ಶ್ರೀ ಚೌಡೇಶ್ವರಿ ದೇವಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ
ವಿಜಯ ದರ್ಪಣ ನ್ಯೂಸ್….
ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಕ್ಟೋಬರ್ : ಪಟ್ಟಣದ ಶ್ರೀ ಸರ್ವಶಕ್ಯಾತ್ಮಕ ಚೌಡೇಶ್ವರಿ ದೇವಿ ದೇಗುಲದಲ್ಲಿ ಅದ್ದೂರಿಯಾಗಿ ವಿಜಯದಶಮಿ ಹಬ್ಬವನ್ನು ಆಚರಣೆ ಮಾಡಲಾಯಿತು. ಎಲ್ಲಾ ಧರ್ಮದ ಜನರು ದೇವಾಲಯಕ್ಕೆ ಆಗಮಿಸಿ ತಾಯಿಯ ದರ್ಶನ ಪಡೆದು ಪುನೀತರಾದರು.
ವಿಜಯದಶಮಿ ದಿನದಂದು ತಾಯಿ ಸರ್ವಶಕ್ಯಾತ್ಮಕ ಚೌಡೇಶ್ವರಿ ದೇವಿಗೆ ಚಾಮುಂಡೇಶ್ವರಿ ದೇವಿಯ ಅಲಂಕಾರ ಮಾಡಿದ್ದು, ಭಕ್ತಾಧಿಗಳ ಕಣ್ಮನ ಸೆಳೆಯಿತು. ದೇಗುಲವನ್ನು ವಿವಿಧ ಬಗೆಯ ಹೂವುಗಳಿಗೆ ಅಲಂಕಾರ ಮಾಡಲಾಗಿತ್ತು.
ದೇವಾಲಯದ ಮುಂಭಾಗ ದಾನಿಗಳು ನೀಡಿರುವ ನಿವೇಶನದಲ್ಲಿ ವಿಜಯದಶಮಿಯ ಶುಭ ಮಹೂರ್ತದಲ್ಲಿ ಶ್ರೀ ಚೌಡೇಶ್ವರಿ ದೇವಿ ಸಮುದಾಯ ಭವನಕ್ಕೆ ದೇವಾಲಯ ಸಮಿತಿಯ ಪದಾಧಿಕಾರಿಗಳು, ಭಕ್ತಾಧಿಗಳು ವಿಷ್ಣು ಸಹಸ್ರನಾಮ ಪಠಿಸುವ ಮೂಲಕ ಶಂಕು ಸ್ಥಾಪನೆ ಮಾಡಿದರು.
“ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪೂಜಾ ವಿಧಿ ವಿಧಾನ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಸಣ್ಣ ಪ್ರಮಾಣದಲ್ಲಿ ವರ್ಷಧಾರೆಯಾಯಿತು, ಇದರಿಂದ ನೆರೆದಿದ್ದ ಭಕ್ತರು ಪುಳಕಿತರಾಗಿ ತಾಯಿ ಚೌಡೇಶ್ವರಿಗೆ ಜೈಕಾರ ಕೂಗಿದರು.
ದೇವಾಲಯ ಸಮಿತಿ ಅಧ್ಯಕ್ಷ ಎಸ್‌ಎಲ್ ಎನ್ ಅಶ್ವತ್ಥ ನಾರಾಯಣ ಮಾತನಾಡಿ, ನೂರಾರು ವರ್ಷದಿಂದ ಇಲ್ಲೊಂದು ದೇಗುಲ ನಿರ್ಮಾಣಕ್ಕೆ ಸಂಕಲ್ಪವಾಗಿದ್ದರೂ, ಕಳೆದ ದಶದ ಹಿಂದೆ ದೇವಾಲಯ ಲೋಕಾರ್ಪಣೆಯಾಗಿತ್ತು. ಭಕ್ತಾದಿಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾದ ಪರಿಣಾಮ ಇಂದು ಪ್ರಾಂಗಣ ಚಿಕ್ಕದೆನ್ನಿಸಿದೆ ಎಂದರು.
ಈ ದೇಗುಲಕ್ಕೆ ಜಾತಿ, ಮತ, ಧರ್ಮದ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇಲ್ಲದೇ, ದೈವ ಕೃಪೆಯಂತೆ ಎಲ್ಲಾ ಸಮುದಾಯದವರು ಬಂದು ತಾಯಿಯ ಸೇವೆ ಮಾಡುತ್ತಿದ್ದಾರೆ. ದಾನಿಗಳು ನೀಡಿರುವ ನಿವೇಶನದಲ್ಲಿ ಸಮುದಾಯ ಭವನ ಪ್ರಾರಂಭವಾಗುತ್ತಿದ್ದು, ಎಲ್ಲರೂ ತನು ಮನ, ಧನ ನೀಡಿ ಸಹಕಾರ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಕಚೇರಿ ಆರ್‌ಎಚ್‌ಎಂ ಗಂಗಾಧರಪ್ಪ ಮಾತನಾಡಿ ವಿಜಯದಶಮಿ ಶುಭ ದಿನದಂದು ಸಮುದಾಯ ಭವನಕ್ಕೆ ಶಂಕು ಸ್ಥಾಪನೆ ಮಾಡಲಾಗಿದೆ. ಇಲ್ಲಿಯೇ ಇಂದು ಅನ್ನ ಸಂತರ್ಪಣೆ ನಡೆಯುತ್ತಿದ್ದು, ಮುಂದಿನ ವರ್ಷದ ದಸರಾ ವೇಳೆಗೆ ಕೆಳಮಹಡಿಯಲ್ಲಿ ಅಡುಗೆ ಕೋಣೆ, ಒಂದನೇ ಮಹಡಿಯಲ್ಲಿ ಹಾಲ್ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಅಶ್ವತ್ ಗುರುಜಿ, ವಿಶ್ವ ಹಿಂದೂ ಪರಿಷತ್ತು ರಂಗಸ್ವಾಮಿ, ಬಾಲಾಜಿ, ಭೀಮರಾಜ್, ಹನುಮಂತಣ್ಣ, ವೆಂಕಟೇಶ್, ಪುರೋಹಿತ್ ವೀರಣ್ಣ ಸ್ವಾಮಿ, ಬಸ್ ರಾಜು, ಹನುಮಂತಪ್ಪ, ಪಿ. ಜಯರಾಂ ಸೇರಿದಂತೆ ಭಕ್ತ ಗಣ ಉಪಸ್ಥಿತರಿದ್ದರು.