ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಬೇಕು: ಸಚಿವ ಚೆಲುವರಾಯಸ್ವಾಮಿ
ವಿಜಯ ದರ್ಪಣ ನ್ಯೂಸ್
ಮಂಡ್ಯ ಜಿಲ್ಲೆ ನಾಗಮಂಗಲ. ಜನವರಿ: 21 ಸಾರ್ವಜನಿಕರು ಅವಶ್ಯಕತೆಗನುಗುಣವಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಅನುಷ್ಠಾನ ತರುತ್ತಿದ್ದು, ಇಂತಹ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಚೆಲುವರಾಯಸ್ವಾಮಿಯವರು ಕರೆ ನೀಡಿದರು.
ಅವರು ಇಂದು ನಾಗಮಂಗಲ ತಾಲೂಕು ಕೇಂದ್ರದ ಆಯುಷ್ ಮಂತ್ರಾಲಯದ ಸಹಯೋಗದಲ್ಲಿ ನಾಗಮಂಗಲದ ಶ್ರೀರಾಪಟ್ಟಣದಲ್ಲಿ ಸ್ಥಾಪಿಸಲಾಗಿರುವ ಕೇಂದ್ರಿಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆಯನ್ನು ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯದ ಸಚಿವ ಡಾ. ಮುಂಜಪರ ಮಹೇಂದ್ರಬಾಯ್ ಕಲುಬಾಯ್ ಹಾಗೂ ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಉದ್ಘಾಟಿಸಿದರು.
ಸರ್ಕಾರಗಳು ಸಾರ್ವಜನಿಕರಿಗೆ ಅವಶ್ಯಕತೆ ಇರುವ ಯೋಜನೆಗಳನ್ನೇ ಜಾರಿಗೆ ತರುತ್ತವೆ. ಆ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ನಾನು ಆರೋಗ್ಯ ಸಚಿವನಾಗಿದ್ದಾಗ ಈ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿತ್ತು, ಇದೀಗ ನಾನು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತೋಷದಾಯಕ ವಿಷಯವಾಗಿದೆ ಎಂದರು.
ಇಂದಿನ ನಮ್ಮ ಆಹಾರ ಪದ್ದತಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದಕ್ಕೆ ಗಿಡಮೂಲಿಕೆಯ ಪ್ರಕೃತಿ ಚಿಕಿತ್ಸೆ ಪಡೆದುಕೊಂಡರೆ ಆರೋಗ್ಯ ವೃದ್ದಿಯಾಗುತ್ತದೆ ಎಂದರು.
ದಕ್ಷಿಣ ಭಾರತದಲ್ಲೇ ಈ ಯೋಜನೆ ನಾಗಮಂಗಲದಲ್ಲಿ ಮೊದಲು ಪ್ರಾರಂಭ ಆಗುತ್ತಿರುವುದು ಹೆಮ್ಮೆ ತಂದಿದೆ. ಕೇಂದ್ರದ ಈ ಯೋಜನೆ ನಮ್ಮ ಭಾಗದ ಜನರು ಉಪಯೋಗಿಸಿಕೊಳ್ಳಬೇಕು. ಇಂದಿನ ಮಾನವನ ದೇಹ ಮೊದಲಿನಂತಿಲ್ಲ. ಹಾಗಾಗಿ ಇಂತಹ ಪ್ರಕೃತಿ ಚಿಕಿತ್ಸೆಗೆ ಹೋಗುವುದು ಅನಿವಾರ್ಯವಾಗಿದೆ. ಸಾವಿರಾರು ವರ್ಷದಿಂದ ಗಿಡ ಮೂಲಿಕೆಗಳಿಂದಲೇ ನಮ್ಮ ಪೂರ್ವಜರು ಆರೋಗ್ಯ ವೃದ್ಧಿಸಿಕೊಳ್ಳುತ್ತಿದ್ದರು. ಪೂರ್ವಜರ ಪದ್ಧತಿಯನ್ನೇ ಅಳವಡಿಸಿಕೊಳ್ಳುವುದು ಇಂದಿನ ಅನಿವಾರ್ಯವಾಗಿದೆ ಎಂದರು.
ಯೋಗ ಕೇಂದ್ರವು ಅತ್ಯಂತ ಸುಸಜ್ಜಿತವಾಗಿದ್ದು, 200 ಹಾಸಿಗೆ ಸಾಮ್ಮರ್ಥ ಹೊಂದಿರುವ ಕಟ್ಟಡವಾಗಿದೆ. ಸಾಮಾನ್ಯ ಕೊಠಡಿ, ಡಿಲಕ್ಸ್ ವಾರ್ಡ್, ಸ್ಪೆಷಲ್ ವಾರ್ಡ್, ಪ್ರತ್ಯೇಕ ಪುರುಷ ಮತ್ತು ಮಹಿಳಾ ಚಿಕಿತ್ಸಾ ಕೊಠಡಿಗಳೊಂದಿಗೆ ಬೃಹತ್ ಯೋಗ ಸಭಾಂಗಣ, ಆಹಾರ ಚಿಕಿತ್ಸಾ ಕೇಂದ್ರ, ಪ್ರಯೋಗಾಲಯ ಹೊಂದಿದೆ. ಮುಂದಿನ ದಿನಗಳಲ್ಲಿ ಇಲ್ಲಿಯೇ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಸ್ಥಾಪಿಸಲು ಚಿಂತಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ,ಕೇಂದ್ರ ಆಯುಷ್ ಇಲಾಖೆಯ ನಿರ್ದೇಶಕ ಡಾ.ರಾಘವೇಂದ್ರರಾವ್, ಉಪ ನಿರ್ದೇಶಕ ಸತ್ಯಜಿತ್ ಪೌಲ್, ಸಲಹೆಗಾರರಾದ ಡಾ.ಎಂ.ಎ ಖಾಸ್ಮಿ, ರಾಜ್ಯ ಆಯುಷ್ ಇಲಾಖೆಯ ಆಯುಕ್ತ ಶ್ರೀನಿವಾಸುಲು, ಎಸ್.ವಿ.ವೈ.ಎ.ಎಸ್.ಎ ವಿಶ್ವವಿದ್ಯಾಲಯದ ಕುಲಪತಿ ಡಾ.ಹೆಚ್ ಆರ್ ನಾಗೇಂದ್ರ, ಜಿಲ್ಲಾಧಿಕಾರಿ ಡಾ.ಕುಮಾರ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.