ಸಿ.ಎಸ್.ಆರ್ ಅನುದಾನದಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿ: ಸಚಿವ. ಕೆ.ಹೆಚ್ ಮುನಿಯಪ್ಪ.
ವಿಜಯ ದರ್ಪಣ ನ್ಯೂಸ್
ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜನವರಿ 12 :- ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಪ್ರತಿ ಗ್ರಾಮಪಂಚಾಯಿತಿಯ ಕೇಂದ್ರ ಸ್ಥಾನದಲ್ಲಿರುವ ಸರ್ಕಾರಿ ಶಾಲೆಯನ್ನು ಸಿ.ಎಸ್.ಅರ್ ಅನುದಾನದಡಿ ಉತ್ತಮ ದರ್ಜೆಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್, ದೇವನಹಳ್ಳಿ ತಾಲ್ಲೂಕು ಪಂಚಾಯತ್, ಬಿದಲೂರು ಗ್ರಾಮ ಪಂಚಾಯಿತಿಯ ಆವರಣದಲ್ಲಿ ಸಿ.ಎಸ್.ಆರ್ ಅನುದಾನದಡಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಶಂಕುಸ್ಥಾಪನೆ, ಸಮಗ್ರ ಅಭಿವೃದ್ಧಿ ಯೋಜನೆಯಡಿ ವಿವಿಧ ಕಟ್ಟಡ ಅಭಿವೃದ್ಧಿ ಕಾಮಗಾರಿಗಳನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಕಟ್ಟಕಡೆಯ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಈ ನಿಟ್ಟಿನಲ್ಲಿ ವಿವಿಧ ಖಾಸಗಿ ಕಂಪನಿಗಳ ಸಹಯೋಗದಲ್ಲಿ ಸಿ.ಎಸ್.ಆರ್ (ಸಾಮಾಜಿಕ ಹೊಣೆಗಾರಿಕೆ ನಿಧಿ) ಅನುಧಾನದಲ್ಲಿ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳನ್ನು ಉನ್ನತ ಮಟ್ಟದ ಕೊಠಡಿ, ಶಾಲಾ ಆಟದ ಮೈದಾನ, ಗ್ರಂಥಾಲಯ, ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ಕೆರೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆರೆಗಳಲ್ಲಿ ಉಳೆತ್ತುವ ಕಾರ್ಯಕ್ರಮ ಹಾಗೂ ಶುದ್ಧೀಕರಣವನ್ನು ಶೀಘ್ರದಲ್ಲೇ ಪ್ರಾರಂಭ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಎಲ್ಲಾ ವರ್ಗದ ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು. ಜಿಲ್ಲೆಯ ಕೆಲವು ಭಾಗಗಳಲ್ಲಿ ಈಗಾಗಲೇ ಸರ್ಕಾರಿ ಜಮೀನು ಗುರ್ತಿಸಲಾಗಿದ್ದು ನಿವೇಶನಗಳನ್ನು ಮಾಡಲಾಗುತ್ತಿದೆ. ಪ್ರತಿ ಗ್ರಾಮದಲ್ಲಿರುವ ಸರ್ಕಾರಿ ಜಮೀನನ್ನು ಗುರ್ತಿಸಲು ಅಧಿಕಾರಿಗಳು ನೇರವಾಗಿ ಗ್ರಾಮಗಳಿಗೆ ಭೇಟಿ ನೀಡಿ, ಸರ್ಕಾರಿ ಜಮೀನು ಗುರ್ತಿಸಿ, ನಿವೇಶನ ಮಾಡಲು ಯೋಜನೆ ರೂಪಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಿವೇಶನಗಳು ಈ ವರ್ಷ ಹಂಚಿಕೆಯಾದರೆ ಮುಂದಿನ ದಿನಗಳಲ್ಲಿ ಮನೆಗಳ ಮಂಜೂರಾತಿ ಬೇಗ ಆಗುತ್ತದೆ ಎಂದು ಹೇಳಿದರು.
“ಈ ಸಂದರ್ಭದಲ್ಲಿ ಬಿದಲೂರು ಗ್ರಾಮಪಂಚಾಯಿತಿ ನೂತನ ಕಟ್ಟಡ ನಿರ್ಮಿಸಲು ಸಿ.ಎಸ್.ಆರ್ ಅನುದಾನ ನೀಡಿದ ಪ್ರೆಸ್ಟೀಜ್ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ನೈಯೀಂ ನೂರ್ ಅವರನ್ನು ಸನ್ಮಾನಿಸಲಾಯಿತು”
ಕಾರ್ಯಕ್ರಮದಲ್ಲಿ ಬಿದಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಪಿ ಮುನಿರಾಜು, ಉಪಾಧ್ಯಕ್ಷೆ ಅನುರಾಧ ಸಿ.ಎಂ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್, ದೇವನಹಳ್ಳಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ, ಬಿದಲೂರು ಪಂಚಾಯಿತಿ ಪಿ.ಡಿ.ಒ ಸಿದ್ದರಾಜು, ಕಾರ್ಯದರ್ಶಿ ಚಂದ್ರಶೇಖರ್ ಬಿದಲೂರು ಗ್ರಾಮಪಂಚಾಯಿತಿ ಸದಸ್ಯರು, ಚುನಾಯಿತ ಜನಪ್ರತಿನಿಧಿಗಳು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು