ಆರೋಗ್ಯ ಸೇವೆಗಳ ಸೌಲಭ್ಯ ಪಡೆದುಕೊಳ್ಳಿ: ಜಿಲ್ಲಾಧಿಕಾರಿ ಡಾ. ಶಿವಶಂಕರ್

ವಿಜಯ ದರ್ಪಣ ನ್ಯೂಸ್.

ಬಿಜಿಎಸ್ ನಗರ, ದೇವನಹಳ್ಳಿತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 16 . ಆರೋಗ್ಯ ಸೇವೆಗಳನ್ನು ಜನಮುಖಿಗೊಳಿಸುವ ನಿಟ್ಟಿನಲ್ಲಿ ಘನ ಭಾರತ ಸರ್ಕಾರವು ಸಾರ್ವತ್ರಿಕ ಜನ ಆರೋಗ್ಯ ಸೇವೆ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಹಾಗೂ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿಯಲ್ಲಿ ಆಯುಷ್ಮಾನ್ ಭವಃ ಅಭಿಯಾನ ಕಾರ್ಯಕ್ರಮವನ್ನು ರೂಪಿಸಿದ್ದು, ಅಭಿಯಾನವನ್ನು ದೇಶದ ಘನ ವೆತ್ತ ರಾಷ್ಟ್ರಪತಿಗಳು ದ್ರೌಪದಿ ಮುರ್ಮು ರವರು ಸೆಪ್ಟೆಂಬರ್ 13ರಂದು ಚಾಲನೆ ನೀಡಿರುತ್ತಾರೆ.‌
ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾ, ತಾಲ್ಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರಗಳ ಮಟ್ಟದಲ್ಲಿ ಈ ಅಭಿಯಾನ ಚಾಲನೆಗೊಂಡಿರುತ್ತದೆ.


ಈ ಆಯುಷ್ಮಾನ್ ಭವಃ ಅಭಿಯಾನ ಕಾರ್ಯಕ್ರಮ ದಿನಾಂಕ: 17.09.2023ರಿಂದ 31.12.2023 ರವರೆಗೂ ಆರೋಗ್ಯ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ನಡೆಯಲಿದೆ.

ಈ ಅಭಿಯಾನದಲ್ಲಿ ಪ್ರಮುಖವಾಗಿ ಆಯುಷ್ಮಾನ್ ಆಪ್ಕೆದ್ವಾರ 3.0, ಆಯುಷ್ಮಾನ್ ಮೇಳ, ಆಯುಷ್ಮಾನ್ ಸಭಾ, ಸ್ವಚ್ಛತಾ ಅಭಿಯಾನ, ರಕ್ತದಾನ‌ ಶಿಬಿರಗಳು, ಅಂಗಾಂಗ ದಾನ ಜಾಗೃತಿ ಮತ್ತು ನೊಂದಣಿ ಸೌಲಭ್ಯಗಳು ಒಳಗೊಂಡಿದ್ದು, ಸಾರ್ವಜನಿಕರು, ಆರೋಗ್ಯ ಸೇವೆಗಳ ಸೌಲಭ್ಯ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಡಾ.ಶಿವಶಂಕರ.ಎನ್ ತಿಳಿಸಿದ್ದಾರೆ.

ಆಯುಷ್ಮಾನ್ ಆಪ್ಕೆದ್ವಾರ 3.0 (17.09.2023 ರಿಂದ 31.12.2023 ರವರೆಗೆ) ಆಯುಷ್ಮಾನ್ ಕಾರ್ಡ್, ಆಯುಷ್ಮಾನ್ ಭಾರತ್ ಕಾರ್ಡ್ಗಳ ಮೂಲಕ ಬಿ.ಪಿ.ಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷದವರೆಗೆ ಹಾಗು ಎ.ಪಿ.ಎಲ್ ಕುಟುಂಬಗಳಿಗೆ 1.5 ಲಕ್ಷದವರೆಗೆ ಉಚಿತ ಚಿಕಿತ್ಸಾ ವೆಚ್ಚವನ್ನು ಸುಸಜ್ಜಿತ ಸರಕಾರಿ ಅಥವಾ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ ಗ್ರಾಮ ಒನ್ ವಿವಿಧ ಸೇವಾ ಕೇಂದ್ರಗಳ ಮೂಲಕ 3,62,138 ಲಕ್ಷ ನೊಂದಣಿ ಮಾಡಿಸಲಾಗಿದ್ದು ಅಭಿಯಾನದಲ್ಲಿ ಬಾಕಿ ಉಳಿದ 4,89,772 ಕಾರ್ಡ್ಗಳನ್ನು ವಿತರಿಸಲು ಹೆಚ್ಚು ಒತ್ತು ನೀಡಲಾಗುವುದು.

ಆಯುಷ್ಮಾನ್ ಮೇಳ (17.09.2023 ರಿಂದ 31.12.2023 ರವರೆಗೆ)
ಜಿಲ್ಲೆಯ 197 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಹಾಗು ವಿಜಯಪುರ ಮತ್ತು ತ್ಯಾಮಗೊಂಡ್ಲು 2 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಮಂಗಳವಾರ ಆರೋಗ್ಯ ಮೇಳಗಳನ್ನು ಹಮ್ಮಿಕೊಂಡಿದ್ದು ತಪಾಸಣೆ ಮೂಲಕ ನಿರ್ದಿಷ್ಠ ಕಾಯಿಲೆಗಳನ್ನು ಗುರುತಿಸಿ ಸೇವೆ ಕೊಡುವ ವ್ಯವಸ್ಥೆ ಹಾಗು ಅಗತ್ಯ ಇರುವವರಗೆ ಟೆಲಿಕನ್ಸಲ್ಟೇಷನ್ ಮೂಲಕ ತಜ್ಞರಿಂದ ಸೇವೆ ಮತ್ತೆ ನಿಗದಿ ಪಡಿಸಿದ ನಮೂನೆಯಲ್ಲಿ ರೆಫರಲ್ ಸೇವೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು ವಿಶೇಷವಾಗಿ ಮೊದಲನೇ ವಾರ ಅಸಾಂಕ್ರಾಮಿಕ ರೋಗಗಳಾದ ಮಧುಮೇಹ ಮತ್ತು ರಕ್ತದೊತ್ತಡ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶ ಕಂಠದ ಕ್ಯಾನ್ಸರ್ ತಪಾಸಣೆ, ಎರಡನೇ ವಾರ ಸಾಂಕ್ರಾಮಿಕ ರೋಗಗಳಾದ ಕ್ಷಯ ರೋಗದ ಮತ್ತು ಕುಷ್ಠ ರೋಗ ಇತರೆ ಸಾಂಕ್ರಾಮಿಕ ರೋಗಗಳ ತಪಾಸಣೆ, ಮೂರನೇ ವಾರ ತಾಯಿ ಮತ್ತು ಮಕ್ಕಳ ಆರೋಗ್ಯ, ಲಸಿಕಾ ಕಾರ್ಯಕ್ರಮ ಮತ್ತು ಪೌಷ್ಟಿಕ ಆಹಾರ, ನಾಲ್ಕನೇ ವಾರ ಜಿಲ್ಲಾ ಮಟ್ಟದ ನಿರ್ದಿಷ್ಠ ರೋಗಗಳು(Sickle Cell Anaemia) ರಕ್ತಹೀನತೆ ಹಾಗು ಕಣ್ಣಿನ ಸುರಕ್ಷತೆ ಸೇವೆಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಆಯುಷ್ಮಾನ್ ಸಭೆ (ಅಕ್ಟೋಬರ್‌02)
ಗ್ರಾಮ ಮತ್ತು ವಾರ್ಡ್ ಮಟ್ಟದಲ್ಲಿ ವಿವಿಧ ಆರೋಗ್ಯ ಸೇವೆಗಳ ಕುರಿತು ಜಾಗೃತಿಯೊಂದಿಗೆ ಸ್ಥಳಿಯ ಆರೋಗ್ಯ ಸಮಸ್ಯೆಗಳನ್ನು ನಗರ ಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯತ್, ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ, ಮಹಿಳಾ ಆರೋಗ್ಯ ಸಮಿತಿ, ಜನ ಆರೋಗ್ಯ ಸಮಿತಿ ಮೂಲಕ ಚರ್ಚಿಸಿ ಸ್ಥಳದಲ್ಲಿಯೇ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಸಭೆಯಲ್ಲಿ ಮುಖ್ಯವಾಗಿ ಆಯುಷ್ಮಾನ್ ಭಾರತ್ ಕಾರ್ಡ್ಗಳ ವಿತರಣೆ, ಆರೋಗ್ಯ ಶಿಕ್ಷಣ, ಅಸಾಂಕ್ರಾಮಿಕ ರೋಗಗಳು, ಕ್ಷಯ ರೋಗ ಇತರೆ ರೋಗಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಸೇವಾ ಪಖ್ವಾಡ : 17.09.2023 ರಿಂದ 02.10.2023 ರವರೆಗೆ ಆಯುಷ್ಮಾನ್ ಭವಃ ಅಭಿಯಾನದ ಜೊತೆಗೆ ಸ್ವಚ್ಛಾ ಭಾರತ ಅಭಿಯಾನ, ರಕ್ತದಾನ ಶಿಬಿರಗಳು ಹಾಗೂ ಅಂಗಾಂಗ ದಾನದ ಬಗ್ಗೆ ಅರಿವು ಹಾಗು ನೊಂದಾಣಿ ಕಾರ್ಯಕ್ರಮಗಳನ್ನು ಸಹ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.