ಕೋಡಿಮಠದ ಭವಿಷ್ಯವಾಣಿ…..
ವಿಜಯ ದರ್ಪಣ ನ್ಯೂಸ್
ಕೋಡಿಮಠದ ಭವಿಷ್ಯವಾಣಿ…..
ಕೋಡಿಹಳ್ಳಿ ಮಠದ ಸ್ವಾಮಿಗಳ ಭವಿಷ್ಯವಾಣಿ ರಾಜ್ಯದ ಮಾಧ್ಯಮಗಳಲ್ಲಿ ಹಲವಾರು ವರ್ಷಗಳಿಂದ ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಕಳೆದ 40/50 ವರ್ಷಗಳಿಂದ ಅವರ ಭವಿಷ್ಯ ವಾಣಿ ಗಮನಿಸಿದಾಗ ಒಂದಷ್ಟು ನಿಜವಾಗಿರುವುದು ಸಹ ವಾಸ್ತವ. ಅದರಲ್ಲೂ ಪ್ರಾಕೃತಿಕ, ರಾಜಕೀಯ ಮತ್ತು ಕೆಲವು ದುರಂತ ಘಟನೆಗಳ ಬಗ್ಗೆ ಅವರು ನುಡಿದ ಭವಿಷ್ಯಗಳು ಸಾಮಾನ್ಯವಾಗಿ ನಿಜವಾಗುತ್ತದೆ…..
ಹಾಗಾದರೆ ಸ್ವಾಮೀಜಿಗಳ ಭವಿಷ್ಯ ನಿಜವೇ, ಅವರಿಗೆ ಆ ಶಕ್ತಿ ಇದೆಯೇ ಅಥವಾ ಅದೊಂದು ಅನುಭವದ ಮಾತುಗಳೇ, ಆಳ ಅಧ್ಯಯನದ ಚಿಂತನೆಯೇ, ದೂರ ದೃಷ್ಟಿಯೇ ಅಥವಾ ಅವರೊಳಗಿನ, ಪ್ರತಿಭೆಯೇ, ಅವರು ವಿಶೇಷ ಸಾಮರ್ಥ್ಯವೇ,
ವೈಚಾರಿಕತೆಯೇ, ವೈಜ್ಞಾನಿಕವೇ, ಮೂಡನಂಬಿಕೆಯೇ ಹೀಗೆ ಪ್ರಶ್ನೆಗಳು ಸಾಮಾನ್ಯ ಜನರಲ್ಲಿ ಉದ್ಭವವಾಗುತ್ತದೆ…..
ಪ್ರಾಕೃತಿಕವಾಗಿ, ಸಹಜವಾಗಿ ಹೇಳುವುದಾದರೆ ಭವಿಷ್ಯವನ್ನು ಊಹಿಸಿ ಖಚಿತವಾಗಿ ಹೇಳುವುದು ಯಾರಿಂದಲೂ ಸಾಧ್ಯವಿಲ್ಲ. ವಿಜ್ಞಾನವು ಕೂಡ ಆ ವಿಷಯದಲ್ಲಿ ಸಂಪೂರ್ಣ ಸತ್ಯ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ ಭವಿಷ್ಯದ ಘಟನೆಗಳು ಎಲ್ಲಾ ಸಾಧ್ಯತೆಗಳ, ಅವಕಾಶಗಳ ಒಂದು ನಿಗೂಢ ಮಾತ್ರ. ಆಗಬಹುದು, ಆಗದೇ ಇರಬಹುದು, ಆಗುತ್ತಲೂ ಇರಬಹುದು……
ಕೋಡಿ ಮಠದ ಸ್ವಾಮೀಜಿಗಳು ಸಾಮಾನ್ಯವಾಗಿ ಮಳೆ ಬೆಳೆ, ಅತೀವೃಷ್ಟಿ ಅನಾವೃಷ್ಟಿ, ಭೂಕಂಪ, ಅಗ್ನಿಯ ಅನಾಹುತಗಳು, ಭಯೋತ್ಪಾದಕ ಕೃತ್ಯಗಳು, ಅಪಘಾತಗಳು, ಸಾವುಗಳು ಈ ಬಗ್ಗೆ ಹೇಳುತ್ತಾರೆ, ಜೊತೆಗೆ ರಾಜಕೀಯದಲ್ಲಿ ಯಾವ ಪಕ್ಷ ಗೆಲ್ಲಬಹುದು, ಯಾವ ಪಕ್ಷ ಸೋಲಬಹುದು ಅಥವಾ ಸಮ್ಮಿಶ್ರ ಸರ್ಕಾರವೇ ಎಂಬುದನ್ನು ಆಗಾಗ ಹೇಳುತ್ತಿರುತ್ತಾರೆ. ಅನೇಕ ಪ್ರಸಿದ್ಧ ವ್ಯಕ್ತಿಗಳ ಸಾವುಗಳ ಬಗ್ಗೆ ಕೂಡ ಅವರು ಊಹಿಸಿ ಹೇಳುತ್ತಿರುತ್ತಾರೆ. ಅದನ್ನು ಅವರದೇ ಭಾಷೆಯಲ್ಲಿ ಸಾಂಕೇತಿಕವಾಗಿ ಹೇಳುತ್ತಾರೆ. ಕೆಲವು ಮಾಧ್ಯಮಗಳು ಅವರಿಗೆ ತೋಚಿದಂತೆ ವಿಮರ್ಶಿಸುತ್ತಾರೆ…..
ಅವರು ಹೇಳುವುದೆಲ್ಲ ಸುಳ್ಳು ಎಂದರೆ ಅದು ತಪ್ಪಾಗುತ್ತದೆ ಅಥವಾ ಅವರು ಹೇಳುವುದೆಲ್ಲ ನಿಜ, ಖಚಿತವಾಗಿರುತ್ತದೆ ಎಂದರೆ ಅದೂ ಸಹ ತಪ್ಪಾಗುತ್ತದೆ. ಹಾಗಾದರೆ ವಾಸ್ತವ ಏನು….
ಸಾಮಾನ್ಯವಾಗಿ ಯಾವುದೇ ವಿಷಯದಲ್ಲಿ ಪರಿಣಿತಿ ಹೊಂದಿದ ತಜ್ಞರು ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಅದು ಪಡೆಯುವ ತಿರುವುಗಳು, ಪರಿಣಾಮಗಳು ಫಲಿತಾಂಶಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು ನೀಡುತ್ತಾರೆ. ವಿಜ್ಞಾನವೇ ಇರಲಿ, ಕೃಷಿ ಕ್ಷೇತ್ರವೇ ಇರಲಿ, ಶಿಕ್ಷಣವೇ ಇರಲಿ, ರಾಜಕೀಯವೇ ಇರಲಿ ಮುಂದೆ ಭವಿಷ್ಯದಲ್ಲಿ ಈ ರೀತಿಯ ಘಟನೆಗಳಾಗುವ ಸಾಧ್ಯತೆ ಇರುತ್ತದೆ ಎಂದು ಹೇಳುತ್ತಾರೆ. ಅದು ಕೆಲವೊಮ್ಮೆ ಘಟಿಸಬಹುದು, ಕೆಲವೊಮ್ಮೆ ಆಗದೇ ಇರಬಹುದು. ಆದರೆ ಈ ಕ್ಷಣದಲ್ಲಿ ಅದು ಒಂದು ಪ್ರತಿಕ್ರಿಯೆ ರೂಪದಲ್ಲಿರುತ್ತದೆ…..
ಕೋಡಿಮಠದ ಸ್ವಾಮಿಗಳು ಯಾರೋ ಮಹಾತ್ಮರು ಸಾಯುತ್ತಾರೆ ಎನ್ನುವುದಾಗಲಿ, ಎಲ್ಲೋ ಒಂದು ಕಡೆ ಭಯೋತ್ಪಾದಕ ದಾಳಿಯಾಗುತ್ತದೆ ಎಂದು ಹೇಳುವುದಾಗಲಿ, ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ ಎನ್ನುವುದಾಗಲಿ ಎಲ್ಲೂ ಖಚಿತವಾಗಿ ಇದೇ ರೀತಿ ಎಂದು ಹೇಳುವುದಿಲ್ಲ, ಹೇಳಲು ಸಾಧ್ಯವೂ ಇಲ್ಲ. ಆದರೆ ಅವರು ಊಹಿಸುವ ರೀತಿ ಖಂಡಿತವಾಗಿಯೂ ಆ ವಿಷಯದಲ್ಲಿ ಪರಿಣಿತಿ ಹೊಂದಿರುವ ಎಲ್ಲರೂ ಊಹಿಸಬಹುದಾದ ರೀತಿಯಲ್ಲಿಯೇ ಇರುತ್ತದೆ. ಅನುಭವದ ಆಧಾರದ ಮೇಲೆ ಸ್ವಾಮೀಜಿಗಳಿಗೆ ಬಹುಶಃ 80 ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿರುವುದರಿಂದ ಈ ವಿಷಯದಲ್ಲಿ ಪರಿಣಿತಿ ಹೊಂದಿದ್ದಾರೆ. ಸಮಕಾಲೀನ ಆಗುಹೋಗುಗಳ ಬಗ್ಗೆ, ಐತಿಹಾಸಿಕ ಘಟನೆಗಳ ಬಗ್ಗೆ ಮಾಹಿತಿ ಇದೆ. ಅದರೊಂದಿಗೆ ಅವರಿಗೆ ಭವಿಷ್ಯ ಹೇಳುವ ಕಲೆಯೂ ಇದೆ. ಈ ಎಲ್ಲಾದರ ಮಿಶ್ರಣವಾಗಿ ಅವರು ಹೇಳುವ ಭವಿಷ್ಯ ವಾಣಿ ಒಂದಷ್ಟು ಸತ್ಯಗಳ,ನ್ನು ನಿಜಗಳನ್ನು ಒಳಗೊಂಡಿರಬಹುದು….
ಉದಾಹರಣೆಗೆ ಒಬ್ಬ ಕ್ರೀಡಾಪಟು ಅತ್ಯಂತ ವೇಗವಾಗಿ ಓಡುವುದಾಗಲಿ, ಒಬ್ಬ ರಾಜಕಾರಣಿ ನಿರಂತರವಾಗಿ ಚುನಾವಣೆಯಲ್ಲಿ ಗೆಲ್ಲುವುದಾಗಲಿ, ಒಬ್ಬ ಹಾಡುಗಾರ ನಿರಂತರವಾಗಿ ಹಾಡುವುದಾಗಲಿ ಅದೆಲ್ಲವೂ ಕೆಲವೊಮ್ಮೆ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತದೆ. ಹಾಗೆಂದು ಅದೇ ಅಂತಿಮವೇನು ಅಲ್ಲ. ಹಾಗೆಯೇ ಸ್ವಾಮಿಗಳಿಗೂ ಕೂಡ ಅವರು ಹೇಳುವ ವಿಷಯದಲ್ಲಿ ಒಂದಷ್ಟು ಪರಿಣಿತಿ ಇದೆ ಹಾಗೆಂದು ಅದು ಖಚಿತ, ಅವರಲ್ಲಿ ದೈವೀಶಕ್ತಿ ಇದೆ ಎನ್ನುವ ಭ್ರಮೆಗೆ ಒಳಗಾಗಬಾರದು. ಅನೇಕ ಇತಿಹಾಸಕಾರರು ಅನೇಕ, ರಾಜಕೀಯ ವಿಶ್ಲೇಷಕರು, ಅನೇಕ ಆರ್ಥಿಕ ತಜ್ಞರು ಮುಂದಿನ 10 20 30 ವರ್ಷಗಳ ಭವಿಷ್ಯವನ್ನು ಊಹಿಸಿ ಹೇಳುತ್ತಾರೆ. ಅದು ಎಷ್ಟೋ ಬಾರಿ ನಿಜವು ಆಗುತ್ತದೆ. ಕೆಲವೊಮ್ಮೆ ತಪ್ಪು ಆಗುತ್ತದೆ. ಅದು ವಿಷಯದಲ್ಲಿರುವ ಪರಿಣಿತಿಯೇ ಹೊರತು ದೈವ ಅಥವಾ ಅತಿಮಾನುಷ ಶಕ್ತಿಯಲ್ಲ ಇದನ್ನು ಎಲ್ಲರೂ ಗಮನಿಸಬೇಕು……
ಇತ್ತೀಚಿನ ವರ್ಷಗಳಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ, ಪ್ರಾಕೃತಿಕವಾಗಿ ಸಹ ಬಹುದೊಡ್ಡ ಏಳು ಬೀಳುಗಳು ಉಂಟಾಗುತ್ತಿದೆ. ಸಾವುಗಳು ಕೂಡ ಅನಿರೀಕ್ಷಿತವಾಗಿ ನಮಗೆ ಆಘಾತವನ್ನುಂಟು ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಸ್ವಾಮೀಜಿಗಳು ಹೇಳುವುದು ಕೆಲವೊಮ್ಮೆ ನಮಗೂ ಆಶ್ಚರ್ಯವಾಗುತ್ತದೆ. ಆದರೆ ಆಳಕ್ಕೆ ಇಳಿದಾಗ ಅದೆಲ್ಲವೂ ಇತಿಹಾಸದ ಭಾಗಗಳೇ ಆಗಿರುತ್ತವೆ….
ಈ ಭವಿಷ್ಯ ಹೇಳುವ ಕಲೆ ಕೇವಲ ಕೋಡಿಮಠದ ಸ್ವಾಮಿಗಳು ಮಾತ್ರವಲ್ಲ. ಇನ್ನು ಅನೇಕರು ಈ ರೀತಿಯ ಭವಿಷ್ಯಗಳನ್ನ ಹೇಳುತ್ತಿರುತ್ತಾರೆ. ಎಂದಿನಂತೆ ಅವರು ಹೇಳುವ ಘಟನೆಗಳು ಖಚಿತವಲ್ಲದ ಆದರೆ ಸಾಧ್ಯಾಸಾಧ್ಯತೆಗಳ ಒಂದು ಮುನ್ನೋಟ ಮಾತ್ರವಾಗಿರುತ್ತದೆ. ಈ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಸದ್ಯಕ್ಕೆ ಚರ್ಚೆ, ವಾದಗಳಿಗೆ ಅವಕಾಶಗಳು ಯಥೇಚ್ಛವಾಗಿದೆ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 984013068……..