ಮಂತ್ರಾಕ್ಷತೆ ಎಂಬುದು ಲೋಕಾಸಭಾ ಚುನಾವಣೆಯ ತಂತ್ರಾಕ್ಷತೆ
ವಿಜಯ ದರ್ಪಣ ನ್ಯೂಸ್
ಸುಮಾರು ಇಪ್ಪತ್ತೊಂದು ಸಾವಿರ ಮೂಟೆ ಅಕ್ಕಿಯಲ್ಲಿ ಇನ್ನೂರೈವತ್ತು ಮೂಟೆ ಅರಿಶಿಣವನ್ನು ಬೆರೆಸಿದ ಮಂತ್ರಾಕ್ಷತೆ ಎಂಬುದು ರಾಜಕೀಯ ಪಕ್ಷವೊಂದರ ಚುನಾವಣಾ ಗಿಮಿಕ್ ಆಗಿದ್ದು ಅದು ಜನಮಾನಸದಲ್ಲಿ ಸಾರಾಸಗಟಾಗಿ ಬಯಲಾಗುತ್ತಿದೆ.
ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಲೋಕಸಭಾ ಚುನಾವಣೆಯನ್ನು ಹಿಂದೂಗಳ ಹಿಂದೂ ಸಂಪ್ರದಾಯದಲ್ಲಿ ಬದುಕಿರುವವರ ಮನ ಸೆಳೆಯಲು ರಾಜಕೀಯ ಪಕ್ಷವೊಂದು ಹುನ್ನಾರ ನಡೆಸಿದೆ.
ಅಯೋಧ್ಯೆಯಲ್ಲಿ ಇನ್ನೂ ರಾಮನ ದೇವಸ್ಥಾನವಿಲ್ಲ. ರಾಮನ ದೇವಸ್ಥಾನದಲ್ಲಿ ಮಂತ್ರಾಕ್ಷತೆ ಕೊಡುವ ಪದ್ಧತಿ ಇಲ್ಲಿಯವರೆಗೂ ಇರಲಿಲ್ಲ. ದೇವಸ್ಥಾನದ ಗರ್ಭಗುಡಿಯಲ್ಲಿ ತಯಾರಾಗಬೇಕಾದ ಮಂತ್ರಾಕ್ಷತೆ ಮದುವೆ ಮನೆಯಲ್ಲಿ, ಗಂಡುಹೆಣ್ಣಿಗಿಂತ ಹೆಚ್ಚಾಗಿ ಮುಂದೆ ಕೂತವರ ನಿಂತವರ ಮೇಲೆ ಎಸೆಯುವ ಅಕ್ಷತೆಗಿಂತ ಕೀಳಾಗಿ ರಾಜಕೀಯ ನಾಯಕರ ಮನೆಗಳಲ್ಲಿ ಕಾರ್ಶೆಡ್ಗಳಲ್ಲಿ,
ಅಕ್ಕಿ ಗೋದಾಮುಗಳಲ್ಲಿ ತಯಾರಾಗಿ ದೇಶದಾದ್ಯಂತ ನೂರಾರು ಕೋಟಿ ಮನೆಗಳಿಗೆ ತಲುಪುತ್ತಿದೆ. ಮುಂದೆ ಚುನಾವಣೆ ನಡೆಯುವಾಗ ರಾಜಕೀಯ ಪಕ್ಷವು ಹೇಳುತ್ತದೆ. ನೂರಾರು ಕೋಟಿ ಹಿಂದೂಗಳ ಆರಾಧ್ಯ ದೈವ ಶ್ರೀರಾಮನನ್ನು ಅವನ ಜನ್ಮಸ್ಥಳದಲ್ಲಿ ಮಂದಿರ ಕಟ್ಟಿ ಪ್ರತಿಷ್ಠಾಪಿಸಿದ ಪಕ್ಷ ನಮ್ಮದು. ನಾವು ನುಡಿದಂತೆ ನಡೆದಿದ್ದೇವೆ. ನಮಗೆ ಆಶೀರ್ವಾದ ಮಾಡಿ, ಮುಂದೆ ಮಥುರಾದಲ್ಲೂ ಕೃಷ್ಣನನ್ನು ಸ್ಥಾಪಿಸಲು ನಮ್ಮನ್ನೇ ಆಶೀರ್ವದಿಸಿ ಎಂದು ಕೇಳಬಹುದು.
ಮತದಾರ ಮುಗ್ಧನಾಗಿದ್ದರೆ, ಹೂವಿನ ತೋಟವನ್ನೇ ಅವನ ಕಿವಿಗೆ ಸಿಕ್ಕಿಸಿ, ಕಿವಿಗೆ ಲೋಲಾಕ್ ಮಾಡಿಸುತ್ತಾರೆ. ರಾಜಕೀಯ ಎಂಬುದು ನಿಂತ ನೀರಲ್ಲ. ರಾಜಕೀಯ ವ್ಯಕ್ತಿಗಳು ನೀರಿನಲ್ಲಿ ನಿಲ್ಲುವುದಿಲ್ಲ. ಜನಸಾಮಾನ್ಯರನ್ನು ನೀರಿನ ಬಾವಿಗೆ ತಳ್ಳಿ ಆಳ ನೋಡುತ್ತಾರೆ. ಇಲ್ಲಿ ಶೈವ, ವೈಷ್ಣವ ಎಂದು ಎರಡು ಪಂಗಡಗಳಾಗಿವೆ. ಎರಡೂ ಹಿಂದೂ ಸಂಪ್ರದಾಯದ ಕೇಂದ್ರಬಿಂದುಗಳೇ. ಅಯೋಧ್ಯಯಲ್ಲಿ ಪ್ರಾರಂಭವಾಗುತ್ತಿರುವ ಶ್ರೀರಾಮನ ಮಂದಿರದ ವಿದ್ಯುಕ್ತ ಪೂಜೆಗೆ ಪ್ರತಿಷ್ಠಿತ ನಾಲ್ಕು ಶಂಕರಾಚಾರ್ಯರು ಹೋಗುತ್ತಿಲ್ಲ. ಕಾರಣ ಅಪೂರ್ಣ ಮಂದಿರದ ಉದ್ಘಾಟನೆ, ಪೂಜೆ ತಪ್ಪು ಎನ್ನುತ್ತಿದ್ದರಾದರೂ ಅಲ್ಲಿ ರಾಜಕೀಯ ಪಕ್ಷವೊಂದರ ಚಿತಾವಣೆ ಕಾಣಸಿಗುತ್ತದೆ. ಮಂದಿರ ಕಟ್ಟಿ ಹಿಂದೂಗಳ ಮತದ ಮೇಲೆ ಕಣ್ಣಿಟ್ಟಿರುವ ಪಕ್ಷವು ಶೃಂಗೇರಿ ಮಠಾಧೀಶರ ಜೊತೆ ಇತರೆ ವೀರಶೈವ ಮಠಾಧೀಶರು ಅಂದರೆ ನಾಲ್ವರು ಶಂಕರಾಚಾರ್ಯರು ಉದ್ಘಾಟನೆಯನ್ನು ಬಹಿಷ್ಕರಿಸುತ್ತಿರುವುದರಿಂದ ಬೆದರಿ ಜನವರಿ 22 ರಂದು ಬಾಲರಾಮನ ಪ್ರತಿಷ್ಠಾಪನೆಯಾಗಲಿದೆ. ಮಂದಿರದ ಕೆಲಸ ಪರಿಪೂರ್ಣವಾದ ನಂತರ ಶ್ರೀರಾಮ, ಸೀತಾ, ಲಕ್ಷ್ಮಣ, ಆಂಜನೇಯರ ಪ್ರಾಣ ಪ್ರತಿಷ್ಠಾಪನೆಯಾಗಲಿದೆಯೆಂದು ಹೇಳಿದರೂ ಹೇಳಬಹುದು.
ಸದೃಢ ದೇಶ, ದೇಶಕ್ಕೆ ಮೂಲಭೂತ ಸೌಕರ್ಯ, ಹಿಂದೂಸ್ಥಾನವನ್ನು ಕಾಯುವ ರಾಜಕೀಯ ಪಕ್ಷಕ್ಕೆ ಮತದಾರ ಮಣೆ ಹಾಕಲಿದ್ದಾನೆ.
-ಬಿ.ಆರ್. ನರಸಿಂಹಮೂರ್ತಿ. 9448174932