ದಸರಾ ಕ್ರೀಡಾಕೂಟ ಆಯೋಜಿಸಲು ಅಗತ್ಯ ಸಿದ್ಧತೆ ಕೈಗೊಳ್ಳಿ: ಅಪರ ಜಿಲ್ಲಾಧಿಕಾರಿ ಅಮರೇಶ್

ವಿಜಯ ದರ್ಪಣ ನ್ಯೂಸ್

ಬಿಜಿಎಸ್ ನಗರ, ದೇವನಹಳ್ಳಿ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 08

2023-24 ನೇ ಸಾಲಿನ ದಸರಾ ಕ್ರೀಡಾಕೂಟವನ್ನು ಸೆಪ್ಟೆಂಬರ್ 21 ರಂದು ಜಿಲ್ಲೆಯಲ್ಲಿ ಆಯೋಜಿಸಲು ನಿಗದಿಪಡಿಸಲಾಗಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳಲು ಅಪರ ಜಿಲ್ಲಾಧಿಕಾರಿ ಅಮರೇಶ್. ಹೆಚ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ 2023-24ನೇ ಸಾಲಿನ ತಾಲೂಕು, ಜಿಲ್ಲಾ ಮತ್ತು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಆಯೋಜನೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ಹೊಸಕೋಟೆ ತಾಲ್ಲೂಕುಗಳ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಏಕ ಕಾಲದಲ್ಲಿ ಸೆಪ್ಟೆಂಬರ್ 21 ರಂದು ಹಾಗೂ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟವನ್ನು ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲು ನಿರ್ಧರಿಸಲಾಗಿದೆ, ಕ್ರೀಡಾಕೂಟದಲ್ಲಿ ಗ್ರಾಮೀಣ ಭಾಗದ ಕ್ರೀಡಾ ಪಟುಗಳು ಹೆಚ್ಚು ಭಾಗವಹಿಸಲು ಕ್ರಮವಹಿಸಿ ಎಂದರು.

ಕ್ರೀಡಾಕೂಟ ನಡೆಯುವ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ, ಆರೋಗ್ಯ ಇಲಾಖೆಯಿಂದ ಆಂಬುಲೆನ್ಸ್ ಸೇವೆ ಸೇರಿದಂತೆ ತಾಲ್ಲೂಕು ಮಟ್ಟದಲ್ಲಿ ಎಸಿ, ತಹಶೀಲ್ದಾರ್,ಕಾರ್ಯ ನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಹಾಗೂ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಎಂದರು.

ಸಭೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಟಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರು, ದೈಹಿಕ ಶಿಕ್ಷಣ ಅಧಿಕಾರಿಗಳು ಉಪಸ್ಥಿತರಿದ್ದರು

////////////////////////////////////////////////////////////////

ಐ.ಎ.ಎಸ್/ಕೆ.ಎ.ಎಸ್ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನ.

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 08

2023-24 ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಐ.ಎ.ಎಸ್/ಕೆ.ಎ.ಎಸ್ ಸ್ಫರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿಗೆ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಬೌದ್ದ, ಸಿಖ್ ಮತ್ತು ಪಾರ್ಸಿ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳಿಂದ ದಿನಾಂಕ 06/09/2023 ರಿಂದ 16/09/2023 ರವರೆಗೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಐ.ಎ.ಎಸ್/ಕೆ.ಎ.ಎಸ್ ಸ್ಫರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ತರಬೇತಿಯ ಅವಧಿ ಶೈಕ್ಷಣಿಕ ವಿದ್ಯಾರ್ಹತೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿವರಗಳು ಈ ಕೆಳಕಂಡಂತಿವೆ. ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷಾ ಪೂರ್ವ ತರಬೇತಿಯು 10 ತಿಂಗಳಾಗಿದ್ದು, ವಯಸ್ಸು 21 ರಿಂದ 35 ವರ್ಷ ವಯಸ್ಸಿನವರಾಗಿರಬೇಕು.
ಅಭ್ಯರ್ಥಿಯು ತರಬೇತಿಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕದೊಳಗೆ ಅಂತಿಮ ವರ್ಷದ ಪದವಿಯ ಫಲಿತಾಂಶ ಪ್ರಕಟಗೊಂಡಿರಬೇಕು ಹಾಗೂ ಪದವಿ ಹೊಂದಿರಬೇಕು.
ಅಭ್ಯರ್ಥಿಯು, ಕರ್ನಾಟಕ ಖಾಯಂ ನಿವಾಸಿಯಾಗಿದ್ದು, ರಾಜ್ಯ ಅಲ್ಪಸಂಖ್ಯಾತರ ಸಮುದಾಯಗಳಾದ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಬೌದ್ದ, ಸಿಖ್ ಮತ್ತು ಪಾರ್ಸಿ ಜನಾಂಗಕ್ಕೆ ಸೇರಿದವರಾಗಿರಬೇಕು. ಅಭ್ಯರ್ಥಿಯು ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು. ಅಭ್ಯರ್ಥಿಗಳಿಗೆ ಕೆ.ಇ.ಎ/ಇಲಾಖಾ ವತಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು ಹಾಗೂ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸುವ ವೆಬ್ ಸೈಟ್
https://sevasindhu.Karnataka.gov.in/Sevasindhu/Department services
https://dom.Karnataka.gov.in ನಲ್ಲಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 16 ಕೊನೆಯ ದಿನವಾಗಿರುತ್ತದೆ.
ಇಲಾಖಾ ವತಿಯಿಂದ ಯಾವುದೇ ತರಬೇತಿ ಪಡೆಯದ ಹೊಸ ಅಭ್ಯರ್ಥಿಗಳಿಗೆ ಪೂರ್ಣ ಪ್ರಮಾಣದ ತರಬೇತಿಯನ್ನು ನೀಡಲಾಗುವುದು. ಈಗಾಗಲೇ ಇಲಾಖೆ/ಖಾಸಗಿ ಸಂಸ್ಥೆಗಳಿಂದ ತರಬೇತಿಯನ್ನು ಪಡೆದಿದ್ದು ಸ್ವಯಂ ಅಧ್ಯಯನ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಪೂರ್ಣ ಪ್ರಮಾಣದ ತರಗತಿಗಳನ್ನು ಹೊರತು ಪಡಿಸಿ ಉಚಿತ ವಸತಿಯೊಂದಿಗೆ ಪ್ರತಿಷ್ಠಿತ ಸಂಸ್ಥೆಯಿಂದ ತರಬೇತಿ ಒದಗಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಛೇರಿ, ಜಿಲ್ಲಾ ಮಾಹಿತಿ/ತಾಲ್ಲೂಕು ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸುವುದು.
1.ಜಿಲ್ಲಾ ಕಛೇರಿ, ದೇವನಹಳ್ಳಿ
080- 29787455,
2.ತಾಲ್ಲೂಕು ಮಾಹಿತಿ ಕೇಂದ್ರ, ದೊಡ್ಡಬಳ್ಳಾಪುರ ತಾಲ್ಲೂಕು
9986874875,
3.ತಾಲ್ಲೂಕು ಮಾಹಿತಿ ಕೇಂದ್ರ, ನೆಲಮಂಗಲ ತಾಲ್ಲೂಕು
8660197516,
4.ತಾಲ್ಲೂಕು ಮಾಹಿತಿ ಕೇಂದ್ರ, ದೇವನಹಳ್ಳಿ ತಾಲ್ಲೂಕು
8861926851,
5.ತಾಲ್ಲೂಕು ಮಾಹಿತಿ ಕೇಂದ್ರ, ಹೊಸಕೋಟೆ ತಾಲ್ಲೂಕು
7676905779,
6.ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯವಾಣಿ
8277799990 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

********+++++++*********++++++*******

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ಅರ್ಜಿ ಆಹ್ವಾನ

ಬೆಂಗಳೂರು ಸೆಪ್ಟೆಂಬರ್ 08

ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ “ಮಹಾತ್ಮಗಾಂಧೀ ಸೇವಾ ಪ್ರಶಸ್ತಿ-ಕರ್ನಾಟಕ”ಗೆ ಪ್ರಸಕ್ತ ಸಾಲಿಗೆ ಅರ್ಹ ಸಾಧಕರನ್ನು ಅಥವಾ ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಾರ್ವಜನಿಕ ಜೀವನದಲ್ಲಿ ಮಹಾತ್ಮಗಾಂಧೀಜಿಯವರ
ಆದರ್ಶಗಳನ್ನು ಅಳವಡಿಸಿಕೊಂಡು ಜೀವನ ನಡೆಸುತ್ತಿರುವ ಕನಿಷ್ಠ 60 ವರ್ಷಗಳಾಗಿರುವ ವ್ಯಕ್ತಿಗಳು ಅಥವಾ 25 ವರ್ಷಗಳು ತುಂಬಿರುವ ಸೇವಾ ಸಂಸ್ಥೆಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರಶಸ್ತಿಯನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯನ್ನು ರಚಿಸಲಾಗುವುದು. 2023 ರ ಅಕ್ಟೋಬರ್ 02 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಮಹಾತ್ಮಗಾಂಧೀಜಿಯವರು ಪ್ರಚುರುಪಡಿಸಿದ ಜನಪರ ಕಾರ್ಯಕ್ರಮಗಳಾದ ಅಸ್ಪೃಶ್ಯತೆ ನಿವಾರಣೆ, ಅಹಿಂಸೆ, ಮಹಿಳಾ ಸಬಲೀಕರಣ, ಗ್ರಾಮೀಣ ನೈರ್ಮಲ್ಯ, ಮದ್ಯಪಾನ ವಿರೋಧಿ ನೀತಿ, ಖಾದಿ ಮತ್ತು ಸ್ವದೇಶಿವಸ್ತು ಬಳಕೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಾರ, ಈ ಕ್ಷೇತ್ರಗಳಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಸಂಘ ಸಂಸ್ಥೆಗಳು ಅಥವಾ ವ್ಯಕ್ತಿಗಳು ಶಿಫಾರಸ್ಸನ್ನು ಕೂಡ ಮಾಡಬಹುದಾಗಿದೆ. ಸೆಪ್ಟೆಂಬರ್ 15 ರ ಒಳಗಾಗಿ ಅರ್ಜಿಗಳನ್ನು ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಸೌಧ, ನಂ. 17, ಭಗವಾನ್ ಮಹಾವೀರ ರಸ್ತೆ (ಇನ್‌ಫೆಂಟ್ರಿ ರಸ್ತೆ), ಬೆಂಗಳೂರು-560 001 ಅಥವಾ ಇ-ಮೇಲ್ : information diprawards@gmail.com ವಿಳಾಸಕ್ಕೆ ಕಳುಹಿಸಬಹುದಾಗಿದೆ.