ಕೃಷ್ಣಾ ನದಿ ನೀರಿನ ಬಗ್ಗೆ ಎಂ ಬಿ ಪಾಟೀಲರ ಹೇಳಿಕೆ ದುರದೃಷ್ಟಕರ ಮತ್ತು ರಾಜಕೀಯ ಪ್ರೇರಿತ
ಮೇವಿಜಯ ದರ್ಪಣ ನ್ಯೂಸ್
ಕೃಷ್ಣಾ ನದಿ ನೀರಿನ ಬಗ್ಗೆ
ಎಂ ಬಿ ಪಾಟೀಲರ ಹೇಳಿಕೆ ದುರದೃಷ್ಟಕರ ಮತ್ತು ರಾಜಕೀಯ ಪ್ರೇರಿತ
2013 ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ MB ಪಾಟೀಲರು ಕೊಟ್ಟ ಕೊಡುಗೆ ಶೂನ್ಯ ಮತ್ತು ರಾಜ್ಯದ ನೀರಾವರಿ ಪ್ರದೇಶದ ವಿಸ್ತರಣೆ ನಗಣ್ಯ, ಪಾಟೀಲರ ಕಾರ್ಯವೈಖರಿ ಗಮನಿಸಿದಾಗ ಅವರು ಕೇವಲ ವಿಜಯಪುರ ಜಿಲ್ಲೆಗೆ ಮಾತ್ರ ನೀರಾವರಿ ಮಂತ್ರಿಗಳಾಗಿದ್ದರು, ಹಲವು ದಶಕಗಳಿಂದಲೂ ನೀರಾವರಿ ವಂಚಿತ ಬಯಲುಸೀಮೆಯ ನೀರಿನ ಬವಣೆಗೆ ಅವರೆಂದೂ ತಲೆಕೆಡಿಸಿಕೊಂಡವರಲ್ಲ. ಸುಧೀರ್ಘ ಐದು ವರ್ಷಗಳ ಕಾಲ ಬೃಹತ್ ನೀರಾವರಿ ಸಚಿವರಾಗಿದ್ದ ಪಾಟೀಲರು ಬೊಗಸೆ ನೀರು ಹರಿಯುವ ಖಾತ್ರಿಯಿಲ್ಲದಿದ್ದರೂ ದಲ್ಲಾಳಿಗಳ ಜೊತೆ ಶಾಮೀಲಾಗಿ ಎತ್ತಿನಹೊಳೆ ಯೋಜನೆಗೆ ಸಾವಿರಾರು ಕೋಟಿಗಳ ಪೈಪ್ ಹಾಕಿಸುವುದರಲ್ಲಿ ತಲ್ಲೀನರಾಗಿದ್ದರು. ಬರೋಬ್ಬರಿ 12 ವರ್ಷ ಕಳೆದರೂ ಒಂದು ಹನಿ ನೀರೂ ಸಹಾ ಹರಿಯದಿರುವ ಎತ್ತಿನಹೊಳೆಯ ಬಗ್ಗೆ ಅವರಿಗೆ ಯಾವುದೇ ಪಶ್ಚತ್ತಾಪವಿಲ್ಲ.
ಮೇಲಾಗಿ ಚಿಕ್ಕಬಳ್ಳಾಪುರದ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಮಾಜಿ ಪ್ರಧಾನಮಂತ್ರಿ HD ದೇವೇಗೌಡರು ಹಾಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮುಂದಿಟ್ಟಿರುವ ಕೃಷ್ಣಾ ನದಿಯ ನೀರಿನ ಬೇಡಿಕೆಯ ವಿನಂತಿಗೆ ಪ್ರತಿಕ್ರಿಯಿಸಿರುವ MB ಪಾಟೀಲರು ಕೃಷ್ಣಾ ನದಿಯಿಂದ ಒಂದು ಹನಿ ನೀರನ್ನೂ ಬರಪೀಡಿತ ಜಿಲ್ಲೆಗಳಾದ *ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ತೆಗೆದುಕೊಂಡು ಹೋಗಲು ನಾವು ಬಿಡುವುದಿಲ್ಲ* ಎಂಬ ಅಪ್ರಭುದ್ದ ಹೇಳಿಕೆ ನೀಡಿರುವುದಲ್ಲದೆ, *ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟದ ಮಧ್ಯೆ ಕಿಡಿ* ಎಂಬ ರಾಜಕೀಯ ಪ್ರೇರಿತ ಕೀಳು ಮಟ್ಟದ ಪದ ಬಳಸಿದ್ದಾರೆ.
ವಾಸ್ತವದಲ್ಲಿ 2000 ಇಸವಿಯಲ್ಲಿಯೇ ಕೇಂದ್ರ ಸರ್ಕಾರದ ( NWDA ) (National Water Development Agency ) *ರಾಷ್ಟೀಯ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ* ಯು ಕೃಷ್ಣಾ – ಆಲಮಟ್ಟಿ – ಪೆನ್ನಾರ್ ಜೋಡಣೆಯ ಕೊಂಡಿ ಯೋಜನೆಯಲ್ಲಿ (ದಕ್ಷಿಣ ಪಿನಾಕಿನಿ) ಕರ್ನಾಟಕದ ಪೆನ್ನಾರ್ ನದಿ ಜಲಾನಯನ ಪ್ರದೇಶಕ್ಕೆ ಸೇರಿದ ಕೋಲಾರ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 1.82 ಲಕ್ಷ ಎಕರೆ ಕೃಷಿ ಭೂಮಿಗೆ ನೀರಾವರಿ ಒದಗಿಸುವ ಯೋಜನೆಗೆ ( Feasibility Report ) ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಿ ಕೇಂದ್ರದ ಮನಮೋಹನ್ ಸಿಂಗ್ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.
2015 ರಲ್ಲಿ ಚದಲಪುರ ಕ್ರಾಸನಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ನಡೆಸಿದ ಅನಿರ್ಧಿಷ್ಠಾವದಿ ಧರಣಿ ವೇದಿಕೆಗೆ ಬಂದಾಗಲೇ ಸದರಿ ವರದಿಯ ಎಲ್ಲಾ ದಾಖಲೆಗಳನ್ನು ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ MB ಪಾಟೀಲರ ಹಸ್ತಾಂತರಿಸಿ, ನಮ್ಮ ನೀರಿನ ಪಾಲನ್ನು ಕೊಡುವಂತೆ ಕೋರಲಾಗಿತ್ತು, ಆದರೆ ಇದ್ಯಾವುದಕ್ಕೂ ಓಗೊಡದ ಪಾಟೀಲರು ಎರಡೇ ವರ್ಷಗಳಲ್ಲಿ ಎತ್ತಿನಹೊಳೆಯನ್ನು ಹರಿಸಿ ಎಲ್ಲರಿಗೂ ಸುರಕ್ಷಿತ ಶುದ್ಧ ಕುಡಿಯುವ ನದಿ ಮೂಲದ ನೀರನ್ನುಪೂರೈಸುವುದಾಗಿ ಪುಂಗಿ ಊದಿ ಮಾಯವಾಗಿದ್ದರು. ಅವರು ಮರೆತಿದ್ದರೆ ಅಥವಾ ನಾವು ಕೊಟ್ಟಿದ್ದ ಧಾಖಲೆಗಳನ್ನು ಕಳೆದುಕೊಂಡಿದ್ದರೆ, ಮತ್ತೆ ತಲುಪಿಸಲಾಗುವುದು. ಅವುಗಳನ್ನು ಕೂಲಂಕುಷವಾಗಿ ಓದಿದ ನಂತರವಾದರೂ ಅವರ ಆತುರದ ಅಪ್ರಭುಧ್ಧ ಹೇಳಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸುತ್ತೇವೆ.
ಉತ್ತರ ಕರ್ನಾಟಕದ ಜಾಗೀರು ಎಂದು ಭಾವಿಸಿರುವ ಕೃಷ್ಣಾ ನದಿಯಿಂದ ನೂರಾರು ಟಿಎಂಸಿ ಪ್ರವಾಹದ ರೂಪದಲ್ಲಿ ಆಂದ್ರಕ್ಕೆ ಹರಿದರೆ ಇವರಿಗೇನೂ ನೋವಿಲ್ಲ, ಇತ್ತೀಚೆಗೆ ಕೇಂದ್ರ ಸರ್ಕಾರವು ಕೈಗೆತ್ತಿಕೊಂಡಿರುವ ಕೃಷ್ಣಾ – ಪೆನ್ನಾರ್ -ಕಾವೇರಿ ನದಿ ಜೋಡಣೆ ಮೂಲಕ ತಮಿಳುನಾಡಿಗೆ ಕೃಷ್ಣಾ ನದಿ ನೀರನ್ನು ಹರಿಸಿದರೂ ನೋವಿಲ್ಲ, ಕರ್ನಾಟಕದ ಬರಪೀಡಿತ ಬಯಲುಸೀಮೆಯ ಜನರಿಗೆ ಕುಡಿಯುವ ನೀರಿಗಾಗಿ ಮಾತ್ರ ಕೃಷ್ಣಾ ನದಿಯಿಂದ ಒಂದು ಹನಿ ನೀರನ್ನು ಹರಿಸಲು ಬಿಡುವುದಿಲ್ಲ ಎಂಬ ದೋರಣೆ ದುರದೃಷ್ಠಕರ.
ಹಿಂದೆ ಅಂದಿನ ಮುಖ್ಯಮಂತ್ರಿ NT ರಾಮರಾಯರು ಮಾನವೀಯತೆ ದೃಷ್ಠಿಯಿಂದ ತೆಲುಗು ಗಂಗಾ ಯೋಜನೆ ರೂಪಿಸಿ ಪಕ್ಕದ ತಮಿಳುನಾಡಿನ ಮದ್ರಾಸ್ ಗೆ ಕುಡಿಯುವ ನೀರನ್ನು ಕೊಟ್ಟಿದ್ದರು. ಅಖಂಡ ಕರ್ನಾಟಕದ ಸಮಗ್ರತೆಯನ್ನು ಮರೆತರೆ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ.
ಆಂಜನೇಯ ರೆಡ್ಡಿ ಆರ್
ಅಧ್ಯಕ್ಷರು
ಶಾಶ್ವತ ನೀರಾವರಿ ಹೋರಾಟ ಸಮಿತಿ