ಕೃಷಿ ಪತ್ತಿನ ಸಂಘಗಳ(PACS) ಮೂಲಕ ಹಳ್ಳಿಯ ಬಡಜನರಿಗೂ ಗುಣಮಟ್ಟದ ಔಷಧಿಗಳು ತಲುಪಲಿವೆ: ಅಮಿತ್ ಶಾ.
ವಿಜಯ ದರ್ಪಣ ನ್ಯೂಸ್
ಜನವರಿ :ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಸೋಮವಾರ ಐದು ರಾಜ್ಯಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಮೂಲಕ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಕಾರ್ಯಾಚರಣೆಗಾಗಿ ಸ್ಟೋರ್ ಕೋಡ್ಗಳನ್ನು ವಿತರಿಸಿದರು. “ಈಗ, ಪಿಎಂ ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿರುವ ಕೈಗೆಟುಕುವ ಮತ್ತು ಉತ್ತಮ ಗುಣಮಟ್ಟದ ಔಷಧಿಗಳನ್ನು PACS ಮೂಲಕ ಗ್ರಾಮೀಣ ಪ್ರದೇಶದ ಬಡವರಿಗೆ ತಲುಪಿಸಲಾಗುವುದು” ಎಂದು ಶಾ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮತ್ತು ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಪ್ರವೀಣ ಮಾರ್ಗದರ್ಶನದಲ್ಲಿ, PACS ನ್ನು ಬಹುಕ್ರಿಯಾತ್ಮಕವಾಗಿ ಪರಿವರ್ತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸಹಕಾರ ಚಳುವಳಿಯನ್ನು ಉತ್ತೇಜಿಸುತ್ತಾ ಅದಕ್ಕೆ ಹೊಸದಿಕ್ಕು ನೀಡುತ್ತಿರುವ ಶಾ, ರಾಷ್ಟ್ರವ್ಯಾಪಿ 2,373 ಕೃಷಿ ಪತ್ತಿನ ಸಂಘಗಳಲ್ಲಿ ಜನೌಷಧಿ ಕೇಂದ್ರಗಳ ಸ್ಥಾಪನೆಗೆ ಮುನ್ನುಡಿ ಬರೆಯುತ್ತಿದ್ದಾರೆ.
ಶಾರವರ ದೂರದೃಷ್ಟಿಯ ಈ ಹೆಜ್ಜೆಯು ಕೈಗೆಟುಕುವ ಔಷಧಿಗಳ ಪ್ರಯೋಜನಗಳು PACS ಮೂಲಕ ಗ್ರಾಮೀಣ ಬಡವರಿಗೆ ಮತ್ತು ರೈತರಿಗೆ ಲಭ್ಯವಾಗಲಿದೆ. ಈ ಹಿಂದೆ, ನಗರ ಪ್ರದೇಶಗಳಲ್ಲಿ ನೆಲೆಸಿರುವ ಬಡವರು ಜನೌಷಧಿ ಕೇಂದ್ರಗಳ ಪ್ರಾಥಮಿಕ ಫಲಾನುಭವಿಗಳಾಗಿದ್ದರು.
ಮೋದಿ ಸರ್ಕಾರದ ಅಡಿಯಲ್ಲಿ, ಕಳೆದ ಒಂದು ದಶಕದಲ್ಲಾದ ಗಮನಾರ್ಹ ಸುಧಾರಣೆಗಳು ಭಾರತದ ಫಾರ್ಮಾ ಕ್ಷೇತ್ರವನ್ನು ಜಾಗತಿಕವಾಗಿ ಮುಂಚೂಣಿಯಲ್ಲಿರಿಸಿದೆ. ಒಂದು ಕಾಲದಲ್ಲಿ ತನ್ನ ಜನಸಂಖ್ಯೆಗೆ ಔಷಧಿಗಳನ್ನು ಪಡೆಯಲು ಹೆಣಗಾಡುತ್ತಿದ್ದ ರಾಷ್ಟ್ರವು, ಇಂದು ಹಿಂದಿನದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿ ಜಗತ್ತಿನೆಲ್ಲೆಡೆಗೆ ಔಷಧಿಗಳನ್ನು ಕಳುಹಿಸುತ್ತಿದೆ. ಅಮಿತ್ ಶಾ ಅವರ ನೀತಿಗಳಿಂದ, ಭಾರತೀಯ ಜನೌಷಧಿ ಕೇಂದ್ರಗಳ ಮೂಲಕ 60 ಕೋಟಿಗೂ ಹೆಚ್ಚು ಸೌಲಭ್ಯ ವಂಚಿತ ವ್ಯಕ್ತಿಗಳು ಇದರ ಫಲಾನುಭವಿಗಳಾಗಲಿದ್ದಾರೆ. ಇದರಿಂದ ಜೆನೆರಿಕ್ ಔಷಧಿಗಳ ವಿತರಣೆಯು ಹಳ್ಳಿಹಳ್ಳಿಗೂ ಸುವ್ಯವಸ್ಥಿತವಾಗಿ ತಲುಪಲಿದೆ.
ಮೋದಿಯವರ ಆಡಳಿತದಲ್ಲಿ ಸಹಕಾರಿ ಉಪಕ್ರಮಗಳ ಮೇಲೆ ಹೆಚ್ಚಿನ ಗಮನಹರಿಸುವಿಕೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ರಕ್ಷಣೆ ಗಣನೀಯ ಸುಧಾರಣೆಯನ್ನು ಕಂಡಿದೆ. ಸಹಕಾರ ಮತ್ತು ಆರೋಗ್ಯದ ಸಮಾಗಮವು ಸಮೃದ್ಧಿ ಮತ್ತು ಉತ್ತಮ ಆರೋಗ್ಯದ ಸಂಗಮ ಎಂಬುದು ಶಾರ ನಂಬಿಕೆ. ಪ್ರಸ್ತುತ, ಕರ್ನಾಟಕ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ,ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 2,300 ಪಿಎಸಿಎಸ್ಗಳು ಕೈಗೆಟುಕುವ ಬೆಲೆಯಲ್ಲಿ ಔಷಧಿಗಳನ್ನು ವಿತರಿಸುತ್ತಿವೆ.
PACS ಮೂಲಕ ಜನೌಷಧಿ ಕೇಂದ್ರಗಳ ವ್ಯಾಪ್ತಿಯನ್ನು ವಿಸ್ತರಿಸುವ ಬದ್ಧತೆ ಹೊಂದಿರುವ ಶಾರವರು ಸಹಕಾರ ಸಚಿವಾಲಯದ ಮೂಲಕ 2 ಲಕ್ಷ ಹೊಸ PACS ಅನ್ನು ಸ್ಥಾಪಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಪ್ರತಿ ಪಂಚಾಯತ್ನಲ್ಲಿ ಜನೌಷಧಿ ಕೇಂದ್ರಗಳ ಉಪಸ್ಥಿತಿಯಿರಲಿದೆ.
ಕಳೆದ ಒಂಬತ್ತು ವರ್ಷಗಳ ಮಹತ್ವಾಕಾಂಕ್ಷೆಯ ಆರೋಗ್ಯ ಸುಧಾರಣೆಗಳ ಅಡಿಯಲ್ಲಿ, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ಆಯುಷ್ಮಾನ್ ಯೋಜನೆ, ಪ್ರಧಾನಮಂತ್ರಿ- ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್, ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ, ರಾಷ್ಟ್ರೀಯ ಆರೋಗ್ಯ ಮಿಷನ್, ಮಲೇರಿಯಾ ಮುಕ್ತ ಭಾರತ, ಸಾರ್ವತ್ರಿಕ ಲಸಿಕೆಗಾಗಿ ಇಂದ್ರಧನುಷ್ ಮಿಷನ್ ಮುಂತಾದ ವಿವಿಧ ಯೋಜನೆಗಳು, ಟಿಬಿ ನಿವಾರಣೆ ಕಾರ್ಯಕ್ರಮ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಜನನಿ ಸುರಕ್ಷಾ ಯೋಜನೆ, ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ, ಫಿಟ್ ಇಂಡಿಯಾ, ಖೇಲೋ ಇಂಡಿಯಾ, ಮತ್ತು ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ.
ಇಂದು, 10,000 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು, 2,260 ಕ್ಕೂ ಹೆಚ್ಚು ಔಷಧಿಗಳನ್ನು ನೀಡುತ್ತಿವೆ. ಗೃಹ ಸಚಿವರ ಅವಿರತ ಪ್ರಯತ್ನಗಳು ಸಹಕಾರಿ ಉಪಕ್ರಮಗಳ ಮೂಲಕ ಕಡು ಬಡವರನ್ನೂ ಕೂಡ ಮೇಲಕ್ಕೆತ್ತುತ್ತಿವೆ. ಸಹಕಾರಿ ಉಪಕ್ರಮಗಳ ಮೂಲಕ ಪ್ರಧಾನಿ ಮೋದಿಯವರ ಅಭ್ಯುದಯದ ಕನಸನ್ನು ನನಸು ಮಾಡುವ ಶಾರವರ ಪ್ರಯತ್ನಗಳು ಮುಂಬರುವ ವರ್ಷಗಳಲ್ಲಿ ರಾಷ್ಟ್ರದಿಂದ ಬಡತನದ ನೆರಳನ್ನು ಸಂಪೂರ್ಣವಾಗಿ ತೊಡೆದುಹಾಕಲಿವೆ.