ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡ ಅವರು ಹಿಂದುಳಿದ ವರ್ಗಗಳ ವಿರೋಧಿಯಲ್ಲ : ಅಹಿಂದ ನಾಯಕ ಹಾಗೂ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಅಪ್ಪಣ್ಣ
ವಿಜಯ ದರ್ಪಣ ನ್ಯೂಸ್
ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡ ಅವರು ಹಿಂದುಳಿದ ವರ್ಗಗಳ ವಿರೋಧಿಯಲ್ಲ, ಹಾಲುಮತ ಕುರುಬ ಸಮಾಜದ ಮಠ ಸೇರಿದಂತೆ ಅನೇಕ ಹಿಂದುಳಿದ ಜಾತಿಗಳ ಗುರುಪೀಠಗಳಿಗೆ ನಿವೇಶನ ನೀಡಿದ್ದು ದೇವೇಗೌಡರು ಎಂಬುದು ವಾಸ್ತವ ಸತ್ಯವಾಗಿದೆ ಎಂದು ರಾಜ್ಯ ಅಹಿಂದ ನಾಯಕ ಹಾಗೂ ವಾಲ್ಮೀಕಿ ಗುರುಪೀಠದ ಧರ್ಮದರ್ಶಿಗಳಾದ ಅಪ್ಪಣ್ಣ ಹೇಳಿದರು.
ಅವರು ಕೆ.ಆರ್.ಪೇಟೆ ಪಟ್ಟಣದಲ್ಲಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಮತ್ತು ಅಹಿಂದ ನಾಯಕರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಮಾಜಿ ಪ್ರಧಾನಿ ದೇವೇಗೌಡ ಅವರು ಪರಿಶಿಷ್ಟ ವರ್ಗ, ಹಿಂದುಳಿದ ಜಾತಿಗಳು ಸೇರಿದಂತೆ ಅಹಿಂದ ವರ್ಗಗಳ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿರುವ ನಾಯಕರಾಗಿದ್ದಾರೆ. ದೇವೇಗೌಡ ಅವರ ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರೆ, ಮರಾಠ ಸಮಾಜಕ್ಕೆ ಸೇರಿದ್ದ ಪಿಜಿಆರ್ ಸಿಂಧ್ಯ ಗೃಹ ಮಂತ್ರಿಯಾಗಿದ್ದು ಹಿಂದುಳಿದ ಮಡಿವಾಳ ಸಮಾಜಕ್ಕೆ ಸೇರಿದ ಲಕ್ಷ್ಮೀಸಾಗರ್ ಕಾನೂನು ಸಚಿವರಾಗಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ ದಕ್ಷತೆಯಿಂದ ಕೆಲಸ ಮಾಡದಿದ್ದರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ ಆದ್ದರಿಂದ ದೇವೇಗೌಡರ ಬಗ್ಗೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುವ ಕಾಂಗ್ರೆಸ್ ಮುಖಂಡರು ವಾಸ್ತವ ಅರಿತು ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಅಪ್ಪಣ್ಣ ಎನ್.ಡಿ.ಎ ಒಕ್ಕೂಟಕ್ಕೆ ತಮ್ಮ ಬೆಂಬಲ ಘೋಷಿಸಿರುವ ಜೆಡಿಎಸ್ ವರಿಷ್ಟ, ಮಾಜಿ ಪ್ರಧಾನಿ ದೇವೇಗೌಡ ಅವರು ದೇಶದ ಸಮಗ್ರತೆಯ ದೃಷ್ಟಿಯಿಂದ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದ ಸಮಗ್ರ ಅಭಿವೃದ್ಧಿ ಸೇರಿದಂತೆ, ಹಿಂದುಳಿದ ವರ್ಗಗಳ ಬಗ್ಗೆ ಅಪಾರ ಕಾಳಜಿ ಹಾಗೂ ದೂರದರ್ಶಿತ್ವ ಹೊಂದಿರುವ ರಾಜ್ಯ ನಾಯಕರಾದ ಮಂಡ್ಯ ಲೋಕಸಭಾ ಅಭ್ಯರ್ಥಿ ಹೆಚ್. ಡಿ.ಕುಮಾರಸ್ವಾಮಿ ಅವರನ್ನು ಹಿಂದುಳಿದ ಅಹಿಂದ ಜಾತಿಗಳ ಜನರು ಬೆಂಬಲಿಸುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಲಿದ್ದಾರೆ ಎಂದು ಅಪ್ಪಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ದೇಶದ ಸಮಗ್ರತೆಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಧಿಟ್ಟ ಕ್ರಮಗಳು ಹಾಗೂ ವಿಶ್ವನಾಯಕ ನರೇಂದ್ರ ಮೋದಿಜಿ ಅವರ ನಾಯಕತ್ವವನ್ನು ಮೆಚ್ಚಿ ಪರಿಶಿಷ್ಟ ಜಾತಿ, ವರ್ಗಗಳು ಸೇರಿದಂತೆ ಸಮಗ್ರ ಹಿಂದುಳಿದ ವರ್ಗಗಳ ಜನರು ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಎನ್.ಡಿ.ಎ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿದ್ದಾರೆ. ದೇಶದಲ್ಲಿ 400ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಸಾಧ್ಯತೆ ಇರುವುದರಿಂದ ಮತ್ತೊಮ್ಮೆ ದೇಶದ ಪ್ರಧಾನಿಗಳಾಗಿ ಮೋಧೀಜಿ ಅಧಿಕಾರ ಸ್ವೀಕರಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಅಪ್ಪಣ್ಣ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕುಮಾರಣ್ಣ ಸೇರಿದಂತೆ ಮೈಸೂರಿನಿಂದ ಯಧುವೀರ್, ಚಾಮರಾಜನಗರದಿಂದ ಬಾಲರಾಜ್, ಹಾಸನದಿಂದ ಪ್ರಜ್ವಲ್ ರೇವಣ್ಣ ಹಾಗೂ ಬೆಂಗಳೂರು ಗ್ರಾಮಾಂತರದಿಂದ ಡಾ.ಮಂಜುನಾಥ್ ಭರ್ಜರಿ ಗೆಲುವು ದಾಖಲಿಸಲಿದ್ದಾರೆ. ವಾಲ್ಮೀಕಿ ನಾಯಕ ಸಮಾಜ ಸೇರಿದಂತೆ ಹಿಂದುಳಿದ ಸಮಾಜಗಳು ದೇಶದ ಸುಭದ್ರತೆ ಯ ದೃಷ್ಟಿಯಿಂದ ಎನ್.ಡಿ.ಎ ಅಭ್ಯರ್ಥಿಗಳನ್ನು ಬೆಂಬಲಿಸಿ ಮೋದಿಜಿ ಸರ್ಕಾರಕ್ಕೆ ಶಕ್ತಿ ತುಂಬಲಿದ್ದಾರೆ ಎಂದು ಅಪ್ಪಣ್ಣ ಹೇಳಿದರು.
ಕಳೆದ ಉಪಚುನಾವಣೆಯಲ್ಲಿ ವಾಲ್ಮೀಕಿ ನಾಯಕ ಸಮಾಜಕ್ಕೆ ನಾವು ನೀಡಿದ್ದ ಆಶ್ವಾಸನೆಯಂತೆ ಕೆ.ಆರ್.ಪೇಟೆ ಪಟ್ಟಣದಲ್ಲಿ 3ಕೋಟಿ ರೂಪಾಯಿ ವೆಚ್ಚದಲ್ಲಿ ವಾಲ್ಮೀಕಿ ಭವನ ಹಾಗೂ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಎರಡು ಕೋಟಿ ರೂ ವೆಚ್ಚದಲ್ಲಿ ವಾಲ್ಮೀಕಿ ಭವನದ ಕಾಮಗಾರಿಗಳು ನಡೆಯುತ್ತಿವೆ. ಕುಮಾರಸ್ವಾಮಿ ಅವರು ಸಂಸದರಾದ ನಂತರ ಅವರ ಸಂಸದರ ಅನುದಾನವನ್ನು ನೀಡುವ ಮೂಲಕ ಆದಷ್ಟು ಶೀಘ್ರವಾಗಿ ಭವನಗಳನ್ನು ಲೋಕಾರ್ಪಣೆ ಮಾಡಿಸಲು ತಾವು ಮುಂದಾಗುವುದಾಗಿ ಅಪ್ಪಣ್ಣ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಮುಖಂಡ ಕಾರಿಗನಹಳ್ಳಿ ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಹಾದನೂರು ಮಂಜು, ಉಪಾಧ್ಯಕ್ಷ ರಾಜು, ಜಿಲ್ಲಾ ನೇಕಾರ ಪ್ರಕೋಷ್ಟ ಸಂಚಾಲಕ ಬಿಗ್ ಬಾಸ್ ಮೋಹನ್, ಮುಖಂಡರಾದ ಅಕ್ಕಿಹೆಬ್ಬಾಳು ಮಹೇಶ್ ನಾಯಕ, ವಾಸು ರಾಜೇಗೌಡ, ತಮ್ಮಯ್ಯ, ಪರಮೇಶ್ ಅರವಿಂದ್,ಸುಬ್ಬಣ್ಣ, ಸ್ವಾಮಿನಾಯಕ ಸೇರಿದಂತೆ ಅಹಿಂದ ವರ್ಗಗಳ ನಾಯಕರು ಉಪಸ್ಥಿತರಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ ,
ಕೃಷ್ಣರಾಜಪೇಟೆ, ಮಂಡ್ಯ.