ಕೊಡಗಿನಲ್ಲಿ ತಗ್ಗಿದ ಮಳೆ ಪ್ರಮಾಣ
ವಿಜಯ ದರ್ಪಣ ನ್ಯೂಸ್…
ತಗ್ಗಿದ ಮಳೆ ಪ್ರಮಾಣ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶನಿವಾರ ಮಳೆ ಗಣನೀಯವಾಗಿ ತಗ್ಗಿದೆ. ಹಾರಂಗಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ 1,577 ಕ್ಯುಸೆಕ್ಗೆ ಇಳಿಕೆಯಾಗಿದೆ. ಮುಂಜಾಗ್ರತೆಯಾಗಿ ಎಲ್ಲ ಗಾಜಿನ ಸೇತುವೆಗಳ ಬಳಕೆಯನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.
ಶನಿವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಗಳಲ್ಲಿ ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿ 7 ಸೆಂ.ಮೀ ಹಾಗೂ ಪೊನ್ನಂಪೇಟೆ ಹೋಬಳಿಯಲ್ಲಿ 4 ಸೆಂ.ಮೀನಷ್ಟು ಮಳೆ ಸುರಿದಿರುವುದು ದಾಖಲಾಗಿದೆ. ಮಡಿಕೇರಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಹಾಗೂ ನಾಪೋಕ್ಲು ವ್ಯಾಪ್ತಿಯಲ್ಲಿ 2 ಸೆಂ.ಮೀ ಮಾತ್ರವೇ ಮಳೆಯಾಗಿದೆ.
ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳ
ಹಾಸನ : ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವ ಕಾರಣ, ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಶನಿವಾರ 5864 ಕ್ಯುಸೆಕ್ ಒಳಹರಿವು ದಾಖಲಾಗಿದೆ.
ಜಲಾಶಯದ ಗರಿಷ್ಠ ಮಟ್ಟ 2922 ಅಡಿ ಇದ್ದು, ಶನಿವಾರ 2887 ಅಡಿ ನೀರಿತ್ತು. ಅದರಲ್ಲಿ ಬಳಕೆಗೆ 8.390 ಟಿಎಂಸಿ ನೀರು ಲಭ್ಯವಾಗಿದೆ. ಕಳೆದ ವರ್ಷ ಮಳೆಯಿಲ್ಲದೆ ಕುಡಿಯುವ ನೀರಿಗೂ ಪರಿತಪಿಸುವಂತಾಗಿತ್ತು. ಈಗ ಸುರಿಯುತ್ತಿರುವ ಮಳೆಯಿಂದ ಜಲಾಶಯದಲ್ಲಿ ಸಂಗ್ರಹ ಸ್ವಲ್ಪ ಏರಿದೆ. ನೀರಿನ ಬವಣೆ ಸದ್ಯಕ್ಕೆ ನೀಗಿದಂತಾಗಿದೆ.