ಹವಾಮಾನ ವೈಪರೀತ್ಯ ಅಗತ್ಯ ಮುನ್ನೆಚ್ಚರ ವಹಿಸಿ: ವಿಪತ್ತು ನಿರ್ವಹಣಾ ಕೇಂದ್ರದ ಉಸ್ತುವಾರಿ ಹರ್ಷಲ್ ಗೋಯಲ್
ವಿಜಯ ದರ್ಪಣ ನ್ಯೂಸ್….
ಹವಾಮಾನ ವೈಪರೀತ್ಯ ಅಗತ್ಯ ಮುನ್ನೆಚ್ಚರ ವಹಿಸಿ: ವಿಪತ್ತು ನಿರ್ವಹಣಾ ಕೇಂದ್ರದ ಉಸ್ತುವಾರಿ ಹರ್ಷಲ್ ಗೋಯಲ್
ಮಡಿಕೇರಿ:ಹವಾಮಾನ ವೈಪರೀತ್ಯ ಸಂಬಂಧ ಮುನ್ನೆಚ್ಚರ ವಹಿಸಿದಲ್ಲಿ ಹಲವು ಅವಘಡಗಳನ್ನು ತಪ್ಪಿಸಬಹುದಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರವು ಕಾಲ ಕಾಲಕ್ಕೆ ಹೊರಡಿಸುವ ಮಾಹಿತಿಯನ್ನು ಹಂಚಿಕೊಳ್ಳುವಂತೆ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ನಿರ್ದೇಶಕ ಹರ್ಷಲ್ ಗೋಯಲ್ ಅವರು ತಿಳಿಸಿದ್ದಾರೆ.
ಮಡಿಕೇರಿ ನಗರದ ಜಿಲ್ಲಾಡಳಿತ ಭವನದ ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ಐಸಿ)ದಲ್ಲಿ ಅಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆಸಿ ಅವರು ಮಾತನಾಡಿದರು.
ಪ್ರಾಕೃತಿಕ ವಿಕೋಪ ಯಾವುದೇ ಸಂದರ್ಭದಲ್ಲಿಯೂ ಎದುರಾಗಬಹುದಾಗಿದ್ದು, ಆದ್ದರಿಂದ ಸದಾ ಮುನ್ನೆಚ್ಚರ ವಹಿಸುವುದು ಅತ್ಯಗತ್ಯ ಎಂದು ಕೆಎಸ್ಎನ್ಡಿಎಂಸಿ ನಿರ್ದೇಶಕರಾದ ಹರ್ಷಲ್ ಗೋಯಲ್ ಅವರು ಹೇಳಿದರು.
‘ಹವಾಮಾನ ಮುನ್ಸೂಚನೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಕೃಷಿಕರು, ಸ್ಥಳೀಯರಿಗೆ, ವ್ಯಾಪಾರಿಗಳು, ವಾಣಿಜ್ಯೋದ್ಯಮಿಗಳು, ಪ್ರವಾಸಿಗರು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹವಾಮಾನ ಮುನ್ಸೂಚನೆಯನ್ನು ನೀಡುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ ಹೊರಡಿಸುವ ಮಾಹಿತಿಯನ್ನು ಎಲ್ಲರಿಗೂ ತಲುಪಿಸುವಂತಾಗಲು ಮುಂದಾಗಬೇಕು ಎಂದು ಹರ್ಷಲ್ ಗೋಯಲ್ ಅವರು ನಿರ್ದೇಶನ ನೀಡಿದರು.’
ಕೊಡಗು ಜಿಲ್ಲೆಗೆ ಮುಂಗಾರು ಸಂದರ್ಭದಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಹಿಂಗಾರು ಸಂದರ್ಭದಲ್ಲಿಯೂ ಸಹ ಅಗತ್ಯ ಮುನ್ನೆಚ್ಚರ ವಹಿಸಬೇಕಿದೆ. ಹವಾಮಾನ ವೈಪರೀತ್ಯಗಳು ಯಾವಾಗ ಸಂಭವಿಸುತ್ತವೆ ಎಂಬುದು ತಿಳಿಯುವುದಿಲ್ಲ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಜಿಲ್ಲಾ, ತಾಲ್ಲೂಕು ಹಾಗೂ ಸ್ಥಳೀಯ ಮಟ್ಟದಲ್ಲಿ ವಾಟ್ಸ್ಆಪ್ ಗುಂಪುಗಳ ಮೂಲಕ ನೆಟ್ವರ್ಕ್ ಬಲಪಡಿಸಬೇಕು. ಭೂಕುಸಿತ ಪ್ರದೇಶದಲ್ಲಿ ಮುನ್ನೆಚ್ಚರವಹಿಸಬೇಕು. ಅಂಗನವಾಡಿ, ಶಾಲಾ ಕಾಲೇಜುಗಳು, ಆಸ್ಪತ್ರೆ ಕಟ್ಟಡಗಳು ಸುಸ್ಥಿತಿಯಲ್ಲಿರಬೇಕು. ಕಟ್ಟಡಗಳು ಮಳೆ ನೀರು ಸೋರದಂತೆ ಗಮನಹರಿಸಬೇಕು. ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹರ್ಷಲ್ ಗೋಯಲ್ ಅವರು ಸೂಚಿಸಿದರು.
ವಲಸಿಗ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಕಲ್ಪಿಸಬೇಕು. ಅಧಿಕಾರಿಗಳು ಕೇಂದ್ರ ವ್ಯಾಪ್ತಿಯಲ್ಲಿದ್ದು ಕಾಲಕಾಲಕ್ಕೆ ಮಾಹಿತಿ ಒದಗಿಸುವಂತಾಗಬೇಕು. ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಜಿಲ್ಲೆಗೆ ಬೇಕಿರುವ ಅಗತ್ಯ ಉಪಕರಣ ಸೇರಿದಂತೆ ಅಗತ್ಯ ಮಾಹಿತಿಯ ಪ್ರಸ್ತಾವನೆ ಸಲ್ಲಿಸುವಂತೆ ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.
ಹವಾಮಾನ ವೈಪರೀತ್ಯದಿಂದ ಉಂಟಾಗಬಹುದಾದ ಪ್ರಾಕೃತಿಕ ವಿಕೋಪವನ್ನು ಎದುರಿಸಲು ಎಲ್ಲಾ ಹಂತದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಒಬ್ಬರಿಗೆ ಒಬ್ಬರು ಕೈಜೋಡಿಸಿದಾಗ ಹಲವು ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗಲಿದೆ ಎಂದರು.
ಮುಂಗಾರು ಸಂದರ್ಭದಲ್ಲಿ ಮನೆ, ರಸ್ತೆ, ಚರಂಡಿ, ಸೇತುವೆ ಮತ್ತಿತರ ಹಾನಿ ಬಗ್ಗೆ ಕೂಡಲೇ ಕ್ರಮವಹಿಸಬೇಕು. ಕಂದಾಯ, ಲೋಕೋಪಯೋಗಿ, ಪಂಚಾಯತ್ ರಾಜ್, ಪೊಲೀಸ್, ಸೆಸ್ಕ್, ಪೌರಾಡಳಿತ ಮತ್ತು ನಗರಾಭಿವೃದ್ಧಿ, ಅಗ್ನಿಶಾಮಕ, ಆರ್ಟಿಒ, ಶಾಲಾ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಹೀಗೆ ವಿವಿಧ ಇಲಾಖೆಗಳು ಕೈಜೋಡಿಸಿ ಕಾರ್ಯ ನಿರ್ವಹಿಸುತ್ತಾರೆ ಎಂದು ಮಾಹಿತಿ ನೀಡಿದರು.
ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ ಅವರು ಮಾತನಾಡಿ ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಮುಂಗಾರು ಸಂದರ್ಭದಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅವರೇ ಈ ಸಂದರ್ಭದಲ್ಲಿಯೂ ತಮ್ಮ ತಮ್ಮ ಹಂತದಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಕಾಲ ಕಾಲಕ್ಕೆ ಹವಾಮಾನ ವೈಪರೀತ್ಯದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಅಲ್ಲಿನ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದರು.
ವಿಪತ್ತು ನಿರ್ವಹಣಾ ಪರಿಣತರಾದ ಅನನ್ಯ ವಾಸುದೇವ್ ಅವರು ಮಾತನಾಡಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರಾಕೃತಿಕ ವಿಕೋಪ ಕಂಟ್ರೋಲ್ ರೂಮ್ ಸಹಾಯವಾಣಿ ಕೇಂದ್ರ 24*7 ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ತಹಶೀಲ್ದಾರ್ರಾದ ಪ್ರವೀಣ್ ಕುಮಾರ್(ಮಡಿಕೇರಿ), ರಾಮಚಂದ್ರ(ವಿರಾಜಪೇಟೆ), ಕೆ.ಶ್ರೀಧರ್(ಸೋಮವಾರಪೇಟೆ), ಕಿರಣ್ ಗೌರಯ್ಯ(ಕುಶಾಲನಗರ), ಡಿವೈಎಸ್ಪಿ ರವಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಲೋಯಲ್ ಮಿರಂಡಾ, ತಾ.ಪಂ.ಇಒಗಳಾದ ಅಪ್ಪಣ್ಣ(ವಿರಾಜಪೇಟೆ), ಪರಮೇಶ ಕುಮಾರ್(ಸೋಮವಾರಪೇಟೆ), ಅಗ್ನಿಶಾಮಕ ಇಲಾಖೆ ಅಧಿಕಾರಿ ರಾಜೇಶ್ ಅವರು ಹಲವು ಮಾಹಿತಿ ನೀಡಿದರು.