ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ನೋಂದಾಯಿಸಿ ಕೊಳ್ಳಲು ಜಿಲ್ಲಾಧಿಕಾರಿ ಕರೆ.

ವಿಜಯ ದರ್ಪಣ ನ್ಯೂಸ್, ದೇವನಹಳ್ಳಿ 
ಬೆಂಗಳೂರು ಗ್ರಾ ಜಿಲ್ಲೆ, ಜುಲೈ 24 

2023 ನೇ ಸಾಲಿನ “ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು 2023 ರ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿದ್ದು ಅಧಿಸೂಚಿತ ಬೆಳೆಗಳನ್ನು ಬೆಳೆಯುವ ರೈತರು ಈ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ರೈತರಲ್ಲಿ ಅರಿವು ಮೂಡಿಸಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಇಂದು ನಡೆದ *ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ* ಯೋಜನೆಯ ಜಿಲ್ಲಾಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ಬೆಳೆಗಳಾದ ರಾಗಿ, ಮುಸುಕಿನ ಜೋಳ, ನೆಲಗಡಲೆ ಬೆಳೆ ಬೆಳೆಯುವ ರೈತರು ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿರುತ್ತದೆ. ಬೆಳೆ ಸಾಲ ಪಡೆದ ರೈತರಿಗೆ ನೋಂದಣಿಯು ಐಚ್ಛಿಕವಾಗಿದ್ದು ಸಂಬಂಧಿಸಿದ ಬ್ಯಾಂಕ್ ಶಾಖೆಗೆ ಲಿಖಿತ ರೂಪದಲ್ಲಿ ದೃಢೀಕರಣ ಸಲ್ಲಿಸಬೇಕಾಗಿರುತ್ತದೆ. ನೆಲಗಡಲೆ ಬೆಳೆ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿದ್ದು, ರಾಗಿ ಮತ್ತು ಮುಸುಕಿನ ಜೋಳ ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಲು ಆಗಸ್ಟ್ 16 ಕೊನೆಯ ದಿನವಾಗಿದೆ ಎಂದರು.

ತೋಟಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಮಾವು ಮತ್ತು ದ್ರಾಕ್ಷಿ ಬೆಳೆಗಳಿಗೆ ವಿಮೆ ನೋಂದಾಯಿಸಲು ಅವಕಾಶವಿದೆ, ಆದ್ದರಿಂದ ಮಾವು ಹಾಗೂ ದ್ರಾಕ್ಷಿ ಬೆಳೆಗಳನ್ನು ಬೆಳೆಯುವ ರೈತರು ಜುಲೈ 31 ರೊಳಗೆ ನೋಂದಾಯಿಸಿಕೊಳ್ಳಬಹುದು ಎಂದರು.

ಈ ನಿಟ್ಟಿನಲ್ಲಿ ರೈತರು ಬೆಳೆವಿಮೆಯಲ್ಲಿ ನೋಂದಾಯಿಸಿಕೊಳ್ಳಲು ತಾಲ್ಲೂಕು, ಹೋಬಳಿ, ಗ್ರಾಮಪಂಚಾಯಿತಿ ಮಟ್ಟದಲ್ಲಿ, ರೈತ ಸಂಪರ್ಕ ಕೇಂದ್ರಗಳಲ್ಲಿ ಭಿತ್ತಿಪತ್ರಗಳು ಹಾಗೂ ಕರಪತ್ರಗಳನ್ನು ಹಂಚುವ ಮೂಲಕ ರೈತರಲ್ಲಿ ಅರಿವು ಮೂಡಿಸಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಲು ಕ್ರಮವಹಿಸುವಂತೆ ತಾಲ್ಲೂಕು ಮತ್ತು ಹೋಬಳಿ ಮಟ್ಟದ ಅಧಿಕಾರಿಗಳು, ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಸೂಚಿಸಿದರು.

ಸಭೆಯಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗಳ ಕರಪತ್ರ ಹಾಗೂ ಭಿತ್ತಿಪತ್ರಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು.

ಸಭೆಯಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕ ವಿನುತ, ಎಂ.ಸಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ ಜೆ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿಮೆ ಕಂಪನಿಯ ಅಧಿಕಾರಿಗಳು ಉಪಸ್ಥಿತರಿದ್ದರು.                                 

*******************************

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ವ್ಯಾಪ್ತಿಗೆ ನೆಲಮಂಗಲ ಮಾವು ಬೆಳೆ

2023-24ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (RWBCIS)ಯಡಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ಅಧಿ ಸೂಚನೆ ಆದೇಶ ಹೊರಡಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲ್ಲೂಕು ಮಾವು ಬೆಳೆಯನ್ನು ವಿಮೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ.

ಹವಾಮಾನ ಅಂಶಗಳಾದ ತಾಪಮಾನ, ಗಾಳಿಯ ವೇಗ, ಮಳೆಯ ಪ್ರಮಾಣ,ಆರ್ದ್ರತೆ ಇತ್ಯಾದಿ ಮಾಹಿತಿಗಳನ್ನು ಸರ್ಕಾರದಿಂದ ಅಧಿಸೂಚಿತ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರ ಮತ್ತು ಸ್ವಯಂ ಚಾಲಿತ ಹವಾಮಾನ ಕೇಂದ್ರಗಳು, ದಾಖಲಾಗುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ.

ನೆಲಮಂಗಲ ತಾಲ್ಲೂಕಿನ ಮಾವು ಬೆಳೆಯುವ ರೈತ ಬಾಂಧವರು ಸದರಿ ಯೋಜನೆಯಡಿ ನೋಂದಾಯಿಸಿ ಉಪಯೋಗ ಪಡೆದುಕೊಳ್ಳುವುದು.

ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಲು ನಿಗದಿತ ಅರ್ಜಿಯೊಂದಿಗೆ
ಪ್ರಸಕ್ತ ಸಾಲಿನ ಬ್ಯಾಂಕ್‌ ಖಾತೆ ಪುಸ್ತಕ, ಆಧಾರ್ ನಕಲು ಪ್ರತಿ ಮತ್ತು ಸ್ವಯಂ ಘೋಷಿತ ಬೆಳೆ ಪಹಣಿ/ಕಂದಾಯ ರಶೀದಿ ವಿವರಗಳನ್ನು ಹತ್ತಿರದ ರಾಷ್ಟ್ರೀಯ ಅಧಿಕೃತ ಬ್ಯಾಂಕು/ಸಾಮಾನ್ಯ ಸೇವಾ ಕೇಂದ್ರ/ ಗ್ರಾಮ ಒನ್ ಕೇಂದ್ರಗಳಲ್ಲಿ ನೊಂದಾಯಿಸುವುದು.

ವಿಮೆ ಮಾಡಿಸುವ ರೈತರು Fruits ತಂತ್ರಾಂಶದ ನೋಂದಣಿ ಸಂಖ್ಯೆಯನ್ನು ಹೊಂದಿರಬೇಕಿದ್ದು ಸದರಿ ನೋಂದಣಿ ಸಂಖ್ಯೆಗೆ ಪಹಣಿ ವಿವರಗಳನ್ನು ಜೋಡಿಸಬೇಕಿರುತ್ತದೆ. ನೋಂದಣಿ ಸಂಖ್ಯೆ ಇಲ್ಲದ ರೈತರು ನೋಂದಣಿ ಸಂಖ್ಯೆಯನ್ನು ಮಾಡಿಕೊಂಡು ವಿಮೆಯಲ್ಲಿ ಪಾಲ್ಗೊಳ್ಳಬೇಕಿರುತ್ತದೆ.

ಬೆಳೆ ಸಾಲ ಪಡೆದ ರೈತರನ್ನು ಸಂಬಂಧಿಸಿದ ಬ್ಯಾಂಕಿನವರು ವಿಮೆ ವ್ಯಾಪ್ತಿಗೆ ನೋಂದಾಯಿಸಲಿದ್ದು, ಸದರಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಇಚ್ಛಿಸದ ರೈತರು ಸಂಬಂಧಿಸಿದ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಿಗೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದರೆ ಅಂತಹ ರೈತರನ್ನು ಯೋಜನೆಯಿಂದ ಕೈಬಿಡಲು ಅವಕಾಶವಿರುತ್ತದೆ.

ನೆಲಮಂಗಲ ತಾಲ್ಲೂಕಿಗೆ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ KSHEMA ಅಧಿಸೂಚಿತ ವಿಮಾ ಸಂಸ್ಥೆಯಾಗಿದೆ.

ಬೆಳೆ ವಿಮಾ ಕಂತಿನ ವಿವರಗಳು

ನೆಲಮಂಗಲ ತಾಲ್ಲೂಕಿನಲ್ಲಿ ಮಾವು ಬೆಳೆಗೆ ಸಂಬಂಧಿಸಿದಂತೆ
ಪ್ರತಿ‌ ಹೆಕ್ಟೇರ್ ಗೆ ವಿಮಾ ಮೊತ್ತ
ರೂ,ಗಳಲ್ಲಿ
80,000.

ರೈತರು ಪಾವತಿಸಬೇಕಾದ ದರ
ಶೇಕಡಾ (5%) ರೂಗಳಲ್ಲಿ
4,000

ವಿಮಾ ಕಂತು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ ಜುಲೈ 31.
ಹೆಚ್ಚಿನ ಮಾಹಿತಿಗೆ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಕಛೇರಿ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಹತ್ತಿರದ ಬ್ಯಾಂಕ್ ಶಾಖೆ ಹಾಗೂ ವಿಮಾ ಕಂಪನಿಯನ್ನು ಸಂಪರ್ಕಿಸಲು ಕೋರಿದೆ.

ಕಛೇರಿ ಹೆಸರು

ಸಹಾಯಕ ತೋಟಗಾರಿಕೆ ಅಧಿಕಾರಿ, ಕಸಬಾ ಹೋಬಳಿ
7337866626

ಸಹಾಯಕ ತೋಟಗಾರಿಕೆ ಅಧಿಕಾರಿ, ಸೋಪುರ ಹೋಬಳಿ
8884829971

ಸಹಾಯಕ ತೋಟಗಾರಿಕೆ ಅಧಿಕಾರಿ, ತ್ಯಾಮಗೊಂಡ್ಲು ಹೋಬಳಿ
8197655732

ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ನೆಲಮಂಗಲ
9902581832

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ನೆಲಮಂಗಲ
9880461607

ವಿಮಾ ಕಂಪನಿಯ ದೂರವಾಣಿ ಸಂಖ್ಯೆ – 9966222561

ಸಹಾಯವಾಣಿ ಸಂಖ್ಯೆ-18004250505 ಗೆ ಸಂಪರ್ಕಿಸಬಹುದು ಎಂದು
ನೆಲಮಂಗಲ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.