ಯುವ ಜನತೆ ದುಶ್ಚಟಗಳಿಂದ ದೂರವಿದ್ದು, ಒಳ್ಳೆಯ ಜೀವನ ರೂಢಿಸಿಕೊಳ್ಳಿ: ಸಿ. ನಾರಾಯಣಸ್ವಾಮಿ
ವಿಜಯ ದರ್ಪಣ ನ್ಯೂಸ್……
ಡಾ.ಮಹಾಂತ ಶಿವಯೋಗಿ ಜನ್ಮದಿನ” ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ
ಯುವ ಜನತೆ ದುಶ್ಚಟಗಳಿಂದ ದೂರವಿದ್ದು, ಒಳ್ಳೆಯ ಜೀವನ ರೂಢಿಸಿಕೊಳ್ಳಿ: ಸಿ. ನಾರಾಯಣ ಸ್ವಾಮಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್. 01 :- ಇಂದಿನ ಯುವ ಸಮೂಹ ವ್ಯಸನಗಳಿಗೆ ದಾಸರಾಗಿ ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿ ಯುವಜನತೆ ದುಷ್ಚಟಗಳಿಂದ ದೂರವಿದ್ದು, ಒಳ್ಳೆಯ ಶಿಕ್ಷಣಾಭ್ಯಾಸ ಪಡೆದು ಜೀವನ ರೂಢಿಸಿಕೊಳ್ಳಿ ಎಂದು ರಾಜ್ಯ 5 ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ ತಿಳಿಸಿದರು.
ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ‘ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ’ ಅಂಗವಾಗಿ ‘ವ್ಯಸನ ಮುಕ್ತ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಜೋಳಿಗೆ ಹರಿಕಾರ ಡಾ. ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ದೇಶಾದ್ಯಂತ ‘ಮಹಾಂತ ಜೋಳಿಗೆ ಅಭಿಯಾನ’ದ ಮೂಲಕ ಸಂಚರಿಸಿ, ಜನರಲ್ಲಿನ ವ್ಯಸನ ವಸ್ತುಗಳನ್ನು ತಮ್ಮ ಜೋಳಿಗೆಯಲ್ಲಿ ಭಿಕ್ಷೆ ರೂಪದಲ್ಲಿ ತೆಗೆದುಕೊಂಡು ಜಾಗೃತಿ ಮೂಡಿಸಿ, ವ್ಯಸನ ನಿರ್ಮೂಲನೆಗೆ ಶ್ರಮಿಸಿದ ಡಾ. ಮಹಾಂತ ಸ್ವಾಮಿಜೀಗಳು. ವಿದ್ಯಾರ್ಥಿಗಳು ಜೀವನದಲ್ಲಿ ವ್ಯಸನವನ್ನು ಮೈಗೂಡಿಸಿಕೊಳ್ಳದೆ ಎಚ್ಚರಿಕೆ ವಹಿಸಬೇಕು. ಪ್ರತಿಯೊಬ್ಬರೂ ಪುಸ್ತಕ ಓದು-ಬರಹದ ಹವ್ಯಾಸ, ಒಳ್ಳೆಯ ವ್ಯಕ್ತಿಯ ಗೆಳತನ, ಉನ್ನತ ಗುರಿ ಸಾಧಿಸುವ, ಒಳ್ಳೆಯ ಪ್ರಜ್ಞೆಯನ್ನಾಗುವ ರೂಡಿಯನ್ನು ಬೆಳೆಸಿಕೊಳ್ಳಬೇಕು. ಅಂದಾಗ ವ್ಯಸನ ಮುಕ್ತ ಸಶಕ್ತ ಸಮಾಜವಾಗಿ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವ್ಯಸನ ವೆಂದರೆ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಮದ್ಯಪಾನ, ಧೂಮಪಾನ, ತಂಬಾಕು ಸೇವನೆ, ಡ್ರಗ್ಸ್ ಸೇವನೆ ಮುಂತಾದ ದುಶ್ಚಟಗಳ ಸೇವನೆ ಮಾಡುವುದು. ಇಂತಹ ದುಶ್ಚಟಗಳನ್ನು ಸಮಾಜದಿಂದ ಮುಕ್ತ ಮಾಡಬೇಕು ಎನ್ನುವ ಉದ್ದೇಶದಿಂದ ಡಾ. ಮಹಾಂತ ಶಿವಯೋಗಿಗಳು ರಾಷ್ಟ್ರಾದ್ಯಂತ ‘ಮಹಾಂತ ಜೋಳಿಗೆ ಅಭಿಯಾನ’ ನಡೆಸಿ ಸಾಕಷ್ಟು ವ್ಯಸನ ವ್ಯಕ್ತಿಗಳ ಮನ ಪರಿವರ್ತಿಸಿ ವ್ಯಸನ ವಸ್ತುಗಳನ್ನು ಜೋಳಿಗೆಯಲ್ಲಿ ಸಂಗ್ರಹಿಸುತ್ತಿದ್ದರು. ಈ ಸಾಮಾಜಿಕ ಕಳಕಳಿಯನ್ನು ಮನಗಂಡು ಸರ್ಕಾರದ ವತಿಯಿಂದ ಡಾ. ಮಹಾಂತ ಶಿವಯೋಗಿಗಳ ಜನ್ಮದಿನ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ನಿಮ್ಮ ನೆರೆಹೊರೆಯವರಿಗೆ ದುಶ್ಚಟಗಳಿಂದ ದೂರವಿರುವಂತೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ತಿಳಿಸಿದರು.
*ಡೆಂಗ್ಯೂ ರೋಗದ ಬಗ್ಗೆ ಎಚ್ಚರ ವಹಿಸಿ*
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತಿದ್ದು , ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಲವು ಕ್ರಮ ಕೈಗೊಂಡು ಜಾಗೃತಿ ಮೂಡಿಸುತ್ತಿದೆ. ಡೆಂಗ್ಯೂ ರೋಗ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದ್ದು ಮನೆ ಮೇಲ್ಛಾವಣಿ ಹಾಗೂ ಇನ್ನಿತರ ಪ್ರದೇಶ ಅಥವಾ ವಸ್ತುಗಳಲ್ಲಿ(ಟೈರ್, ತೆಂಗಿನ ಚಿಪ್, ಡ್ರಮ್ ಇತ್ಯಾದಿ) ನೀರು ನಿಲ್ಲದಂತೆ ನೋಡಿಕೊಂಡು ಸೊಳ್ಳೆಗಳ ಉತ್ಪತ್ತಿಯನ್ನು ನಾಶ ಮಾಡಬೇಕು. ಸೊಳ್ಳೆಗಳಿಂದ ಡೆಂಗ್ಯೂ, ಚಿಕನ್ ಗುನ್ಯ ಅಂತಹ ಸಾಂಕ್ರಾಮಿಕ ರೋಗಗಳು ಹರಡುವುದರಿಂದ ಸಾರ್ವಜನಿಕರು ಸೊಳ್ಳೆ ಕಡಿತದಿಂದ ಜಾಗೃತರಾಗಿರಿ ಎoದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್ ಅನುರಾಧ ಅವರು ಮಾತನಾಡಿ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಚಟಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವುದರಿಂದ ಸಾರ್ವಜನಿಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಪ್ರಸ್ತುತ ಗ್ರಾಮೀಣ, ನಗರ ಪ್ರದೇಶಗಳಲ್ಲಿ ವ್ಯಸನ ಎಂಬುದು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವ ಸಮೂಹಕ್ಕೆ ಕೂಡ ಅಂಟಿಕೊಳ್ಳುತ್ತಿದೆ. ಇತ್ತಿಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ಮೊಬೈಲ್ ನೋಡುವುದು ಹೆಚ್ಚಾಗುತ್ತಿದ್ದು, ಇದು ಕೂಡ ಒಂದು ಚಟ, ಇದರಿಂದ ಮಕ್ಕಳ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕು. ವಿದ್ಯಾರ್ಥಿಗಳು, ಯುವಕರು ಆಪ್ತ ವಲಯದಲ್ಲಿನ ಸಹವಾಸಗಳಿಂದ ಮುಂದಿನ ಭವಿಷ್ಯ ರೂಪಿಸಿಕೊಳ್ಳಬಹುದು. ದುಶ್ಚಟಗಳಿಂದ ದೂರ ಇರಲು ಒಳ್ಳೆಯವರ ಸಹವಾಸ ಮಾಡುವ ಜತೆಗೆ ವ್ಯಾಯಾಮ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸುವದನ್ನು ಮೈಗೂಡಿಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷರಾದ ಹುಲಿಕಲ್ ನಟರಾಜ್ ಅವರು ವ್ಯಸನ ಮುಕ್ತ ಸಮಾಜ ನಿರ್ಮಾಣದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.
ಈ ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಕಾರ್ಯಕ್ರಮವನ್ನು ವಿಶ್ವನಾಥಪುರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ದೊಡ್ಡಬಳ್ಳಾಪುರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವ್ಯಸನ ಮುಕ್ತ ಜಾಗೃತಿ ಶಿಬಿರ ಏರ್ಪಡಿಸಿ ಸಾರ್ವಜನಿಕರಿಗೆ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಯಿತು.
ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ವತಿಯಿಂದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರಾದ ಶಫಿ ಸಾದುದ್ದೀನ್, ಸಹಾಯಕ ನಿರ್ದೇಶಕರಾದ ಹೇಮಾವತಿ ಜೆ. ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಶಾಲಾ- ಕಾಲೇಜು ಶಿಕ್ಷಕರು, ವಾರ್ತಾ ಇಲಾಖೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.