ಪರಿಶ್ರಮವೇ ಸಾಧನೆಗೆ ಭದ್ರ ಬುನಾದಿ

ವಿಜಯ ದರ್ಪಣ ನ್ಯೂಸ್….

ಪರಿಶ್ರಮವೇ ಸಾಧನೆಗೆ ಭದ್ರ ಬುನಾದಿ

ಪರಿಶ್ರಮದಲ್ಲಿದೆ” ಎಂಬ ಗಾದೆ ಮಾತು ಪರಿಶ್ರಮದ ಮಹತ್ವವನ್ನು ಸಾರಿ ಹೇಳುತ್ತದೆ. ಇದನ್ನೆ ಬಸವಣ್ಣನವರು ‘ಕಾಯಕವೇ ಕೈಲಾಸ’ ವೆಂದು ಸಾರುವುದರ ಜೊತೆಗೆ ಆ ಮಾತಿನಲ್ಲಿ ಸಂಪೂರ್ಣ ನಂಬಿಕೆಯಿಟ್ಟು, ಕಾಯಕದಲ್ಲಿ ಮಗ್ನರಾದ ಜನ ಜೀವನದ ಸಮಾಜವನ್ನು ಕಟ್ಟಲು ಶ್ರಮಿಸಿದರು. ಮಹಾನ್ ಕಾಯಕ ಯೋಗಿ ಎಂಬ ಬಿರುದು ಪಡೆದರು.

ಕೆಲಸಕ್ಕೆ ಆನಂದ ನೀಡುವ ಗುಣವಿದೆ. ಇದರಿಂದ ಸ್ಥ- ಸಂತೋಷವನ್ನು ಪಡೆಯಬಹುದಲ್ಲವೇ, ಸಂತೃಪ್ತಿಯನ್ನು ಗಳಿಸಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬಹುದು. ನಾವು ಮಾಡುವ ಕೆಲಸದಿಂದಲೇ ಸಮಾಜದಲ್ಲಿ ನಮ್ಮ ಗೌರವ ಹಾಗೂ ಸ್ಥಾನಮಾನ ನಿರ್ಧರಿತವಾಗುವುದು. ಮಹಾನ್ ಸಾಧಕರೇನೂ ಜನ್ಮತಃ ಪ್ರತಿಭಾವಂತರಲ್ಲ, ಕೆಲಸ ಮಾಡುತ್ತ ಮಾಡುತ್ತ ತಮ್ಮ ಕ್ಷೇತ್ರದಲ್ಲಿ ಪಳಗಿದವರು. ಅದೇ ಅವರನ್ನು ವಿಶೇಷ ಸಾಧಕರನ್ನಾಗಿಸಿತು. ಅಂದರೆ ಪರಿಶ್ರಮವೇ ಸಾಧನೆಗೆ ಭದ್ರ ಬುನಾದಿ ಎಂಬಂತಾಗಿದೆ.

ಪ್ರಯತ್ನ ಮಾಡುವವರಿಗೆ, ಪರಿಶ್ರಮ ಪಡುವವರಿಗೆ ಮಾತ್ರ ಜೀವನದಲ್ಲಿ ಗೆಲುವು ಸಾಧ್ಯ. ಸೋಮಾರಿಗಳಿಗೆ ಕಷ್ಟಗಳ ಸರಮಾಲೆ ಖಚಿತ, ಪರಿಶ್ರಮ ಜೀವನವನ್ನು ಸವಾಲೆಂದು ಸ್ವೀಕರಿಸುವ ಮನೋಭಾವವನ್ನು ಬೆಳೆಸುತ್ತದೆ. ಆದರೆ, ಸೋಮಾರಿತನ ಸಮಾಜಕ್ಕೆ ಅಂಟಿಕೊಂಡ ರೋಗ, ಈ ರೋಗ ನಿವಾರಣೆಗೆ ಕಾಯಕವೇ ಮದ್ದು, ಸೋಮಾರಿತನ ಸಮಸ್ಯೆಗಳ ಸರಣಿಯನ್ನು ಆಹ್ವಾನಿಸುತ್ತದೆ. ಸಮಸ್ಯೆಗಳ ಸುಳಿಯಲ್ಲಿ ಬಿದ್ದು ಓದಾಡಿ ಜೀವನವನ್ನು ಹಾಳು ಮಾಡಿಕೊಳ್ಳುವವರನ್ನು ನೋಡಿಯೇ ಕನಕದಾಸರು ‘ಮಾನವ ಜೀವನ ದೊಡ್ಡದು ಇದೆ. ಹಾಳು ಮಾಡಿಕೊಳ್ಳಲು ಬೇಡಿ ಹುಚ್ಚಪ್ಪಗಳಿರಾ!’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

‘ಪ್ರಯತ್ನದಿಂದ ತನ್ನನ್ನು ತಾನೇ ಉದ್ದರಿಸಿಕೊಳ್ಳುವ ಪ್ರಶ್ನಾತೀತ ಶಕ್ತಿ ಪ್ರತಿಯೊಬ್ಬರಲ್ಲಿಯೂ ಇದೆ ಎಂಬ ಸತ್ಯಕ್ಕಿಂತ ಉತ್ಸಾಹ ನೀಡುವ ವಿಷಯ ಬೇರೆ ಇಲ್ಲ’ ಎನ್ನುತ್ತಾನೆ ಹೆನ್ರಿ ಡೇವಿಡ್ ಥೋರೊ. ಆದ್ದರಿಂದ ಕಾರ್ಯದಲ್ಲಿ ಮಗ್ನರಾಗಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವುದು ಒಳಿತು.

ನಮ್ಮಲ್ಲಿ ಅಡಗಿರುವ ಸೂಪ್ತ ಶಕ್ತಿಯನ್ನು ಗುರುತಿಸಿಕೊಂಡು ಸೂಕ್ತ ಪರಿಶ್ರಮ ಪಟ್ಟದ್ದೇ ಆದರೆ ನಾವು ಜಯಶಾಲಿಗಳಾಗುತ್ತೇವೆ. ಜಯ ಮನುಷ್ಯನಲ್ಲಿ ಹೊಸ ಹುಮ್ಮಸ್ಸು ಮತ್ತು ಹೊಸ ವಿಚಾರ ತರುವುದು ಮತ್ತೆ ಹೊಸ ಸಾಧನೆಗೆ ದಾರಿ ಮಾಡಿಕೊಡುವುದು.

ಹೀಗೆ ಹಲವು ಗೆಲುವುಗಳಿಗೆ ನಾಂದಿ ಹಾಡುವ ಕೆಲಸವನ್ನೇ ದೇವರೆಂದು ತಿಳಿದು ನಮ್ಮ ಸರ್ವ ಶಕ್ತಿಯನ್ನೂ ನಮಗೆ ಅನ್ನ ನೀಡುವ ವೃತ್ತಿಯಲ್ಲಿ ತೊಡಗಿಸಿ’ ಕಾಯಕದಲ್ಲಿಯೇ ದೇವರನ್ನು ಕಾಣುವ ತತ್ವವನ್ನು ಪಾಲಿಸಿ, ಕಾಯಕದಿಂದಲೇ ಸುಂದರ ಸದೃಢ ಕಟ್ಟಲು ಅಣಿಯಾಗೋಣ. ಬದುಕನ್ನು ಸಾರ್ಥಕಗೊಳಿಸೋಣ,

ಜಯಶ್ರೀ. ಜೆ. ಅಬ್ಬಿಗೇರಿ