ಶ್ರೀ ನರೇಂದ್ರ ಮೋದಿ ಮತ್ತು ಶ್ರೀ ಡಿ ವೈ ಚಂದ್ರ ಚೂಡ್……
ವಿಜಯ ದರ್ಪಣ ನ್ಯೂಸ್….
ಶ್ರೀ ನರೇಂದ್ರ ಮೋದಿ ಮತ್ತು
ಶ್ರೀ ಡಿ ವೈ ಚಂದ್ರ ಚೂಡ್……
ಗೌರವಾನ್ವಿತ ಪ್ರಧಾನ ಮಂತ್ರಿ ಮತ್ತು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು….
ಒಂದು ಖಾಸಗಿ ಭೇಟಿಯ ಸುತ್ತಾ…….
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರ ಚೂಡ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿಯವರು ಸಿ ಜೆ ಐ ಅವರ ಮನೆಯಲ್ಲೇ ನಡೆದ ಗಣೇಶ ಹಬ್ಬದಲ್ಲಿ ಭಾಗವಹಿಸಿ ಅವರ ಕುಟುಂಬದೊಂದಿಗೆ ದೇವರ ವಿಗ್ರಹಕ್ಕೆ ಕೈ ಮುಗಿಯುತ್ತಿರುವ ದೃಶ್ಯ ಸ್ವತಃ ಪ್ರಧಾನಿಗಳೇ ತಮ್ಮ ಎಕ್ಸ್ ಖಾತೆಯಲ್ಲಿ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ…….
ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಸರಿ ಎನ್ನುವವರದು ಒಂದು ವಾದವಾದರೆ, ತಪ್ಪು ಎನ್ನುವವರದು ಇನ್ನೊಂದು ವಾದ. ಮೂರನೆಯ ತಟಸ್ಥ ನಿಲುವು ಅಥವಾ ನೇರವಾದ ಸ್ಪಷ್ಟ ನಿಲವು ಪ್ರಕಟಿಸುವ ಮುನ್ನ ಪರ ವಿರೋಧದ ಅಂಶಗಳನ್ನು ಗಮನಿಸೋಣ…..
ಮೊದಲನೆಯದಾಗಿ,
ಪರವಾಗಿ ವಾದಿಸುವವರು ಇದೇನು ಮಹಾ ಅಪರಾಧವಲ್ಲ. ದೇಶದ ಮುಖ್ಯ ನ್ಯಾಯಮೂರ್ತಿಗಳು ಪ್ರಧಾನಿ ಅವರನ್ನು ಖಾಸಗಿಯಾಗಿ ತಮ್ಮ ಮನೆಗೆ ಆಹ್ವಾನಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡುವುದು ಸಹಜವಾದದ್ದು. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಎಲ್ಲರಿಗೂ ಅವರವರದೇ ಆದ ಸ್ವಾತಂತ್ರ್ಯ ಇದೆ. ಇದು ಮೊದಲೇನು ಅಲ್ಲ. ಹಿಂದೆ ಡಾಕ್ಟರ್ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿಗಳನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಿದ್ದರು. ಆಗ ಅವರು ಸಹ ಅದರಲ್ಲಿ ಭಾಗವಹಿಸಿದ್ದರು. ಆದ್ದರಿಂದ ಇದು ವಿವಾದವೇ ಅಲ್ಲ. ಅನಾವಶ್ಯಕವಾಗಿ ಬೇಕಂತಲೇ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದು ಹೇಳುತ್ತಾರೆ…….
ಹಾಗೆಯೇ ಇದನ್ನು ವಿರೋಧಿಸುವವರು,
ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದ ಹಂತದಲ್ಲಿರುವಾಗ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಸರ್ವಾಧಿಕಾರಿ ಆಡಳಿತಗಾರ ಎನ್ನುವ ಆರೋಪ ಇರುವಾಗ, ಬಹಳಷ್ಟು ಸೂಕ್ಷ್ಮ ವಿಷಯಗಳ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಮಾನ ತೆಗೆದುಕೊಳ್ಳುವ ಹಂತದಲ್ಲಿರುವಾಗ, ಕೆಲವು ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ನ ಕೆಲವು ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪ ಮಾಡಿರುವಾಗ, ಮುಖ್ಯ ನ್ಯಾಯಮೂರ್ತಿಗಳಾಗಲಿ ಅಥವಾ ಪ್ರಧಾನ ಮಂತ್ರಿಗಳಾಗಲಿ ಈ ರೀತಿ ಬಹಿರಂಗವಾಗಿ ಒಬ್ಬರಿಗೊಬ್ಬರು ಖಾಸಗಿ ಮತ್ತು ಕೌಟುಂಬಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಕೆಟ್ಟ ಸಂದೇಶವನ್ನು ನೀಡುತ್ತದೆ. ಸಾರ್ವಜನಿಕ ಅಥವಾ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅದನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ಖಾಸಗಿಯಾಗಿ ನ್ಯಾಯಾಂಗದ ಮುಖ್ಯಸ್ಥರು ಮತ್ತು ಶಾಸಕಾಂಗದ ಮುಖ್ಯಸ್ಥರು ಆತ್ಮೀಯತೆ ಪ್ರದರ್ಶಿಸುವುದು ಅಂತಹ ಒಳ್ಳೆಯ ನಡೆಯಲ್ಲ ಎನ್ನುವುದು ವಿರೋಧಿಗಳ ವಾದ……
ಕಾನೂನುತ್ಮಕವಾಗಿ ಮೋದಿಯವರಿಗೆ ಮತ್ತು ಚಂದ್ರಚೂಡ್ ಅವರಿಗೆ ಈ ರೀತಿ ಮಾಡಲು ಯಾವುದೇ ಅಡ್ಡಿ ಆತಂಕವಿಲ್ಲ. ಅವರು ಒಬ್ಬರಿಗೊಬ್ಬರು ಕೌಟುಂಬಿಕ ಬಾಂಧವ್ಯ ಹೊಂದಬಹುದು. ಹಾಗೆಯೇ ನೈತಿಕವಾಗಿ ಖಂಡಿತವಾಗಲೂ ಈ ಸಂದರ್ಭದಲ್ಲಿ ಅವರು ಜೊತೆಯಾಗಿದ್ದು, ಅದು ಬಹಿರಂಗವಾಗಿ ಮೋದಿಯವರು ಹೆಮ್ಮೆಯಿಂದ ಹೇಳಿಕೊಳ್ಳುವುದು ಅನೈತಿಕವಲ್ಲದಿದ್ದರೂ ತಪ್ಪು ನಡೆ ಎಂದು ಸಹ ಅಷ್ಟೇ ನೇರವಾಗಿ ಹೇಳಬಹುದು…..
ಇದರ ನಡುವೆ ಮತ್ತೊಂದು ಅಭಿಪ್ರಾಯವೂ ಇದೆ…..
ಈ ಕ್ಷಣದ ಭಾರತದ ರಾಜಕೀಯ ಪರಿಸ್ಥಿತಿಯಲ್ಲಿ ಚಂದ್ರಚೂಡ್ ಮತ್ತು ಮೋದಿ ಅವರಿಗೆ ಈ ಭೇಟಿಯ ಅವಶ್ಯಕತೆ ಇತ್ತೇ ಅಥವಾ ನಿಜಕ್ಕೂ ಇದೊಂದು ಮುಂದಿನ ಭಾರತದ ರಾಜಕೀಯ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಅತ್ಯುತ್ತಮ ನಡೆಯೇ ಅಥವಾ ಪ್ರಧಾನಿಯವರು ಈ ಟ್ವೀಟ್ ಮೂಲಕ ವಿರೋಧಿಗಳಿಗೆ ಏನಾದರೂ ಸಂದೇಶವನ್ನು ರಾಜಕೀಯವಾಗಿ ನೀಡಿದ್ದಾರೆಯೇ ಅಥವಾ ಚಂದ್ರಚೂಡ್ ಅವರು ಈ ಮೂಲಕ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಗೆ ಇನ್ನೇನಾದರೂ ಸಂದೇಶ ನೀಡಿದ್ದಾರೆಯೇ ಅಥವಾ ಸಾಮಾನ್ಯ ಜನ ಮಾತನಾಡಿಕೊಳ್ಳುವಂತೆ ಅವರವರ ಲಾಭಕ್ಕಾಗಿ ಏನಾದರೂ ಈ ರೀತಿಯ ಭೇಟಿ ನಡೆಯಿತೇ……
ಇದು ಒಂದು ಸಾಮಾನ್ಯ ಚರ್ಚೆ ಮತ್ತು ಅಭಿಪ್ರಾಯ. ಏಕೆಂದರೆ ಭೇಟಿ ಮಾಡಿರುವ ಇಬ್ಬರೂ ಕೇವಲ ವ್ಯಕ್ತಿಗಳು ಮಾತ್ರವಲ್ಲ ಪ್ರಜಾಪ್ರಭುತ್ವದ ಮುಖ್ಯ ಅಡಿಪಾಯಗಳಂತಿರುವವರು. ಎರಡು ಆಧಾರ ಸ್ತಂಭಗಳು. ಕಾನೂನು ಮಾಡುವವರು ಮತ್ತು ಕಾನೂನನ್ನು ಅರ್ಥೈಸುವವರು ಹಾಗೂ ದೇಶದ ಸಂವಿಧಾನವನ್ನು ರಕ್ಷಿಸುವವರು….
ಇವರು ಖಾಸಗಿಯಾಗಿ ಭೇಟಿಯಾದಾಗ ಮೂಡುವ ಅನುಮಾನಗಳು ಅತ್ಯಂತ ಸಹಜವಾದದ್ದು. ಅದರಲ್ಲಿ ಅನೇಕ ಸೂಕ್ಷ್ಮಗಳನ್ನು ಹುಡುಕುವ ಜವಾಬ್ದಾರಿ ಪ್ರತಿ ರಾಜಕೀಯ ಆಸಕ್ತರಿಗೆ ಇದ್ದೇ ಇರುತ್ತದೆ ಮತ್ತು ಅದನ್ನು ಪ್ರಶ್ನಿಸುವುದು ಸಹ ಸರಿಯಾಗಿಯೇ ಇದೆ. ಅದು ಸಹಜವಾಗಿದ್ದರೆ ತುಂಬಾ ಸಂತೋಷ. ಒಂದು ವೇಳೆ ಅದು ಅಸಹಜ ಅಥವಾ ಹಿಡನ್ ಅಜೆಂಡಾ ಹೊಂದಿರುವ ಭೇಟಿಯಾಗಿದ್ದರೆ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಾರಕಬಹುದು. ಇದರಲ್ಲಿ ಒಂದು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವುದು ಕಷ್ಟ…..
ಆದರೂ ಪ್ರಜಾಪ್ರಭುತ್ವದ ಉನ್ನತ ಹುದ್ದೆಗಳಲ್ಲಿರುವವರು ತಮ್ಮ ನಡವಳಿಕೆಗಳನ್ನು ಹೆಚ್ಚು ಜಾಗೃತವಾಗಿ ರೂಪಿಸಿಕೊಂಡರೆ ಒಳ್ಳೆಯದು ಎಂದು ಅಪೇಕ್ಷಿಸುವುದು ನಮ್ಮ ಕರ್ತವ್ಯ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068…….