ಅಂಬೇಡ್ಕರ್ – ಗಾಂಧಿ…., ಶತ್ರುಗಳೇ – ಮಿತ್ರರೇ…. ಉದಾಹರಣೆ ಮತ್ತು ಎಚ್ಚರಿಕೆ……
ವಿಜಯ ದರ್ಪಣ ನ್ಯೂಸ್
ಅಂಬೇಡ್ಕರ್ – ಗಾಂಧಿ….,
ಶತ್ರುಗಳೇ – ಮಿತ್ರರೇ….
ಉದಾಹರಣೆ ಮತ್ತು ಎಚ್ಚರಿಕೆ……
ಭಾರತೀಯ ಸಮಾಜದಲ್ಲಿ ಅಸ್ಪೃಶ್ಯತೆ, ಜಾತಿ ಪದ್ದತಿಯ ನಿರ್ಮೂಲನೆಯಾಗಿ ಸಮ ಸಮಾಜ ನಿರ್ಮಾಣವಾಗಬೇಕೆಂಬುದು ಎಷ್ಟು ಮುಖ್ಯವೋ, ಸುಮಾರು ನೂರು ವರ್ಷಗಳ ಹಿಂದೆ ಭಾರತದ ಸ್ವಾತಂತ್ರ್ಯ ಗಳಿಸುವುದು ಸಹ ಅಷ್ಟೇ ಮುಖ್ಯವಾಗಿತ್ತು ಎಂದು ಭಾವಿಸುವವರಿಗೆ ಅಂಬೇಡ್ಕರ್ ಮತ್ತು ಗಾಂಧಿ ಇಬ್ಬರು ಮಹತ್ವದ ವ್ಯಕ್ತಿಗಳಾಗಿ ಕಾಣುತ್ತಾರೆ…
ಹಾಗೆಯೇ ಸಂವಿಧಾನಾತ್ಮಕ ಪ್ರಜಾಪ್ರಭುತ್ವವನ್ನು ಉಳಿಸುವ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವ ಮನಸ್ಸಿರುವವರಿಗೆ ಗಾಂಧಿ ಮತ್ತು ಅಂಬೇಡ್ಕರ್ ಆದರ್ಶಗಳಾಗಿಯೇ ಕಾಣುತ್ತಾರೆ…….
ವೈಯಕ್ತಿಕ ಸ್ವಾರ್ಥದ, ದ್ವೇಷ ಭಾವನೆಯ, ಇತಿಹಾಸದ ಸಂಘರ್ಷವನ್ನು ಈಗಲೂ ಜೀವಂತವಿಡುವ ಮನೋಭಾವದ ಕೆಲವರಿಗೆ ಅಂಬೇಡ್ಕರ್ – ಗಾಂಧಿ ಅಜನ್ಮ ಶತ್ರುಗಳ ರೀತಿಯೇ ಕಾಣುತ್ತಾರೆ……
ವರ್ಣಾಶ್ರಮ ವ್ಯವಸ್ಥೆಯ ಆಚರಣೆ ಆಳವಾಗಿ ಬೇರೂರಿದ್ದ 1869 ರಲ್ಲಿ ಗುಜರಾತಿನ ಅತ್ಯಂತ ಮೇಲ್ವರ್ಗದ ಬನಿಯಾ ಜಾತಿಯಲ್ಲಿ ಗಾಂಧಿ ಹುಟ್ಟಿದರೆ, ಮುಟ್ಟಿಸಿಕೊಳ್ಳದ ಊರ ಹೊರಗಿನ ಅಸ್ಪೃಶ್ಯ ಮಹರ್ ಜಾತಿಯಲ್ಲಿ 1891 ರಲ್ಲಿ ಅಂಬೇಡ್ಕರ್ ಜನಿಸುತ್ತಾರೆ. ಈಗ ಯೋಚಿಸಿ ನೋಡಿ ಯಾರ ಮನಸ್ಥಿತಿ, ಯಾರ ಪರಿಸ್ಥಿತಿ, ಯಾರ ಆಧ್ಯತೆ ಏನೇನಾಗಿರಬಹುದು ಎಂದು….
ಸಹಜವಾಗಿಯೇ ಗಾಂಧಿಗೆ ಭಾರತದ ಸ್ವಾತಂತ್ರ್ಯ ವಿಮೋಚನೆ ಬಹಳ ಮುಖ್ಯವಾದರೆ, ಅಂಬೇಡ್ಕರ್ ಅವರಿಗೆ ದಲಿತ ವಿಮೋಚನೆ ಅತ್ಯಂತ ಪ್ರಮುಖವಾಗುತ್ತದೆ. ಅದೃಷ್ಟವೋ, ದುರಾದೃಷ್ಟವೋ ಆ ಕಾಲಘಟ್ಟದಲ್ಲಿ ಇಬ್ಬರು ದೇಶದ – ವಿಶ್ವದ ಮಹೋನ್ನತ ಚಿಂತಕರು – ಹೋರಾಟಗಾರರು ಪರಸ್ಪರ ಮುಖಾಮುಖಿಯಾಬೇಕಾಗುತ್ತದೆ. ಆಗ ಸಹಜವಾಗಿ ವಿಚಾರ ಸಂಘರ್ಷವು ಏರ್ಪಡುತ್ತದೆ. ಅದನ್ನು ವಿಮರ್ಶಿಸುವ, ಅರಿಯುವ, ಅಳವಡಿಸಿಕೊಳ್ಳುವ, ತಿರಸ್ಕರಿಸುವ, ವಿರೋಧಿಸುವ ಎಲ್ಲಾ ಸಾಧ್ಯತೆಗಳ ಅದೃಷ್ಟಶಾಲಿಗಳು ನಾವಾಗಿದ್ದೇವೆ. ಆದರೆ ಕೆಲವೇ ಕೆಲವು ಜನರು ಮಾತ್ರ ಅತಿರೇಕದ ವಿಚಾರಗಳಿಗೆ ಮರುಳಾಗಿ ಒಬ್ಬರಿಗೊಬ್ಬರು ದ್ವೇಷಿಸುವ ವಾತಾವರಣಕ್ಕೆ ನೀರೆರೆಯುತ್ತಿದ್ದಾರೆ……
ಹೌದು, ಗಾಂಧಿಯವರನ್ನು ದಲಿತ ಸಮುದಾಯಗಳು ವಿರೋಧಿಸಲು ಸಾಕಷ್ಟು ಕಾರಣಗಳು ಸಿಗುತ್ತವೆ ಎಂಬುದು ನಿಜ. ಗಾಂಧಿ ಪ್ರಾರಂಭದ ಹಂತದಲ್ಲಿ ಸನಾತನ ಧರ್ಮದ ಮೂಲ ಬೇರಾದ ವರ್ಣಾಶ್ರಮ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದರು. ಅದರ ಆಚರಣೆಯನ್ನು ಪ್ರತಿಪಾದಿಸುತ್ತಿದ್ದರು. ಆದರೆ ಅಂಬೇಡ್ಕರ್ ಅವರ ಅಧ್ಯಯನ, ಹೋರಾಟ ಮತ್ತು ಭಾರತದ ಸಾಮಾಜಿಕ ಮತ್ತು ರಾಜಕೀಯ ಹೋರಾಟದ ಫಲವಾಗಿ ಗಾಂಧಿಯವರಿಗೆ ಜಾತಿ ಪದ್ದತಿಯ ಕರಾಳ ಮುಖದ ಪರಿಚಯವಾಗುತ್ತದೆ. ಆಗ ಅವರು ಪರಿವರ್ತನೆ ಹೊಂದಿ ಊರ ಹೊರಗೆ ಮುಟ್ಟಿಸಿಕೊಳ್ಳದ ಸಮುದಾಯಗಳ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ. ಅಂಬೇಡ್ಕರ್ ಅವರಷ್ಟು ಆಳವಾಗಿ ಮತ್ತು ಮನಃಪೂರ್ವಕವಾಗಿ ಅಲ್ಲದಿದ್ದರು ಕನಿಷ್ಠ ಪ್ರಜ್ಞಾಪೂರ್ವಕವಾಗಿ ಆ ಬಗ್ಗೆ ಮಾತನಾಡುತ್ತಾರೆ ಮತ್ತು ಸುಧಾರಣೆಗೆ ಪ್ರಯತ್ನಿಸುತ್ತಾರೆ. ಅದನ್ನು ಗಮನಿಸಬೇಕು…. ..
ಅಸ್ಪೃಶ್ಯ ಸಮುದಾಯಗಳನ್ನು ಕನಿಷ್ಠ ಸ್ಪೃಶ್ಯ ಮಾಡುವ ಆಲೋಚನೆಯಿಂದ ಅವರನ್ನು ಹರಿಜನ ಅಂದರೆ ದೇವರ ಮಕ್ಕಳು ಎಂದು ಕರೆದು ಜನರಲ್ಲಿರು ದೇವರ ಬಗೆಗಿನ ಭಕ್ತಿಯನ್ನು ಉಪಯೋಗಿಸಿಕೊಂಡು ಅವರನ್ನು ಸಮಾಜದ ಸಹ್ಯ ಸಮುದಾಯವಾಗಿ ಮಾಡಲು ಒಂದು ಹಂತದಲ್ಲಿ ಸಣ್ಣದಾಗಿ ಪ್ರಯತ್ನಿಸುತ್ತಾರೆ……
ಅತ್ಯಂತ ಪ್ರಮುಖವಾಗಿ ಕೆಲವು ವೈಚಾರಿಕ ಉಗ್ರ ದಲಿತ ನಾಯಕರು ಮತ್ತು ಚಿಂತಕರಿಗೆ ಗಾಂಧಿಯವರ ಬಗ್ಗೆ ಈಗಲೂ ದ್ವೇಷ ಈ ಮಟ್ಟದಲ್ಲಿ ಉಳಿಯಲು ಕಾರಣ ” ಪೂನ ಒಪ್ಪಂದಕ್ಕೆ ” ಗಾಂಧಿಯವರು ತೋರಿದ ಅತ್ಯುಗ್ರ ಉಪವಾಸದ ವಿರೋಧ ಮತ್ತು ಅದರಲ್ಲಿ ಅವರು ಯಶಸ್ವಿಯಾಗಿದ್ದು, ಅದಕ್ಕೆ ಅಂಬೇಡ್ಕರ್ ಅವರು ತೋರಿದ ಪ್ರತಿರೋಧ – ಹತಾಶೆ ಮತ್ತು ಆ ನಂತರ ಅವರ ಪ್ರತಿಕ್ರಿಯೆಗಳು ಕಟ್ಟಾ ದಲಿತರಲ್ಲಿ ಗಾಂಧಿಯವರನ್ನು ವಿರೋಧ ಮೀರಿ ದ್ವೇಷಿಸಲು ಕಾರಣವಾಗಿದೆ….
ಹೌದು, ಅಸ್ಪೃಶ್ಯತಾ ನಿವಾರಣೆ, ದಲಿತ ರಕ್ಷಣೆ ಮತ್ತು ಸಬಲೀಕರಣ, ದಲಿತ ಅಸ್ಮಿತೆಯ ಜಾಗೃತಿ, ಶತಮಾನಗಳ ಶೋಷಣೆಗೆ ಒಂದಷ್ಟು ಶಾಶ್ವತ ಪರಿಹಾರ ಮತ್ತು ಒಟ್ಟಾರೆ ದಲಿತ ಅಭ್ಯುದಯದ ದೃಷ್ಟಿಯಿಂದ ” ಪೂನಾ ಮೀಸಲಾತಿ ಒಪ್ಪಂದ ” ಅತ್ಯಂತ ಮಹತ್ವದ್ದು. ಈಗಿನ ಸಂದರ್ಭದಲ್ಲಿ ಯೋಚಿಸಿದರೆ ಅದು ಆಗ ಜಾರಿಯಾಗಿದ್ದರೆ ದಲಿತರ ಪರಿಸ್ಥಿತಿ ಈಗಿ ಇರುವುದಕ್ಕಿಂತ ಉತ್ತಮ ಮಟ್ಟದಲ್ಲಿ ಇರುತ್ತಿತ್ತು ಎಂದು ಖಂಡಿತ ಭಾವಿಸಬಹುದು. ಅದನ್ನು ಅಂದು ಅತ್ಯಂತ ಪ್ರಬಲವಾಗಿ ವಿರೋಧಿಸಿದ ಗಾಂಧಿ ದಲಿತ ಸಮುದಾಯಗಳ ಕೋಪಕ್ಕೆ ಅರ್ಹರು ಎಂಬುದು ಸಹ ಅಷ್ಟೇ ನಿಜ. ಆದರೆ……
ಆದರೆ ಗಾಂಧಿಯ ಒಟ್ಟು ಬದುಕನ್ನು, ಹೋರಾಟವನ್ನು ವ್ಯಕ್ತಿತ್ವವನ್ನು, ಆಗಿನ ಕಾಲಘಟ್ಟದ ಪರಿಸ್ಥಿತಿಯನ್ನು ಅವಲೋಕಿಸಿದರೆ ಅವರು ಆ ಒಂದು ವಿಷಯದಲ್ಲಿ ದಲಿತರ ಕ್ಷಮೆಗೆ ಅರ್ಹರು. ಏಕೆಂದರೆ ಅವರ ಆಗಿನ ಉದ್ದೇಶ ಸೂಕ್ಷ್ಮವಾಗಿ ಪರಿಶೀಲಿಸಿದರೆ ಸನಾತನ ಧರ್ಮದ ರಕ್ಷಣೆ ಮತ್ತು ಸ್ವಾತಂತ್ರ್ಯ ಪಡೆಯಲು ಒಗ್ಗಟ್ಟನ್ನು ಕಾಪಾಡುವುದು ಮುಖ್ಯವಾಗಿತ್ತೇ ಹೊರತು ದಲಿತರನ್ನು ಕೆಳ ಹಂತದಲ್ಲಿಯೇ ಉಳಿಸಿ ಅವರನ್ನು ಶೋಷಿಸುವುದಲ್ಲ ಮತ್ತು ಅವರಿಗೆ ಅನ್ಯಾಯ ಮಾಡುವುದಲ್ಲ. ಖಂಡಿತ ಗಾಂಧಿ ಅಷ್ಟೊಂದು ಪ್ರಜ್ಞಾಪೂರ್ವಕ ಕೆಟ್ಟ ಮನಸ್ಥಿತಿಯವರಲ್ಲ…..
ಕೆಲವರು ಒಂದಷ್ಟು ಗಾಂಧಿಯವರ ಬರಹಗಳು ಮತ್ತು ಹೇಳಿಕೆಗಳು ಹೇಗೆ ದಲಿತ ವಿರೋಧಿಯಾಗಿವೆ ಮತ್ತು ಅಮಾನವೀಯವಾಗಿದೆ ಎಂಬುದನ್ನು ದಾಖಲೆಗಳ ಸಮೇತ ವಿವರಿಸುತ್ತಾರೆ. ಅದು ಬಹಳಷ್ಟು ನಿಜವೂ ಸಹ. ಆದರೆ ಅದರಲ್ಲಿ ಕೆಲವು ಗಾಂಧಿ ಪರಿವರ್ತನೆ ಹೊಂದುವ ಮೊದಲಿನ ಅಭಿಪ್ರಾಯ ಮತ್ತು ಅಂಬೇಡ್ಕರ್ ಅವರೊಂದಿಗೆ ಸಂಘರ್ಷದಲ್ಲಿ ಮೂಡಿದ್ದು ಜೊತೆಗೆ ಕೆಲವು ಸನ್ನಿವೇಶಗಳಲ್ಲಿ ಬೇರೆಯದೇ ಉದ್ದೇಶದಿಂದ ಹೇಳಿದ್ದು ಆಗಿವೆ. ಒಮ್ಮೆ ಒಬ್ಬ ವ್ಯಕ್ತಿಯನ್ನು ದ್ವೇಷಿಸಲು ಪ್ರಾರಂಭಿಸಿದರೆ ಆ ವ್ಯಕ್ತಿಯ ಎಲ್ಲಾ ಮಾತುಗಳು ಹಾಗೆಯೇ ಪ್ರತಿಧ್ವನಿಸುವ ಮನಃಶಾಸ್ತ್ರೀಯ ಗುಣಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು….
ಪೂನಾ ಒಪ್ಪಂದದ ಸಂಪೂರ್ಣ ಮಾಹಿತಿಯನ್ನು ಅನೇಕ ಇತಿಹಾಸದ ಪುಸ್ತಕಗಳು ಮತ್ತು ಗೂಗಲ್ ಸರ್ಚನಲ್ಲಿ ಪಡೆಯ ಬಹುದು. ಅದನ್ನು ಇಲ್ಲಿ ಪ್ರಸ್ತಾಪಿಸಿದರೆ ತುಂಬಾ ದೀರ್ಘವಾಗುತ್ತದೆ. ಆದರೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಒಲವಿನ ಗಾಂಧಿಯವರಿಗೆ ಅಸ್ಪೃಶ್ಯ ದಲಿತ ಸಮುದಾಯಗಳು ಸನಾತನ ಧರ್ಮದ ಹಿಂದೂ ಜೀವನಶೈಲಿಯ ಭಾಗವೇ ಎಂದು ಸ್ಪಷ್ಟವಾಗಿ ಮತ್ತು ಬಲವಾಗಿ ನಂಬಿದ್ದರು. ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಿದರೆ ನಮ್ಮ ಧರ್ಮ ಒಡೆದು ಹೋಗುತ್ತದೆ ಮತ್ತು ದಲಿತರು ಪ್ರತ್ಯೇಕವಾಗುತ್ತಾರೆ ಎಂಬ ಆತಂಕ ಸದಾ ಕಾಡುತ್ತಿರುತ್ತದೆ. ಅವರು ನಮ್ಮಂತೆ ಮನುಷ್ಯರು. ಏನೋ ಕಾರಣದಿಂದಾಗಿ ಪ್ರತ್ಯೇಕವಾಗಿದ್ದಾರೆ. ನಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವ ಮೂಲಕ ಮತ್ತು ಸ್ವಾತಂತ್ರ್ಯ ನಂತರ ಈ ದೇಶದಿಂದ ಅಸ್ಪೃಶ್ಯತೆಯನ್ನು ಸಂಪೂರ್ಣ ನಿವಾರಿಸಿಕೊಳ್ಳಬಹುದು ಎಂದು ಬಲವಾಗಿ ನಂಬಿರುತ್ತಾರೆ. ಅಷ್ಟೊಂದು ವಿಶಾಲ ಹೃದಯಿಯವರು. ಆದರೆ ಜಾತಿಯ ಮೂಲಭೂತವಾದಿಗಳ ನಡುವೆ ಅದು ಅಸಾಧ್ಯ, ಮರ್ಯಾದ ಹತ್ಯೆಗೂ ನಮ್ಮ ಜನ ಸಿದ್ದರಿದ್ದಾರೆ ಎಂಬುದನ್ನು ಗ್ರಹಿಸಲು ಅವರು ವಿಫಲರಾಗುತ್ತಾರೆ. ಅದರ ಪರಿಣಾಮ ಗಾಂಧಿ ಶಾಶ್ವತವಾಗಿ ಕೆಲವು ದಲಿತ ನಾಯಕರ ವಿರೋಧಿಗಳಾಗಿಯೇ ಉಳಿದರು…..
ಅಂಬೇಡ್ಕರ್ ಅವರಿಗೆ ಹೋಲಿಸಿದರೆ ದಲಿತ ಶೋಷಣೆಗೆ ಗಾಂಧಿಯವರ ಕೊಡುಗೆ ಅತ್ಯಲ್ಪ. ಕೊನೆಯ ಹಂತದಲ್ಲಿ ಎಲ್ಲರ ಪ್ರತಿರೋಧದ ನಡುವೆಯೂ ದಲಿತರನ್ನು ಮುಖ್ಯವಾಹಿನಿಗೆ ಸೇರಿಸಲು ತಾವು ಸೇರಿ ಅನೇಕ ಒತ್ತಡಗಳನ್ನು ನಿರ್ಮಿಸುತ್ತಾರೆ ಮತ್ತು ಆಚರಣೆಗೆ ತರುತ್ತಾರೆ. ಆದರೆ ಅಂಬೇಡ್ಕರ್ ದೃಷ್ಟಿಯಲ್ಲಿ ಅದು ಕೇವಲ ನಾಟಕ ಎಂದು ಟೀಕೆಗೆ ಒಳಗಾಗುತ್ತದೆ. ಒಂದು ಹಂತದಲ್ಲಿ ಅಂಬೇಡ್ಕರ್ ಗಾಂಧಿಯವರನ್ನು ಅನೇಕ ಹತಾಶೆಗಳ ಕಾರಣ ಸಾಕಷ್ಟು ವಿರೋಧಿಸುತ್ತಾರೆ. ಆಗಿನ ದೇಶದ ನಾಯಕತ್ವ ಗಾಂಧಿಯವರ ಬಳಿ ಇದ್ದುದರಿಂದ ಸಹಜವಾಗಿಯೇ ಅವರನ್ನೇ ಪ್ರಶ್ನಿಸಬೇಕಾಗುತ್ತದೆ. ಆದರೆ ಅದು ಈಗಿನ ಕಾಲಘಟ್ಟಕ್ಕೆ ಅಷ್ಟು ಸೂಕ್ತವಾಗುವುದಿಲ್ಲ…..
ಅಂಬೇಡ್ಕರ್ ಅವರೊಂದಿಗೆ ಮತ್ತು ಅವರಿಗಾಗಿ ಗಾಂಧಿ ಸಂಘರ್ಷ ನಡೆಸುತ್ತಾರೆ, ಉಪವಾಸ ಮಾಡುತ್ತಾರೆ, ಗಾಂಧಿ ಅತ್ಯಂತ ಪ್ರಬಲವಾಗಿದ್ದ ಕಾಲದಲ್ಲಿಯೇ ಅಂಬೇಡ್ಕರ್ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗುತ್ತಾರೆ, ಪ್ರಾರಂಭದ ನೆಹರು ಸಂಪುಟದಲ್ಲಿ ಮಂತ್ರಿಯಾಗುತ್ತಾರೆ ಎಂಬುದು ಗಾಂಧಿ ಅಂಬೇಡ್ಕರ್ ಅವರನ್ನು ಈಗಿನ ಉಗ್ರ ದಲಿತರು ವಿರೋಧಿಸುವಷ್ಟು ಮತ್ತು ಭಾವಿಸುವಷ್ಟು ಗಾಂಧಿ ದ್ವೇಷಿಸುತ್ತಿರಲಿಲ್ಲ ಎಂಬುದಕ್ಕೆ ಸಾಕಷ್ಟು ಪುರಾವೆ ಒದಗಿಸುತ್ತದೆ…..
ಇರಲಿ, ಏನೇ ಆಗಲಿ ಗಾಂಧಿ ಮತ್ತು ಅಂಬೇಡ್ಕರ್ ಅವರಿಗೆ ಅವರು ಬಯಸಿದಂತೆ ಅಭಿಪ್ರಾಯ ರೂಪಿಸಿಕೊಳ್ಳುವ, ಹೋರಾಡುವ, ಬದುಕುವ ಸಂಪೂರ್ಣ ಸ್ವಾತಂತ್ರ್ಯವಿದೆ ಹಾಗೆಯೇ ಅದನ್ನು ವಿಮರ್ಶಿಸುವ ಸ್ವಾತಂತ್ರ್ಯ ಮತ್ತು ಅವರ ಬಗ್ಗೆ ಯಾವುದೇ ಅಭಿಪ್ರಾಯ ಹೊಂದುವ ಸ್ವಾತಂತ್ರ್ಯ ನಮಗೂ ಇದೆ. ಆದರೆ ಇತಿಹಾಸ ವರ್ತಮಾನಕ್ಕೆ ಪಾಠವಾಗಬೇಕೆ ಹೊರತು ದ್ವೇಷದ ಹೊರೆಯಾಗಬಾರದು...
ಗಾಂಧಿಯನ್ನು ವಿರೋಧಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಅವರನ್ನು ಅತ್ಯುಗ್ರವಾಗಿ ದ್ವೇಷಿಸಿದರೆ ಅದು ಮುಖ್ಯವಾಗಿ ದಲಿತ ಚಳವಳಿಗೆ ಸ್ವಲ್ಪ ಹಿನ್ಬಡೆಯಾಗಬಹುದು ಮತ್ತು ಅದನ್ನು ಮತ್ತೆ ಮತ್ತೆ ಮುನ್ನಲೆಗೆ ತರುವುದು ಸಹ ಅನವಶ್ಯಕ ಎಂದು ಅತ್ಯಂತ ಆತ್ಮೀಯವಾಗಿ, ಪ್ರೀತಿಯಿಂದ, ಕಾಳಜಿಯಿಂದ ಎಚ್ಚರಿಸುತ್ತಾ…..
ಈಗ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರೂ ಇಲ್ಲ. ಆದರೆ ನಾವಿದ್ದೇವೆ. ನಮಗೆ ಅನುಭವವಿದೆ, ಅರಿವಿದೆ, ಅವಕಾಶವಿದೆ. ನಾವುಗಳು ಸಮ ಸಮಾಜದ ನಿರ್ಮಾಣಕ್ಕಾಗಿ ಏನನ್ನಾದರೂ ಮಾಡೋಣ. ಗಾಂಧಿಯನ್ನು ದ್ವೇಷಿಸುತ್ತಾ ಕಾಲ ಕಳೆಯುವ ಬದಲು ಕಟ್ಟುವ ಕೆಲಸ ಮಾಡೋಣ. ….
ಕೊನೆಯದಾಗಿ, ಗಾಂಧಿ ಪರಿಪೂರ್ಣರೇನು ಅಲ್ಲ. ಆದರೆ ಅತ್ಯಂತ ಉಗ್ರವಾಗಿ ದ್ವೇಷಿಸುವಷ್ಟು ಕೆಟ್ಟವರು ಅಲ್ಲ. ನೈತಿಕತೆಗೆ ಗಾಂಧಿ ಸಾಕ್ಷಿ ಪ್ರಜ್ಞೆ, ಮಾನವೀಯತೆಗೆ, ಸಾಮಾಜಿಕ ಸಾಮರಸ್ಯಕ್ಕೆ ಅಂಬೇಡ್ಕರ್ ಸಾಕ್ಷಿ ಪ್ರಜ್ಞೆ ಎಂಬ ಬುದ್ದ ಪ್ರಜ್ಞೆ ನಮ್ಮೆಲ್ಲರಲ್ಲಿ ಮೂಡಲಿ ಎಂದು ಆಶಿಸುತ್ತಾ…..
ಇದು ಸರಳ ನಿರೂಪಣೆ ಮಾತ್ರ. ಆಳವಾಗಿ ಮತ್ತಷ್ಟು ಚರ್ಚೆ ಬಯಸುವ ವಿಷಯ. ಅದನ್ನು ಆಸಕ್ತರು ಸಮಯವಾದಾಗ ನೇರವಾಗಿ ಮಾತನಾಡೋಣ…
ಧನ್ಯವಾದಗಳು….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………