ಮೇ 30 – 2024, ಗುರುವಾರ – ಹಾಸನ………..
ವಿಜಯ ದರ್ಪಣ ನ್ಯೂಸ್….
ಮೇ 30 – 2024,
ಗುರುವಾರ – ಹಾಸನ………..
ಜಾಗೃತ ಮನಸ್ಸುಗಳ ಅಂತರಾಳದ ಪೆನ್ ಡ್ರೈವ್ ಪ್ರದರ್ಶನ……….
ಬೆಳಗ್ಗೆ 10-30,
ಮಹಾರಾಜ ಪಾರ್ಕ್……
ನೋವು – ಆಕ್ರೋಶ – ಸಾಂತ್ವಾನ – ಆತ್ಮವಿಶ್ವಾಸ – ಎಚ್ಚರಿಕೆಯ ಭಾವ ಮಿಲನ…
ದಯವಿಟ್ಟು ಭಾಗವಹಿಸಿ…..
ಅಂದು ರಾಜ್ಯದ ಬಹುತೇಕ ಸಂವೇದನಾಶೀಲ ಮನಸ್ಸುಗಳ ಹಾದಿ ಹಾಸನದ ಕಡೆಗೆ ಸಾಗಿ ಬರುತ್ತಿದೆ. ರಾಜ್ಯ ಮತ್ತು ದೇಶ ಎಂದೂ ಕಂಡರಿಯದ ಒಂದು ಪೈಶಾಚಿಕ ಕೃತ್ಯಗಳ ಸರಣಿ ಅಲ್ಲಿನ ಸಂಸದರಿಂದ ನಡೆದಿದೆ ಎಂಬ ಆರೋಪಕ್ಕೆ ನಾವೆಲ್ಲರೂ ಈ ಕಾಲಘಟ್ಟದಲ್ಲಿ ಸಾಕ್ಷಿಯಾಗೋಣ…….
ತಂತ್ರ, ಕುತಂತ್ರ, ಪ್ರತಿತಂತ್ರ, ಕುಚೇಷ್ಟೆ, ದ್ವೇಷ, ಅಸೂಯೆ, ರಾಜಕೀಯ ಒಳ ಸುಳಿಗಳು, ಜಾತಿಯ ವಿಕೃತಗಳು, ಪಕ್ಷಗಳ ಬೆನ್ನಿಗಿರಿಯುವ ಜೂಟಾಟಗಳು ಎಲ್ಲವನ್ನು ಮೀರಿ ಸ್ಪಷ್ಟವಾಗಿ ಕೆಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಶೋಷಣೆ, ಅತ್ಯಾಚಾರ ಆಗಿರುವುದು ಗೋಚರಿಸುತ್ತದೆ. ಇಂತಹ ಸಂದರ್ಭದಲ್ಲಿ ನೂರಾರು ಸಂಘಟನೆಗಳು ಜಾಗೃತವಾಗಿ ಅದರ ವಿರುದ್ಧ ಒಂದು ದೊಡ್ಡ ಧ್ವನಿ ಮೊಳಗಿಸಲು ಇದೇ ಮೇ 30 ರಂದು ಹಾಸನದಲ್ಲಿ ಸೇರುತ್ತಿರುವುದು ನಿಜಕ್ಕೂ ಈ ಸಮಯದ ಅತ್ಯಂತ ಪ್ರಜ್ಞಾವಂತ ನಡೆ ಎಂಬುದು ನಿಸ್ಸಂದೇಹ…….
ಸ್ವಾತಂತ್ರ್ಯ ನಂತರದಲ್ಲಿ ಅನೇಕ ಚಳವಳಿಗಳು, ಪ್ರತಿಭಟನೆಗಳು, ಪ್ರದರ್ಶನಗಳು, ಬಂದ್ ಗಳು ನಾನ ಕಾರಣಕ್ಕಾಗಿ ನಿರಂತರವಾಗಿ ನಡೆಯುತ್ತಿದೆ. ಆದರೆ ಜಾಗತೀಕರಣದ ನಂತರ ಈ ಚಳವಳಿಗಳಿಗೂ ಕೂಡ ಒಂದಷ್ಟು ಮಂಕು ಕವಿದಿರುವುದನ್ನು ಗಮನಿಸುತ್ತಿದ್ದೆವು. ಎಲ್ಲೋ ಕೆಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಬೆಲೆ ಏರಿಕೆ ಮುಂತಾದ ವಿಷಯಗಳಿಗೆ ಆಗಾಗ ಪ್ರತಿಭಟನೆ ನಡೆಸುತ್ತಿದ್ದುದು ಬಿಟ್ಟರೆ ಈ ರೀತಿಯ ಸಾಮಾಜಿಕ ಸಮಸ್ಯೆಗಳ ವಿರುದ್ಧ ಧ್ವನಿಯೆತ್ತಿದ್ದು ತೀರಾ ಅಪರೂಪ. ಭ್ರಷ್ಟಾಚಾರದ ವಿರುದ್ಧ ಒಂದಷ್ಟು ಚಳವಳಿಗಳು, ದೆಹಲಿಯ ನಿರ್ಭಯ ಎಂಬ ಜ್ಯೋತಿಸಿಂಗಳ ಬರ್ಬರ ಅತ್ಯಾಚಾರದ ಸಂದರ್ಭದಲ್ಲಿ ಬೃಹತ್ ಪ್ರತಿಭಟನೆಗಳು, ದೆಹಲಿಯ ಅತ್ಯಂತ ಯಶಸ್ವಿ ರೈತ ಚಳವಳಿ, ಇನ್ನೊಂದಿಷ್ಟು ರಾಜ್ಯಗಳ ಮೀಸಲಾತಿ ಚಳವಳಿಗಳು ಮತ್ತು ಅಸ್ಪೃಶ್ಯತಾ ಆಚರಣೆಯ ಕೆಲವು ಪ್ರತಿಭಟನೆಗಳು ನಡೆದದ್ದು ಸಹ ಕಾಣುತ್ತೇವೆ…..
ಈಗ ಅದೇ ರೀತಿಯ ಮಹಿಳಾ ದೌರ್ಜನ್ಯದ ವಿರುದ್ಧ, ಮಹಿಳೆಯರ ಘನತೆಯ ರಕ್ಷಣೆಯ ಧ್ವನಿಯಾಗಿ ಕರ್ನಾಟಕದಲ್ಲಿ ಒಂದು ಬೃಹತ್ ಪ್ರತಿಭಟನೆ, ಪ್ರದರ್ಶನ, ಹೋರಾಟ ನಡೆಯುತ್ತಿರುವುದು ನಮ್ಮೆಲ್ಲರ ಸಂಘಟನಾತ್ಮಕ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಏಕೆಂದರೆ ಸಾಂಕೇತಿಕವಾಗಿ ಇದು ಒಬ್ಬ ಸಂಸದನ ವಿರುದ್ಧವಿದ್ದರು ನಿಜಕ್ಕೂ ಈ ಹೋರಾಟ ಶೋಷಣೆಗೆ ಒಳಗಾದ ಮಹಿಳೆಯರ ಪರವಾಗಿ ಜಾಗೃತ ಮನಸ್ಸುಗಳು ಕೆಚ್ಚೆದೆಯಿಂದ ಮುನ್ನುಗ್ಗುತ್ತಿರುವ ರೀತಿ ಅತ್ಯಂತ ಸ್ವಾಗತಾರ್ಹ ಮತ್ತು ಪ್ರಶಂಸನೀಯ…..
ಇಂದಿನ ಈ ಕಾರ್ಪೊರೇಟ್ ಜಗತ್ತಿನ ಕೊಳ್ಳುಬಾಕ ಸಂಸ್ಕೃತಿ ಅನೇಕ ಜನರ ಚಿಂತನ ಶಕ್ತಿಯನ್ನೇ ಕೊಂದಿದೆ. ಅವರ ಸಮಯವನ್ನು ಸಂಪೂರ್ಣ ನಿಯಂತ್ರಿಸಿದೆ. ಅವರ ಸಾಮಾಜಿಕ ಚಟುವಟಿಕೆಗಳ ಮೇಲೆ ಬಹುದೊಡ್ಡ ಜಾಲ ಬೀಸಿ ಬಂಧಿಸಿದೆ. ಇಂತಹ ಸಂದರ್ಭದಲ್ಲಿ ಈ ದೌರ್ಜನ್ಯದ ವಿರುದ್ಧ ದಂಗೆಯ ರೀತಿ ಜನ ಒಗ್ಗಟ್ಟಾಗಿ ಹಾಸನದೆಡೆಗೆ ಮುನ್ನುಗ್ಗುತ್ತಿರುವುದು ಇನ್ನೂ ಈ ನೆಲದಲ್ಲಿ ಪ್ರತಿಭಟನೆಯ ಕಾವು ಉಳಿದಿದೆ ಎಂಬುದನ್ನು ದೃಢಪಡಿಸುತ್ತದೆ…..
ರಾಜ್ಯದ ಅನೇಕ ಮಠಮಾನ್ಯಗಳು, ಮಾಧ್ಯಮಗಳು ಈ ಲೈಂಗಿಕ ದೌರ್ಜನ್ಯದ ವಿರುದ್ಧ ದೊಡ್ಡ ಮಟ್ಟದ ಧ್ವನಿ ಎತ್ತಬೇಕಾಗಿತ್ತು. ದುರಾದೃಷ್ಟವಶಾತ್ ಅವು ಈ ವಿಷಯವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಯಾವ ಮಠಮಾನ್ಯಗಳು ಕನಿಷ್ಠ ಇದರ ವಿರುದ್ಧ ಹೇಳಿಕೆಗಳನ್ನು ಸರಿಯಾಗಿ ನೀಡಲಿಲ್ಲ. ಮಾಧ್ಯಮಗಳಂತೂ ಇಡೀ ವಿಷಯದ ಮೂಲ ಸ್ವರೂಪವನ್ನೇ ಬದಲಾಯಿಸಿ ಅನವಶ್ಯಕ ಚರ್ಚೆಗೆ ಇಳಿದಿವೆ. ರಾಜಕೀಯ ಕೆಸರಾಟಕ್ಕೆ ಮಹತ್ವ ನೀಡಿ ಅಪರಾಧದ ಮೂಲವನ್ನೇ ಮರೆಮಾಚುತ್ತಿವೆ……
ಇಂತಹ ಸಂದರ್ಭದಲ್ಲಿ ಅನೇಕ ಸಹೃದಯ ಪ್ರಬುದ್ಧ ಮನಸ್ಸುಗಳು, ಸ್ವಯಿಚ್ಛೆಯಿಂದ ಈ ಹೋರಾಟಕ್ಕಾಗಿ ಸಂಘಟಿತರಾಗುತ್ತಿರುವುದು ನಿಜಕ್ಕೂ ಈ ಕಾಲಘಟ್ಟದ ಒಂದು ಮಹತ್ವದ ಹೆಜ್ಜೆ ಎಂದೇ ಪರಿಗಣಿಸಬೇಕು. ಆದ್ದರಿಂದ ಆಸಕ್ತರು, ಸಮಯವಿದ್ದವರು, ಹೋರಾಟಕ್ಕೆ ನಮ್ಮದೂ ಒಂದು ಧ್ವನಿ ಇರಲಿ ಎಂದು ಭಾವಿಸುವವರು, ಸಮಕಾಲಿನ ಸಮಸ್ಯೆಗಳಿಗೆ ಸ್ಪಂದಿಸುವವರು ದಯವಿಟ್ಟು ಸಮಯ ಮಾಡಿಕೊಂಡು ಮೇ 30 ರಂದು ಹಾಸನಕ್ಕೆ ಆಗಮಿಸಬೇಕೆಂದು ಒಂದು ಕಳಕಳಿಯ ಮನವಿ….
ಇದು ನಮ್ಮೆಲ್ಲರ ಕರ್ತವ್ಯವೂ, ಜವಾಬ್ದಾರಿಯೂ ಹೌದು. ಈ ರೀತಿಯ ಬೃಹತ್ ಪ್ರಮಾಣದ ಒಂದು ಪ್ರತಿಭಟನೆ ಸರ್ಕಾರಕ್ಕೂ ಸಹ ಎಚ್ಚರಿಕೆಯ ಗಂಟೆಯಾಗುತ್ತದೆ. ಜೊತೆಗೆ ಈ ರೀತಿಯ ದುಷ್ಕೃತ್ಯಗಳನ್ನು ಮಾಡುವವರು ಭಯಭೀತರಾಗಿ ಮುಂದೆ ಈ ಕೃತ್ಯಗಳಲ್ಲಿ ಭಾಗಿಯಾಗಲು ಹೆದರುವಂತಾಗಬಹುದು ಮತ್ತು ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ತಮ್ಮ ಪಟ್ಟಭದ್ರ ಹಿತಾಸಕ್ತಿಯನ್ನು ಕಾಪಾಡಲು ಗುಲಾಮಿ ಮನೋಭಾವವನ್ನು ಬೆಳೆಸುತ್ತಿರುವ ವ್ಯಕ್ತಿಗಳು, ದುಷ್ಟ ಶಕ್ತಿಗಳು ಬದಲಾಗಲೂಬಹುದು…..
ಆ ನಿಟ್ಟಿನಲ್ಲಿ ಈ ಹಾಸನದ ಕಾರ್ಯಕ್ರಮ ಒಂದು ಜಾಗೃತ ಸಮಾವೇಶವಾಗಲಿ ಎಂದು ಆಶಿಸುತ್ತಾ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……