ಹಿಂದುಳಿದ ವರ್ಗಗಳ ನಿಗಮಗಳ ವಿವಿಧ ಯೋಜನೆಗಳಡಿ ಸೌಲಭ್ಯಕ್ಕಾಗಿ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ

ವಿಜಯ ದರ್ಪಣ ನ್ಯೂಸ್ 

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 05 :- ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ, ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಗಳ ಆಯಾ ಸಮುದಾಯದವರು ಯೋಜನಾವಾರು ಸೌಲಭ್ಯ ಕೋರಿ ಆನ್‌ಲೈನ್‌ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ https://sevasindhukarnataka.gov.in ಗ್ರಾಮಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಯೋಜನೆಗಳು:-

1. ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಆಯಾ ಸಮುದಾಯದ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗೆ ಅನುಸಾರ ಸಾಲ ಮತ್ತು ಸಹಾಯಧನ ಸೌಲಭ್ಯ ಒದಗಿಸಲಾಗುವುದು.
ಘಟಕವೆಚ್ಚ ರೂ ಒಂದು ಲಕ್ಷ ಕ್ಕೆ 20,000 ಸಹಾಯಧನ, 80,000 ಸಾಲ ನೀಡಲಾಗುವುದು. ಘಟಕವೆಚ್ಚ ರೂ ಎರಡು ಲಕ್ಷ ಕ್ಕೆ 30,000 ಸಹಾಯಧನ ಹಾಗೂ 1,70,000 ಸಾಲ ನೀಡಲಾಗುವುದು.

2. ಗಂಗಾ ಕಲ್ಯಾಣ ಯೋಜನೆಯಡಿ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀರಾವರಿ ಸೌಲಭ್ಯಕ್ಕಾಗಿ ಉಚಿತ ಕೊಳವೆ ಬಾವಿಯನ್ನು ಕೊರೆಯಿಸುವ ಮೂಲಕ ನೀರಾವರಿ ಸೌಲಭ್ಯ ಒದಗಿಸಲಾಗುವುದು ಈ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಕನಿಷ್ಠ 2 ಎಕರೆಯಿಂದ ಗರಿಷ್ಠ 5 ಎಕರೆ ಒಳಗೆ ಕೃಷಿ ಜಮೀನಿನ ಸಣ್ಣ ಹಿಡುವಳಿ ಪ್ರಮಾಣ ಪತ್ರ ಹೊಂದಿರಬೇಕು. ಘಟಕವೆಚ್ಚ ರೂ 3,75,000. ಸಾಲ 50,000, ಸಹಾಯಧನ 3,25,000 ನೀಡಲಾಗುವುದು.

3. (a) ಅರಿವು ಶೈಕ್ಷಣಿಕ ಸಾಲ ಯೋಜನೆ(ಹೊಸತು)ಯಡಿ ವಿದ್ಯಾರ್ಥಿಯ ವಾರ್ಷಿಕ ಆದಾಯ 3.50 ಲಕ್ಷರೂಗಳ ಮಿತಿಯಲ್ಲಿರುವ ಸಿ.ಇ.ಟಿ/ನೀಟ್ ಮೂಲಕ ಆಯ್ಕೆಯಾಗಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮುಂತಾದ ಕೋರ್ಸ್‌ಗಳ ಉನ್ನತ ವ್ಯಾಸಂಗಕ್ಕೆ ಶೇ.2ರ ಬಡ್ಡಿದರದಲ್ಲಿ ವಾರ್ಷಿಕ ಗರಿಷ್ಟ ಒಂದು ಲಕ್ಷ ರೂಗಳ ಶೈಕ್ಷಣಿಕ ಸಾಲ ಮಂಜೂರು ಮಾಡಲಾಗುವುದು.

(b) ಅರಿವು ಶೈಕ್ಷಣಿಕ ಸಾಲ ಯೋಜನೆ(ನವೀಕರಣ)ಯಡಿ ಈಗಾಗಲೇ ಶೈಕ್ಷಣಿಕ ಸಾಲ ಪಡೆದಿರುವ ವಿದ್ಯಾರ್ಥಿಗಳು 2023-24 ನೇ ಸಾಲಿಗೆ 2/3/4/5ನೇ ಕಂತಿನ ಸಾಲದ ಮೊತ್ತವನ್ನು (ನವೀಕರಣ) ಮಂಜೂರು ಮಾಡಲು ತೇರ್ಗಡೆ ಹೊಂದಿರುವ ಅಂಕಪಟ್ಟಿಗಳು ಹಾಗೂ ಪ್ರವೇಶಾತಿ ಪಡೆದಿರುವ ವ್ಯಾಸಂಗ ದೃಢೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸುವುದು.

4. ವಿದೇಶ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ (Fresh Students):- ಕುಟುಂಬದ ವಾರ್ಷಿಕ ಆದಾಯ 08 ಲಕ್ಷ ರೂಗಳ ಮಿತಿಯಲ್ಲಿರುವ ವಿದ್ಯಾರ್ಥಿಗಳಿಗೆ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ QS World Ranking 500 ರೊಳಗೆ ಬರುವ ವಿಶ್ವ ವಿದ್ಯಾಲಯಗಳಲ್ಲಿ ಪೋಸ್ಟ್‌ ಡಾಕ್ಟೋರಲ್, ಪಿಹೆಚ್‌ಡಿ, ಮಾಸ್ಟರ್‌ ಡಿಗ್ರಿ ಕೋರ್ಸುಗಳಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ವಾರ್ಷಿಕ ಗರಿಷ್ಠ 10.00 ಲಕ್ಷದಿಂದ ಕೋರ್ಸಿನ ಅವಧಿಗೆ ಗರಿಷ್ಟ ರೂ. 20,00 ಲಕ್ಷಗಳವರೆಗೆ ಭದ್ರತೆಗೆ ಸ್ಥಿರಾಸ್ತಿಯನ್ನು ಆಧಾರ ಪಡೆದು ಶೂನ್ಯ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು.

5. ಸ್ವಾತಂತ್ರ್ಯ ಮಹೋತ್ಸವದ ಅಮೃತ ಮುನ್ನಡೆ ಯೋಜನೆ ಕೌಶಲಾಭಿವೃದ್ಧಿ ತರಬೇತಿ:- ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಜನರಿಗೆ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧೀನ ತರಬೇತಿ ಸಂಸ್ಥೆಗಳಾದ, ITI, GTTC, KGTTI ರ ಮೂಲಕ ಕೌಶಲ್ಯ ತರಬೇತಿಯನ್ನು ಆಯೋಜಿಸಿ, ಉದ್ಯೋಗ ಮುಖಿಯನ್ನಾಗಿಸಲು ಅಲ್ಪಾವಧಿ ತರಬೇತಿ ನೀಡಲಾಗುವುದು.

6. ಸ್ವಾವಲಂಬಿ ಸಾರಥಿ ಯೋಜನೆಯಡಿ
ಹಿಂದುಳಿದ ವರ್ಗಗಳ ಯುವಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರ ವಾಹನ, ಟೂರಿಸ್ಟ್‌ ಟ್ಯಾಕ್ಸಿ ಮತ್ತು ಗೂಡ್ಸ್‌ ವಾಹನ ಖರೀದಿಗೆ ಪಡೆಯುವ ಸಾಲಕ್ಕೆ ಶೇ.50 ರಷ್ಟು ಗರಿಷ್ಠ 03 ಲಕ್ಷಗಳ ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು. ಉಳಿಕೆ ಮೊತ್ತವನ್ನು ಬ್ಯಾಂಕ್‌ಗಳ ಮೂಲಕ ಅವರು ವಿಧಿಸುವ ಚಾಲ್ತಿ ಬಡ್ಡಿದರದಲ್ಲಿ ಸಾಲ ಪಡೆಯುವುದು.

7. ಸ್ವಯಂಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ)ಯಡಿ ಬ್ಯಾಂಕುಗಳ ಸಹಯೋಗದೊಂದಿಗೆ ಕೃಷಿ ಅವಲಂಬಿತ ಚಟುವಟಿಕೆಗಳು, ವ್ಯಾಪಾರ, ಸಾರಿಗೆ, ಹಾಗೂ ಯಂತ್ರೋಪಕರಣಗಳನ್ನು ಕೊಳ್ಳುವ ಆರ್ಥಿಕ ಚಟುವಟಿಕೆಗಳ/ಉದ್ಯಮಗಳಿಗೆ ಘಟಕ ವೆಚ್ಚದ ಶೇಕಡ 20 ರಷ್ಟು ಗರಿಷ್ಟ ರೂ.1 ಲಕ್ಷ ಸಹಾಯಧನ ಮಂಜೂರು ಮಾಡಲಾಗುವುದು. ಉಳಿಕೆ ಮೊತ್ತ ಬ್ಯಾಂಕ್ ಪಾಲಿನ ಸಾಲವಾಗಿರುತ್ತದೆ.

8. ಭೋಜನಾಲಯಕೇಂದ್ರ:- (ಕರ್ನಾಟಕ ವೀರಶೈವ ಲಿಂಗಾಯತ ನಿಗಮದಿಂದ ಲಿಂಗಾಯತ ಸಮುದಾಯದವರಿಗೆ ಮಾತ್ರ) ಈ ಯೋಜನೆಯಡಿ ವೀರಶೈವ ಸಮುದಾಯದವರು ಹೋಟೆಲ್’ (ಖಾನಾವಳಿ) ಉದ್ಯಮ ಕೈಗೊಳ್ಳಲು ಸಾಲ ಸೌಲಭ್ಯ ಒದಗಿಸಲಾಗುವುದು.(ಹೋಟೆಲ್ ಸ್ಥಾಪನೆ ಮಾಡಲು ಫಲಾನುಭವಿಗಳು ತಮ್ಮ ಸ್ವಂತ ಹೆಸರಿನಲ್ಲಿ ಕನಿಷ್ಠ 20X30ಅಡಿ ಅಳತೆಯುಳ್ಳ ನಿವೇಶನ ಹೊಂದಿರಬೇಕು.
ಘಟಕ ವೆಚ್ಚ 5 ಲಕ್ಷಕ್ಕೆ ಸಹಾಯಧನ
40,000, ಸಾಲ 4,60,000 ನೀಡಲಾಗುವುದು.

9. ವಿಭೂತಿ ನಿರ್ಮಾಣ ಘಟಕ:-(ಕರ್ನಾಟಕ ವೀರಶೈವ ಲಿಂಗಾಯತ ನಿಗಮದಿಂದ ಲಿಂಗಾಯತ ಸಮುದಾಯದವರಿಗೆ ಮಾತ್ರ) ಈ ಯೋಜನೆಯಡಿ ವೀರಶೈವ ಸಮುದಾಯದವರು ವಿಭೂತಿ ಘಟಕವನ್ನು ನಿರ್ಮಿಸಲು ಸಾಲ ಮತ್ತು ಸಹಾಯಧನದ ಸೌಲಭ್ಯವನ್ನು ಒದಗಿಸಲಾಗುವುದು.
ಘಟಕವೆಚ್ಚ 4 ಲಕ್ಷ ಸಹಾಯಧನ 40,000, ಸಾಲ 3,60,000 ನೀಡಲಾಗುವುದು.

10. ಮರಾಠ ಮಿಲಿಟರಿ ಹೋಟೆಲ್‌ ಯೋಜನೆ:- (ಕರ್ನಾಟಕ ಮರಾಠಿ ನಿಗಮದಿಂದ ಮರಾಠ ಸಮುದಾಯದವರಿಗೆ ಮಾತ್ರ)
ಈ ಯೋಜನೆಯಡಿ ನಿರುದ್ಯೋಗಿಗಳು ಮರಾಠಿ ಮಿಲಿಟರಿ ಹೋಟೆಲ್‌ ಪ್ರಾರಂಭಿಸಿ ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿಯಾಗಲು ಮತ್ತು ಸಹಾಯಧನ ಒದಗಿಸಲಾಗುವುದು. ಅರ್ಜಿದಾರರ ವಾರ್ಷಿಕ ಆದಾಯ 6 ಲಕ್ಷ ರೂ.ಗಳ ಒಳಗಿರಬೇಕು. ಘಟಕವೆಚ್ಚ 5 ಲಕ್ಷ, ಸಹಾಯಧನ 40,000, ಸಾಲ 4.60.000 ನೀಡಲಾಗುವುದು.

11. ಪಂಚವೃತ್ತಿ ಸಾಲ ಯೋಜನೆ:- (ಕರ್ನಾಟಕ ವಿಶ್ವಕರ್ಮ ನಿಗಮದಿಂದ ವಿಶ್ವಕರ್ಮ ಸಮುದಾಯದವರಿಗೆ ಮಾತ್ರ) ಈ ಯೋಜನೆಯಡಿ ವಿಶ್ವಕರ್ಮ ಸಮುದಾಯದವರು ಸಾಂಪ್ರದಾಯಿಕ ವೃತ್ತಿಗಳಾದ ಚಿನ್ನ-ಬೆಳ್ಳಿ ಕೆಲಸ, ಶಿಲ್ಪಕಲೆ, ಮರಗೆಲಸ, ಲೋಹ ಎರಕದ ಕೆಲಸವನ್ನು ಕೈಗೊಳ್ಳಲು ಈ ಸಾಲ ಮತ್ತು ಸಹಾಯಧನ ಸೌಲಭ್ಯದಗಿಸಲಾಗುವುದು.
ಘಟಕ ವೆಚ್ಚ 1 ಲಕ್ಷ
ಸಹಾಯಧನ 20000, ಸಾಲ 80000 ನೀಡಲಾಗುವುದು.

ಸಾಮಾನ್ಯ ಅರ್ಹತೆಗಳು:-

1. ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಕಡ್ಡಾಯವಾಗಿ ಮೊಬೈಲ್‌ ಸಂಖ್ಯೆ ಹಾಗೂ ಬ್ಯಾಂಕ್‌ ಖಾತೆಯನ್ನು ಜೋಡಣೆ ಮಾಡಿರಬೇಕು.

2. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮಾಂತರ ಪ್ರದೇಶದವರಿಗೆ ರೂ.98,000/- ಗಳಿಗಿಂತ ಹಾಗೂ ಪಟ್ಟಣ
ಪ್ರದೇಶದವರಿಗೆ ರೂ.1,20,000/- ಗಳಿಗಿಂತ ಕಡಿಮೆಇರಬೇಕು.

3. ಅರ್ಜಿದಾರರ ವಯೋಮಿತಿ 18 ವರ್ಷಗಳಿಂದ 55 ವರ್ಷಗಳ ಮಿತಿಯಲ್ಲಿರಬೇಕು. (ಸ್ವಯಂ ಉದ್ಯೋಗ ನೇರಸಾಲ, ಕಾಯಕಕಿರಣ ಮತ್ತು ಪಂಚವೃತ್ತಿ, ಮರಾಠ ಮಿಲಿಟರಿ ಹೋಟೆಲ್, ವಿಭೂತಿ ಘಟಕ ಯೋಜನೆಗಳಿಗೆ ಮಾತ್ರ)

4, ಸ್ವಾವಲಂಬಿ ಸಾರಥಿ ಯೋಜನೆಯಡಿ ಅರ್ಜಿದಾರರ ವಯೋಮಿತಿ 21 ವರ್ಷಗಳಿಂದ 45 ವರ್ಷಗಳ ಒಳಗಿರಬೇಕು,

5. ಈ ಹಿಂದೆ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಂದು ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

6. ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಜಿದಾರರ ವಿದ್ಯಾರ್ಹತೆ ಕನಿಷ್ಟ 10ನೇ ತರಗತಿ ಉತ್ತೀರ್ಣರಾಗಿರಬೇಕು.

7.ಅರ್ಜಿದಾರರು ನಿಗಮವಾರು ಆಯಾ ಸಮುದಾಯದ ಚಾಲ್ತಿಯಲ್ಲಿರುವ ಜಾತಿ & ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಈ ಮೇಲ್ಕಂಡ ಯೋಜನೆಗಳಲ್ಲಿ ಸರ್ಕಾರದ ವಿವೇಚನಾ ಕೋಟಾ/ನಿಗಮದ ಅಧ್ಯಕ್ಷರು/ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದಲ್ಲಿ ಸೌಲಭ್ಯ ಪಡೆಯ ಬಯಸುವ ಹಿಂದುಳಿದ ವರ್ಗಗಳ ವಿವಿಧ ನಿಗಮಗಳ ಆರ್ಜಿದಾರರು ಸೇವಾಸಿಂಧು ಪೋರ್ಟ‌ಲ್ ನಲ್ಲಿ ಈ ಕೆಳಕಂಡ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ವೆಬ್ ಸೈಟ್ ವಿಳಾಸ
https://sevasindhu.karnataka.gov.in,
https://gramaone.karnataka.gov.in, https://www.karnatakaone.gov.in,
https://klapp.karnatakaone.gov.in, ಸ್ವಾತಂತ್ರ್ಯಅಮೃತ ಮಹೋತ್ಸವ ಮುನ್ನಡೆ ಯೋಜನೆ ವೆಬ್ ಸೈಟ್ https://www.kaushalkar.com ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:31/10/2023. ಹೆಚ್ಚಿನ ಮಾಹಿತಿಗಾಗಿ ಆಯಾ ನಿಗಮಗಳ ವೆಬ್‌ಸೈಟ್‌ಗಳನ್ನು ಸಂಪರ್ಕಿಸುವುದು ಅಥವಾ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ 080-29605761 ಅನ್ನು ಸಂಪರ್ಕಿಸಬಹುದಾಗಿದೆ ಎಂದು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.