ಅಂಬಾನಿಯ ಸಾವಿರ ಕೋಟಿಯ ಮದುವೆ ಮತ್ತು ನನ್ನ ಸಾವಿರ ರೂಪಾಯಿಯ ಸಾಲದ ಮದುವೆ…….
ವಿಜಯ ದರ್ಪಣ ನ್ಯೂಸ್
ಅಂಬಾನಿಯ ಸಾವಿರ ಕೋಟಿಯ ಮದುವೆ ಮತ್ತು ನನ್ನ ಸಾವಿರ ರೂಪಾಯಿಯ ಸಾಲದ ಮದುವೆ…….
ಅನಂತ್ ಅಂಬಾನಿ ಎಂಥ ಅದೃಷ್ಟವಂತ ಕಣಯ್ಯ ನೀನು. ಸಾವಿರ ಕೋಟಿಯ ಮದುವೆಯಾಗುತ್ತಿರುವ ವರ ನೀನು. ನಿನ್ನ ಭಾವಿ ಪತ್ನಿಯ ಆಸ್ತಿ ಸುಮಾರು ಸಾವಿರ ಕೋಟಿ ಎಂದು ಕೇಳಲ್ಪಟ್ಟಿದ್ದೇನೆ. ನಿಮ್ಮ ತಂದೆಯವರ ಆಸ್ತಿ ಸುಮಾರು ಎಂಟು ಲಕ್ಷ ಕೋಟಿ ಎಂದು ಅಂದಾಜಿದೆ. ವಿಶ್ವದಲ್ಲೇ ಅತ್ಯಂತ ಶ್ರೀಮಂತ ಬಂಗಲೆಯಲ್ಲಿ ನಿನ್ನ ವಾಸ. ನನಗೆ ದೊರೆತ ಮಾಹಿತಿ ಪ್ರಕಾರ ನಿಮ್ಮ ಮನೆಯ ಈಗಿನ ಮಾರುಕಟ್ಟೆಯ ಮೌಲ್ಯ ಸುಮಾರು 25,000 ಕೋಟಿ ಎಂತಹ lucky fellow ನೀನು…..
ನಿನ್ನ ಮದುವೆಯ ಮೊದಲ ಶಾಸ್ತ್ರಕ್ಕೆ ವಿಶ್ವದ ಬಹುದೊಡ್ಡ ಗಣ್ಯರು, ಭಾರತದ ಅತ್ಯಂತ ಜನಪ್ರಿಯ ವ್ಯಕ್ತಿಗಳು, ಶ್ರೀಮಂತರು ಆಗಮಿಸಿದ್ದರು. ಅವರ ಮನರಂಜನೆಯ ಕುಣಿತಕ್ಕಾಗಿಯೇ 75 ಕೋಟಿ ಸಂಭಾವನೆಯ ಪಾಪ್ ಸಂಗೀತಗಾರರನ್ನು ಕರೆಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬರುವ ಅತಿಥಿಗಳನ್ನು ವೈಭವೋಪೇತ ಮರ್ಸಿ ಡೇಸ್ ಬೆಂಚ್ ಕಾರಿನಲ್ಲಿ ಕರೆದುಕೊಂಡು ಬರಲಾಗುತ್ತದೆಯಂತೆ. ಸುದ್ದಿ ಮಾಧ್ಯಮಗಳ ವರದಿಯ ಪ್ರಕಾರ 2500 ರಕ್ಕೂ ಹೆಚ್ಚು ಭಕ್ಷ ಭೋಜನಗಳನ್ನು ಅಡುಗೆಯಾಗಿ ಮಾಡಿಸಲಾಗುತ್ತದೆ. ಇನ್ನು ಮುಂದೆ ನಡೆಯಲಿರುವ ನಿನ್ನ ಮದುವೆ ಹೇಗಿರುತ್ತದೆಯೋ ಎಂಬ ಕುತೂಹಲ ನನ್ನದು. ನನಗಂತೂ ಅಲ್ಲಿಗೆ ಪ್ರವೇಶವಿಲ್ಲ. ಆ ಯೋಗ್ಯತೆಯೂ ನನಗಿಲ್ಲ. ಅಷ್ಟರಮಟ್ಟಿಗೆ ನತದೃಷ್ಟ ನಾನು………
ನಾನು ಒಬ್ಬ ಮನುಷ್ಯನಾಗಿ ಈ ಭೂಮಿಯ ಮೇಲೆ, ಈ ಭಾರತದಲ್ಲಿ ಹುಟ್ಟುವುದೇ ಆದರೆ ನಿನ್ನಂತೆಯೇ ಹುಟ್ಟಬೇಕಿತ್ತು ಎಂದು ಆಸೆಯಾಗುತ್ತಿದೆ. ಅನಂತ್ ನಾವು ತುಂಬಾ ಹಿಂದುಳಿದ ಗ್ರಾಮೀಣ ಭಾಗದಿಂದ ಬಂದವರು. ನಾನು ವಾಸಿಸುತ್ತಿದ್ದ ಗುಡಿಸಲಿನಲ್ಲಿ ಮಳೆ ಬಂದರೆ ನೀರು ಸುರಿಯುತ್ತಿತ್ತು. ಬೇಸಿಗೆಯಲ್ಲಿ ಮನೆ ಒಳಗೆ ಇರಲು ಸಾಧ್ಯವಾಗದಂತಹ ವಾತಾವರಣ, ಚಳಿಗಾಲದಲ್ಲಿ ಬೀದಿ ನಾಯಿಯಂತೆ ಅದುರುತ್ತಾ ಹೇಗೋ ಸಿಕ್ಕಿದ ಚಾಪೆ ಬಟ್ಟೆಯನ್ನು ಹೊದ್ದುಕೊಂಡು ಮಲಗುತ್ತಿದ್ದೆವು……
ಊಟ ಅಂತೂ ಅನ್ನವೇ ಒಂದು ಭಕ್ಷ್ಯ ಭೋಜನವಾಗಿತ್ತು. ಸಿಹಿಯಾಗಲಿ, ಕೋಳಿ ಮಾಂಸವಾಗಲಿ ಆಗ ಆಸೆ ಕಣ್ಗಳಿಂದ ಸದಾ ಅದನ್ನು ನೆನಪಿಸುತ್ತಲೇ ದಿನ ಕಳೆಯುತ್ತಿದ್ದೆವು. ಹಸಿವು ಪ್ರತಿಕ್ಷಣದ ಭಾವವಾಗಿರುತ್ತಿತ್ತು ಏಕೆಂದರೆ ಹೊಟ್ಟೆ ತುಂಬ ತಿನ್ನುತ್ತಿದ್ದುದೇ ಅಪರೂಪ….
ಇನ್ನು ನಮ್ಮ ಹಳ್ಳಿಯ ಮದುವೆಗಳು. ನಿನ್ನ ಮದುವೆಗೆ ಹೋಲಿಸಿದಾಗ ಅದಕ್ಕೆ ಇದನ್ನು ಯಾವ ರೀತಿ ಹೋಲಿಸಿ ಬರೆಯುವುದು ಎಂದೇ ಅರ್ಥವಾಗುತ್ತಿಲ್ಲ. ಎಲ್ಲೋ ಗುಡಿಸಿಲಿನ ಬಳಿ ಸಣ್ಣದಾಗಿ ತೆಂಗಿನ ಗರಿಯ ಚಪ್ಪರ ಹಾಕುತ್ತಿದ್ದರು. ಕೆಳಗೆ ಆ ಮಣ್ಣಿನ ನೆಲವನ್ನೇ ಸಗಣಿಯಿಂದ ಸಾರಿಸುತ್ತಿದ್ದರು. ರಂಗೋಲಿ ಹಾಕುತ್ತಿದ್ದರು. ನನಗೆ ನೆನಪಿರುವಂತೆ ಕೇವಲ ವಧು-ವರ ಅವರ ತಂದೆ ತಾಯಿ ಮತ್ತು ಕೆಲವರಿಗೆ ಮಾತ್ರ ಸ್ವಲ್ಪ ಹೊಸ ಬಟ್ಟೆ ತೆಗೆದುಕೊಳ್ಳುತ್ತಿದ್ದರು. ಒಡವೆಗಳ ಮಾತಂತೂ ಇಲ್ಲವೇ ಇಲ್ಲ. ಬರುವ ಕೆಲವೇ ಅತಿಥಿಗಳಿಗೆ ಮಲಗುವ ವ್ಯವಸ್ಥೆ ಇರಲಿ ಶೌಚಕ್ಕೂ ವ್ಯವಸ್ಥೆ ಇರುತ್ತಿರಲಿಲ್ಲ. ಹೇಗೋ ಅಲ್ಲಿ ಇಲ್ಲಿ ಅಡ್ಜಸ್ಟ್ ಮಾಡಿಕೊಳ್ಳುತ್ತಿದ್ದರು. ಊಟ ಅಂತೂ ಅನಂತ್ ನೀನು ನಂಬುವುದೇ ಇಲ್ಲ. ಪಾಯಸವೇ ಬಹುದೊಡ್ಡ ಸಿಹಿ. ಅನ್ನ ಸಾರು ಆಲೂಗಡ್ಡೆ ಪಲ್ಯ ಉಪ್ಪಿನಕಾಯಿ ಇಷ್ಟೇ ಮದುವೆಯ ಊಟ. ಅದರಲ್ಲಿ ಕೂಡ ಹೆಚ್ಚು ಕಡಿಮೆ ಬೇರೆಯವರಿಗೆ ಕೊನೆಯಲ್ಲಿ ಸಿಗುತ್ತಲೇ ಇರಲಿಲ್ಲ. ಎಷ್ಟೋ ಜನ ಊಟವಿಲ್ಲದೆ ಬೇಸರ ಮಾಡಿಕೊಂಡು ಬೈದುಕೊಳ್ಳುತ್ತಾ ಸಂಬಂಧವನ್ನೇ ಕಳೆದುಕೊಳ್ಳುವ ಹಂತಕ್ಕೆ ಹೋಗುತ್ತಿತ್ತು. ಈ ಮದುವೆಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸಣ್ಣಪುಟ್ಟ ಜಗಳಗಳು ಇದ್ದೇ ಇರುತ್ತಿತ್ತು. ಹಣಕಾಸಿನ ಕೊರತೆಯಿಂದ ಇನ್ನಷ್ಟು ಜಗಳ ಬೇರೆ ರೂಪದಲ್ಲಿ ನಡೆಯುತ್ತಿತ್ತು. ಮದುವೆಯ ನಂತರವೂ ಸಾಲಗಾರರ ಕಾಟ ತಪ್ಪುತ್ತಿರಲಿಲ್ಲ……
ಎಷ್ಟೋ ಜನ ಮದುವೆ ಮಾಡಿದ ನಂತರ ತಮ್ಮ ಜಮೀನುಗಳನ್ನು ಮಾರಿಕೊಳ್ಳುತ್ತಿದ್ದರು ಅಥವಾ ಸಾಲ ಮಾಡಿ ತೀರಿಸಲಾಗದೆ ಜೀತಾ ಮಾಡುತ್ತಿದ್ದರು. ಇನ್ನೂ ಕೆಲವರು ಆತ್ಮಹತ್ಯೆಯನ್ನೇ ಮಾಡಿಕೊಳ್ಳುತ್ತಿದ್ದರು…..
ಅನಂತ್ ಅಂಬಾನಿ ಸಾವಿರ ಕೋಟಿಯ ಮದುವೆಯ ನಡುವೆ ಸಾವಿರ ರೂಪಾಯಿಯ ಮದುವೆ ನೆನಪಾಗುತ್ತಿದೆ. ಹೌದು ಇದು ನನ್ನ ಅಸೂಯೆಯೂ ಇರಬಹುದು, ದುರಾದೃಷ್ಟವೂ ಇರಬಹುದು, ನಿರಾಶವಾದವು ಇರಬಹುದು, ಅಸಹಾಯಕತೆಯೂ ಇರಬಹುದು, ದುಷ್ಟತನವು ಇರಬಹುದು. ಆದರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೆಯ ಅಂಗವಾಗಿ, ಸಂವಿಧಾನದ ಕಾವಲುಗಾರರಾಗಿ ಕೆಲಸ ಮಾಡಬೇಕಾಗಿದ್ದ ಬಹುತೇಕ ಮಾಧ್ಯಮ ಲೋಕ ಇಂದು ನಿನ್ನ ಮದುವೆಯ ವೈಭವವನ್ನು ಅತ್ಯಂತ ಸಂಭ್ರಮದಿಂದ ಆದರೆ ಅದೇ ಸಮಯದಲ್ಲಿ ಅತ್ಯಂತ ನಿರ್ಲಜ್ಜತೆಯಿಂದ ನಿನ್ನ ಮದುವೆಯ ಶಾಸ್ತ್ರಗಳನ್ನು ಪ್ರಸಾರ ಮಾಡುತ್ತಾ ಇರುವಾಗ ನನ್ನಂತ ಸಾಮಾನ್ಯನಿಗೆ ಅದನ್ನು ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಡವರ, ಶೋಷಿತರ, ಅಸಹಾಯಕರ, ಅನಾಥರ ಧ್ವನಿ ಯಾಗಬೇಕಾಗಿದ್ದ ಮಾಧ್ಯಮ ಲೋಕ ಶ್ರೀಮಂತರ ತುತ್ತೂರಿಯಾದ ಕಾರಣ ಈ ಸಾಮಾಜಿಕ ಜಾಲತಾಣದ ವೇದಿಕೆಯ ಮೂಲಕ ನಾನು ಒಂದಷ್ಟು ಹೊಟ್ಟೆಕಿಚ್ಚಿನ, ಅಸಹಾಯಕತೆಯ, ನೋವಿನ ಧ್ವನಿ ಹೊರಡಿಸಬೇಕಾಯಿತು…..
ಕ್ಷಮೆ ಇರಲಿ ಅನಂತ್ ಅಂಬಾನಿ. ನಿನಗೆ ಅಭಿನಂದನೆಗಳು. ಒಳ್ಳೆಯದಾಗಲಿ. ನನಗೆ ಗೊತ್ತು ಇದೇ ಸಾವಿರ ಕೋಟಿಯನ್ನು ನೀನು ಮನಸ್ಸು ಮಾಡಿದರೆ ಸಾವಿರಾರು ಜನರಿಗೆ ಮನೆ ಕಟ್ಟಿಕೊಡಬಹುದು. ಆ ಮನಸ್ಸು ನಿನ್ನದಾಗಿರುತ್ತದೆ. ಆದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ಈ ಸಮಾಜ ಸೃಷ್ಟಿಯಾಗಿರುವುದೇ ಅಸಮಾನತೆಯ ಇಟ್ಟಿಗೆಗಳ ಆಧಾರದ ಮೇಲೆ. ಅದು ಎಲ್ಲರ ಮನಸ್ಸುಗಳನ್ನು ಹೊಕ್ಕಾಗಿದೆ. ಎಲ್ಲೋ ಕೆಲವರಿಗೆ ಒಂದಷ್ಟು ಮನೆ ಕಟ್ಟಿಕೊಟ್ಟ ಮಾತ್ರಕ್ಕೆ ಅಥವಾ ಹಣ ಸಹಾಯ ಮಾಡಿದ ಮಾತ್ರಕ್ಕೆ ಈ ದೇಶದ ಬಡತನ ಅಷ್ಟು ಸುಲಭವಾಗಿ ನಿವಾರಣೆಯಾಗುವುದಿಲ್ಲ. ಏಕೆಂದರೆ ಇಡೀ ವ್ಯವಸ್ಥೆಯೇ ಭ್ರಷ್ಟವಾಗಿದೆ, ಸಂಸ್ಕಾರ ಹೀನವಾಗಿದೆ. ತಮಗೆ ಎಷ್ಟು ಲಾಭ ಬರುತ್ತದೆ ಎನ್ನುವ ಸ್ವಾರ್ಥದಲ್ಲಿ ಬಹಳಷ್ಟು ಜನರು ಮುಳುಗಿದ್ದಾರೆ……
ಕಿತ್ತುಕೊಳ್ಳುವ ಮನೋಭಾವ ಮೇಲುಗೈ ಪಡೆದು ಹಂಚಿ ತಿನ್ನುವ ಆ ಮಾನವೀಯ ಮೌಲ್ಯ ಇಲ್ಲವಾಗಿದೆ. ಇದಕ್ಕೆ ಅಷ್ಟು ಸುಲಭ ಪರಿಹಾರವು ಇಲ್ಲ. ಆದರೆ ನಿಮ್ಮಂಥವರು ಎಲ್ಲಾ ವ್ಯಾಪಾರಗಳ ನಡುವೆಯೂ ಸಹ ಈ ಸಮಾಜದ ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡಬೇಕಾಗುತ್ತದೆ. ನಿಮ್ಮ ತಂದೆಯವರು ಒಂದು ವಿಡಿಯೋದಲ್ಲಿ ಹೇಳಿರುವಂತೆ 2g 3g 4g 5g ಗಳ ಅಬ್ಬರದಲ್ಲಿ ಮಾತಾಜಿ ಪಿತಾಜಿ ಗುರೂಜಿ ಎಲ್ಲವೂ ಮರೆಯಾಗುತ್ತಿದೆ. ಹೌದು ಅದಕ್ಕೆ ನೀವೊಬ್ಬರೇ ಸಂಪೂರ್ಣ ಹೊಣೆಗಾರರೇನು ಅಲ್ಲ. ಈ ದೇಶದ ಬಹಳಷ್ಟು ಯುವಕರಿಗೆ ಉದ್ಯೋಗವನ್ನು ನೀಡಿದ್ದೀರಿ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ನಿಮ್ಮದು ಪಾಲಿದೆ. ಆದರೆ ಅದು ಮಾತ್ರ ಕೊಡುಗೆಯಾದರೆ ಸಾಲದು. ಇಲ್ಲಿನ ಅಸಮಾನತೆಯನ್ನು ಮುಖ್ಯವಾಗಿ ಮೂಲಭೂತ ಸೌಕರ್ಯಗಳನ್ನು ಜೊತೆಗೆ ಹಣಕಾಸಿನ ಅಂತರವನ್ನ ಕಡಿಮೆ ಮಾಡಬೇಕಾಗಿದೆ…..
ಇನ್ನು 28 ಹರೆಯದ ಯುವಕ ನೀನು. ಈ ದೇಶದ ಭವಿಷ್ಯದ ದೃಷ್ಟಿಯಿಂದ ಕೇವಲ ಶ್ರೀಮಂತಿಕೆ ಮಾತ್ರವಲ್ಲ ಈ ನೆಲದ ಮೌಲ್ಯಗಳನ್ನು, ಸಮಾನತೆಯನ್ನು, ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಕೆಲಸವನ್ನು ನೀನು, ನಿನ್ನ ಕುಟುಂಬ ಮತ್ತು ಆ ರೀತಿಯ ಹಣವನ್ನು ಹೊಂದಿರುವ ಎಲ್ಲ ಕಾರ್ಪೊರೇಟ್ ಸಂಸ್ಕೃತಿಯ ಜನ ಅರ್ಥ ಮಾಡಿಕೊಳ್ಳಬೇಕು. ಏನೋ ನಿನ್ನ ಮದುವೆಯ ಸಂಭ್ರಮದ ದೃಶ್ಯಗಳನ್ನು ಟಿವಿ ಮಾಧ್ಯಮದಲ್ಲಿ ನೋಡಿದಾಗ ಕೆಲವು ವಿಷಯ ಹಂಚಿಕೊಳ್ಳಬೇಕು ಅನಿಸಿತು. ನಮ್ಮಂತ ಸಾಮಾನ್ಯರ ಮನಸ್ಥಿತಿಯೇ ಇದು, ಏನು ಮಾಡುವುದು. ಇರಲಿ ಮತ್ತೊಮ್ಮೆ ಅಭಿನಂದನೆಗಳು…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068…….