ಕವನ ಬರೆಯುವವರು ಹುಷಾರಾಗಿ ಇರಬೇಕು : ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ

ವಿಜಯ ದರ್ಪಣ ನ್ಯೂಸ್ ….

ಕಲ್ಪನೆಯ ಹನಿಗಳು ಕವನ ಸಂಕಲನ ಬಿಡುಗಡೆ:

ಕವನ ಬರೆಯುವವರು ಹುಷಾರಾಗಿ ಇರಬೇಕು : ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ .

ಕುಶಾಲನಗರ ಮಡಿಕೇರಿ  ಜಿಲ್ಲೆ : ಸಮಾಜ ಕವಿಗಳನ್ನು ಗಮನಿಸುತ್ತಿರುತ್ತದೆ. ಹಾಗಾಗಿ ಕವನ ಬರೆಯುವವರು ಸಾಕಷ್ಟು ಹುಷಾರಾಗಿ ಇರಬೇಕು ಎಂದು ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಹೇಳಿದರು.

ಅವರು ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗ ವತಿಯಿಂದ ಕುಶಾಲನಗರ ಹಾರಂಗಿಯಲ್ಲಿ ವಿರ್ಪಡಿಸಿದ್ದ ಗ್ರೀಷ್ಠಸಿರಿ ಕವಿಗೋಷ್ಠಿ ಅಂಗವಾಗಿ ಉಳುವಂಗಡ ಕಾವೇರಿ ಉದಯ ಅವರ ಕಲ್ಪನೆಯ ಹನಿಗಳು ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

ಕವನಗಳ ರಚನೆ ಬಹಳ ಸುಲಭ ಅಂದು ಕೊಳ್ಳುತ್ತೇವೆ. ಆದರೆ ಇದರಷ್ಟು ಅಪಾಯಕಾರಿ ಕೆಲಸ ಯಾವುದೂ ಯಾರೂ ಗಂಭೀರವಾಗಿ ಇಲ್ಲ. ಕವನ ಬರೆಯುವಾಗ ಯಾರು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಬರೆಯುವವರಿಗೆ ಅದರ ಪರಿಣಾಮಗಳ ಅರಿವು ಇರಬೇಕು. ಬರೆಯುವವರು ಓದುವ ಹವ್ಯಾಸ ಹೊಂದಿರಬೇಕು. ಹೆಚ್ಚು ಹೆಚ್ಚು ಓದಿ ಕಡಿಮೆ ಬರೆಯಬೇಕು. ಬರೆದಿದ್ದನ್ನು ಪರಿಣಾಮಕಾರಿಯಾಗಿ ಶಬ್ದಗಳನ್ನು ಚೆಂದವಾಗಿ ಜೋಡಿಸುವುದು ಕೂಡ ಒಂದು ಕಲೆ. ಈ ಕಲೆ ಕವಿಗಳಿಗೆ ಇರಬೇಕು.

ಕವನ ಬರೆದವರು ಅದನ್ನು ತಾವೇ ಒಮ್ಮೆ ಓದಬೇಕು. ಅದನ್ನು ಒಳ್ಳೆಯ ವಿಮರ್ಶಕರಿಗೆ ಕೊಟ್ಟು ಸಲಹೆಗಳನ್ನು ನಂತರ ಸಕರಾತ್ಮಕವಾಗಿ ಸ್ವೀಕರಿಸುವ ಗುಣ ಹೊಂದಿರಬೇಕು. ವಿಷಯವನ್ನಾದರೂ ವಿಭಿನ್ನವಾಗಿ ಆಲೋಚಿಸಿ ಬರೆದಾಗ ಸುಂದರ ಕವನಗಳು ಸೃಷ್ಟಿಯಾಗುತ್ತದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಹುಲುಗುಂದ ಗ್ರಾಮದಲ್ಲಿ ಹಾರಂಗಿ ಜಲಾಶಯ ನಿರ್ಮಾಣ ಆಗಲು ಪ್ರಧಾನ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರ ಹೆಸರನ್ನು
ವೃತ್ತಕ್ಕೆ ನಾಮಕರಣ ಮಾಡಲು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ಮಾತನಾಡಿ, ವರ್ತಮಾನದ ಲಾಭಗಳ ಬಗ್ಗೆ ಚಿಂತಿಸಿ ಕಾರ್ಯನಿರ್ವಹಿಸುವವರೇ ಉತ್ತಮ ರಾಜಕಾರಣಿಗಳು, ಹಾರಂಗಿ ಜಲಾಶಯ ನಿರ್ಮಾಣದ ಯೋಜನೆ ರೂಪಿಸಿದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಈ ಸಾಲಿಗೆ ಸೇರಿದವರು. ಇಂಥ ವ್ಯಕ್ತಿಯ ಹೆಸರನ್ನು ಹಾರಂಗಿ ಆಣೆಕಟ್ಟಿ ಎದುರಿನ ವೃತ್ತಕ್ಕೆ ಇಡಲಾಗುವುದು. ಈ ಬಗ್ಗೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹಾರಂಗಿಯಲ್ಲಿ ವೀರೇಂದ್ರ ಪಾಟೀಲ ಸ್ಮಾರಕ ನಿರ್ಮಾಣಕ್ಕೂ ಪ್ರಯತ್ನ ಮಾಡಲಾಗುವುದು ಎಂದರು.

 

ಉಳುವಂಡ ಕಾವೇರಿ ಉದಯ ಅವರ ಕಲ್ಪನೆಯ ಹನಿಗಳು ಕವನ ಸಂಕಲನವನ್ನು ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪಂಡ್ರಂಗಿ ನಾಗರಾಜ್ ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್ ಪರಿಚಯಿಸಿದರು.

ನಿವೃತ್ತ ಉಪನ್ಯಾಸಕಿಯಾದ ಎ.ಎಸ್. ಪೂವಮ್ಮ ತಿಲೋತ್ತಮೆ ನಂದಕುಮಾರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕೃಷ್ಣಗೌಡ ಮತ್ತಿತರರು ಇದ್ದರು.

ನಂತರ ಪತ್ರಕರ್ತ ಸಾಹಿತಿ ಕುಡೇಕಲ್ ಸಂತೋಷ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. 13 ಕವಿಗಳು ತಮ್ಮ ಕವನಗಳನ್ನು ವಾಚಿಸಿದರು.