ಕೋಟೆ ಬೆಟ್ಟದ ಸುತ್ತ ಮಕ್ಕಳ ಪಯಣ..!
ವಿಜಯ ದರ್ಪಣ ನ್ಯೂಸ್
ಕೋಟೆ ಬೆಟ್ಟದ ಸುತ್ತ ಮಕ್ಕಳ ಪಯಣ..!
ಬೇಸಿಗೆ ಶಿಬಿರದಲ್ಲೊಂದು ಕಾರ್ಯಕ್ರಮ
ಮಡಿಕೇರಿ:ಕೊಡಗು ಜಿಲ್ಲೆಯ ಅತಿ ಎತ್ತರದ ಬೆಟ್ಟ ಶ್ರೇಣಿಗಳಲ್ಲಿ ಮೂರನೆಯ ಸ್ಥಾನದಲ್ಲಿರುವದು ಕೋಟೆ ಬೆಟ್ಟ., ಸೋಮವಾರಪೇಟೆ ತಾಲೂಕಿನ ಮಾದಾಪುರ ಗ್ರಾಮ ವ್ಯಾಪ್ತಿಗೆ ಒಳಪಡುವ ಈ ಬೆಟ್ಟ ಶ್ರೀ ಈಶ್ವರ ದೇವಾಲಯವನ್ನೊಳಗೊಂಡಿರುವ ಪವಿತ್ರ ಕ್ಷೇತ್ರದೊಂದಿಗೆ ಚಾರಣಕ್ಕೂ ಹಸರುವಾಸಿ.., ಈ ಬೆಟ್ಟವನ್ನೇರಿದ ಪುಟಾಣಿ ಮಕ್ಕಳು ಪ್ರಕೃತಿಯ ಸೊಬಗನ್ನುಂಡು ಸಂಭ್ರಮಿಸಿದರು.
ಮಡಿಕೇರಿಯ ವಾಂಡರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಅವರ ಸ್ಮರಣಾರ್ಥ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ಉಚಿತ ಬೇಸಿಗೆ ಶಿಬಿರದ ಅಂಗವಾಗಿ ಕೋಟೆ ಬೆಟ್ಟಕ್ಕೆ ಚಾರಣ ಏರ್ಪಡಿಸಲಾಗಿತ್ತು. ಪುಟಾಣಿಗಳಿಂದ ಹಿಡಿದು ಮಕ್ಕಳು, ಪೋಷಕರು ಸೇರಿದಂತೆ 130ಕ್ಕೂ ಅಧಿಕ ಮಂದಿ ಈ ಚಾರಣದಲ್ಲಿ ಪಾಲ್ಗೊಂಡಿದದ್ದರು. ಬಿರು ಬಿಸಿಲನ್ನೂ ಲೆಕ್ಕಿಸದೆ ಮಕ್ಕಳು ಬೆಟ್ಟವನ್ನೇರಿ ಸಂಭ್ರಮಿಸಿದರು. ಕಾಡಿನಲ್ಲಿ ದೊರಕುವ ಗೊಟ್ಟೆ ಹಣ್ಣು, ಈಚಲು ಹಣ್ಣು, ಜರ್ಗುಳಿ, ಚೂರಿ ಹಣ್ಣು ಮುಂತಾದ ಹಣ್ಣುಗಳ ಸವಿಯುಚರುಂಡರಲ್ಲದೆ ವಿವಿಧ ಗಿಡ, ಮರಗಳ ಪರಿಚಯ ಮಾಡಿಕೊಂಡರು. ಶಿಬಿರದ ಮೇಲುಸ್ತುವಾರಿ ವಹಿಸಿಕೊಂಡಿದ್ದ ತರಬೇತುದಾರರು ಮಕ್ಕಳಿಗೆ ಮಾಹಿತಿ ನೀಡಿದರು.
ಭಾಗವಹಿಸಿದ್ದ ಎಲ್ಲರಿಗೂ ಬೆಳಗಿನ ಉಪಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಶಿಬಿರದ ಸಂಚಾಲಕ ಬಾಬು ಸೋಮಯ್ಯ, ತರಬೇತುದಾರರಾದ ಎಸ್.ಟಿ.ವೆಂಕಟೇಶ್, ಶಾಂ ಪೂಣಚ್ಚ, ಕುಡೆಕಲ್ ಸಂತೋಷ್, ಲೋಕೇಶ್ ನಾಯ್ಡು, ಹರೇಂದ್ರ ಅವರುಗಳ ಮಾರ್ಗದರ್ಶನದಲ್ಲಿ ಮಕ್ಕಳು ಚಾರಣದಲ್ಲಿ ಪಾಲ್ಗೊಂಡಿದ್ದರು. ಆರೋಹಣ ತಂಡದ ಕೆ.ಕೆ. ಮಹೇಶ್ ಕುಮಾರ್ ಕ್ಷೇತ್ರದ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರಲ್ಲದೆ, ತಂಡದವರೊಂದಿಗೆ ಸ್ಥಳದಲ್ಲಿ ಭಜನೆ ಕಾರ್ಯ ನಡೆಸಿಕೊಟ್ಟರು.
ನಾಳೆ ಸಮಾರೋಪ
ಏಪ್ರಿಲ್ ಒಂದರಿಂದ ಆರಂಭಗೊಂಡ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಮೇ.1ರಂದು ನಡೆಯಲಿದೆ. ಬೆಳಿಗ್ಗೆ 8ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ರಾಷ್ಟ್ರೀಯ ಹಾಕಿ ತೀರ್ಪುಗಾರರಾದ ಚೆಪ್ಪುಡಿರ ಅಯ್ಯಪ್ಪ ಕಾರ್ಯಪ್ಪ, ರಾಷ್ಟೀಯ ಹಾಕಿ ಆಟಗಾರ ಬಿ.ಎಸ್.ಚೆಂಗಪ್ಪ ಉಪಸ್ಥಿತರಿರುವರು. ವಾಂಡರ್ಸ್ ಸ್ಪೋರ್ಟ್ಸ್ ಕ್ಲಬ್ ಅದ್ಯಕ್ಷ ಕೋಟೇರ ಮುದ್ದಯ್ಯ ಅದ್ಯಕ್ಷತೆ ವಹಿಸಲಿದ್ದಾರೆ.
ಸಮಾರಂಭದಲ್ಲಿ ಶಿಬಿರಾರ್ಥಿಗಳಿಂದ ಕಲಿತ ಪ್ರದರ್ಶನ ಹಾಗೂ ಶಿಬಿರಾರ್ಥಿಗಳಿಗಾಗಿ ಎರ್ಪಡಿಸಲಾಗಿದ್ದ ಹಾಕಿ, ಅಥ್ಲೆಟಿಕ್, ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಶಿಬಿರಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಲಾಗುವದೆಂದು ಸಂಚಾಲಕ ಬಾಬು ಸೋಮಯ್ಯ ತಿಳಿಸಿದ್ದಾರೆ.
—-ಶ್ರೀಧರ್ ನೆಲ್ಲಿತಾಯ