ಬೇರಿಗೆ ನೀರಿನಂತಿರುವ ಸಖ್ಯ ನಮಗೆ ಮುಖ್ಯ’ಜಯ್ ನುಡಿ’

ವಿಜಯ ದರ್ಪಣ ನ್ಯೂಸ್…

ಬೇರಿಗೆ ನೀರಿನಂತಿರುವ ಸಖ್ಯ ನಮಗೆ ಮುಖ್ಯ’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಮಾಲಿಕೆ)

ಇಬ್ಬರು ಗೆಳೆಯರು ಕಾಡಿನಲ್ಲಿ ಮಾತನಾಡುತ್ತ ಹೋಗುತ್ತಿದ್ದರು. ಹಠಾತ್ತಾಗಿ ತುಸುದೂರದಲ್ಲಿ ಕರಡಿಯೊಂದು ಕಾಣಿಸಿಕೊಂಡಿತು. ಅದರಲ್ಲಿ ಒಬ್ಬನು ಗೆಳೆಯನ ಬಗೆಗೆ ಯೋಚಿಸದೆ, ತನ್ನನ್ನು ರಕ್ಷಿಸಿಕೊಳ್ಳಲು ಮರ ಏರಿ ಕುಳಿಕುಕೊಳ್ಳುತ್ತಾನೆ. ಇನ್ನೊಬ್ಬನಿಗೆ ಮರ ಹತ್ತಲು ಬರುತ್ತಿರಲಿಲ್ಲ. ಆತ ಏನು ಮಾಡುವುದೆಂದು ಹೆದರಿದ. ಮೃತದೇಹವನ್ನು ಕರಡಿ ಏನೂ ಮಾಡುವುದಿಲ್ಲವೆನ್ನುವ ಸಂಗತಿ ಅವನಿಗೆ ನೆನಪಾಯಿತು. ಕರಡಿ ಅವನ ಹತ್ತಿರ ಸಮೀಪಿಸುತ್ತಿದ್ದಂತೆ ಅವನು ಶವದಂತೆ ಅಲ್ಲಿಯೇ ಬಿದ್ದುಕೊಂಡನು. ಕರಡಿ ಅವನ ಸಮೀಪ ಬಂದಿತು. ಅವನ ಮೂತಿ ಕಣ್ಣು ಕಿವಿಗಳ ಮೇಲೆ ತನ್ನ ಮೂತಿಯನ್ನು ಆಡಿಸಿತು. ಆತ ಅಲುಗಾಡದಿರುವುದನ್ನು ಕಂಡು ಅವನು ಸತ್ತು ಹೋಗಿರಬೇಕೆಂದು ತಿಳಿದು ಅಲ್ಲಿಂದ ಹೊರಟಿತು. ಸ್ವಲ್ಪ ಸಮಯದ ನಂತರ ಮರದ ಮೇಲಿದ್ದವನು ಕೆಳಗಿಳಿದನು. ಶವದಂತೆ ಮಲಗಿದವನು ಆ ಕಡೆ ಈ ಕಡೆ ನೋಡಿ ಕರಡಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಎದ್ದುನಿಂತನು. ಮರದಿಂದ ಇಳಿದವನು ‘ಗೆಳೆಯ, ಕರಡಿ ನಿನ್ನ ಕಿವಿಯ ಬಳಿ ತನ್ನ ಮುಖ ಇಟ್ಟಿದ್ದನ್ನು ನಾನು ನೋಡಿದೆ. ಅದು ನಿನ್ನ ಕಿವಿಯಲ್ಲಿ ಏನು ಹೇಳಿತು?’ ಎಂದು ಪ್ರಶ್ನಿಸಿದ. ‘ಯಾವ ಗೆಳೆಯನು ಸಂಕಟದ ಸಮಯದಲ್ಲಿ ಬಿಟ್ಟು ಓಡಿಹೋಗುವನೋ ಅಂತಹವನು ಗೆಳೆತನಕ್ಕೆ ಯೋಗ್ಯನಲ್ಲ. ಎಂದಿತು.’ ಎಂದ. ಅವನಿಗೆ ತನ್ನ ತಪ್ಪನ್ನು ಅರಿತು ಪರಿತಪಿಸಿದ.

ಕೃಷ್ಣ ಕುಚೇಲರು
ಈ ಮೇಲಿನ ಕಥೆಯ ಸಂದೇಶ ಎಷ್ಟು ನಿಜವಲ್ಲವೇ? ಒಳ್ಳೆಯ ಗೆಳೆತನ ಯಾರಿಗೆ ಬೇಡ ಹೇಳಿ? ಗೆಳೆಯರಾಗುವುದು ಸುಲಭ ಆದರೆ ಗೆಳೆತನವನ್ನು ಚೆನ್ನಾಗಿ ಉಳಿಸಿಕೊಂಡು ಹೋಗುವುದು ದುರ್ಲಭ. ಕಷ್ಟ ಅವಮಾನದ ಸಂದರ್ಭದಲ್ಲಿ ‘ಹೆದರಬೇಡ, ನಿನ್ನೊಂದಿಗೆ ನಾನಿದ್ದೇನೆ.’ ಎಂದು ಸಹಾಯ ನೀಡುವ ಗೆಳೆಯರು. ಬೇಸರದ ಸಮಯದಲ್ಲಿ ಮನಸ್ಸು ಹಗುರಾಗಿಸುವ ಉತ್ತಮ ಗೆಳೆಯರು ಬೇಕೆಂದು ಮನಸ್ಸು ಬಯಸುತ್ತದೆ. ಅತ್ಯುತ್ತಮ ಗೆಳೆಯರು ಎಂದಾಗೆಲ್ಲ ನಮಗೆ ನೆನಪಿಗೆ ಬರುವುದು ಕೃಷ್ಣ ಕುಚೇಲರು. ಕಷ್ಟಗಳನ್ನು ಸಾಕ್ಷಾತ್ ತಾವೇ ಅನುಭವಿಸಿದವರಂತೆ ಅನುಭವಿಸಿ ಅದಕ್ಕೆ ಸಾಂತ್ವನ ಸೂಚಿಸುವ, ಧೈರ್ಯ ತುಂಬುವ ಗೆಳತನವನ್ನು ಜೀವನದುದ್ದಕ್ಕೂ ಜೊತೆಯಾಗಿ ನೆನಪಿನ ಬುತ್ತಿಯಾಗುತ್ತಿದ್ದ ಸ್ನೇಹ ಲೋಕ ಸೃಷ್ಟಿಸುವ ಕಾಲ ಮರೆಯಾಗುತ್ತಿದೆ. ಜೀವಕ್ಕೆ ಜೀವ ನೀಡುವ ಗೆಳೆಯರು ಜೊತೆ ಇದ್ದರೆ ಸಾಕು ಒಂಟಿಯಾಗಿ ಅನುಭವಿಸುವ ಸುಖವನ್ನು ಇಮ್ಮಡಿಯಾಗಿ ಅನುಭವಿಸಬಹುದು.

ಕೆಟ್ಟ ಗೆಳೆಯರು ಇರುತ್ತಾರಾ?

ನಿಮ್ಮನ್ನು ಗೌರವಿಸದ ವ್ಯಕ್ತಿ, ನಿಮ್ಮೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಯಾವುದೇ ಪ್ರಯತ್ನವನ್ನು ಮಾಡುವುದಿಲ್ಲ. ಸಾಕಷ್ಟು ಗಮನವನ್ನು ನೀಡುವುದಿಲ್ಲ. ಆದರೆ ನೀವು ಮಾತ್ರ ಅವರ ಪ್ರತಿಯೊಂದು ಅಗತ್ಯವನ್ನು ಪೂರೈಸಲು ನಿರೀಕ್ಷಿಸುತ್ತೀರಿ. ನಿಮ್ಮ ಜೀವನದಲ್ಲಿ ಅಂಥ ವ್ಯಕ್ತಿಯನ್ನು ಹೊಂದಿರುವುದು ಎಂದಿಗೂ ಒಳ್ಳೆಯದಲ್ಲ. ಅವರು ಯಾವುದೇ ರೀತಿಯಲ್ಲಿ ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನೀವು ಭಾವಿಸಬಹುದು, ಕೆಲವು ಹಂತದಲ್ಲಿ, ನೀವು ನಕಾರಾತ್ಮಕ ಪ್ರಭಾವವನ್ನು ಗಮನಿಸಲು ಪ್ರಾರಂಭಿಸುತ್ತೀರಿ. ಅಂತಹ ಸ್ನೇಹಿತರನ್ನು ಯಾರಾದರೂ ಏಕೆ ಇಟ್ಟುಕೊಳ್ಳುತ್ತಾರೆ? ಅವರು ನಿರಂತರವಾಗಿ ಅಸಡ್ಡೆ ತೋರುತ್ತಿದ್ದರೆ, ಸಂಪರ್ಕದಲ್ಲಿರಲು ಯಾವುದೇ ಕಾರಣವಿಲ್ಲ. ನಿಮ್ಮ ಜೀವನದಿಂದ ನೀವು ಅವರನ್ನು ಹೇಗೆ ತೆಗೆದುಹಾಕಬಹುದು? ನೋಡೋಣ ಬನ್ನಿ.

ಮೌಲ್ಯಮಾಪನ ಮಾಡಿ

ದೂರದ ಊರಿನಿಂದ ಗೆಳೆಯ ಬಂದಿದ್ದಾನೆಂದರೆ ಅವನ ಭೇಟಿಗೆ ಹೋಗಲೇಬೇಕು. ದೂರದಿಂದ ನಿಮ್ಮ ಗೆಳೆಯರನ್ನು ದೀರ್ಘವಾಗಿ ನೋಡಿ ಅವರಿಂದ ಬಂದ ಇತ್ತೀಚಿನ ಕಾರ್ಯಗಳು ಮತ್ತು ಅವರು ಉಪಯೋಗಿಸುವ ಪದಗಳ ಬಗ್ಗೆ ಯೋಚಿಸಿ ಮತ್ತು ಅವರ ನಡವಳಿಕೆಯನ್ನು ಮೌಲ್ಯಮಾಪನ ಮಾಡಿ. ಇತ್ತೀಚಿನ ಸಂವಾದಗಳಲ್ಲಿ ಎಷ್ಟು ಬಾರಿ ನಿಮಗೆ ಅನಾನುಕೂಲ ಅಥವಾ ಅಸಮಾಧಾನವನ್ನು ಉಂಟು ಮಾಡಿದರು ನಿಮ್ಮನ್ನು ಭಾವನಾತ್ಮಕವಾಗಿ ಹೇಗೆ ಪ್ರಭಾವಿಸಿದರು? ಕೆಟ್ಟ ಗೆಳೆಯನೊಂದಿಗೆ ಸಂವಹನ ಮಾಡುವಾಗ, ನೀವು ಸಾಮಾನ್ಯವಾಗಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಬರಿದಾಗುತ್ತೀರಿ. ನೀವು ಮೊದಲು ನಿರ್ಲಕ್ಷಿಸಲು ಆಯ್ಕೆ ಮಾಡಿದರೂ ಸಹ ಅಂತಿಮವಾಗಿ ನಕಾರಾತ್ಮಕದ ಪರಿಣಾಮವನ್ನು ನೋಡುತ್ತೀರಿ. ನೀವು ಸ್ನೇಹವನ್ನು ಪ್ರಶ್ನಿಸುತ್ತಿದ್ದರೆ, ಖಂಡಿತವಾಗಿಯೂ ಸಮಸ್ಯೆ ಇದೆ. ಸಂಬಂಧದ ಸಂಪೂರ್ಣ ಮೌಲ್ಯಮಾಪನ ಮಾಡಿ, ಮತ್ತು ಪರಿಹಾರವು ಸ್ಪಷ್ಟವಾಗುತ್ತದೆ.

ಮುಂದಾಗಿ ಬದಲಾಗುತ್ತಿರುವ ತಂತ್ರಜ್ಞಾನದಿಂದ ಮಾನವನ ಬದುಕು ಇಷ್ಟೊಂದು ಬದಲಾಗುತ್ತದೆ ಎಂದು ನಾವ್ಯಾರೂ ಊಹಿಸಿರಲಿಲ್ಲ. ಅಂಗೈಯಲ್ಲಿರುವ ಮೊಬೈಲಿನಿಂದ ದೂರವಿದ್ದವರು ಸಮೀಪದಲ್ಲಿದ್ದಾರೆ ಎಂದೆನಿಸಿದರೂ ದಿನದಿಂದ ದಿನಕ್ಕೆ ನಮ್ಮವರು ನಮ್ಮಿಂದ ದೂರವಾಗುತ್ತಿದ್ದಾರೆ. ಇದು ವಿಚಿತ್ರವೆನಿಸಿದರೂ ಸತ್ಯ. ಸಂಬಂಧಗಳು ಸವಿಯನ್ನು ಕಳೆದುಕೊಳ್ಳುತ್ತಿವೆ. ಕಷ್ಟದ ಸಂದರ್ಭದಲ್ಲಿ ದೇವರಂತೆ ಆಗುವವರು ಗೆಳೆಯರು. ಗೆಳೆತನದಂತಹ ಚೆಂದದ ಬಂಧವೂ ನೇಪಥ್ಯಕ್ಕೆ ಸರಿಯುತ್ತಿದೆ. ವಿಶಾಲ ಹೃದಯವಂತಿಕೆ ಕಾಣದಂತಾಗಿ ವ್ಯಾಪಾರ ಮನೋಭಾವ ಬೆಳೆಯುತ್ತಿದೆ. ಗೆಳೆತನದಲ್ಲಿ ಮೋಸ ತುಂಬಾ ಕಮ್ಮಿ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಆನ್‌ಲೈನ್‌ಮಯವಾಗಿದೆ. ವಾಸ್ತವ ಗೆಳೆತನ ಸವಿಯಲು ಮುಂದಾಗಬೇಕು.

ಮನವರಿಕೆಗೆ ಪ್ರಯತ್ನಿಸಿ

ಬಹುತೇಕ ಸಮಸ್ಯೆಗಳಿಗೆ ಮೂಲ ನಮ್ಮ ನಕಾರಾತ್ಮಕ ಭಾವನೆಗಳು. ನಕಾರಾತ್ಮಕ ಭಾವನೆಯುಳ್ಳವರ ಜೊತೆ ಗೆಳೆತನವಿದ್ದರೆ ಸಾಕು ಅವರ ಸಂಗದಿಂದ ಮನಸ್ಸನ್ನು ಹಾಳುಗೆಡವಿಕೊಳ್ಳುತ್ತೇವೆ. ಅದರಿಂದ ಸಮಸ್ಯೆಗಳು ಶುರುವಾಗುತ್ತವೆ. ಸಮಸ್ಯೆಗಳು ಶುರುವಾದರೆ ಸಾಕು ಯಾವ ಸುಖಗಳು ಹತ್ತಿರ ಸುಳಿಯುವುದಿಲ್ಲ. ಮನಸ್ಸಿಗಾಗುವ ಒಂದು ಪುಟ್ಟ ಸಮಸ್ಯೆಯೂ ಸಾಕು ಬದುಕು ಸಾಕ್ಷಾತ್ ನರಕವೇ ಆಗಿಬಿಡುತ್ತದೆ. ಕೆಲವು ಹಂತದಲ್ಲಿ ಎಲ್ಲವೂ ಸರಿಯಾಗಿದೆ ಎಂದು ನೀವೇ ಮನವರಿಕೆ ಮಾಡಲು ಪ್ರಯತ್ನಿಸಬಹುದು ಗೆಳೆತನ ನೀಡುವ ಕೊಡುಗೆ ಅನನ್ಯ. ಕೆಟ್ಟದ್ದಕ್ಕೆ ಬಳಸಿಕೊಂಡರೆ ಬದುಕನ್ನು ರಿಪೇರಿ ಮಾಡದ ರೀತಿಗೆ ತಂದು ನಿಲ್ಲಿಸುತ್ತದೆ. ಸ್ನೇಹಲೋಕ ಬೆರಗು ಕುತೂಹಲ ಮೂಡಿಸುತ್ತದೆ. ಅಲ್ಲಿ ತಮಾಷೆ ಕೀಟಲೆ ಪೂರ್ವನಿರ್ಧಾರಿತ ಇಲ್ಲದೇ ಸಂಭವಿಸಿಬಿಡುತ್ತದೆ.

ಸಮಸ್ಯೆಗಳನ್ನು ವಿವರಿಸಿ

ಹಳೆ ದಾರಿ ಫಲ ನೀಡದಿರುವಾಗ ಹೊಸ ದಾರಿಗೆ ಕಾಯಬಹುದು. ಯಾವುದೇ ಸಮಸ್ಯೆ ಇಲ್ಲ. ಅವರು ನಿಮ್ಮನ್ನು ಕೆಟ್ಟದಾಗಿ ಭಾವಿಸುವುದಿಲ್ಲ. ಯಾರೂ ನಿಮ್ಮನ್ನು ಕೆಳಗಿಳಿಸುವುದಿಲ್ಲ ಮತ್ತು ಎಲ್ಲವೂ ಪರಿಪೂರ್ಣವಾಗಿದೆ. ಸ್ಪಷ್ಟವಾಗಿ, ಅದು ಸುಳ್ಳು, ನೀವು ಸ್ನೇಹವನ್ನು ಮೌಲ್ಯಮಾಪನವನ್ನು ಮಾಡುವ ಹಂತದಲ್ಲಿದ್ದರೆ ಮತ್ತು ಯಾರಾದರೂ ನಿಮಗೆ ಕೆಟ್ಟ ಸ್ನೇಹಿತರಾಗಿರುವ ವಿಧಾನಗಳನ್ನು ಪಟ್ಟಿ ಮಾಡಿದರೆ, ಅದು ಎಲ್ಲಿಂದಲಾದರೂ ಬಂದಿಲ್ಲ ಆಸೆಯ ಬಿಸಿಲುಗುದುರೆ ತೋರಿಸಿದವರು ನಿಮ್ಮೊಂದಿಗೆ ಇರುತ್ತಾರೆ ಎಂಬುದನ್ನು ಮರೆಯುವಂತಿಲ್ಲ. ಕಾಲ ಕಳೆದಂತೆ ಹಿಮಶಿಖರದ ಹೆಪ್ಪುಗಟ್ಟಿದ ಹೆಬ್ಬಂಡೆಯಾದರೆ ಉಪಯೋಗವಿಲ್ಲ. ಬಣ್ಣವಲ್ಲ ಮಖ್ಯ. ಮುಖ್ಯವದು ಗುಣವು ಎಂದು ತಿಳಿದು ಗೆಳೆತನದಲ್ಲಿ ಬಂದಿರುವ ಸಮಸ್ಯೆಗಳನ್ನು ವಿವರಿಸುವ ಹಾದಿಯಲ್ಲಿ ನಡೆಯಬೇಕು. ಆಗ ಪರಿಹಾರಗಳು ತನ್ನಿಂದತಾನೇ ಸಿಕ್ಕುತ್ತವೆ.

ಕೊನೆ ಹನಿ

ಮಾತಿನಲ್ಲಿ ಶುಗರ್ ಕೋಟ್ ಬೇಡ. ನಿರ್ಧಾರಗಳನ್ನು ತೆಗೆದುಕೊಳ್ಳಿ. ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ ಬಾಳಿನ ಬಂಧುರದ ಬಂಧಕೆ ಏಳೇಳು ಜನುಮದಲಿ ನೆನೆಯುವಂಥ ಸ್ನೇಹ ಬೇಕು. ಅವರ ಬಳಿ ನಿಮಗಾಗಿ ಕ್ಷಣಗಳಿವೆ. ನೀವು ಜನುಮವಿಡೀ ಸಂಗ ಬಯಸುತ್ತಿದ್ದೀರಿ. ಅನವರತ ನೆನಪ ತುಡಿತ ಬಯಸುತ್ತಿದ್ದೀರಿ. ನಿಜಕ್ಕೂ ಗೆಳೆತನದಲ್ಲಿ ಬೆಳಕಿದೆ ತಂಪಿದೆ ಎದೆಯ ಸದ್ದಿಗೆ ದನಿಯಿದೆ. ನೆಲದಾಳದ ಬೇರಿಗೆ ನೀರಿನಂತಿರುವ ಸಖ್ಯ ಮನುಷ್ಯನ ಬದುಕಿಗೆ ಮುಖ್ಯ.

ಲೇಖನ
ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ ಉಪನ್ಯಾಸಕರು, ಬೆಳಗಾವಿ ಮೊ:೯೪೪೯೨೩೪೧೪೨