ಮಳೆ ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಡಾ. ಶಿವಶಂಕರ
ವಿಜಯ ದರ್ಪಣ ನ್ಯೂಸ್…..
ಮಳೆ ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಡಾ. ಶಿವಶಂಕರ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ20 :-ಮುಂಗಾರು ಪೂರ್ವ ಮಳೆಯಿಂದಾಗುವ ವಿಪತ್ತು ನಿರ್ವಹಿಸಲು ಜಿಲ್ಲಾಡಳಿತ ವತಿಯಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಶಿವಶಂಕರ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಇಂದು ನಡೆದ ಬರ ನಿರ್ವಹಣೆ ಹಾಗೂ ಪೂರ್ವ ಮುಂಗಾರು ಮಳೆಯ ಸಿದ್ಧತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಉತ್ತಮ ಮಳೆಯಾಗುತ್ತಿದ್ದು, ರೈತರ ಜಮೀನುಗಳಿಗೆ ಹಾಗೂ ಜನ ನಿಬಿಡ ಪ್ರದೇಶಗಳಿಗೆ ನೀರು ನುಗ್ಗುವುದನ್ನು ತಪ್ಪಿಸಲು ಮಳೆ ನೀರು ಸರಾಗವಾಗಿ ಹರಿದು ಹೋಗಲು ಜಿಲ್ಲೆಯ ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಚರಂಡಿ, ರಾಜ ಕಾಲುವೆಗಳ ತ್ಯಾಜ್ಯವನ್ನು ಒಂದು ವಾರದೊಳಗೆ ತೆರವುಗೊಳಿಸಿ ವರದಿ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ನೀರು ಪೂರೈಸಲು ಮೊದಲ ಆದ್ಯತೆ ನೀಡಲಾಗಿದೆ. ಅವಶ್ಯವಿದ್ದಲ್ಲಿ ಖಾಸಗಿ ಟ್ಯಾಂಕರ್ ಗಳ ಮೂಲಕ ನೀರನ್ನು ಪೂರೈಸಲು ಕ್ರಮ ವಹಿಸಿ. ಕುಡಿಯುವ ನೀರು ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಜಿಲ್ಲಾಡಳಿತ ಗಮನಕ್ಕೆ ತರಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಿ ಎಂದು ಹೇಳಿದರು.
ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಮರ್ಪಕವಾಗಿ ರೈತರಿಗೆ ಸಿಗುವಂತೆ ಕ್ರಮ ಕೈಗೊಳ್ಳಿ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮುಂಗಾರು ಪೂರ್ವ ಮಳೆಯಿಂದ 14.92 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ. ಪ್ರಮುಖವಾಗಿ ಬಾಳೆ, ಮಾವು, ತರಕಾರಿ ಬೆಳೆ ಹಾಳಾಗಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕರು ಮಾಹಿತಿ ನೀಡಿದರು. ಬರ ಪರಿಹಾರ ಹಣ ಅರ್ಹ ರೈತರಿಗೆ ನೀಡಲಾಗಿದೆ. ಬೆಳೆ ನಷ್ಟ ಆಗಿರುವ ಪ್ರದೇಶಗಳಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಿದ ನಂತರ ಶೀಘ್ರ ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶ್ರೀನಿವಾಸ್ ಎಂ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
&&&&&&&&&&&&&&&&&&&&&&&&
ವಿಫಲ ಕೊಳವೆಬಾವಿ ಮುಚ್ಚಲು ಜಿಲ್ಲಾಧಿಕಾರಿ ಡಾ. ಶಿವಶಂಕರ್ ಅಧಿಕಾರಿಗಳಿಗೆ ಸೂಚನೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ. 20 : ಪ್ರಸ್ತುತ ಮಳೆ ಪ್ರಮಾಣ ಕಡಿಮೆಯಾಗಿದ್ದು, ಬರಗಾಲ ಇರುವುದರಿಂದ ಅಂತರ್ಜಲ ಬಳಕೆ ಹೆಚ್ಚಾಗಿರುವ ಕಾರಣ ಹಾಗೂ ಭೂವೈಜ್ಞಾನಿಕ ಕಾರಣಗಳಿಂದ ಕೊಳವೆಬಾವಿಗಳು ವಿಫಲವಾಗುತ್ತಿವೆ. ವಿಫಲ ಕೊಳವೆಬಾವಿಗಳನ್ನು ಸರಿಯಾದ ಕಾಲಕ್ಕೆ ಮುಚ್ಚದೇ ಇರುವುದರಿಂದ ಈಗಾಗಲೇ ಅನೇಕ ಅವಘಡಗಳು ಮರುಕಳಿಸುತ್ತಿವೆ.
ವಿಫಲ/ನಿರುಪಯುಕ್ತ ಕೊಳವೆಬಾವಿಗಳನ್ನು ಸುರಕ್ಷಿತವಾಗಿ ಮುಚ್ಚಬೇಕು. ನಗರ, ಪಟ್ಟಣ ಪ್ರದೇಶಗಳಲ್ಲಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಕೊರೆಯುವ ಮುನ್ನ ಜಮೀನಿನ ಮಾಲೀಕರು ಮತ್ತು ರೀಗ್ ಮಾಲೀಕರು ಸಂಬಂಧಪಟ್ಟ
ನಗರ, ಪಟ್ಟಣ, ಗ್ರಾಮ ಪಂಚಾಯತಿಗೆ ಕೊಳವೆಬಾವಿ ಕೊರೆಯಿಸುವ ಕುರಿತು ಮಾಹಿತಿಯನ್ನು ನೀಡಬೇಕಾಗಿರುತ್ತದೆ. ಅದೇ ರೀತಿ ಜಮೀನಿನ ಮಾಲೀಕರು ಮತ್ತು ರಿಗ್ ಮಾಲೀಕರು ಕೊಳವೆಬಾವಿ ವಿಫಲವಾದಲ್ಲಿ ಸಂಬಂಧಪಟ್ಟ ನಗರ, ಪಟ್ಟಣ, ಗ್ರಾಮ ಪಂಚಾಯತಿಗೆ ಮಾಹಿತಿ ನೀಡಬೇಕಾಗಿರುತ್ತದೆ. ನಗರ, ಪಟ್ಟಣ ಪ್ರದೇಶಗಳಲ್ಲಿನ ಕ್ಷೇತ್ರ ಅಧಿಕಾರಿಗಳು, ಗ್ರಾಮ ಪಂಚಾಯತಿಯ ಪಿ.ಡಿ.ಒ, ಗ್ರಾಮ ಪಂಚಾಯತ್‌ನ ಕಾರ್ಯದರ್ಶಿ ಇವರು ವಿಫಲ/ನಿರುಪಯುಕ್ತ/ದುರಸ್ಥಿಯಲ್ಲಿರುವ ಕೊಳವೆಬಾವಿಗಳ ಬಗ್ಗೆ ನಿಗಾವಹಿಸಿ, ಸಂಭವಿಸಬಹುದಾದ ಅಪಘಾತಗಳನ್ನು ತಡೆಯಲು ಪೂರ್ಣ ಪ್ರಮಾಣದಲ್ಲಿ ಮುಚ್ಚಲ್ಪಟ್ಟಿರುವ ಬಗ್ಗೆ ಖಚಿತಪಡಿಸಿಕೊಂಡು, ವಹಿಯಲ್ಲಿ ಸರಿಯಾದ ರೀತಿಯಲ್ಲಿ ದಾಖಲಿಸಿ ಮಾಹಿತಿ ನೀಡಬೇಕಾಗಿರುತ್ತದೆ. ಇದೇ ರೀತಿ ನಗರ ಪಟ್ಟಣ ಪ್ರದೇಶದಲ್ಲಿ ಆಯಾ ಸಂಬಂಧಪಟ್ಟ ವಾರ್ಡ್ ಇಂಜಿನಿಯರ್ ಸಹ ಕ್ರಮ ವಹಿಸಬೇಕಾಗಿರುತ್ತದೆ.
ಆದ್ದರಿಂದ ವಿಫಲ ಕೊಳವೆಬಾವಿಗಳನ್ನು ಮುಚ್ಚಿಸಲು ನಗರ, ಪಟ್ಟಣ ಪ್ರದೇಶದಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬರುವ ಸ್ಥಳೀಯ ಅಧಿಕಾರಿಗಳಿಗೆ ಸರ್ಕಾರದ ಸುತ್ತೋಲೆಗಳನ್ವಯ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿರುತ್ತದೆ.
1. ಪ್ರಸ್ತುತ ಬರಗಾಲವಿರುವುದರಿಂದ ಕೊಳವೆಬಾವಿಗಳು ವಿಫಲವಾಗುವ ಸಂಭವ ಹೆಚ್ಚಿರುವುದರಿಂದ ವಿಫಲ ಕೊಳವೆಬಾವಿಗಳು ಯಾವುದಾದರೂ ಇದ್ದಲ್ಲಿ ತಕ್ಷಣವೇ ಮುಚ್ಚಲು ಕ್ರಮ ಕೈಗೊಳ್ಳುವಂತೆ ಹಾಗೂ ಸದರಿ ವಿಫಲ ಕೊಳವೆಬಾವಿ ಮುಚ್ಚದೇ ಇರುವ ರಿಗ್ ಮಾಲೀಕರು ಮತ್ತು ಜಮೀನು ಮಾಲೀಕರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರುಗಿಸುವುದು.
2. ಜಮಿನಿನ ರೈತರು ಕೊಳವೆಬಾವಿ ಕೊರೆಯುವ 15 ದಿನಗಳ ಪೂರ್ವದಲ್ಲಿ ಮಾಹಿತಿಯನ್ನು ಸಂಬಂಧಪಟ್ಟ ಗ್ರಾಮಪಂಚಾಯತಿ ಕಾರ್ಯಾಲಯಕ್ಕೆ ಸಲ್ಲಿಸಿ ಅನುಮತಿಯನ್ನು ಪಡೆದು ಕೊಳವೆಬಾವಿಯನ್ನು ಕೊರೆಯತಕ್ಕದ್ದು.
3. ಆಯಾ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ/ ಕಾರ್ಯದರ್ಶಿ ಮತ್ತು ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು ತಮ್ಮ ಕಛೇರಿ ಸೂಚನಾ ಫಲಕಗಳಲ್ಲಿ:-
“ಜಮೀನಿನ ರೈತರು ಕೊಳವೆಬಾವಿ ಕೊರೆಯುವ 15 ದಿನಗಳ ಪೂರ್ವ ಮಾಹಿತಿಯನ್ನು ತಿಳಿಸಿ ನಿರಾಕ್ಷೇಪಣೆಯನ್ನು ಪಡೆದು ಕೊಳವೆಬಾವಿಯನ್ನು ಕೊರೆಯತಕ್ಕದ್ದು. ಕೊಳವೆಬಾವಿ ವಿಫಲಗೊಂಡಲ್ಲಿ ಅದನ್ನು ವೈಜ್ಞಾನಿಕವಾಗಿ ಮುಚ್ಚಲು ಕ್ರಮ ಕೈಗೊಳ್ಳತಕ್ಕದ್ದು. ಒಂದು ವೇಳೆ ನಿರ್ಲಕ್ಷ್ಯತನದಿಂದಾಗಿ ಪ್ರಾಣಹಾನಿಯಾಗುವ ಅವಘಡಗಳು ಉಂಟಾದಲ್ಲಿ ಜಮೀನಿನ ಮಾಲೀಕರನ್ನು ನೇರ ಹೊಣೆಗಾರರನ್ನಾಗಿಸಿ ಕಾನೂನು ಕ್ರಮ ಜರುಗಿಸಲಾಗುವುದು.
4. ಕೊಳವೆಬಾವಿ ಕೊರೆಯುವ ರಿಗ್ ಯಂತ್ರದ ಮಾಲೀಕರು ಕಡ್ಡಾಯವಾಗಿ ನಮೂನೆ-7ಎ ಹೊಂದಿರಬೇಕು ಹಾಗೂ ಕೊಳವೆಬಾವಿ ಕೊರೆದ ಮಾಹಿತಿಯನ್ನು ಪ್ರತೀ ತಿಂಗಳು ರಿಗ್ ಯಂತ್ರದ ಮಾಲೀಕರು ನಮೂನೆ-1ಸಿ ಯಲ್ಲಿ ಕಡ್ಡಾಯವಾಗಿ ಸಲ್ಲಿಸುವಂತೆ ಕ್ರಮ ವಹಿಸುವುದು.
5. ನಮೂನೆ-7ಎ ಹೊಂದಿರದ ರಿಗ್ ವಾಹನಗಳ ವಿರುದ್ದ ಕಾನೂನು ರೀತ್ಯ ಕ್ರಮಕೈಗೊಳ್ಳುವುದು.
ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಪ್ರಕರಣಗಳಲ್ಲಿ ಹೊರ ರಾಜ್ಯಗಳಿಂದ ಬಂದು ರಿಗ್ ಯಂತ್ರವನ್ನು ನೋಂದಾಯಿಸದೆ ಮತ್ತು ಕೊಳವೆಬಾವಿ ಕೊರೆಯಲು ಪರವಾನಿಗೆ ಪಡೆಯದ ಸ್ಥಳೀಯರ ಜಮೀನಿನಲ್ಲಿ ಕೊರೆದು ಹೋಗುವ ರಿಗ್ ಯಂತ್ರಗಳ ವಿರುದ್ದ ಆರಕ್ಷಕ ಠಾಣೆಯಲ್ಲಿ ದೂರು ದಾಖಲಿಸಿ ಸುರಕ್ಷತಾ ದೃಷ್ಟಿಯಿಂದ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.