ಅಭಿವೃದ್ಧಿಗೆ ದುಡ್ಡಿಲ್ಲವೆಂಬ ಬಿಜೆಪಿಯ ಮತ್ತೊಂದು ಸುಳ್ಳು: ಬಹಿರಂಗ ಚರ್ಚೆಗೆ ಬರುವಂತೆ ಸವಾಲೆಸೆದ ಸಿಎಂ
ವಿಜಯ ದರ್ಪಣ ನ್ಯೂಸ್
ಅಭಿವೃದ್ಧಿಗೆ ದುಡ್ಡಿಲ್ಲವೆಂಬ ಬಿಜೆಪಿಯ ಮತ್ತೊಂದು ಸುಳ್ಳು: ಬಹಿರಂಗ ಚರ್ಚೆಗೆ ಬರುವಂತೆ ಸವಾಲೆಸೆದ ಸಿಎಂ
ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೆ ಬಜೆಟ್ ನಲ್ಲಿ ತೆಗೆದಿಟ್ಟ ಅನುದಾನದ ಲೆಕ್ಕ ಮುಂದಿಟ್ಟ ಸಿಎಂ
ಈ ಬಾರಿ ಬಜೆಟ್ ನಲ್ಲಿ ಅಭಿವೃದ್ಧಿಗೆ ಮೀಸಲಿಟ್ಟ ಹಣ 1.20 ಲಕ್ಷ ಕೋಟಿ
ಹೊಸಕೋಟೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾರ್ಚ್ 10: ಬಜೆಟ್ ನಲ್ಲಿ ಗ್ಯಾರಂಟಿಗಳ ಜೊತೆಗೂ ಅಭಿವೃದ್ಧಿಗೆ ಅಪಾರ ಅನುದಾನ ಇಡಲಾಗಿದ್ದು, ಈ ಸತ್ಯವನ್ನು ಚರ್ಚಿಸಲು ರಾಜ್ಯದ ಜನರ ಮುಂದೆ ಬಹಿರಂಗ ಚರ್ಚೆ ಮಾಡೋಣ ಎಂದು ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸೆದರು.
ಅವರು ಇಂದು ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸವಲತ್ತುಗಳನ್ನು ನೀಡಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಗ್ಯಾರಂಟಿಗಳನ್ನು ಜಾರಿ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಖಜಾನೆಯಲ್ಲಿ ದುಡ್ಡು ಉಳಿದಿಲ್ಲ ಎಂದು ವಿರೋಧ ಪಕ್ಷಗಳು ನಿರಂತರವಾಗಿ ಸುಳ್ಳು ಸೃಷ್ಟಿಸುತ್ತಿದ್ದು, ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದರೆ ಇಂದು ಈ ಕ್ಷೇತ್ರದಲ್ಲಿ 600 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಅಭಿವೃದ್ಧಿಗೆ ದುಡ್ಡೇ ಇಲ್ಲ ಎಂದು ಹೇಳುತ್ತಿರುವ ಬಿಜೆಪಿಯವರಿಗೆ ಸುಳ್ಳೇ ಮನೆದೇವರು. ನಾವು ಅಧಿಕಾರಕ್ಕೆ ಬಂದು 9 ತಿಂಗಳ ಒಳಗೆ 5 ಗ್ಯಾರಂಟಿಗಳನ್ನು ಜಾರಿ ಮಾಡಿದ್ದು,36 ಸಾವಿರ ಕೋಟಿ ವೆಚ್ಚವಾಗಿದ್ದರೂ, ನಮ್ಮ ಖಜಾನೆ ಖಾಲಿಯಾಗಿಲ್ಲ. ಬಜೆಟ್ ನಲ್ಲಿ ಅಭಿವೃದ್ಧಿಗೆ 1.20 ಲಕ್ಷ ಕೋಟಿ ಪಾಲು ಇಟ್ಟಿದ್ದೇವೆ. 2024-25 ಕ್ಕೆ 3.71 ಲಕ್ಷ ಕೋಟಿ ರೂ.ಗಳ ಬಜೆಟ್ ನ್ನು ಮಂಡಿಸಿದ್ದೇನೆ. ಬೊಮ್ಮಾಯಿ ಯವರ ಕಾಲದ ಬಜೆಟ್ ಗಿಂತ ನಮ್ಮ ಬಜೆಟ್ ನ ಗಾತ್ರ ದೊಡ್ಡದು. ಇದು ರಾಜ್ಯದ ಅಭಿವೃದ್ಧಿಯ ಗುರುತಲ್ಲವೇ ಎಂದು ಸಿಎಂ ಪ್ರಶ್ನಸಿದರು.
ಗ್ಯಾರಂಟಿಗಳ ಮೂಲಕ ಜನರಿಗೆ ಆರ್ಥಿಕ ಬಲ
ರಾಜ್ಯದ ಜನರ ಕೈಗಳಿಗೆ ಮಧ್ಯವರ್ತಿಗಳ ಕಾಟವಿಲ್ಲದೇ ಹಣ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಹೊಸಕೋಟೆ ವಿಧಾನಸಭಾ ಕ್ಷೇತ್ರವೊಂದರಲ್ಲೇ ಗೃಹಲಕ್ಷ್ಮಿ ಯೋಜನೆಯಡಿ 52 ಸಾವಿರ ಮಹಿಳೆಯರಿಗೆ 2000 ರೂ. ಹಣ ನೀಡಲಾಗುತ್ತಿದೆ. ಶಕ್ತಿ ಹಾಗೂ ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳ ಹಣದಿಂದ ಜನರಿಗೆ ಉಳಿತಾಯವಾಗುತ್ತಿದೆ. ಈ ಎಲ್ಲ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ತಲಾ 4 ರಿಂದ 5 ಸಾವಿರ ರೂ. ದೊರೆಯುತ್ತಿದೆ ಎಂದರು.
ಗ್ಯಾರಂಟಿಗಳ ಮೂಲಕ ಈ ವರ್ಷ 36 ಸಾವಿರ ಕೋಟಿ , ಮುಂದಿನ ವರ್ಷ 52 ಸಾವಿರ ಕೋಟಿ ರೂಪಾಯಿ ಜನರ ಜೇಬಿಗೆ ನೇರವಾಗಿ ಹೋಗುತ್ತಿದ್ದು, ಅವರ ಆರ್ಥಿಕ ಶಕ್ತಿ ವೃದ್ಧಿಯಾಗುತ್ತದೆ. ಶಕ್ತಿ ಯೋಜನೆಯನ್ನು ಪ್ರಶಂಶಿಸಿದ ಧರ್ಮಸ್ಥಳ ಕ್ಷೇತ್ರ ಧರ್ಮಾಧಿಕಾರಿ ಶ್ರೀ ಹೆಗಡೆಯವರು ಪತ್ರವನ್ನು ಉಲ್ಲೇಖಿಸಿದರು.
38 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 150 ಕೋಟಿ ರೂ.ಗಳನ್ನು ವೆಚ್ಚ
2008-2013ರವರೆಗೆ ಬಿಜೆಪಿಯವರ ಸರ್ಕಾರವಿತ್ತು. ಆಗ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆರೆಗಳಿಗೆ ನೀರು ತುಂಬುವ ಯೋಜನೆಗಳ ಬಗ್ಗೆ ಗಮನಹರಿಸಲಿಲ್ಲ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾ , ತುಮಕೂರು, ಆನೇಕಲ್ ಕ್ಷೇತ್ರಗಳಲ್ಲಿ ಕೆರೆಗಳು ಬತ್ತಿಹೋಗಿದ್ದು, ಅವುಗಳನ್ನು ತುಂಬಿಸುವ ಕೆಸಿ ವ್ಯಾಲಿ, ಹೆಚ್ ಸಿ ವ್ಯಾಲಿ, ಅನೇಕಲ್ , ಹೊಸಕೇಟೆ, ಕಾಡುಬೀಜನಹಳ್ಳಿ ಯೋಜನೆಗಳ ಮೂಲಕ ಕೆರೆ ತುಂಬಿಸಲಾಯಿತು ಎಂದರು.
ನೆಲಮಂಗಲ, ತುಮಕೂರು ಜಿಲ್ಲೆ ಗಳಿಗೆ ನೀರು ತುಂಬಿಸುವ ಕೆಲಸ ವನ್ನು ಮಾಡಿದೆವು. ಇಂದು ಉದ್ಘಾಟನೆಯಾದ 38 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 150 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಕೆ.ಸಿ ವ್ಯಾಲಿ, ಹೆಚ್.ಎನ್ ವ್ಯಾಲಿ, ಆನೇಕಲ್, ಹೊಸಕೋಟೆ ಯೋಜನೆ ಎಲ್ಲಕ್ಕೂ ಸೇರಿ 2809 ಕೋಟಿ ರೂ.ಗಳನ್ನು ನಮ್ಮ ಸರ್ಕಾರ ವೆಚ್ಚ ಮಾಡಿದೆ. 317 ಕೆರೆಗಳನ್ನು ಮೊದಲ ಹಂತದಲ್ಲಿ ತುಂಬಿಸಲಾಗಿದೆ. ವಿವಿಧ ಹಂತದ ಪ್ರಗತಿಯಲ್ಲಿರುವ ಎರಡನೇ ಹಂತದ ಕಾಮಗಾರಿಗಳಿಗೆ 1699 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. 392 ಕೆರೆಗಳನ್ನು ತುಂಬಿಸಲಾಗುತ್ತಿದೆ. ಹೊಸದಾಗಿ ನಂದಗುಡಿ ಸೂಲಿಬೆಲೆ ಯೋಜನೆಯನ್ನೂ ಕೈಗೆತ್ತಿಕೊಂಡು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆರೆ ತುಂಬಿಸುವ ಕೆಲಸ ಮಾಡುತ್ತೇವೆ. ಇದನ್ನು ಕೋಲಾರ, ಚಿಕ್ಕಬಳ್ಳಾಪುರ ಸುತ್ತಲಿನ ಪ್ರದೇಶಗಳಲ್ಲಿ ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆ ಹೆಚ್ಚಿದ್ದು ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಮಾಡಲಾಗುತ್ತಿದೆ ಎಂದರು. ಅಂತರ್ಜಲ ಹೆಚ್ಚಾಗಿ ಕೊಳವೆಬಾವಿಗಳಿಗೆ ನೀರು ದೊರಕಬೇಕು. 1200 ಅಡಿಗಳ ಆಳದಲ್ಲಿ ಕೊಳವೆಬಾವಿ ಕೊರೆಯಲಾಗುತ್ತಿತ್ತು. ಈಗ 300 ರಿಂದ 500 ಅಡಿಯೊಳಗೆ ಕೊಳಬಾವಿಗಳಿಗೆ ನೀರು ಸಿಗುತ್ತಿದೆ. ಕೆರೆಗಳಿಗೆ ನೀರು ತುಂಬಿಸಿದ್ದರಿಂದ ಇದು ಸಾಧ್ಯವಾಗಿದೆ. ಈ ಭಾಗದಲ್ಲಿ ನದಿಗಳಿಲ್ಲದಿರುವುದರಿಂದ 15 ಟಿ. ಎಂಸಿ ನೀರನ್ನು ಸಂಸ್ಕರಿಸಿ ತುಂಬಿಸಲಾಗುತ್ತದೆ. ಇದರಿಂಡ್ ರೈತರ ಆದಾಯ ಹೆಚ್ಚಳ ಮಾಡಲು ಸಾಧ್ಯವಾಗುತ್ತದೆ ಎಂದರು.
ಸಮಸಮಾಜ ಬಾಯಿಮಾತಿನಿಂದ ಆಗೋಲ್ಲ
ಗ್ಯಾರಂಟಿ ಯೋಜನಗಳಿಂದ ಬಡವರು, ಹಿಂದುಳಿದವರು,ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರು ಆರ್ಥಿಕ ಸಾಮಾಜಿಕ ಸ್ಥಿತಿ ಬದಲಾಗುತ್ತಿದೆ. ಸಮಸಮಾಜ ನಿರ್ಮಾಣ ಮಾಡುತ್ತೇವೆ ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಧ್ಯವಾಗುವುದಿಲ್ಲ. ಸಮಸಮಾಜ ನಿರ್ಮಾಣಕ್ಕೆ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಕಾರ್ಮಿಕರು, ಮಹಿಳೆಯರಿಗೆ ಆರ್ಥಿಕ ಸಾಮಾಜಿಕ ಶಕ್ತಿ ಯನ್ನಿ ತುಂಬುವ ಕೆಲಸ ಮಾಡಬೇಕು. ಆ ಕೆಲಸವನ್ನು ಗ್ಯಾರಂಟಿ ಕಾರ್ಯಕ್ರಮದ ಮೂಲಕ ಎಲ್ಲಾ ಜಾತಿಯ ಧರ್ಮದ ಜನರಿಗೆ ಶಕ್ತಿ ತುಂಬುತ್ತಿದ್ದೇವೆ. ಓದು ನಮ್ಮ ಆದ್ಯತೆಯ ಕಾರ್ಯಕ್ರಮ. ಕಾಂಗ್ರೆಸ್ ಪಕ್ಷ ಹಿಂದೆ ಅಧಿಕಾರ ದಲ್ಲಿದ್ದಾಗಲೂ ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ಶೂ ಭಾಗ್ಯ, ಇಂದಿರಾ ಕ್ಯಾಂಟೀನ್, ಮೈತ್ರಿ, ಮನಸ್ವಿನಿ ಕಾರ್ಯಕ್ರಮಗಳನ್ನು ರೂಪಿ ಸಿದ್ದೆವು. ಈಗಲೂ ನುಡಿದಂತೆ ನಡೆಯುತ್ತಿದ್ದೇವೆ. ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕ ಎಂದು ಕರೆದಿದ್ದೇವೆ. ಬಸವಾದಿ ಶರಣರಿಂದ ಪ್ರೇರೇಪಿತರಾಗಿರುವ ನಾವು ಬಡವರ ಪರವಾಗಿರುವ ಸರ್ಕಾರ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಶರತ್ ಬಚ್ಚೇಗೌಡ ಕ್ರಿಯಾಶೀಲ ಶಾಸಕರು
ಶರತ್ ಬಚ್ಚೇಗೌಡ ಕ್ರಿಯಾಶೀಲ ಶಾಸಕರು. ಅವರ ತಂದೆಯನ್ನೂ ಮೀರಿಸಿ ಬೆಳೆಯುವ ಎಲ್ಲಾ ಲಕ್ಷಣಗಳೂ ಇವೆ. ಜನಪ್ರತಿನಿಧಿಗಳಿಗೆ ಜನಪರ ಕಾಳಜಿ ಮುಖ್ಯ. ಕ್ಷೇತ್ರ ಅಭಿವೃದ್ಧಿ ಯ ಕಾಳಜಿ ಶರತ್ ಬಚ್ಚೇಗೌಡರಲ್ಲಿ ಇದೆ. ಉತ್ತಮ ಸಂಸದೀಯ ಪಟುವಾಗಿಯೂ ಹೊರಹೊಮ್ಮುತ್ತಿದ್ದಾರೆ. ವಿಧಾನಸಭೆಯಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚೆಯಲ್ಲಿ ಭಾಗವಹಿಸುತ್ತಾರೆ ಎಂದರು. ಶರತ್ ಬಚ್ಚೇಗೌಡ ಒಳ್ಳೆಯ ಆಯ್ಕೆ ಎಂದರು. ಅವರು ಇನ್ನೂ ಹಲವಾರು ವರ್ಷಗಳ ಕಾಲ ಅವರು ಜನಪ್ರತಿನಿಧಿಯಾಗಿ ಮುಂದುವರೆಯಲಿ. ಹೊಸಕೋಟೆ ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಯಾಗಲಿ ಎಂದರು.