ ಗುರುವಾರದ ಅಸ್ಪಷ್ಟ ಸನ್ನಿವೇಶದಲ್ಲಿ ಆತುರದ ಕ್ರಮ ಕೈಗೊಂಡಿದ್ದಾದರೂ ಏಕೆ ಎಂದು ಜಯಪ್ರಕಾಶ್ ಪ್ರಶ್ನಿಸಿದ್ದಾರೆ.
ಇದೇ ವೇಳೆ, ಬಿಗಿ ಭದ್ರತೆಯ ಸುವರ್ಣ ವಿಧಾನಸೌಧಕ್ಕೆ ನುಗ್ಗಿ ಶಾಸಕ ಸಿ.ಟಿ.ರವಿ ರವರ ಮೇಲೆ ದಾಳಿ ಮಾಡಿ ಕೊಲೆಗೆ ಯತ್ನಿಸಿರುವ ಕೃತ್ಯವಂತೂ ಭೀಕರತೆಗೆ ಸಾಕ್ಳ್ಷಿಯಾಗಿದೆ. ‘ಹೆಬ್ಬಾಳ್ಕರ್ ಖಾಸಗಿ ಪಿಎ ಸಂಗನಗೌಡ ಹಾಗೂ ಸಹೋದರ ಚೆನ್ನರಾಜ್ ಪಿಎ ಸದ್ದಾಂ ಅವರಿಂದ ಹಲ್ಲೆ ನಡೆದಿದೆ. ಈ ವೇಳೆ ಭದ್ರತಾ ಸಿಬ್ಬಂದಿ ತಡೆಯಲು ಬಂದರೂ ರವಿ ಅವರ ಮೇಲೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಇದಾದ ನಂತರ ರವಿ ಅವರನ್ನು ಗೇಟಿನ ಒಳಗೆ ಕರೆದೊಯ್ದು ಭದ್ರತಾ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ’ ಎಂದು ಮಾಧ್ಯಮಗಳು ವರದಿ ಮಾಡಿವೆ. ಶಾಸನಸಭೆಯ ಮೇಲಿನ ದಾಳಿಯು ದೇಶವಿದ್ರೋಹದ ಕೃತ್ಯವಾಗಿದ್ದರೂ ಪೊಲೀಸರು ಆ ಬಗ್ಗೆ ನಿಧಾನಗತಿಯ ಕ್ರಮಕ್ಕೆ ಮುಂದಾಗಿರುವುದನ್ನು ಗಮನಿಸಿದರೆ, ಸರ್ಕಾರದ ಪ್ರಭಾವಿಗಳ ಕುಮ್ಮಕ್ಕು ಇಲ್ಲದೆ ಇಂತಹ ಘಟನೆ ನಡೆಯಲು ಸಾಧ್ಯವಿಲ್ಲ ಎಂಬುದನ್ನೂ ತೋರಿಸುತ್ತದೆ ಎಂದು ಈ ದೂರಿನಲ್ಲಿ ಆರೋಪಿಸಲಾಗಿದೆ.
ಐವಾನ್ ವಿವಾದಿತ ಹೇಳಿಕೆ ನಿಜವಾಯಿತೇ?
ಮುಡಾ ಹಗರಣ ಆರೋಪ ಕುರಿತಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ 19.08.2024ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದು, ಅಂದು ಮಂಗಳೂರಿನ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಶಾಸಕ ಐವನ್ ಡಿಸೋಜಾ ಅವರು ‘ಕರ್ನಾಟಕದಲ್ಲೂ ಬಾಂಗ್ಲಾದೇಶದಲ್ಲಿ ಹಿಂದಿನ ಪ್ರಧಾನಿಗೆ ಆದ ಗತಿಯೇ ನಡೆಯಬಹುದು. ನೀವು ರಾಜ್ಯ ಬಿಟ್ಟು ಪಲಾಯನ ಮಾಡಬೇಕಾಗುತ್ತದೆ’ ಎಂದು ರಾಜ್ಯಪಾಲರಿಗೆ ಬೆದರಿಕೆಯೊಡ್ಡಿದ ರೀತಿ ಹೇಳಿಕೆ ನೀಡಿದ್ದರು. ಇದೀಗ ಅದೇ ರೀತಿ ಆಡಳಿತ ಶಕ್ತಿಕೇಂದ್ರದ ಮೇಲೆ ಪುಂಡರು ದಾಳಿ ಮಾಡಿದ್ದಾರೆ ಎಂದು CRF ಪ್ರಮುಖರು ಆರೋಪಿಒಸಿದ್ದಾರೆ.
ಸಿ.ಟಿ.ರವಿ ಪ್ರಕರಣದಲ್ಲಿ ಮಾತ್ರವಲ್ಲ, ರಾಜ್ಯದಲ್ಲಿ ಪೊಲೀಸರು ಕಾನೂನು ಮೀರಿ ವರ್ತಿಸುತ್ತಿರುವ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಬೆಳಗಾವಿ ಘಟನೆಯನ್ನು ನೋಡಿದರೆ ಪೊಲೀಸರ ನಡೆಯ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿದೆ ಎಂದಿರುವ CRF ಪ್ರಮುಖರು, ವಿಧಾನ ಮಂಡಲದ ಸದನಗಳ ಮುಖ್ಯಸ್ಥರಾಗಿರುವ ಹಾಗೂ ರಾಜ್ಯದ ಸಂವಿಧಾನ ಶ್ರೇಷ್ಠರಾಗಿರುವ ತಾವು, ಕೂಡಲೇ ಸೂಕ್ತ ಕ್ರಮ ಕೈಗೊಂಡು, ಸಂವಿಧಾನದ ವಿಧಿಯಾನುಸಾರ ಕ್ರಮವಹಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಮನವಿ ಮಾಡಿದೆ.