ವಿದ್ಯಾರ್ಥಿಗಳಿಗೆ ಸಂಸದೀಯ ಕಾರ್ಯವಿಧಾನದ ಬಗ್ಗೆ ಅರಿವು

ವಿಜಯ ದರ್ಪಣ ನ್ಯೂಸ್..

ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಯುವ ಸಂಸತ್‌ ಸ್ಪರ್ಧೆ

ವಿದ್ಯಾರ್ಥಿಗಳಿಗೆ ಸಂಸದೀಯ ಕಾರ್ಯವಿಧಾನದ ಬಗ್ಗೆ ಅರಿವು

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್. 18, 2024 :- ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್, ಸಂಸದೀಯ ವ್ಯವಹಾರಗಳ ಇಲಾಖೆ ಮತ್ತು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿದ್ಯಾರ್ಥಿಗಳಲ್ಲಿ ಶಾಸನ ಸಭೆಯ ಕಲಾಪವನ್ನು ಪರಿಚಯಿಸುವ ನಿಟ್ಟಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಯುವ ಸಂಸತ್‌ ಸ್ಪರ್ಧೆ ನಡೆಸಲಾಯಿತು.

ಜಿಲ್ಲೆಯ ನಾಲ್ಕು ತಾಲೂಕುಗಳ 48 ಪ್ರೌಢಶಾಲಾ ವಿದ್ಯಾರ್ಥಿಗಳು ಯುವ ಸಂಸತ್‌ ಸ್ಪರ್ಧೆಯಲ್ಲಿ ಭಾವಹಿಸಿದ್ದರು. ಯುವ ಸಂಸತ್‌ನಲ್ಲಿ ಸಭಾಧ್ಯಕ್ಷರು, ಆಡಳಿತ ಪಕ್ಷ, ವಿರೋಧ ಪಕ್ಷಗಳಾಗಿ ವಿದ್ಯಾರ್ಥಿಗಳು ಜವಾಬ್ದಾರಿವಹಿಸಿ ಹಲವು ಮಹತ್ವದ ವಿಚಾರಗಳ ಕುರಿತು ಅಣಕು ಕಲಾಪದಲ್ಲಿ ಚರ್ಚೆಯನ್ನು ನಡೆಸಿದ್ದು, ಆಕರ್ಷಣೀಯವಾಗಿತ್ತು.

 

ಯುವ ಸಂಸತ್‌ನಲ್ಲಿ ವಿದ್ಯಾರ್ಥಿಗಳು ಶೂನ್ಯ ವೇಳೆ, ಚುಕ್ಕೆ ಗುರುತಿನ ಪ್ರಶ್ನೆ, ಚುಕ್ಕೆ ಗುರುತ್ತಿಲ್ಲದ ಪ್ರಶ್ನೆ ಹೀಗೆ ಹತ್ತು ಹಲವು ಶಾಸನ ಸಭೆಯ ನಿಯಮಗಳಂತೆ ಚರ್ಚೆ ನಡೆಸಿದ್ದು ವಿಶೇಷವಾಗಿತ್ತು.

ಜನಪ್ರತಿನಿಧಿ ಸಂಸ್ಥೆಗಳ ಪಾತ್ರದ ಅರಿವು ಮೂಡಿಸುವುದು. ಪ್ರಜಾಪ್ರಭುತ್ವದ ಬುನಾದಿಯನ್ನು ಭದ್ರಪಡಿಸುವ ಹಾಗೂ ಅಭಿಪ್ರಾಯಗಳ ಬಗ್ಗೆ ತಾಳ್ಮೆ ಮತ್ತು ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಕೌಶಲ್ಯ ಬೆಳೆಸುವುದು. ವಿದ್ಯಾರ್ಥಿಗಳಲ್ಲಿ ವಿಧಾನಸಭೆಯ ಕಾರ್ಯ ಕಲಾಪಗಳ ಬಗ್ಗೆ ತಿಳುವಳಿಕೆ ಮೂಡಿಸುವುದು. ವಿದ್ಯಾರ್ಥಿ ದೆಸೆಯಿಂದಲೇ ವಾಕ್ ಚಾತುರ್ಯ, ಸಮಯ ಪ್ರಜ್ಞೆ, ಸೂಕ್ಷ್ಮತೆ, ಧೈರ್ಯ ಮನೋಭಾವ, ಉತ್ತಮ ವಿಷಯ ಮಂಡನೆ ಸೇರಿ ನಾಯಕತ್ವ ಗುಣಗಳನ್ನು ಬೆಳೆಸುವುದು ಯುವ ಸಂಸತ್ ಸ್ಪರ್ಧೆಯ ಉದ್ದೇಶವಾಗಿದೆ.

ಜಿಲ್ಲಾ ಮಟ್ಟದ ಯುವ ಸಂಸತ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ 6 ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಇವರಲ್ಲಿ ಇಬ್ಬರನ್ನು ರಾಜ್ಯ ಮಟ್ಟದಲ್ಲಿ ನಡೆಯುವ ಯುವ ಸಂಸತ್‌ ಸ್ಪರ್ಧೆಗೆ ಆಯ್ಕೆ ಮಾಡಿ ಕಳುಹಿಸಲಾಗುವುದು ಎಂದು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವಿಕ್ಷಕರಾದ ಪದ್ಮಾವತಿ ಹೆಚ್ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ಯೋಜನಾ ಸಮನ್ವಯ ಅಧಿಕಾರಿಗಳಾದ ರೇಖಾ. ಕೆ, ಕೆಂಪಯ್ಯ, ಶಿಕ್ಷಣ ಸಂಯೋಜಕ ಕೋಮಲಾ. ಎಮ್, ಬಿ.ಆರ್.ಪಿ ಸಮೀರಾ, ಸಿ.ಆರ್.ಪಿ ನಾಗೇಶ್, ತೀರ್ಪುಗಾರರು ಹಾಗೂ ಜಿಲ್ಲೆಯ ನಾಲ್ಕು ತಾಲೂಕುಗಳ ಸಮಾಜ ವಿಜ್ಞಾನ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಇತರರು ಇದ್ದರು.