ಸ್ವರ್ಣಗೌರಿ ಹಾಗೂ ಗಣೇಶ ಚತುರ್ಥಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಿ : ಜಿಲ್ಲಾಧಿಕಾರಿ ಡಾ.ಶಿವಶಂಕರ್. 

 

ವಿಜಯ ದರ್ಪಣ ನ್ಯೂಸ್

ಬಿಜಿಎಸ್ ನಗರ,ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆ.4 

ಸ್ವರ್ಣಗೌರಿ ಹಾಗೂ ವರಸಿದ್ಧಿ ವಿನಾಯಕ ಚತುರ್ಥಿ ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಡಾ. ಶಿವಶಂಕರ್. ಎನ್. ಅವರು ಕರೆ ನೀಡಿದ್ದಾರೆ.


ಗೌರಿ ಹಾಗೂ ಗಣೇಶನ ಹಬ್ಬದ ಪ್ರಯುಕ್ತ ವಿಗ್ರಹದ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿ ಕೆರೆ/ಬಾವಿ ಹಾಗೂ ಇನ್ನಿತರ ನೈಸರ್ಗಿಕ ಜಲ ಮೂಲಗಳಿಗೆ ವಿಸರ್ಜಿಸುವುದು ಸಂಪ್ರದಾಯವಾಗಿದ್ದು, ಈ ಪ್ರತಿಮೆಗಳ ವಿಸರ್ಜನೆಯಿಂದ ನೈಸರ್ಗಿಕ ಜಲಮೂಲಗಳಲ್ಲಿ ಜಲ ಮಾಲಿನ್ಯ ಉಂಟಾಗುವುದು. ಮಾನ್ಯ ಉಚ್ಛ ನ್ಯಾಯಾಲಯ ಆದೇಶ ದಿನಾಂಕ : 18- 06-2019 ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಸೂಚನೆ ತಿಳಿಸಿರುವಂತೆ ಹಬ್ಬದ ಆಚರಣೆಯಿಂದ ನೈಸರ್ಗಿಕ ಜಲ ಮೂಲಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ಇನ್ನು ಮುಂದೆ ರಾಜ್ಯದ ಯಾವುದೇ ಕೆರೆ ಮತ್ತು ಇತರೇ ಜಲ ಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಲ ಮಾಲಿನ್ಯ ತಡೆಗಟ್ಟುವ ಕುರಿತುತೆಗೆದುಕೊಳ್ಳಬೇಕಾದ ಕ್ರಮಗಳು

1. ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವ್ಯಕ್ತಿ ಸಂಸ್ಥೆಗಳಿಗೆ ವ್ಯಾಪಾರ ಲೈಸನ್ ನೀಡದಿರಲು ಮತ್ತು ಲೈಸೆನ್ಸ್‌ ಪಡೆಯದೇ ಅನಧಿಕೃತವಾಗಿ ತಯಾರಿ ಮಾರಾಟ ಮಾಡುವ ವ್ಯಕ್ತಿ ಸಂಸ್ಥೆಗಳ ಮೇಲೆ ಕಾನೂನು ಕ್ರಮವನ್ನು ತಕ್ಷಣ ಜರುಗಿಸುವುದು.

2. ಸದರಿ ಅಧಿಸೂಚನೆಯ ಅನ್ವಯ ಪ್ಲಾಸ್ಟರ್ ಆಫ್ ಪ್ಯಾರಿಸ್ / ಬಣ್ಣ ಲೇಪಿತ ಮೂರ್ತಿಗಳನ್ನು ಯಾವುದೇ ನದಿ / ಕಾಲುವೆ / ಬಾವಿಗಳಲ್ಲಿ, ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಐ.ಪಿ.ಎಸ್ ಸೆಕ್ಷನ್ 1860) ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು.

3. ಗೌರಿ ಹಾಗೂ ಗಣೇಶ ಹಬ್ಬದ ಸಂದರ್ಭದಲ್ಲಿ ರಾಸಾಯನಿಕ ಬಣ್ಣಗಳಿಂದ ಮಾಡಿದ ಮೂರ್ತಿಗಳ ಬದಲಾಗಿ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿದ ನಂತರ ಸಾಮೂಹಿಕವಾಗಿ ಗುರುತಿಸಿರುವ ಸ್ಥಳಗಳಲ್ಲಿ ವಿಸರ್ಜಿಸುವುದು.

4. ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ, ಮೊಬೈಲ್, ಟ್ಯಾಂಕ್‌ಗಳಲ್ಲಿ/ಕಲ್ಯಾಣಿಗಳ ಪಕ್ಕದಲ್ಲಿ ಹಸಿ ಕಸ (ಹೂವು ಹಣ್ಣು, ಬಾಳೆಕಂಬ, ಮಾವಿನ ತೋರಣ, ಇತ್ಯಾದಿ) ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೆ ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಕ್ರಮವಹಿಸುವುದು,

5. ನೈಸರ್ಗಿಕ – ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಮೊಬೈಲ್, ಟ್ಯಾಂಕ್‌ಗಳಲ್ಲಿ ಕಲ್ಯಾಣಿಗಳ ಪಕ್ಕದಲ್ಲಿ ಹಸಿ ಕಸ (ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ, ಇತ್ಯಾದಿ ಅಲಂಕಾರಿಕ ವಸ್ತುಗಳು) ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ
ವಿಸರ್ಜಿಸದೆ ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಲು ಕ್ರಮ ವಹಿಸುವುದು.

6.ವಾರ್ಡ್‌ ಮಟ್ಟದಲ್ಲಿ ಪೊಲೀಸರ ಸಹಯೋಗದೊಂದಿಗೆ ಸಮಿತಿಗಳನ್ನು ರಚಿಸಿ, ಗಣೇಶ ಮೂರ್ತಿಗಳ ಸೂಕ್ತ ವಿಲೇವಾರಿಗೆ ಕ್ರಮ ಕೈಗೊಳ್ಳುವುದು.

7. ಸಾರ್ವಜನಿಕವಾಗಿ ಇಡಲಾಗುವ ಗಣೇಶ ಮೂರ್ತಿಗಳನ್ನು ಪ್ರತಿ ಸಮಿತಿಯವರು ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳು ಮತ್ತು ಪೋಲೀಸ್ ಇಲಾಖೆಯಿಂದ ನಿಬಂಧನೆಗೊಳಪಟ್ಟ ಅನುಮತಿಗಳನ್ನು ಪಡೆದ ನಂತರವೇ ಸ್ಥಾಪಿಸುವುದು, ಈ ಅನುಮತಿ ಪತ್ರಗಳಲ್ಲಿ ಲೈಸೆನ್ಸ್‌ ನೀಡುವ ಸಂದರ್ಭಗಳಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್ ಮತ್ತಿತರ ವಸ್ತುಗಳ ಬಳಕೆ ನಿಷೇಧಿಸುವುದು ಹಾಗೂ ರಾತ್ರಿ 10.00 ರಿಂದ ಬೆಳಗ್ಗೆ 6.00 ಗಂಟೆಯ ವರೆಗೆ ಧ್ವನಿವರ್ಧಕಗಳ ಬಳಕೆ ನಿಷೇಧಿಸುವುದು.

8. ನಿರ್ದಿಷ್ಟ ಪ್ರದೇಶದಲ್ಲಿ ಸ್ಥಾಪಿಸಲಾಗುವ ಸಾರ್ವಜನಿಕ ಗಣಪತಿಗಳನ್ನು ವಿಲೇವಾರಿ ಮಾಡಲು ನಿರ್ದಿಷ್ಟ ಜಲಮೂಲಗಳನ್ನು ನಿಗದಿಪಡಿಸುವುದು ಮತ್ತು ಈ ಬಗ್ಗೆ ಸೂಕ್ತ ಪ್ರಕಟಣೆಯನ್ನು ಹೊರಡಿಸುವುದು.

9. ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪಿ.ಒ.ಪಿ ಮತ್ತು ಬಣ್ಣದ ಮೂರ್ತಿಗಳ ತಯಾರಿ ಕಂಡು ಬಂದಲ್ಲಿ ತನಿಖೆ ಮಾಡಿ ಸುಪರ್ದಿಗೆ ತೆಗೆದುಕೊಳ್ಳಲು ಕ್ರಮ ವಹಿಸುವುದು.

10. ಜಿಲ್ಲೆ ಅಥವಾ ತಾಲ್ಲೂಕುಗಳಿಗೆ ಬೇರೆ ಸ್ಥಳಗಳಿಂದ ಬರುವಂತಹ ಪಿ.ಒ.ಪಿ. ಮೂರ್ತಿಗಳನ್ನು ತಡೆಗಟ್ಟಲು ಸಂಬಂಧಿಸಿದ ಚೆಕ್ ಪೋಸ್ಟ್ ಅಧಿಕಾರಿಗಳು ಸೂಕ್ತ ಕ್ರಮ ವಹಿಸುವುದು.

11. ಕರ್ನಾಟಕ ಸರ್ಕಾರದಿಂದ ಈಗಾಗಲೇ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವ ಸಂಬಂಧದ ಬಗ್ಗೆ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮಗಳ ಅನುಷ್ಠಾನದ ಕುರಿತು ದಿನಾಂಕ 30.08.2022 ರಂದು ಸುತ್ತೋಲೆಯನ್ನು ಹೊರಡಿಸಲಾಗಿರುತ್ತದೆ. ಸುತ್ತೋಲೆಯಂತೆ ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಗಣೇಶ ಪೆಂಡಾ‌ಲ್ ಗಳಲ್ಲಿ ಬಲೂನ್‌ಗಳು, ಬಲೂನ್‌ಗಳಿಗೆ ಬಳಸುವ ಪ್ಲಾಸ್ಟಿಕ್ ಸ್ಟಿಕ್‌ಗಳು, ಪ್ಲಾಸ್ಟಿಕ್ ಕ್ಯಾಂಡಿ ಸ್ಟಿಕ್‌ಗಳು, ಪ್ಲಾಸ್ಟಿಕ್ ಐಸ್ ಕ್ರೀಮ್ ಸ್ಟಿಕ್‌ಗಳು, ಅಲಂಕಾರಕ್ಕಾಗಿ ಬಳಸುವ ಪಾಲಿಸ್ಟೆರೀನ್ (ಥರ್ಮೋಕೋಲ್) ಗಳನ್ನು ಬಳಸದಂತೆ ನಿಗಾವಹಿಸುವುದು.

ಪ್ಲಾಸ್ಟಿಕ್ ನಿಷೇಧ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಎಲ್ಲಾ ನಗರಸಭೆ, ಪಾಲಿಕೆ ಹಾಗೂ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ
ಎಲ್ಲಾ ರೀತಿಯ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳು, ಪ್ಲಾಸ್ಟಿಕ್ ಧ್ವಜಗಳು, ಅಂಟಿಕೊಳ್ಳುವ ಫಿಲ್ಮ್ ಗಳು, ಡೈನಿಂಗ್ ಟೇಬಲ್‌ನಲ್ಲಿ ಹರಡಲು ಬಳಸುವ ದಪ್ಪದ ಪ್ಲಾಸ್ಟಿಕ್ ಹಾಳೆಗಳು, ಸ್ಟ್ರಾಗಳು, ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳು, ಪ್ಲಾಸ್ಟಿಕ್ ಪ್ಲೇಟ್‌ಗಳು, ಪ್ಲಾಸ್ಟಿಕ್ ಕಪ್‌ಗಳು ಮತ್ತು ಲೋಟಗಳು, ಫೋರ್ಕ್ ಗಳು, ಪ್ಲಾಸ್ಟಿಕ್ ಚಮಚಗಳು, ಪ್ಲಾಸ್ಟಿಕ್ ಚಾಕುಗಳು, ಪ್ಲಾಸ್ಟಿಕ್ ಟ್ರೇಗಳು, ಸ್ವೀಟ್ ಬಾಕ್ಸ್‌ಗಳು / ಆಮಂತ್ರಣ ಪತ್ರಗಳು / ಸಿಗರೇಟ್ ಪ್ಯಾಕೆಟ್‌ಗಳ ಸುತ್ತ ಸುತ್ತುವ ಪದರ ಅಥವಾ ಪ್ಯಾಕಿಂಗ್ ಫಿಲ್ಮ್ ಗಳು ಮತ್ತು ಪ್ಲಾಸ್ಟಿಕ್ ಸ್ಟಿಕರ್‌ಗಳು ನಿಷೇಧಿತ ವಾಗಿದ್ದು ಅಧಿಕಾರಿಗಳು, ಮಾರ್ಷಲ್ ಗಳು ಈ ವಸ್ತುಗಳ ಬಳಕೆಯಾಗದಂತೆ ನಿಗಾವಹಿಸ ತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹

ಜಿಲ್ಲಾ ಎಂ.ಐ.ಎಸ್. ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ವ್ಯಾಪ್ತಿಯ ಜಲ ಜೀವನ್ ಮಿಷನ್ ಯೋಜನೆಯಡಿ ಖಾಲಿ ಇರುವ ತಾತ್ಕಾಲಿಕ ಹುದ್ದೆ ಗುತ್ತಿಗೆ / ಹೊರಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಎಂ.ಐ.ಎಸ್ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದ ಮೂಲಕ ಪದವಿ/ ಸ್ನಾತಕೋತ್ತರ ಪದವಿಯಾದ ಅಂಕಿ ಅಂಶ (statistics) ಮತ್ತು ಗಣಕ ಯಂತ್ರ ವಿಜ್ಞಾನದ ವಿಷಯದಲ್ಲಿ ಉತ್ತೀರ್ಣರಾಗಿರಬೇಕು ಕನಿಷ್ಠ 3 ವರ್ಷ ಕೆಲಸ ನಿರ್ವಹಿಸಿದ ಅನುಭವವಿರಬೇಕು. ಅನುಭವದ ಆಧಾರದ ಮೇಲೆ 25,000 ದಿಂದ 30,000 ರೂ ಗಳ ವೇತನ ನೀಡಲಾಗುವುದು. ವಯಸ್ಸು 45 ವರ್ಷ ಮೀರಿರಬಾರದು. ದೂರ ಶಿಕ್ಷಣ ಮುಖಾಂತರ ಪಡೆದ ಅಭ್ಯರ್ಥಿ ಅರ್ಹರಿರುವುದಿಲ್ಲ. ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ನೇಮಿಸಿಕೊಳ್ಳಲಾಗುವುದು. ಭರ್ತಿ ಮಾಡಿದ ಅರ್ಜಿಯನ್ನು 2023 ರ ಸೆಪ್ಟೆಂಬರ್ 15 ರೊಳಗಾಗಿ – eerdwsd.bngrl@gmail. Com ಗೆ ಅಥವಾ ಕಾರ್ಯಪಾಲಕ ಇಂಜಿನಿಯ‌ ರವರ ಕಚೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಜಿಲ್ಲಾಡಳಿತ ಭವನ, ಚಪ್ಪರದಕಲ್ಲು (ಬೀರಸಂದ್ರ), ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಇಲ್ಲಿಗೆ ಖುದ್ದಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಬೆಂಗಳೂರು ಗ್ರಾಮಾಂತರ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.