ಹಿರಿಯ ನಾಗರಿಕರ ಕಲ್ಯಾಣಕ್ಕೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿ – ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್

ವಿಜಯ ದರ್ಪಣ ನ್ಯೂಸ್

ಬಿಜಿಎಸ್ ನಗರ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 1- ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿವಾರು ಹಾಗೂ ಗ್ರಾಮವಾರು ಹಿರಿಯ ನಾಗರಿಕರಿಗೆ ಅವಶ್ಯಕವಾದ ಆರೋಗ್ಯ ತಪಾಸಣೆಯನ್ನು ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮೂಲಕ ಜಾರಿ ಮಾಡಲು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸುವುದಾಗಿ ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್ ಅವರು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಊರುಗೋಲುಗಳ ಮೂಲಕ ನಡೆದಾಡುವಂತಹ ಹಿರಿಯ ನಾಗರಿಕರಿಗೆ 5000 ಊರುಗೋಲುಗಳನ್ನು ಶೀಘ್ರವಾಗಿಯೇ ವಿತರಿಸುವುದಾಗಿ ಕಾರ್ಯಕ್ರಮದಲ್ಲಿ ಘೋಷಿಸುವುದರ ಜೊತೆಗೆ 10 ಜನ ಹಿರಿಯ ನಾಗರಿಕರಿಗೆ ಸಾಂಕೇತಿಕವಾಗಿ ಹಿರಿಯ ನಾಗರಿಕರ ಊರುಗೋಲುಗಳನ್ನು ವಿತರಿಸಿದರು. ಪ್ರತಿ ತಾಲೂಕು ಮಟ್ಟದಲ್ಲಿ ಹಿರಿಯ ನಾಗರಿಕರ ಕಾನೂನು ಅರಿವಿಗಾಗಿ ಪಾಲಕರ ಪೋಷಣೆ ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯ ಕಾರ್ಯಾಗಾರಗಳನ್ನು ಏರ್ಪಡಿಸಲು ಯೋಜನೆ ರೂಪಿಸುವುದಾಗಿ ತಿಳಿಸಿದರು.

ನಿರಾಶ್ರಿತ ಹಿರಿಯ ನಾಗರಿಕರ ರಕ್ಷಣೆ, ಇಲಾಖೆಯ ಸಂಗಮ ಯೋಜನೆ ಹಾಗೂ ಪ್ರತಿ ಶುಕ್ರವಾರ ಹಿರಿಯ ನಾಗರಿಕರ ಮನರಂಜನಾ ಕಾರ್ಯಕ್ರಮಗಳನ್ನು ರೂಪಿಸಿ ನಾವೀನ್ಯ ಕಾರ್ಯಕ್ರಮಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದು ಅನುಷ್ಟಾನಗೊಳಿಸಿದ್ದಕ್ಕಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯನ್ನು ಶ್ಲಾಘಿಸಿದರು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ ಎನ್ ಅನುರಾಧ ಅವರು ಮಾತನಾಡಿ ಜಿಲ್ಲಾ ಪಂಚಾಯತ್‌ನಲ್ಲಿಯೂ ಸಹ ಹಿರಿಯ ನಾಗರಿಕರಿಗೆ ವಿಶೇಷ ಆದ್ಯತೆಯ ಮೇರೆಗೆ ಸೌಲಭ್ಯಗಳನ್ನು ದೊರಕಿಸಿ ಕೊಡುವುದಾಗಿ ಹಾಗೂ ಪ್ರತಿಯೊಬ್ಬರು ಹಿರಿಯ ನಾಗರಿಕರನ್ನು ಗೌರವಯುತವಾಗಿ ನಡೆಸಿಕೊಂಡು ಸಂತೋಷದ ಜೀವನ ನಡೆಸಲು ಅನುವು ಮಾಡಿಕೊಡಲು ತಿಳಿಸಿದರು. ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಸ್ವೀಕೃತವಾಗಿದ್ದಂತಹ ಹಿರಿಯ ನಾಗರಿಕರ ಶ್ರವಣ ಸಾಧನೆಗಳನ್ನು ಹಾಗೂ ಇಲಾಖಾ ಅನುದಾನಿತ ಸಂಸ್ಥೆ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ವತಿಯಿಂದ ಹಿರಿಯ ನಾಗರಿಕ ವಿಕಲಚೇತನ ವ್ಯಕ್ತಿಗೆ ಕೃತಕ ಕಾಲನ್ನು ಅಳವಡಿಸಲಾಯಿತು.

ಹಾಗೂ ಆಗಮಿಸಿದ ಅತಿಥಿಗಳನ್ನು ನಟರಾಜ್.ಎಸ್ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರು ಸ್ವಾಗತಿಸಿ ಕಾರ್ಯಕ್ರಮದ ವಿಶೇಷತೆಯನ್ನು ತಿಳಿಸಿದರು. ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಪುಷ್ಪ, ಮೇಲ್ವಿಚಾರಕರು, ಶಿಶು ಆಭಿವೃದ್ದಿ ಯೋಜನೆ ನೆಲಮಂಗಲ ತಾಲ್ಲೂಕು ರವರು ಮಾಡಿದರು.

ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಜಗದೀಶ ಎನ್ ಎಂ ರವರು ಮಾತನಾಡಿ ಪ್ರತಿ ಮನೆಯಲ್ಲಿಯೂ ಹಿರಿಯ ನಾಗರಿಕರನ್ನು ಗೌರವಿಸುವ ಪ್ರವೃತ್ತಿ ಹೆಚ್ಚಾಗಬೇಕು ಹಾಗೂ ಹಿರಿಯರ ಮತ್ತು ಹಿರಿಯರ ನಡುವೆ ಬಾಂಧವ್ಯ ಹೆಚ್ಚಿಸಿಕೊಳ್ಳುವ ಕೌಟುಂಬಿಕ ವಾತಾವರಣ ನಿರ್ಮಾಣವಾಗಬೇಕು ಇದಕ್ಕಾಗಿಯೇ ಇಲಾಖೆಯಿಂದ ಜಿಲ್ಲಾ ಮಟ್ಟದ ಸಂಗಮ ಹಿರಿಯರು ಮತ್ತು ಕಿರಿಯರ ವಾತ್ಸಲ್ಯದ ವೇದಿಕೆ ಹಾಗೂ ಪ್ರತಿ ಶುಕ್ರವಾರ ಹಿರಿಯ ನಾಗರಿಕರ ಮನರಂಜನ ಚಟುವಟಿಕೆಗಳನ್ನು
ಪ್ರತಿ ಮನೆಯಲ್ಲಿಯೂ ಕೈಗೊಂಡು ಹಿರಿಯ ನಾಗರೀಕರ ಮನರಂಜನೆ ಆರೋಗ್ಯ ಮತ್ತು ಇತರೆ ಕಾಳಜಿಗಳನ್ನು ವಹಿಸಲು ವಿಶೇಷ ದಿನವನ್ನಾಗಿ ಆಚರಿಸಲು ತಿಳಿಸಿದರು.
ಪ್ರತಿಯೊಬ್ಬ ಹಿರಿಯ ನಾಗರಿಕರು ತಮ್ಮ ಬಳಿ ಒಂದು ಊರುಗೋಲನ್ನ ಇಟ್ಟುಕೊಳ್ಳಲು ಒಂದು ಊರುಗೋಲು ಒಬ್ಬ ವ್ಯಕ್ತಿ ಜೊತೆಗಿದ್ದಷ್ಟು ಸಮಾನವಾದದ್ದು ಎಂಬುದನ್ನು ಹಿರಿಯರಿಗೆ ತಿಳಿಸಿದರು.

ಇದೇ ವೇಳೆ ಕ್ರೀಡಾ & ಸಾಂಸ್ಕೃತಿಕ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 09 ಹಿರಿಯ ನಾಗರಿಕರನ್ನು ಮತ್ತು ಒಂದು ಸಂಸ್ಥೆಯನ್ನು ಸನ್ಮಾನಿಸಿ ಆಭಿನಂದಿಸಲಾಯಿತು. 100 ವರ್ಷ ಮೇಲ್ಪಟ್ಟ ಇಬ್ಬರು ಹಿರಿಯ ನಾಗರಿಕರಾದ ಶ್ರೀಮತಿ ಮುನಿಯಮ್ಮ ಆದಿನಾರಾಯಣ ಹೊಸಹಳ್ಳಿ ಹಾಗೂ ಶ್ರೀ.ಕೆಂಪಣ್ಣ ಆದಿನಾರಾಯಣ ಹೊಸಹಳ್ಳಿ ಇವರನ್ನು ಮಾನ್ಯ ಚುನಾವಣೆ ಆಯೋಗದ ನಿರ್ದೇಶನದಂತೆ ಹಿರಿಯ ಮತದಾರರೆಂದು ಸನ್ಮಾನಿಸಲಾಯಿತು.

ಸಭೆಯಲ್ಲಿ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿಗಳು, ಜಿಲ್ಲಾ/ತಾಲ್ಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು/ಪಧಾದಿಕಾರಿಗಳು, ಗ್ರಾಮೀಣ/ನಗರ/ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಹಾಗೂ ಇಲಾಖೆಯ ಸಿಬ್ಬಂದಿಗಳು   ಉಪಸ್ಥಿತರಿದ್ದರು.

 

₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹

ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 154ನೇ ಜಯಂತಿ ಆಚರಣೆ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 1 : ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 154ನೇ ಜಯಂತಿಯನ್ನು ಅಕ್ಟೋಬರ್ 02 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 9.30 ಗಂಟೆಗೆ ಏರ್ಪಡಿಸಲಾಗಿದೆ.

ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟನೆ ಮಾಡಲಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಬಿ.ಎನ್.ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯರಾದಎಸ್.ರವಿ, ಎನ್.ನಾಗರಾಜು, ಅ.ದೇವೇಗೌಡ, ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ ಕುಮಾರ್ ಬಚ್ಚೇಗೌಡ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಶಾಸಕ ಧೀರಜ್ ಮುನಿರಾಜ್, ನೆಲಮಂಗಲ ವಿಧಾನಸಭಾಕ್ಷೇತ್ರ ಶಾಸಕ ಎನ್ ಶ್ರೀನಿವಾಸ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿಯ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ.ಕೆ.ಫಾಹಿಂ, ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ, ಉಪಾಧ್ಯಕ್ಷ ಮುನಿರಾಜು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ್.ಎನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ‌.ಕೆ.ಎನ್.ಅನುರಾಧ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕಿ ಸಿ.ರೂಪ ಸೇರಿದಂತೆ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ನಾಮ ನಿರ್ದೇಶಿತ ಸದಸ್ಯರು ಹಾಗೂ ಪತ್ರಿಕಾ ಮತ್ತು ಮಾಧ್ಯಮ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.