ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ ಪ್ರಗತಿ ಸಾಧಿಸಿ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ

ವಿಜಯ ದರ್ಪಣ ನ್ಯೂಸ್…

ಅಕ್ಟೋಬರ್ 21 ರಿಂದ ನವೆಂಬರ್ 20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮ

ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ ಪ್ರಗತಿ ಸಾಧಿಸಿ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 16, 2024 :- ಅಕ್ಟೋಬರ್ 21 ರಿಂದ ನವೆಂಬರ್ 20 ರವರೆಗೆ ನಡೆಯಲಿರುವ 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿ ಜಾನುವಾರುಗಳಿಗೆ ತಪ್ಪದೇ ಕಾಲುಬಾಯಿ ರೋಗ ನಿರೋಧಕ ಲಸಿಕೆ ಹಾಕುವ ಮೂಲಕ ಶೇಕಡ 100 ರಷ್ಟು ಪ್ರಗತಿ ಸಾಧಿಸಿ ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಪಶು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.


ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿದಯಾ ಸಂಘದ ಸಭೆ ಹಾಗೂ 6 ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 20ನೇ ಜಾನುವಾರು ಗಣತಿಯಂತೆ 1,70,722 ದನಗಳು ಹಾಗೂ 16,924 ಎಮ್ಮೆಗಳಿದ್ದು, ಒಟ್ಟು 1,87, 646 ಜಾನುವಾರುಗಳಿಗೆ ಅಕ್ಟೋಬರ್ 21ರಿಂದ ನವೆಂಬರ್ 20ರವರೆಗೆ ಆರನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ಬಮೂಲ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ. ಒಟ್ಟು ಸಾವಿರ 1725 ಬ್ಲಾಕ್ ಗಳನ್ನಾಗಿ ವಿಂಗಡಿಸಿದ್ದು, ಒಟ್ಟು 130 ತಂಡಗಳಲ್ಲಿ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಬಮೂಲ್ ಸಿಬ್ಬಂದಿಗಳು ಸೇರಿ ಒಟ್ಟು 312 ಲಸಿಕೆದಾರರು ಪ್ರತಿ ದಿನ ಬೆಳಿಗ್ಗೆ 6:30 ರಿಂದ ಬೆಳಿಗ್ಗೆ 11:00 ಗಂಟೆಯವರೆಗೆ ನಿಗದಿತ ವೇಳಾಪಟ್ಟಿಯಂತೆ ಗ್ರಾಮಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆಯನ್ನು ಉಚಿತವಾಗಿ ನೀಡಲಿದ್ದಾರೆ.

ಈ ಲಸಿಕಾ ಕಾರ್ಯಕ್ರಮದಲ್ಲಿ ರೇಬಿಸ್ ಅಭಿಯಾನದ ಅಂಗವಾಗಿ ನಾಯಿಗಳಿಗೆ ರೇಬಿಸ್ ಲಸಿಕೆಯನ್ನು ಉಚಿತವಾಗಿ ನೀಡಲಿದ್ದಾರೆ. ಈಗಾಗಲೇ ಪ್ರತಿ ಗ್ರಾಮವಾರು ಮೈಕ್ರೋ ಪ್ಲಾನ್ ಮಾಡಲಾಗಿದ್ದು, ಅದರ ಅನ್ವಯ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಲಸಿಕ ಕಾರ್ಯಕ್ರಮದ ಕುರಿತು ರೈತರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಜಿಲ್ಲೆಯ ಪ್ರತಿ ಪಶು ವೈದ್ಯಕೀಯ ಸಂಸ್ಥೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಆವರಣದಲ್ಲಿ ಪೋಸ್ಟರ್, ಬ್ಯಾನರ್ ಪ್ರದರ್ಶಿಸಲಾಗಿದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 1,55,000 ಡೋಸಸ್ ಕಾಲುಬಾಯಿ ರೋಗ ಲಸಿಕೆ ಲಭ್ಯವಿದ್ದು, ಲಸಿಕೆ ಕಾರ್ಯಕ್ರಮಕ್ಕೆ ಅಗತ್ಯವಿರುವ ಸಿರಂಜುಗಳ ಸರಬರಾಜು ಆಗಿದೆ‌. ಪ್ರತಿ ರಾಸುಗೆ ಒಂದರಂತೆ ಸಿರಿಂಜ್ ಮತ್ತು ನೀಡಲ್ ಗಳನ್ನು ಬಳಸಿ ಲಸಿಕೆ ಹಾಕಲಾಗುವುದು.
ಎಲ್ಲಾ ರೈತ ಬಾಂಧವರು ತಮ್ಮ ಮೂರು ತಿಂಗಳ ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ ತಪ್ಪದೇ ಕಾಲುಬಾಯಿ ರೋಗ ಲಸಿಕೆ ಹಾಕಿಸಿ ಹಾಗೂ ಕರುಗಳಿಗೆ 21 ದಿನಗಳ ನಂತರ ಬೂಸ್ಟರ್ ಡೋಸ್ ಲೆಸ್ ಗೆ ಹಾಕಿಸಿ ಎಂದು ಜಿಲ್ಲಾಧಿಕಾರಿ
ಹೇಳಿದರು.

ಲಸಿಕಾ ಕಾರ್ಯಕ್ರಮ ಅಗತ್ಯ ಸಿದ್ಧತೆ ಕೈಗೊಂಡು ಜಿಲ್ಲೇಯ ಪ್ರತಿ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಬೇಕು. ಲಸಿಕೆ ಹಾಕಿದ ನಂತರ ಸಿರಿಂಜ್ ಹಾಗೂ ನೀಡಲ್ ಗಳನ್ನು ಸೂಕ್ತ ಮುಂಜಾಗ್ರತಾ ಕ್ರಮಗಳ ಮೂಲಕ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಜಗದೀಶ್, ತಾಲ್ಲೂಕು ಸಹಾಯಕ ನಿರ್ದೇಶಕರು, ಕೆ.ಎಂ.ಎಫ್, ಬಮೂಲ್ ಮುಖ್ಯಸ್ಥರು ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.