ನ್ಯಾಯ – ಅನ್ಯಾಯ, ಯಾರಿಂದ – ಯಾರಿಗೆ……

ವಿಜಯ ದರ್ಪಣ ನ್ಯೂಸ್….

ನ್ಯಾಯ – ಅನ್ಯಾಯ,
ಯಾರಿಂದ – ಯಾರಿಗೆ……

ವಿಧಾನಸಭೆ, ಲೋಕಸಭೆ, ಮತ್ತು ಮೂರು ಉಪಚುನಾವಣೆ, ಎಲ್ಲಾ ಮುಗಿದ ನಂತರ ಈಗ ರಾಜಕೀಯ ಪಕ್ಷಗಳ ನಾಯಕರ ಮುಖವಾಡ ಬಟಾ ಬಯಲಾಗುತ್ತಿದೆ.

ಚುನಾವಣೆಗಳವರೆಗೂ ಅವರು ನಡೆದುಕೊಂಡ ರೀತಿ ನೀತಿ, ಚುನಾವಣೆ ಮುಗಿದ ನಂತರ ಅಧಿಕಾರಕ್ಕಾಗಿ ನಡೆಯುತ್ತಿರುವ
ಅವರ ಈ ಬೀದಿ ಜಗಳಗಳು ಅವರ ಮುಖವಾಡಗಳನ್ನ ಕಳಚುತ್ತಿದೆ. ಮತದಾರರ ಬೆನ್ನಿಗೆ, ಹೃದಯಕ್ಕೆ ನೇರವಾಗಿ ಚೂರಿ ಹಾಕಿದಂತೆ ಭಾಸವಾಗುತ್ತಿದೆ.

ಕಾಂಗ್ರೆಸ್ ಪಕ್ಷದಲ್ಲಿ ಕೆಲವರಿಗೆ ಅನ್ಯಾಯವಾಗಿದೆಯಂತೆ. ಶಾಸಕರಾದ ನಂತರ ಮಂತ್ರಿ ಪಟ್ಟ ಸಿಗಲಿಲ್ಲವೆಂದು ಅನ್ಯಾಯ, ಮಂತ್ರಿಯಾಗಿ ಉಪ ಮುಖ್ಯಮಂತ್ರಿಯಾಗಿಲ್ಲ
ವೆಂದು ಅನ್ಯಾಯ, ಉಪಮುಖ್ಯಮಂತ್ರಿಯಾಗಿ ಮುಖ್ಯಮಂತ್ರಿ ಆಗಲಿಲ್ಲ ಎಂದು ಅನ್ಯಾಯ, ಮುಖ್ಯಮಂತ್ರಿಯಾಗಿ ಇನ್ನಷ್ಟು ವರ್ಷಗಳು ಮುಂದುವರಿಯಬೇಕು ಅದಕ್ಕಾಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ಒಂದು ಅನ್ಯಾಯ. ಅದಕ್ಕಾಗಿ ಈ ಅನ್ಯಾಯಗಳನ್ನು ಸರಿಪಡಿಸಲಿಕ್ಕೆ ಅವರು ಹೋರಾಟ ಮಾಡುತ್ತಿದ್ದಾರಂತೆ, ತುಂಬಾ ಶ್ರಮಪಟ್ಟು ಆ ಸ್ಥಾನಗಳಿಗೆ ಬಂದಿದ್ದಾರಂತೆ.

ಇನ್ನು ಬಿಜೆಪಿಯಲ್ಲಿ ಮತ್ತೆ ಅಧಿಕಾರಕ್ಕಾಗಿ, ಭಿನ್ನಮತೀಯ ಚಟುವಟಿಕೆಗಳು, ಹಾದಿ ಬೀದಿಯ ಹೇಳಿಕೆಗಳು, ಜಗಳಗಳು, ಅವರು ಭ್ರಷ್ಟರು, ಅವರು ಸ್ವಜನ ಪಕ್ಷಪಾತಿಗಳು, ಅವರನ್ನು ಕೆಳಗಿಳಿಸಿ ಎಂದು ಒಂದು ಗುಂಪು, ಇವರು ಭ್ರಷ್ಟರು, ಇವರು ಅಡ್ಜಸ್ಟ್ಮೆಂಟ್ ಮಾಡಿಕೊಂಡಿದ್ದಾರೆ, ಇವರನ್ನು ಇಳಿಸಿ, ಪಕ್ಷದಿಂದ ಉಚ್ಚಾಟಿಸಿ ಎಂದು ಇನ್ನೊಂದಷ್ಟು ನಾಯಕರು. ಇವರೆಲ್ಲ ಬಹುತೇಕರು ಶಾಸಕರು, ಮಾಜಿ ಶಾಸಕರು, ಮಾಜಿ ಮಂತ್ರಿಗಳು ಆಗಿದ್ದವರೇ.

ಹಾಗೆಯೇ ಜನತಾದಳದಲ್ಲಿಯೂ ಮತ್ತೊಂದು ರೀತಿಯ ಭಿನ್ನಮತೀಯ ಚಟುವಟಿಕೆ. ಅವರು ನಮ್ಮನ್ನು ಗೌರವಿಸಲಿಲ್ಲ, ನಮ್ಮನ್ನು ಕಡೆಗಣಿಸಿದರು, ಆದ್ದರಿಂದ ಸೋಲಾಯಿತು ಎಂದು ಕೆಲವರು, ನಮ್ಮ ಜೊತೆಯೇ ಇದ್ದು, ನಮ್ಮ ವಿರುದ್ಧವೇ ಕೆಲಸ ಮಾಡಿ, ನಮ್ಮ ಬೆನ್ನಿಗೇ ಚೂರಿ ಹಾಕಿದ್ದಾರೆ ಎಂದು ಇನ್ನೂ ಕೆಲವರು. ಇವರು ಸಹ ದೊಡ್ಡ ಹುದ್ದೆಯಲ್ಲಿದ್ದು ಅಧಿಕಾರ ಅನುಭವಿಸಿದವರೇ. ಇವರಿಗೂ ಅನ್ಯಾಯವಾಗಿದೆಯಂತೆ.

ಹಾಗಾದರೆ ಅನ್ಯಾಯ ಎಂಬ ಪದದ ಅರ್ಥವನ್ನೇ ಪುನರ್ ರಚಿಸಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಲು ಇತರರು ಕುತಂತ್ರ ಮಾಡುತ್ತಿದ್ದಾರೆ, ಅದು ಅವರಿಗಾಗುತ್ತಿರುವ ಅನ್ಯಾಯ.

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪದವಿಯನ್ನು ತಪ್ಪಿಸಲಾಗುತ್ತಿದೆಯಂತೆ. ಅದು ಅವರಿಗಾಗುತ್ತಿರುವ ಅನ್ಯಾಯ.

ಗೃಹ ಸಚಿವರಾದ ಪರಮೇಶ್ವರ್ ಅವರಿಗೂ ಮುಖ್ಯಮಂತ್ರಿ ಪದವಿ ಸಿಕ್ಕಿಲ್ಲ. ಅದು ಅವರಿಗಾಗುತ್ತಿರುವ ಅನ್ಯಾಯ.

ಹಾಗೆಯೇ ಆ ಪಕ್ಷದಲ್ಲಿ ಬೇರೆ ಬೇರೆ ನಾಯಕರುಗಳಿಗೆ ದೊಡ್ಡ ದೊಡ್ಡ ಖಾತೆ, ಹುದ್ದೆ ಸಿಕ್ಕಿಲ್ಲ. ಅದು ಅನ್ಯಾಯವೇ.

ಬಿಜೆಪಿಯಲ್ಲಿ ಬಸವರಾಜ್ ಪಾಟೀಲ್ ಯತ್ನಾಳರಿಗೆ ವಿರೋಧ ಪಕ್ಷದ ಸ್ಥಾನ ಅಥವಾ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ‌, ಅದು ಅವರಿಗಾಗುತ್ತಿರುವ ಅನ್ಯಾಯ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇನ್ನೂ ದೊಡ್ಡ ಸ್ಥಾನ ಸಿಗಬೇಕಿತ್ತು. ಅವರಿಗೂ ಅನ್ಯಾಯ‌.

ಜೊತೆಗೆ ಇನ್ನೂ ಅನೇಕರಿಗೆ ಅಲ್ಲಿಯೂ ಹುದ್ದೆ ಸಿಗದೆ ಅನ್ಯಾಯವಾಗುತ್ತಿದೆ.

ಜನತಾದಳದಲ್ಲಿ ನಿಖಿಲ್ ಕುಮಾರಸ್ವಾಮಿ ಚುನಾವಣೆ ಗೆಲ್ಲಬೇಕಾಗಿತ್ತು‌. ಈಗ ಸೋತಿದ್ದಾರೆ, ಅವರಿಗೂ ಅನ್ಯಾಯ. ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ ಮಗ, ಮೊಮ್ಮಗನಾಗಿದ್ದರೂ ನತದೃಷ್ಟರಂತೆ. ಜಿ ಟಿ ದೇವೇಗೌಡರಿಗೆ ಇನ್ನೇನೋ ಸ್ಥಾನ ಸಿಗಬೇಕಾಗಿತ್ತು,
ಅವರಿಗೂ ಅನ್ಯಾಯ.

ಹೀಗೆ ಇಂತಹ ಸಮೃದ್ಧ, ಶ್ರೀಮಂತ, ಅಪಾರ ಅಧಿಕಾರ ಹೊಂದಿರುವ, ಜನಪ್ರಿಯವಾಗಿರುವ, ಶಾಸಕ, ಮಂತ್ರಿಗಳಾಗಿರುವ, ಬದುಕು ಸಾಕಷ್ಟು ಅವರ ಯೋಗ್ಯತೆಯನ್ನು ಮೀರಿ, ಅವಕಾಶಕೊಟ್ಟು ಯಶಸ್ವಿಯಾಗಿರುವವರೇ ಅನ್ಯಾಯ ಎಂದು ಹೇಳುವುದಾದರೆ ನಮ್ಮಂತ ಸಾಮಾನ್ಯರ ಗತಿಯೇನು.

ಮನೆಗೆ ಬಾಡಿಗೆ ಕಟ್ಟಲು ಸಾಧ್ಯವಾಗದೆ, ರಾತ್ರಿ ಹೊತ್ತು ತಲೆ ತಪ್ಪಿಸಿಕೊಂಡು ಬಂದು, ಮನೆಯಲ್ಲಿ ಮಲಗಿ, ಬೆಳಗಾಗುವ ಮುನ್ನವೇ ಮನೆಯ ಒಡೆಯನಿಂದ ತಪ್ಪಿಸಿಕೊಂಡು ಆಚೆ ಹೋಗುತ್ತಾನೆ, ಕೇವಲ ಐದು ಹತ್ತು ಸಾವಿರದ ಬಾಡಿಗೆ ಕಟ್ಟಲು ಸಾಧ್ಯವಿಲ್ಲದೆ.

ಎಷ್ಟೋ ಶಾಲೆಯ ಮಕ್ಕಳು ಶಾಲಾ ಫೀಸು ಕಟ್ಟದೆ ಶಾಲೆಯಿಂದ ಹೊರಕ್ಕಾಕಿಸಿಕೊಂಡು, ದುಃಖದಿಂದ ಮನೆಗೆ ಬಂದು, ಆದ ಅವಮಾನದಿಂದ ಶಾಲೆಗೆ ಹೋಗುವುದಿಲ್ಲವೆಂದು ಹಠ ಮಾಡುತ್ತಾರೆ.

ಎಷ್ಟೋ ಜನ ತಮ್ಮ ಸಾಮಾನ್ಯ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಲು ಹಣವಿಲ್ಲದೆ ಮುಂದೂಡುತ್ತಲೇ ಬಂದಿದ್ದಾರೆ.

ಎಷ್ಟೋ ಜನರಿಗೆ ಅವರ ಮನೆಯ ಟಿವಿ ಕೇಬಲ್ ದುಡ್ಡು ಕಟ್ಟಲು ಸಾಧ್ಯವಿಲ್ಲದೇ ಡಿಸ್ಕನೆಕ್ಟ್ ಆಗಿರುತ್ತದೆ.

ಎಷ್ಟೋ ಜನರಿಗೆ ಅವರ ಸ್ವಂತ ಊರಿಗೆ ಹೋಗಲು ಸಣ್ಣಪುಟ್ಟ ಖರ್ಚಿನ ಹಣವಿಲ್ಲದೆ ಒದ್ದಾಡುತ್ತಿದ್ದಾರೆ.

ಎಷ್ಟೋ ಜನಕ್ಕೆ ಪರಿಸರ ಮಾಲಿನ್ಯದಿಂದಾಗಿ ಬರಬಾರದ, ಅತ್ಯಂತ ಗಂಭೀರ ಸಾಂಕ್ರಾಮಿಕ ಖಾಯಿಲೆಗಳು ಬಂದು, ಸಮಯವಲ್ಲದ ಸಮಯದಲ್ಲಿ ಅಕಾಲಿಕ ಸಾವು ನೋವುಗಳಿಗೆ ತುತ್ತಾಗುತ್ತಿದ್ದಾರೆ.

ಎಷ್ಟೋ ಯುವಕ ಯುವತಿಯರು ಸರ್ಕಾರದ ಆಡಳಿತ ಅವ್ಯವಸ್ಥೆಯ ಕಾರಣದಿಂದಾಗಿ ಅಪಘಾತ, ಆತ್ಮಹತ್ಯೆ, ಕೊಲೆ, ಅತ್ಯಾಚಾರಗಳಿಂದ ಜೀವ ಕಳೆದುಕೊಂಡಿದ್ದಾರೆ.

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಎಷ್ಟೋ ಜನ ಏನೇನೋ ಸಂಕಷ್ಟಗಳಿಂದ ಒದ್ದಾಡುತ್ತಿದ್ದಾರೆ. ಎಷ್ಟೋ ಜನರಿಗೆ ಕಾರು, ದ್ವಿಚಕ್ರ ವಾಹನಗಳ ಇನ್ಸ್ಯೂರೆನ್ಸ್ ಅನ್ನೂ ನವೀಕರಣ ಮಾಡಲು ಸಾಧ್ಯವಾಗುತ್ತಿಲ್ಲ. ಎಷ್ಟೋ ಜನರಿಗೆ ಹೆಲ್ತ್ ಇನ್ಸೂರೆನ್ಸ್ ಕೂಡ ಇಲ್ಲ. ಎಷ್ಟೋ ಜನರಿಗೆ ಸಾಲದ ಕಂತುಗಳನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ. ಎಷ್ಟೋ ಜನರಿಗೆ ಅರ್ಹತೆ ಇದ್ದರೂ ಉದ್ಯೋಗ ಸಿಗುತ್ತಿಲ್ಲ.

ಇಂತಹವರಿಗೆ ಆಗುತ್ತಿರುವ ದೊಡ್ಡ ಮಟ್ಟದ ಅನ್ಯಾಯ ಯಾರ ಗಮನಕ್ಕೂ ಬರುತ್ತಿಲ್ಲವೇ.

ಹೇಳಿ ಹಾಗಾದರೆ ಅನ್ಯಾಯವೆಂದರೇನು ? ಯಾರಿಗೆ ಅನ್ಯಾಯವಾಗುತ್ತಿದೆ ?
ಯಾಕೆ ಅನ್ಯಾಯ ಆಗುತ್ತಿದೆ ?

ಕೆಲವರು ಮಾತ್ರ ಈ ಸಮಾಜದ ಎಲ್ಲಾ ಹಣ ಆಸ್ತಿ ಅಧಿಕಾರವನ್ನು ಉಪಯೋಗಿಸಿಕೊಂಡು, ಬಹುತೇಕ ಜನರು ಮೂಲಭೂತ ಅವಶ್ಯಕತೆಗಳಿಗೇ
ಒದ್ದಾಡುವಂತೆ ಮಾಡಿರುವವರು ಯಾರು ?

ಬದುಕು ಎಲ್ಲವನ್ನು ನೀಡಿದ ನಂತರ ಮತ್ತೆ ಮತ್ತೆ ಬೇಕು ಎನ್ನುವವರಿಗೆ ಅನ್ಯಾಯವೋ ಅಥವಾ ಸರಳವಾಗಿ ಬದುಕಿದ್ದರೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಸದಾಕಾಲ ಕಷ್ಟದಲ್ಲೇ ಇರುವ ಸಾಮಾನ್ಯ ಜನರು
ಅನ್ಯಾಯಕ್ಕೊಳಗಾಗಿದ್ದಾರೋ ದಯವಿಟ್ಟು ಯೋಚಿಸಿ ನೋಡಿ.

ಕಾಂಗ್ರೆಸ್ ನವರು ದೊಡ್ಡ ದೊಡ್ಡ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬೃಹತ್ ಸಮಾವೇಶಗಳನ್ನು ಮಾಡುತ್ತಿದ್ದಾರೆ, ತಾವೇನೋ ಮಹಾನ್ ಸಾಧನೆ ಮಾಡಿದಂತೆ. ಅದು ತಮ್ಮ ಕರ್ತವ್ಯ ಮತ್ತು ಸೇವೆ ಎಂಬುದನ್ನು ಮರೆತಿದ್ದಾರೆ.

ಸರ್ಕಾರದ ಹುಳುಕುಗಳನ್ನು ಎತ್ತಿ ತೋರಿಸಿ, ಅದಕ್ಕೆ ಮೂಗದಾರ ತೊಡಿಸಬೇಕಾದ ಬಿಜೆಪಿ ಎಂಬ ವಿರೋಧ ಪಕ್ಷ ಇಲ್ಲಿ ಹಾದಿ ಬೀದಿಯ ರಂಪಾಟ ಮಾಡಿಕೊಂಡು ತಲೆಕೆಟ್ಟವರಂತೆ ಏನೇನೋ ಜಗಳ ಆಡುತ್ತಿದ್ದಾರೆ. ಅವರು ಆಡಳಿತ ಪಕ್ಷವನ್ನು ಎದುರಿಸುವ ನೈತಿಕತೆಯನ್ನೇ ಉಳಿಸಿಕೊಳ್ಳುತ್ತಿಲ್ಲ.

ಇನ್ನು ಜೆಡಿಎಸ್ ನವರು ಸಹ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಎಲ್ಲಾ ರೀತಿಯ ಸರ್ಕಸ್ ಗಳನ್ನು ಮಾಡುತ್ತಿದ್ದಾರೆ.

ಮತ್ತೆ ಮತ್ತೆ ಕೇಳಬೇಕೆನಿಸುತ್ತಿದೆ,
ನ್ಯಾಯ ಯಾವುದು ? ಅನ್ಯಾಯ ಯಾವುದು ? ಅನ್ಯಾಯ ಆಗುತ್ತಿರುವುದು ಯಾರಿಗೆ ?
ಅನ್ಯಾಯ ಮಾಡುತ್ತಿರುವವರು ಯಾರು ?

ಜನ ಜಾಗೃತಿ ಮತ್ತು ಪ್ರಾಕೃತಿಕ ನಿಷ್ಠೆ ಹಾಗೂ ದೇಶಪ್ರೇಮ ಮತ್ತು ನಾಗರಿಕ ಪ್ರಜ್ಞೆ, ಜೊತೆಗೆ ಮಾನವೀಯ ಮೌಲ್ಯಗಳ ಪುನರುತ್ಥಾನ ಮಾತ್ರ ನ್ಯಾಯ ಅನ್ಯಾಯಗಳನ್ನು ಸರಿಯಾಗಿ ನಿರ್ಧರಿಸುತ್ತದೆ. ಅಲ್ಲಿಯವರೆಗೂ,
” ಬಲವೇ ನ್ಯಾಯ – ದುರ್ಬಲವೇ ಅನ್ಯಾಯ ”

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068………